ಯತ್ನಾಳಗಿಂತ ಅವರ ಹಿಂದಿದ್ದ ಶಕ್ತಿಗಳಿಗೆ ಸೋಲಾಗಿದೆ

ಡಾ. ಜೆ ಎಸ್ ಪಾಟೀಲ
ಡಾ. ಜೆ ಎಸ್ ಪಾಟೀಲ

ಹಿಂದೂ ಹುಲಿ ಆಗಲು ಬಸವಣ್ಣನವರˌ ಪ್ರಗತಿಪರ ಮಠಾಧೀಶರ, ಲಿಂಗಾಯತ ಧರ್ಮದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯತ್ನಾಳ್ ರಾಜಕೀಯ ಭವಿಷ್ಯ ಮಂಕು

ವಿಜಯಪುರ

ನಿರೀಕ್ಷೆಯಂತೆ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಹಿಂದಿನ ಬೆಳವಣಿಗೆಯಿಂದ ಯತ್ನಾಳ್ ಪಾಠ ಕಲಿಯದಿರುವುದು ದುರಂತ.

ಕಳೆದ ಬಾರಿ ಪಕ್ಷದಿಂದ ಹೊರ ಹಾಕುವ ಮೊದಲು ಬಸವನ ಗೌಡ ಯತ್ನಾಳರ ಅಶಿಸ್ತು ಕೇವಲ ಯಡಿಯೂರಪ್ಪನವರನ್ನು ಟೀಕಿಸುವುದಕ್ಕೆ ಮಾತ್ರ ಸಿಮಿತವಾಗಿತ್ತು. ಆದರೆ ಈ ಸಲ ಅದರ ಜೊತೆಗೆ ಯಡಿಯೂರಪ್ಪನವರ ಮಗ ಹಾಗೂ ಇಡೀ ಕುಟುಂಬವೆ ಅವರ ಗುರಿಯಾಗಿತ್ತು. ಈ ಕೆಲಸ ಮಾಡಿಸಿದ್ದು ಸಂಘ ಹಾಗೂ ಬಿಜೆಪಿಯೊಳಗಿರುವ ಯಡಿಯೂರಪ್ಪ ವಿರೋಧಿ ಶಕ್ತಿಗಳು ಅನ್ನುವ ಸಂಗತಿ ಗುಟ್ಟಿನದೇನಲ್ಲ.

ಜತೆಗೆ ಈ ಬಾರಿ ಯತ್ನಾಳ್ ಬಸವಣ್ಣನವರನ್ನುˌ ಪ್ರಗತಿಪರ ಹಾಗೂ ಬಸವನಿಷ್ಟ ಲಿಂಗಾಯತ ಮಠಾಧೀಶರನ್ನು, ಲಿಂಗಾಯತ ಸಂಸ್ಕೃತಿ ಸಿದ್ಧಾಂತ ಹಾಗೂ ಧರ್ಮಗಳ ವಿರುದ್ಧ ನಾಲಿಗೆ ಹರಿಬಿಟ್ಟು ಹಿಂದುತ್ವದ ಏಕಮೇವಾದ್ವಿತಿಯ ರಾಯಭಾರಿ ಅನ್ನಿಸಿಕೊಳ್ಳುವ ಚಪಲಕ್ಕೆ ಬಿದ್ದದ್ದರು.

ಅಸಲಿಗೆ ಯಡಿಯೂರಪ್ಪನವರನ್ನು ಹಣಿಯಲು ಬಿಜೆಪಿಯೊಳಗಿನ ಸಂಘ ಮೂಲದ ಅಸಂವಿಧಾನಿಕ ಶಕ್ತಿಗಳು ಬಳಸಿದ್ದು ಮೊದಲು ಈಶ್ವರಪ್ಪ ಎನ್ನುವ ಅರೆಬೆಂದ ಮೂಡರನ್ನು. ಆಮೇಲೆ ಯತ್ನಾಳ್ ಸುಲಭವಾಗಿ ಆ ಶಕ್ತಿಗಳಿಗೆ ಆಹಾರವಾದರು.

ಯತ್ನಾಳ್ ಅತ್ಯಂತ ಹುಂಬ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ಅಧಿಕಾರ ರಾಜಕಾರಣದಲ್ಲಿ ಕ್ಯಾಲ್ಕುಲೇಟೆಡ್ ಮಾತು ಹಾಗೂ ವರ್ತನೆಗಳು ತುಂಬಾ ಮುಖ್ಯವಾಗುತ್ತವೆ ಎನ್ನುವ ಪರಿಜ್ಞಾನವೆ ಇಲ್ಲದ ಟೊಣಪ ಈ ಯತ್ನಾಳ್.

ಬಿಜೆಪಿ ಹಾಗೂ ಸಂಘಕ್ಕೆ ಹೇಳಿದಂತೆ ಕೇಳಬಲ್ಲ ಅಂದರೆ ಸ್ವಂತಿಕೆ ಇಲ್ಲದ ಪರ್ಯಾಯ ಲಿಂಗಾಯತ ನಾಯಕತ್ವದ ಶೋಧನೆಯ ಭಾಗವಾಗಿ ಈ ಎಲ್ಲಾ ಬೆಳವಣಿಗೆಗಳನ್ನು ನಾವು ನೋಡಬೇಕು. ಕಳೆದ ಸರಕಾರದಲ್ಲಿ ಬೊಮ್ಮಾಯಿಯನ್ನು ಅದೇ ರೀತಿ ಬಳಸಿಕೊಳ್ಳಲಾಯಿತು.

ಅರವಿಂದ ಬೆಲ್ಲದˌ ಬೊಮ್ಮಾಯಿˌ ಸಿ ಸಿ ಪಾಟೀಲˌ ಮುರುಗೇಶ್ ನಿರಾಣಿ ಈ ಎಲ್ಲಾ ಲಿಂಗಾಯತ ಪುಢಾರಿಗಳನ್ನು ಯಡಿಯೂರಪ್ಪನವರ ವಿರುದ್ಧ ವ್ಯವಸ್ಥಿತವಾಗಿ ಎತ್ತಿಕಟ್ಟಿದ ಸಂಘಿ ಶಕ್ತಿಗಳು ಕೊನೆಗೆ ಯಡಿಯೂರಪ್ಪನವರಿಗೆ ಪರ್ಯಾಯ ಲಿಂಗಾಯತ ನಾಯಕನನ್ನು ಹುಟ್ಟುಹಾಕುವಲ್ಲಿ ಸಂಪೂರ್ಣ ವಿಫಲವಾದವು.

ಯತ್ನಾಳ್ ಮುಂತಾದ ಯಡಿಯೂರಪ್ಪ ವಿರೋಧಿ ಬಣದ ಭಿನ್ನರಾರೂ ತಮ್ಮ ಕ್ಷೇತ್ರವನ್ನು ಹೊರತು ಪಡಿಸಿ ಬೇರೆ ಕಡೆಗೆ ಕಿಂಚಿತ್ ಪ್ರಭಾವ ಬೀರಬಲ್ಲ ಶಕ್ತಿಯನ್ನು ಹೊಂದಿರದೆ ಇರುವದು ಸಂಘಿ ಶಕ್ತಿಗಳಿಗಿದ್ದ ದೊಡ್ಡ ಸಮಸ್ಯೆ.

ಆ ಶಕ್ತಿಗಳು ಯತ್ನಾಳ್ ಅವರನ್ನು ಕೇವಲ ಯಡಿಯೂರಪ್ಪ ಕುಟುಂಬವನ್ನು ನಿಯಂತ್ರಿಸಲು ಬಳಸಿಕೊಂಡವೆ ಹೊರತು ಪರ್ಯಾಯ ನಾಯಕನಾಗಿ ಬೆಳೆಸಲು ಅಲ್ಲ. ಈ ಸಂಗತಿ ಯತ್ನಾಳ್ ಗೆ ಕೊನೆಯವರೆಗೆ ಅರ್ಥವಾಗಲಿಲ್ಲ.

ಯತ್ನಾಳ್ ತನ್ನ ಸ್ವಂತ ಧರ್ಮದ ನಾಯಕರನ್ನುˌ ಧರ್ಮ ಗುರುವನ್ನು ˌ ಮಠಾಧೀಶರನ್ನು ಟೀಕಿಸುತ್ತಾನೆಂದರೆ ಆತ ನಮ್ಮನ್ನೂ ಟೀಕಿಸಬಲ್ಲ ಎನ್ನುವ ಅಳುಕು ಆ ಶಕ್ತಿಗಳಿಗಿತ್ತು. ಇಲ್ಲಿ ಯತ್ನಾಳರನ್ನು ಚನ್ನಾಗಿ ಬಳಸಿಕೊಂಡು ಟಿಶ್ಯೂ ಪೇಪರಿನಂತೆ ಬಿಸಾಡಲಾಯಿತು.

ಸಧ್ಯಕ್ಕಂತೂ ಯತ್ನಾಳ್ ರಾಜಕೀಯ ಭವಿಷ್ಯ ಅಪಾಯಕ್ಕೆ ಸಿಲುಕಿದೆ. ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರು ಗಣನೀಯ ಪ್ರಮಾಣದಲ್ಲಿರುವುದರಿಂದ ಹಿಂದೂ-ಮುಸ್ಲಿಮ್ ಲೆಕ್ಕಾಚಾರದಲ್ಲಿ ಆಯ್ಕೆಯಾಗುತ್ತಿದ್ದ ಯತ್ನಾಳ್ ಗೆ ತನ್ನದೆ ಸ್ವಂತ ವರ್ಚಸ್ಸು ಎನ್ನುವುದು ಇಲ್ಲ. ಸ್ಥಳೀಯವಾಗಿ ಬಿಜೆಪಿಯ ಯಾರೊಂದಿಗೂ ಯತ್ನಾಳ್ ಸಂಬಂಧ ನೆಟ್ಟಗಿಲ್ಲ.

ಪಂಚಮಸಾಲಿ ಪಾಲಿಟಿಕ್ಸ್ ಸಂಘಿ ಶಕ್ತಿಗಳೆ ಹುಟ್ಟುಹಾಕಿ ಈಗ ಸಂಘಿ ಶಕ್ತಿಗಳೆ ಮಣ್ಣುಕೊಟ್ಟಾಗಿದೆ. ಈಗೇನಿದ್ದರೂ ಯತ್ನಾಳ್ ಒಬ್ಬಂಟಿ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ರಾಜಿ ಸಂಧಾನಗಳು, ಶರಣಾಗತಿ ಆಯ್ಕೆಗಳು ಮುಕ್ತವಾಗಿರುತ್ತವೆ. ರಾಜಕಾರಣಿಗಳು ಇವನ್ನು ಬೇಕಾದಾಗ ಬಳಸಿಕೊಂಡು ಮತ್ತೆ ಮರು ಜೀವ ಪಡೆಯುವುದು ಸಾಮಾನ್ಯ.

ಆದರೆ ಯತ್ನಾಳ್ ರಾಜಕೀಯವಾಗಿ ಯಶಸ್ಸು ಹೊಂದಲು ತಮ್ಮ ನಡೆˌ ನುಡಿˌ ಮಾತುಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಸಧ್ಯಕ್ಕಂತೂ ಯಡಿಯೂರಪ್ಪ ಬಣ ಗೆದ್ದಿದೆ, ಯತ್ನಾಳ್ ಅನ್ನುವುದಕ್ಕಿಂತ ಯತ್ನಾಳ್ ಹಿಂದಿದ್ದ ಸಂಘಿ ಶಕ್ತಿಗಳಿಗೆ ಸೋಲಾಗಿದೆ. ಸಂಘಿ ಶಕ್ತಿಗಳು ಈಗ ಯಡಿಯೂರಪ್ಪ ಕುಟುಂಬವನ್ನು ಸಾಕಷ್ಟು ಮುಜಗರಕ್ಕೀಡು ಮಾಡಿದ್ದರೂ ಕೊನೆಗೆ ನಿಮ್ಮ ಪರವಾಗಿ ನಿರ್ಣಯ ಮಾಡಿ ನಿಮ್ಮ ವಿರೋಧಿಗಳನ್ನು ಹೊರಹಾಕಿದ್ದೇವೆ ಎಂದು ಕನ್ವಿನ್ಸ್ ಮಾಡಬೇಕು.

ಹೀಗೆ ಮಾಡುವ ಮೂಲಕ ಯಡಿಯೂರಪ್ಪನವರನ್ನು ತಮ್ಮ ನಿಯಂತ್ರಕ್ಕೆ ಪಡೆಯಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಇದೆಷ್ಟು ಸಫಲವಾಗುತ್ತದೋ ಕಾದು ನೋಡಬೇಕಷ್ಟೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
1 Comment
  • Yatnal , so ignorant as to speak against his own Basava religion , whoever may be the instigator.

Leave a Reply

Your email address will not be published. Required fields are marked *