ವಿಶ್ವವಿದ್ಯಾಲಯದಷ್ಟು ಕೆಲಸ ಮಾಡಿದ ತೋಂಟದ ಸಿದ್ಧಲಿಂಗ ಶ್ರೀ

ನರಗುಂದ:

ಜಾತ್ರೆಗಳನ್ನು ಜನತಾ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿದ ಕೀರ್ತಿ ಲಿಂ. ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ. ಸಿಂದಗಿ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾಡಿದ ಬಾಷಣ ಐತಿಹಾಸಿಕ ಗೋಕಾಕ ಆಂದೋಲನಕ್ಕೆ ಮುನ್ನುಡಿಯಾಯಿತು. ಗೋಕಾಕ್ ವರದಿ ಜಾರಿಗೆ ಆಗ್ರಹಿಸಿ ಸ್ವತಃ ತಾವೆ ಬೀದಿಗಿಳಿದು ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟಕ್ಕೆ ಪುಷ್ಠಿ ಕೊಟ್ಟ ಕನ್ನಡದ ಕುಲಗುರುಗಳು. ಅವರು ಈ ಶತಮಾನದ ಕಂಡ ಶ್ರೇಷ್ಠ ಸಂತರು ಎಂದು ಮುಂಡರಗಿ ಪುರಸಭೆ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರು ಬಣ್ಣಿಸಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೬೩ ನೇ ಮಾಸಿಕ ಶಿವಾನುಭವ ಹಾಗೂ ಲಿಂ. ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೬ ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ತಾಯಿ ಹೃದಯದ, ಪ್ರಗತಿಪರ ವಿಚಾರಧಾರೆಗಳಿಂದಲೆ ಜನಮಾನಸರಾಗಿದ್ದ ಪೂಜ್ಯರು ಪೀಠ-ಪಲ್ಲಕ್ಕಿಯನ್ನು ಧಿಕ್ಕರಿಸಿ, ವೈಭವೀಕರಣದ ಜೀವನಕ್ಕೆ ತೀಲಾಂಜಲಿ ನೀಡಿದ ಅವರು ಶ್ರೀಸಾಮಾನ್ಯರ ಜಗದ್ಗುರುಗಳು, ಅವರ ಜೀವನವೇ ನಮಗೆಲ್ಲ ಆದರ್ಶಪ್ರಾಯ.

ಕೇವಲ ಧಾರ್ಮಿಕ ಕಾರ್ಯಕ್ಕೆ ಸೀಮಿತರಾಗದ ಶ್ರೀಗಳು ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಮಾಡಿದ್ದಾರೆ. ಪೋಸ್ಕೊ ಚಳವಳಿ, ಗೋಕಾಕ ಚಳವಳಿ, ಕಪ್ಪತಗುಡ್ಡ ರಕ್ಷಣೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ನಾಡು, ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಅವರು ಹೇಳಿದರು.

ಸಾನಿದ್ಯವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಗುರುಗಳು ಪೂರ್ವ ಮತ್ತು ಪಶ್ಚಿಮದ ಎಲ್ಲಾ ಧರ್ಮಗಳ ಧರ್ಮ ಮತ್ತು ತತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಸ್ವಾಮೀಜಿಯವರ ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಬಲಪ್ರಯೋಗದ ಮಾತುಗಳು ಜನರನ್ನು ಮಂತ್ರಮುಗ್ಧಗೊಳಿಸುತ್ತಿದ್ದವು, ಈ ಅಪರೂಪದ ಗುಣಗಳಿಂದಾಗಿ ಅವರನ್ನು ಅಭಿನವ ಬಸವಣ್ಣ ಎಂದರೆ ತಪ್ಪಾಗಲಾರದು. ರೈತರ ಸುಧಾರಣೆಯಾಗದೆ ಸಮಾಜ ಸುಧಾರಣೆಯಾಗುವುದಿಲ್ಲ ಎಂದು ಅರಿತಿದ್ದ ಶ್ರೀಗಳು ರೈತರ ದಯನೀಯ ಸ್ಥಿತಿಯನ್ನು ಅರಿತು ಕೃಷಿಯಲ್ಲಿ ವಿನೂತನ ಕ್ರಮಗಳನ್ನು ಅಳವಡಿಸಿ ಮಾದರಿಯಾಗಿದ್ದರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಕಲಚೇತನರ ವಿಭಾಗದಲ್ಲಿ ರಾಷ್ಟ್ರೀಯ ಪ್ಯಾರಾಸಿಟ್ಟಿಂಗ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕೊತ್ವಾಲ್ ಯಂ. ಹರಣಶಿಕಾರಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಪ್ರೊ. ಎಸ್. ಬಿ. ತೆಗ್ಗಿ, ಔಷದ ವರ್ತಕರಾದ ಮಹಾಂತೇಶ ಸಾಲಿಮಠ, ಗದಗ ವೃತ್ತದ ಔಷದ ನಿಯಂತ್ರಣಾಧಿಕಾರಿಗಳಾದ ನೀಲಕಂಠ ರಾಠೋಡ ಮಾತನಾಡಿದರು.

ನಿವೃತ್ತ ನಿರ್ವಾಹಕ ಶಿವಾನಂದ ತಗಲ್ದಾರ, ಯಲ್ಲಪ್ಪಗೌಡ ಕಲ್ಲನಗೌಡ್ರ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಶ್ರೀಮತಿ ಎಸ್.ಎಫ್. ದ್ಯಾವನಗೌಡ್ರ, ಎಮ್. ಬಿ. ರಮಣಿ, ರಮಜಾನ ನದಾಫ್ ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *