ಮೊಳಕಾಲ್ಲೂರು:
ತಾಲೂಕಿನ ಸಿದ್ದಯ್ಯನಕೋಟೆಯಲ್ಲಿ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಬಸವ–ಅಂಬೇಡ್ಕರ್ ಜನತೆ ಕಲ್ಯಾಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿನಾಡ ಉತ್ಸವದಲ್ಲಿ ಯುವಜನೋತ್ಸವಕ್ಕೆ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯ ನಡುವೆ, ಇಂದಿನ ಯುವಕರಿಗೆ ಮಾನವೀಯ ಶಿಕ್ಷಣದ ಅರಿವು ಮತ್ತು ಅಗತ್ಯತೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ಸತ್ತ ಮೇಲೆ ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದರೆ ಬದುಕಿರುವಾಗ ದೇವರು–ಧರ್ಮದ ಹೆಸರಿನಲ್ಲಿ ಮಾನವೀಯ ಮೌಲ್ಯಗಳನ್ನು ಮರೆತಿರುವುದು ದುಃಖಕರ. ಸ್ವಾರ್ಥ ಹಾಗೂ ಅಹಂಕಾರದ ಮನೋಭಾವದಿಂದ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಿದ್ದೇವೆ.

ಬಸವಣ್ಣನವರು ಸಂಪಾದಿಸಿದ ಅಪಾರ ಜ್ಞಾನ ಸಂಪತ್ತಿನ ಕಲ್ಯಾಣರಾಜ್ಯದ ಆಶಯಗಳು 850 ವರ್ಷಗಳಾದರೂ ಇಂದಿಗೂ ಜೀವಂತವಾಗಿವೆ. ಯುವಕರು ಮಾನವೀಯ ಮೌಲ್ಯಗಳನ್ನು ಕಾಪಾಡುವ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಬಸವಕೇಂದ್ರದ ಬೋಗೇಶಗೌಡ, ಸಹಾಯಕ ಪ್ರಾಧ್ಯಾಪಕ ನಾಗೇಂದ್ರಪ್ಪ, ಹೊಸಪೇಟೆ ಶಿಕ್ಷಕ ಡಿ.ಒ.ನಾಗರಾಜ, ಶ್ರೀಮಠದ ಕಾರ್ಯದರ್ಶಿ ಕಾಂತರಾಜು, ವಕೀಲ ಎಸ್. ಪರಮೇಶ, ಓ. ಮುರಾರ್ಜಿ, ಕೆ.ಓ. ಶಿವಣ್ಣ ಹಾಗೂ ಚೌಳೂರು ಲೋಕೇಶ ಮತ್ತಿತರರು ಉಪಸ್ಥಿತರಿದ್ದರು.
