ಕಲಬುರಗಿ
ಬಾಗಲಕೋಟೆ ಜಿಲ್ಲಾ, ತೇರದಾಳ ಪಟ್ಟಣದಲ್ಲಿ ವಕ್ಫ್ ಆಸ್ತಿ ಕಬಳಿಕೆ ಹೋರಾಟ ಸಭೆಯಲ್ಲಿ ಸವಿತಾ ಸಮಾಜದ ನಿಷೇಧಿತ ಪದ ಬಳಸಿ ವ್ಯಂಗವಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ತಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ಮತ್ತು ಸಾರ್ವಜನಿಕರನ್ನು ರಂಜಿಸಲು ನಿಷೇಧಿತ ಪದವನ್ನು ಬಳಸುವ ಮೂಲಕ ಸವಿತಾ ಸಮಾಜದ ಜನರನ್ನು ಅವಮಾನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಕ್ಷಣ ಸಮಾಜದ ಕುಲ ಬಾಂಧವರಿಗೆ ಕ್ಷಮೆಯಾಚಿಸಬೇಕು, ಹಿಂದುಳಿದ ಸಮುದಾಯಕ್ಕೆ ಅಗೌರವ ತೋರಿದ ಯತ್ನಾಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬೆಳಗಾವಿ ಅಧಿವೇಶನದಲ್ಲಿ ನಿಷೇದಿತ ಪದ ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಯಿತು.
ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಚ್. ಕೆ. ಪಾಟೀಲರವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ಅಧ್ಯಕ್ಷ ಆನಂದ ವಾರಿಕ್, ಮಹೇಶ ಪಾಣೆಗಾಂವ, ವಿದ್ಯಾಸಾಗರ ಹಾಬಾಳ, ಕಿರಣಕುಮಾರ ಚಿಕಲಿಕರ್ ನೇತೃತ್ವದಲ್ಲಿ ನೂರಾರು ಜನ ಭಾಗವಹಿಸಿದ್ದರು.
It’s good. Someone has got courage to oppose the wrong things.