ನಿತ್ಯ ಕನ್ನಡ ಬಾವುಟ ಹಾರಾಡುವ ಭೈರನಹಟ್ಟಿಯ ಕನ್ನಡ ಮಠ

ನರಗುಂದ

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಚಾಲನೆಗೊಳಿಸಿದ ಕನ್ನಡ ರಥ ಗ್ರಾಮದ ಬೀದಿಗಳಲ್ಲಿ ಶುಕ್ರವಾರ ಸಂಚರಿಸಿತು.

ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಆಯೋಜಿಸಿದ್ದ ಶಾಂತಲಿಂಗ ಶ್ರೀಗಳು ಕನ್ನಡ ಉಳಿಸಿ-ಬೆಳೆಸುವ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಠದಲ್ಲಿ ನಿತ್ಯ ಕನ್ನಡ ಬಾವುಟ ಹಾರಾಡಿಸಲಾಗುತ್ತದೆ ಹಾಗೂ ತಾಯಿ ಭುವನೇಶ್ವರಿಯ ಮೂರ್ತಿಗೆ ಪೂಜೆ ನಡೆಸಲಾಗುತ್ತದೆ. ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷ ಪೂರ್ತಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೇ ಸಾಹಿತಿ, ಸಾಧಕರನ್ನು ಗುರುತಿಸಿ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಮಠದಿಂದ ಮಾಡಲಾಗುತ್ತಿದೆ. ಸ್ವತಃ ಸಾಹಿತಿಗಳಾದ ಶ್ರೀಗಳು ಸಾಕಷ್ಟು ಪುಸ್ತಕ ಪ್ರಕಟಿಸಿದ್ದಾರೆ. ಶ್ರೀಮಠದಲ್ಲಿ ಸಿಂದಗಿ ಶ್ರೀಶಾಂತವೀರೇಶ್ವರ ಗ್ರಂಥಾಲಯ ಸ್ಥಾಪಿಸಿ ಜನರಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಶ್ರೀಗಳ ಪುಸ್ತಕ ಸೇವೆ ಅನನ್ಯವಾದದ್ದು.

ದ್ವಜಾರೋಹಣ ನೆರವೇರಿಸಿದ ಪೂಜ್ಯ ಶಾಂತಲಿಂಗ ಶ್ರೀಗಳು ಮಾತನಾಡಿ ಕನ್ನಡ ಬಾಷೆ ೨೫೦೦ ವರ್ಷಗಳ ಇತಿಹಾಸವನ್ನು ಹೊಂದಿದೆ, ಅದು ಈಗಾಗಲೇ ನಮ್ಮ ಹಿರಿಯರಿಂದ ಸಾಕಷ್ಟು ಬೆಳೆದಿದೆ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡದ ಅವನತಿಗೆ ಕನ್ನಡಿಗರೆ ಕಾರಣಿಕರ್ತರು, ಅನ್ಯ ಭಾಷಿಕರಿಗೆ ಅವರ ಬಾಷೆಯಲ್ಲಿಯೇ ಮಾತನಾಡಿ ಅವರನ್ನು ಸಂತೃಪ್ತಗೊಳಿಸಿ ನಮ್ಮ ಬಾಷೆಯನ್ನು ಕಡೆಗಣಿಸುತ್ತಿರುವುದೆ ಇದಕ್ಕೆ ಬಹುಮುಖ್ಯ ಕಾರಣ, ಎಂದರು.

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಬೌಮ, ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಮುಖ್ಯದ್ವಾರವನ್ನಾಗಿರಿಸಿ ಉಳಿದ ಬಾಷೆಗಳನ್ನು ಕಿಟಕಿಗಳಂತೆ ನಿರ್ಮಿಸಬೇಕು, ಅಂದಾಗ ಮಾತ್ರ ಕನ್ನಡ ಉಳಿಸಲು ಸಾದ್ಯ ಎಂದು ಹೇಳಿದರು.

ಕನ್ನಡ ರಥಕ್ಕೆ ಚಾಲನೆ ನೀಡಿದ ಪ್ರೊ. ಚಂದ್ರಮೌಳಿ ಶಿ. ನಾಯ್ಕರ ಅವರು ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವಂತಹ ಸಂದಿಗ್ಧ ಪರಸ್ಥಿತಿಯಲ್ಲಿ ನಾವಿದ್ದೇವೆ ಇದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಇವತ್ತಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಅರ್ಧಂಬರ್ದ ಇಂಗ್ಲೀಷ್ ಮಾತನಾಡುವ ಮೂಲಕ ನಾನೊಬ್ಬ ವಿದ್ಯಾವಂತ ಎಂದು ತೋರಿಸಿಕೊಳ್ಳುವ ಭರದಲ್ಲಿ ತಮ್ಮತನವನ್ನು ಮರೆಯುತ್ತಿದ್ದಾರೆ. ನಮ್ಮ ನಿರ್ಲಕ್ಷ್ಯತನದಿಂದ ಕರ್ನಾಟಕದ ತುಂಬೆಲ್ಲ ಅನ್ಯಭಾಷಿಕರ ಹಾವಳಿ ಹೆಚ್ಚಾಗುತ್ತಿದೆ ಜೊತೆಗೆ ಕನ್ನಡಿಗರಿಗೆ ನೀರುದ್ಯೋಗ ಸಮಸ್ಯೆಯೂ ಕಾಡುತ್ತಿದೆ. ಕನ್ನಡ ನಮಗೆ ಅನ್ನ ನೀಡುವ ಬಾಷೆ ಹೀಗಾಗಿ ವಿಶೇಷವಾಗಿ ಯುವ ಸಮುದಾಯ ಕನ್ನಡವನ್ನು ಉಳಿಸಿ ಬೆಳೆಸುವತ್ತ ಗಮನಹರಿಸಬೇಕಾಗಿದೆ ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ ನರಗುಂದ ಸಿಂಹ ಕೂಟದ ಅಧ್ಯಕ್ಷ ಉಮೇಶಗೌಡ ಸಿ. ಪಾಟೀಲ, ಚಂದ್ರು ದಂಡಿನ, ಮಂಜು ಮೆಣಸಗಿ, ಗ್ರಾ.ಪಂ. ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ, ನಾಗಪ್ಪ ಬೆನ್ನೂರ, ಪ್ರಕಾಶ ಅಣ್ಣಿಗೇರಿ, ಗ್ರಾ. ಪಂ. ಪಿಡಿಓ ಎಸ್.ಎಮ್. ಹರನಟ್ಟಿ, ಸಿ.ಆರ್.ಪಿ ಬೂಸರೆಡ್ಡಿ, ಶಿಕ್ಷಕರಾದ ಎಸ್.ಎಸ್. ಪಾಟೀಲ, ಎಮ್. ಡಿ.ಸಕ್ಕರಿ, ಶರಣು ಹೂಗಾರ, ಬಸನಗೌಡ ಪಾಟೀಲ, ಪ್ರೊ. ರಮೇಶ ಕ. ಐನಾಪೂರ, ಊರ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *