ಯುದ್ಧ ಯಾವ ಸಮಸ್ಯೆಗೂ ಪರಿಹಾರವಲ್ಲ: ಶಿವಾನಂದ ಶೆಟ್ಟರ್

ಬಸವ ಮೀಡಿಯಾ
ಬಸವ ಮೀಡಿಯಾ

ಅಹಿಂಸೆ ದುರ್ಬಲರ ಅಸ್ತ್ರವಲ್ಲ’ : ಶಿವಾನಂದ ಶೆಟ್ಟರ

ಧಾರವಾಡ

‘ಯುದ್ಧ ಯಾವ ಸಮಸ್ಯೆಗೂ ಪರಿಹಾರವಲ್ಲ, ಅಹಿಂಸೆ ದುರ್ಬಲರ ಅಸ್ತ್ರವಲ್ಲ ಎಂಬುದನ್ನು ಜಗತ್ತಿಗೆ ತೋರಿಸಿದ್ದು ಭಾರತವಾಗಿದೆ, ಏಕೆಂದರೆ ಇಲ್ಲಿ ಬುದ್ಧ, ಬಸವ, ಗಾಂಧಿ ತತ್ವಗಳು ವಿಜೃಂಭಿಸುತ್ತಿವೆ ಎಂದು ಕರ್ನಾಟಕ ವಿಶ್ವವಿದ್ಯಾಲಯ, ಗಾಂಧಿ ಅಧ್ಯಯನ ಪೀಠದ ಹಿಂದಿನ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ್ ಅಭಿಪ್ರಾಯಪಟ್ಟರು.

ಅವರು ‘ಭಾರತ ಏಕತಾ ಆಂದೋಲನ,’ ಹಾಗೂ ‘ಬಸವ ಶಾಂತಿ ಮಿಷನ್ ಸಂಘಟನೆ’ ಅತಿಥ್ಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾ ಭವನದಲ್ಲಿ ದಿನಾಂಕ ಬುಧವಾರ ಸಂಜೆ ಹಮ್ಮಿಕೊಂಡಿದ್ದ “ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಿ ” ಜನಾಂದೋಲನ ಒಂದು ಕರೆ  ಸಮಾರಂಭದ ಅತಿಥಿಯಾಗಿ ಮಾತನಾಡುತ್ತಿದ್ದರು.

ಇನ್ನೋರ್ವ ಅತಿಥಿ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಇಡೀ ವಿಶ್ವ ಭಾರತೀಯರ ಶಾಂತಿ ಪ್ರಿಯತೆಯನ್ನು ಕೊಂಡಾಡುತ್ತಿದೆಯೇ ಹೊರತು ಇಲ್ಲಿಯ ಬೇರಾವ ವ್ಯವಸ್ಥೆಯನ್ನೂ ಅಲ್ಲ. ಕಾರಣ ಇದು ಗುರು ಬಸವಣ್ಣವರ ಶಾಂತಿ ಪ್ರಜ್ಞೆಯ ನಾಡು ಎಂದು ನುಡಿದರು.

 ಸಮಾರಂಭವನ್ನು ಕಲಬುರ್ಗಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್. ಚಂದ್ರಶೇಖರ್ ಉದ್ಘಾಟಿಸಿದರು.

ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುದ್ಧದಲ್ಲಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಮೂರು ನಿರ್ಣಯಗಳನ್ನು ಮಂಡಿಸಿದರು. ಅವುಗಳಲ್ಲಿ ಮಧ್ಯಪ್ರಾಚ್ಯ ಯುದ್ಧ ತಕ್ಷಣ ನಿಲ್ಲಿಸಲು ವಿಶ್ವಸಂಸ್ಥೆಗೆ ಆಗ್ರಹ  ಮತ್ತು ಪ್ರಧಾನಿ ನರೇಂದ್ರ ಮೋದಿ ಅಲಿಪ್ತ ರಾಷ್ಟ್ರಗಳ ಮುಖ್ಯಸ್ಥರಿದ್ದು ಅವರು ಶೀಘ್ರ ವಿಶ್ವಶಾಂತಿಯ ದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಬೇಕು ಮತ್ತು ವಿಶ್ವದ ಎಲ್ಲಾ ದೇಶಗಳ ಶಾಂತಿಪ್ರಿಯ ನಾಗರಿಕರು ಈ ದಿಸೆಯಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದಾಗ ಸಭೆ ಕರತಾಡನದಿಂದ ಬೆಂಬಲಿಸಿತು.

ಈ ಅರ್ಥಪೂರ್ಣ ಸಮಾರಂಭದಲ್ಲಿ ಪರಿಸರವಾದಿ ರಾಜೇಂದ್ರ ಪೋದ್ದಾರ್, ಹಿರಿಯ ಪತ್ರಕರ್ತ ಮನೋಜ್ ಪಾಟೀಲ, ಮಾಜಿ ಮೇಯರ್ ದಾನಪ್ಪ ಕಬ್ಬೇರ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಾಮಾಜಿಕ ಹೋರಾಟಗಾರ ವಿ.ಜಿ. ಕಮ್ಮಾರ ಉಪಸ್ಥಿತರಿದ್ದರು.

ಡಾ. ಶ್ರೀಧರ್ ಕುಲಕರ್ಣಿ ಅವರಿಂದ ವಚನ ಮತ್ತು ಶಾಂತಿಗೀತೆಗಳ ಗಾಯನ, ಸಾಹಿತಿ ಡಾ. ವೀಣಾ ಬಿರಾದಾರ ಅವರಿಂದ ಸ್ವಾಗತ ಮತ್ತು ವಿಷಯ ಮಂಡನೆ, ಸುಧಾ ಕಬ್ಬೂರ್ ಅವರಿಂದ ನಿರೂಪಣೆ ಮತ್ತು ವಂದನಾರ್ಪಣೆ ಜರುಗಿದವು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *