ಕಲಬುರ್ಗಿ ಸ್ಮರಣೋತ್ಸವ: ವ್ಯಕ್ತಿಗಳನ್ನು ಕೊಲ್ಲಬಹುದು ಅವರ ವಿಚಾರಗಳನ್ನಲ್ಲ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

“ಕಾಡಿನಲ್ಲಿ ಆಡು ನಡೆದರೆ ದಾರಿಯಾಗುವುದಿಲ್ಲ, ಆನೆ ನಡೆದರೆ ಮಾತ್ರ ದಾರಿ ಮಾಡುತ್ತದೆ, ಹಾಗೆ ಡಾ. ಎಂ ಎಂ. ಕಲಬುರ್ಗಿಯವರು ನಡೆದು ವಚನ ಸಾಹಿತ್ಯದಲ್ಲಿ ಹೊಸ ಮಾರ್ಗ ಮಾಡಿದ ಶ್ರೇಯಸ್ಸು ಡಾ. ಎಂ ಎಂ ಕಲಬುರ್ಗಿಯವರಿಗೆ ಸಲ್ಲುತ್ತದೆ. ಅವರನ್ನು ಕೊಂದಿರಬಹುದು ಆದರೆ ಅವರ ವಿಚಾರಗಳನ್ನಲ್ಲ” ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2761ನೇ ಶಿವಾನುಭವದಲ್ಲಿ ಡಾ. ಎಂ ಎಂ ಕಲಬುರ್ಗಿ ಸ್ಮರಣೋತ್ಸವದಲ್ಲಿ ಉಪನ್ಯಾಸ ನೀಡುತ್ತ ಡಾ. ಅರ್ಜುನ್ ಗೊಳಸಂಗಿ ಮಾತನಾಡಿದರು.

“ಸಾಹಿತ್ಯ ಸಂಸ್ಕೃತಿ ಮತ್ತು ಸಂಶೋಧನೆ ಅವರ ಪ್ರಧಾನ ವಿಷಯವಾಗಿತ್ತು. ಅದರಲ್ಲಿಯೂ ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ಹೊಸ ಮಾರ್ಗವನ್ನೇ ಸೃಷ್ಟಿಸಿದ ಕೀರ್ತಿ ಕಲಬುರ್ಗಿಯವರಿಗೆ ಸಲ್ಲುತ್ತದೆ” ಎಂದರು.

“ಓದುತ್ತಾ ಓದುತ್ತಾ ಪುಸ್ತಕವನ್ನು ಎದೆಯ ಮೇಲಿಟ್ಟುಕೊಂಡು ಮಲಗುತ್ತಿದ್ದರು. ಸತ್ಯ, ನಿಷ್ಠುರತೆ, ಸಂಶೋಧನೆ ಅವರ ಉಸಿರಾಗಿದ್ದವು. ಉಪಕುಲಪತಿಗಳಾಗಿ ನಿವೃತ್ತಿಯಾದ ಮೇಲೆ ಗೇಟಿನವರೆಗೆ ಸೂಟ್ ಕೇಸ್ ಹಿಡಿದುಕೊಂಡು ಬಂದು, ಕೆ. ಎಸ್.ಆರ್. ಟಿ. ಸಿ. ಬಸ್ ಗೆ ಕಾದು ಬಸ್ ಹತ್ತಿ ಧಾರವಾಡಕ್ಕೆ ಬಂದ ಏಕೈಕ ಕುಲಪತಿ ಕಲಬುರ್ಗಿ. ಅವರ ಆದರ್ಶ ಮೆಚ್ಚುವಂತಹದ್ದು” ಎಂದರು.

ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಸುರೇಶ್ ಕುಂಬಾರ ಅವರು ಆಹಾರದಲ್ಲಿ ಪೌಷ್ಟಿಕಾಂಶಗಳ ಮಹತ್ವ ಕುರಿತು ಮಾತನಾಡುತ್ತಾ, “ಮನುಷ್ಯನಿಗೆ ಅತೀ ಅವಶ್ಯವಾಗಿ ಗಾಳಿ, ನೀರು, ಆಹಾರ ಬೇಕು. ಆಹಾರದಲ್ಲಿ ಪ್ರೋಟಿನ್ ವಿಟಮಿನ್ ಇರುವ ಆಹಾರ ಸೇವನೆ ತುಂಬಾ ಅವಶ್ಯಕ” ಎಂದು ಹೇಳಿದರು.

“ಹಸಿರು ಕ್ರಾಂತಿ ಗೆ ನಾಂದಿ ಹಾಡಿದವರು ಡಾ. ಸ್ವಾಮಿನಾಥನ್. ಆಹಾರ ಭದ್ರತೆಯನ್ನು ಪಡೆದುಕೊಂಡು ಸ್ವಾವಲಂಭಿಯಾಗಿ ಭಾರತ ಇದೆ. 58 ಲಕ್ಷ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಪೌಷ್ಟಿಕಾಂಶಗಳ ಮಹತ್ವ ಕುರಿತು ತಿಳುವಳಿಕೆ ನೀಡುವ ಮೂಲಕ ಜಾಗೃತಿ ಮೂಡಿಸಬೇಕು. ಇಡೀ ಜಗತ್ತಿನಲ್ಲಿ ಬಾಸುಮತಿ ಅಕ್ಕಿಯನ್ನು ಬೆಳೆಯುವ ದೇಶ ಭಾರತ” ಎಂದು ಪೌಷ್ಟಿಕಾಂಶಗಳ ಮಹತ್ವವನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿದರು.

ಕರ್ನಾಟಕವನ್ನು ತೋಟಗಾರಿಕೆ ರಾಜ್ಯವೆಂದು ಕರೆಯುತ್ತಾರೆ. ಎಲ್ಲಾ ತರಕಾರಿಗಳನ್ನು ಬೆಳೆಯಲಿಕ್ಕೆ ಒಳ್ಳೆಯ ವಾತಾವರಣ ಇದೆ. ಡಾ. ಎಂ. ಎಚ್. ಮರಿಗೌಡ್ರ ಅವರನ್ನು ತೋಟಗಾರಿಕೆ ಪಿತಾಮಹ ಎಂದು ಕರೆಯುತ್ತಾರೆ ಎಂದು ಅವರನ್ನು ಸ್ಮರಿಸಿದರು.

ಸಮ್ಮುಖ ವಹಿಸಿಕೊಂಡ ಭೈರನಟ್ಟಿಯ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡುತ್ತ, “ಡಾ. ಎಂ. ಎಂ. ಕಲಬುರ್ಗಿ ಅವರು ವಿಜಯಪುರ ಜಿಲ್ಲೆಯವರು. ಆ ಜಿಲ್ಲೆಯವರು ಕಿತ್ತುಹಚ್ಚಿದ ಸಸಿ ಇದ್ದಂತೆ. ವಿಜಯಪುರದಿಂದ ಧಾರವಾಡಕ್ಕೆ ಬಂದು, ಸಾಹಿತ್ಯ ಸಾಂಸ್ಕೃತಿಕ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೆ ಬರೆದ ಕಲಬುರ್ಗಿ, ಸಂಶೋಧನೆ ವಿಷಯದಲ್ಲಿ ಕಲ್ಲು ಬಂಡೆಯ ಥರ ಇದ್ದರು” ಎಂದರು.

“ಜಾತಿ ಮತ ಧರ್ಮ ಮೀರಿದ ವ್ಯಕ್ತಿತ್ವ ಅವರದು. ನೇರ ನಿಷ್ಠುರ ಆಗಿದ್ದರಿಂದ ಎಲ್ಲರೂ ಅವರ ಮಾತನ್ನು ಕೇಳುತ್ತಿದ್ದರು. ಎರಡು ಸಂಪುಟಗಳಲ್ಲಿ ಇಪ್ಪತ್ಮೂರು ಸಾವಿರ ವಚನಗಳ ಸಂಪಾದನೆ ಮಾಡಿ ಹೊರತಂದಿದ್ದಾರೆ. ದೀಪದಿಂದ ದೀಪ ಹಚ್ಚಿ ಎನ್ನುವಂತೆ ಕಲಬುರ್ಗಿಯವರು ಸಾವಿರ ಸಾವಿರ ದೀಪ ಹಚ್ಚಿದ್ದಾರೆ. ಕಲಬುರ್ಗಿ ಯವರ ಹತ್ಯೆ ಸಾಹಿತ್ಯದ ಹತ್ತ್ಯೆ. ಸಂಶೋಧನೆಯ ಹತ್ಯೆ. ವಚನಗಳ ಹತ್ಯೆಯಾದ ಕತೆ ಎಂದರು. ಲಿಂಗೈಕ್ಯ ಪೂಜ್ಯ ಸಿದ್ದಲಿಂಗ ಶ್ರೀಗಳು ಅವರ ಹತ್ಯೆಯಾದಾಗ ನನ್ನ ಮೆದುಳು ಹೋಯಿತು ಎಂದು ಉದ್ಗಾರ ತೆಗೆದಿದ್ದರು” ಎಂದು ಅವರು ಒಡನಾಟದ ಚಿತ್ರಣ ತಿಳಿಸಿದರು.

ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಶಿವಾನುಭವದ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಕುಮಾರಿ ಅಮೃತಾ ಮುದೇನಗುಡಿ, ಹಾಗೂ ವಚನ ಚಿಂತನವನ್ನು ಕುಮಾರಿ ಸುಪ್ರಿಯಾ ಅಂಗಡಿ ನಡೆಸಿದರು.

ದಾಸೋಹ ಸೇವೆಯನ್ನು ನೀಲಮ್ಮ ಸುರೇಶ್ ಕುಂಬಾರ, ಗದಗ ಇವರ ಮಗಳಾದ ಸೌಮ್ಯ ಮತ್ತು ಶ್ರೀಹರ್ಷ ಇವರು ವಿವಾಹ ಮಹೋತ್ಸವದ ಸವಿನೆನಪಿಗಾಗಿ ವಹಿಸಿದ್ದರು. ಹಾಗೂ ಶಿವಪ್ಪ ವೆಂಕಪ್ಪ ನಡುವಿನಮನಿ ಸಾ. ಹಗರಿಬೊಮ್ಮನಹಳ್ಳಿ ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜೀಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
1 Comment
  • ಪೂಜ್ಯ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜೀಯವರು ಡಾ. ಕಲಬುರ್ಗಿ ಅವರ ಹತ್ಯೆ ಕುರಿತು “ನನ್ನ ಮೆದುಳು ಹೋಯಿತು” ಈ ಒಂದು ಮಾತು ನಾಡಿನಲ್ಲಿ ಸ್ರಷ್ಡಿಸಿದ ತಲ್ಲಣದ ಪ್ರತೀಕ, ಡಾ. ಎಂ. ಎಂ. ಕಲಬುರ್ಗಿ ಅವರ ಹತ್ಯೆ ನಂತರ ಗದುಗಿನ ಪೂಜ್ಯರು ಐದು ನೂರಕ್ಕೂ ಹೆಚ್ಚು ಪುಸ್ತಕ ಪ್ರಕಟಣೆ ಮಾಡಿರುವ ಲಿಂಗಾಯತ ಅಧ್ಯಯನ ಸಂಸ್ಥೆಯ ಹೆಸರನ್ನು ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಎಂದು ಅವರ ಹೆಸರಲ್ಲಿ ಬದಲಾಯಿಸಿದ್ದು ಅವರಿಬ್ಬರ ವಚನ ಸಾಹಿತ್ಯ, ಪುಸ್ತಕ ಪ್ರಕಟಣೆಯ, ನಮ್ಮ ಅಸ್ಮಿತೆಯ ಸಂಕೇತವಾಗಿತ್ತು.

    ಡಾ. ಎಂ. ಎಂ. ಕಲಬುರ್ಗಿ ಹತ್ಯೆಯನ್ನು ನಾವು ಎಂದಿಗೂ ಮರೆಯುವುದಿಲ್ಲ.

Leave a Reply

Your email address will not be published. Required fields are marked *