ಮೈಸೂರು:
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ವಿಜಯನಗರ ಜಿಲ್ಲೆಯ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಲಾವಿದ ನಾಗರಾಜ ಗಂಟಿ ನೇತೃತ್ವದ ತಂಡ ದಿನಾಂಕ ಅಕ್ಟೋಬರ್ 4 ರಂದು ನಾದಬ್ರಹ್ಮ ಸಂಗೀತಸಭಾ ವೇದಿಕೆಯಲ್ಲಿ ರಾತ್ರಿ 09ರಿಂದ10 ಗಂಟೆಯವರೆಗೆ ಯಶಸ್ವಿಯಾಗಿ ಪ್ರದರ್ಶನ ನೀಡಿತು.
ಮೊದಲನೆಯದಾಗಿ ಜಾನಪದ ಯುವ ಕಲಾವಿದ ನಾಗರಾಜ ಗಂಟಿ, ಹಂಪಾಪಟ್ಟಣ ಇವರು ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದಿಂದೆತ್ತ ಸಂಬಂಧವಯ್ಯ ಎನ್ನುವ ವಿಶ್ವಗುರು ಬಸವೇಶ್ವರರ ವಚನವನ್ನು ಹೇಳುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಸಮಾಜದಲ್ಲಿರುವ ಅಂಧಕಾರ ಭಯ ಭೀತಿ ಮೌಡ್ಯ ಇವುಗಳನ್ನು ಹೋಗಲಾಡಿಸಿ, ಜನರಿಗೆ ಕಾಯಕಪ್ರಜ್ಞೆ, ವಿಚಾರಪ್ರಜ್ಞೆ, ಸುಜ್ಞಾನವನ್ನು ನೀಡಲು ಸುಡುಗಾಡು ಸಿದ್ದ ಜಾನಪದ ಕಲೆಯು ಪ್ರಯತ್ನಿಸುತ್ತಿದೆ.
ಜನಪದ ಲೋಕ ಪ್ರಶಸ್ತಿ ಪುರಸ್ಕೃತರಾದ ಕಿಂಡ್ರಿ ಲಕ್ಷ್ಮಿಪತಿ ಮತ್ತು ಯುವ ಕಲಾವಿದ ನಾಗರಾಜ ಗಂಟಿ ಅವರು ಕೈಚಳಕದಿಂದ ತಮ್ಮ ಜೋಳಿಗೆ ಮೂಲಕ ಭೂತಾಳಗೊಂಬೆಯನ್ನು ತೆಗೆದು ಈ ಭೂತ ಎಂಬುದು ಬರಿ ಭ್ರಮೆ ಜನರು ಧೈರ್ಯದಿಂದ ಬಾಳಲು ಹೇಳಿದರು.
ಕಾಶಿಗೆ ಹೋದರೆ ಮಾತ್ರ ಪಾಪ ಕಳೆದುಕೊಳ್ಳುತ್ತೇವೆ ಎಂಬುದು ಅರ್ಥವಿಲ್ಲ, ತಂದೆ-ತಾಯಿ ಗುರು-ಹಿರಿಯರಿಗೆ , ದಾನ-ಧರ್ಮಾದಿಗಳು ಮಾಡಿದರೆ ಕಾಶಿ ವಿಶ್ವನಾಥನೇ ನಮ್ಮ ಹೃದಯದಲ್ಲಿ ಬಂದು ನೆಲೆಸುತ್ತಾನೆ ಎಂದು ತಮ್ಮ ಕೈಚಳಕದ ಮೂಲಕ ಶಿವಲಿಂಗವನ್ನು ತೆಗೆದು ಜನರಲ್ಲಿ ಜಾಗೃತಿ ಮೂಡಿಸಿದರು.
ತಮ್ಮ ಆಟದಲ್ಲಿ ನಸಪುಡಿ ಮಲ್ಲವ್ವ ಸುಡುಗಾಡದಲ್ಲಿ ನಶಿಪುಡಿ ತಿಕ್ಕಿ ತಿಕ್ಕಿ ಹಾಳಾದರೆ ಈಗಿನ ಯುವ ಸಮೂಹ ಫೋನ್ ತಿಕ್ಕಿ ತಿಕ್ಕಿ ದಾರಿ ತಪ್ಪುತ್ತಿದ್ದಾರೆ ಎಂದು ಕೈಚಳಕದ ಮೂಲಕ ತೋರಿಸಿ ಜನರಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಅಳಿವಿನಂಚಿನಲ್ಲಿರುವ ಜಾನಪದ ಸುಡುಗಾಡುಸಿದ್ಧ ಕಲೆಗೆ ಮರು ಜೀವ ನೀಡಿದ ಮೈಸೂರು ಜಿಲ್ಲಾ ಆಡಳಿತಕ್ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ ಅವರಿಗೆ, ವಿಜಯನಗರ ಜಿಲ್ಲಾ ಆಡಳಿತ, ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣವರ ಅವರಿಗೆ, ಹಂಪಾಪಟ್ಟಣ ಗ್ರಾಮದ ಕಲಾಭಿಮಾನಿಗಳಿಗೆ ವಿಜಯನಗರ ಜಿಲ್ಲಾ ಜನಪದ ಸುಡುಗಾಡು ಸಿದ್ದ ಕಲಾವಿದರು ವೇದಿಕೆ ಮೂಲಕ ಅಭಿನಂದಿಸಿ, ವಂದಿಸಿದರು.
ನಂತರ ಗಂಟೆ ಮತ್ತು ಶಂಕನಾದದ ನೀನಾದ ಮೂಲಕ ಸಾದು ಶರಣರ ಸಂತರ ನಾಮಸ್ಮಣೆ ಮಾಡಿ ಲೋಕಕ್ಕೆ ಒಳ್ಳೆಯದಾಗಲಿ, ಜಯವಾಗಲಿ ಎಂದು ಶರಣರಂತೆ ಘಂಟಾಘೋಷವಾಗಿ ಸಾರಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಪೂಜಾರ ಮದ್ದಿ ಮಾಯಪ್ಪ ಹಾಗೂ ಹನುಮಂತಪ್ಪ ಗಂಟಿ ವೇದಿಕೆ ಮೇಲೆ ಜನಪದ ಕಲಾವಿದರಾಗಿ ಭಾಗವಹಿಸಿದ್ದರು. ಇವರೊಂದಿಗೆ ಕೊಪ್ಪಳದ ಖ್ಯಾತ ಪತ್ರಕರ್ತರಾದ ಜೂಡಿ ನ್ಯೂಸ್ ಪತ್ರಕರ್ತ ವೈ.ಬಿ. ಜೂಡಿ, ಕಲ್ಯಾಣ ದರ್ಶನ ಪತ್ರಿಕೆ ಸಂಪಾದಕ ಲಲಿತಮ್ಮ ಪೂಜಾರರವರು ಮೈಸೂರಿನ ಲೋಹಿತರವರು ಭಾಗವಹಿಸಿದ್ದರು.