ಹೊಸಪೇಟೆ
ಹೊಸಪೇಟೆ ಬಳಿಯ ಕಾರಿಗನೂರಿನ ನಾಗಮ್ಮಜ್ಜಿಯ ಹೆಸರು ಈ ಬಾರಿಯ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿಯ ಪಟ್ಟಿಯಲ್ಲಿದೆ ಎಂದು ವಿಜಯನಗರದ ಜಂಟಿ ಕೃಷಿ ನಿರ್ದೇಶಕರಾದ ಡಾ. ಶರಣಪ್ಪ ಮುದಗಲ್ ತಿಳಿಸಿದಾಗ ಆದ ಸಂತೋಷ ಮತ್ತು ಅಚ್ಚರಿಗೆ ಮಾತುಗಳಿಲ್ಲ.
86ರ ವಯಸ್ಸಿನಲ್ಲೂ ತಮ್ಮ 2 ಎಕರೆ ಮಳೆ ಆಶ್ರಿತ ನೆಲದಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಾ, ತಾವೇ ಬಿತ್ತನೆ ಬೀಜಗಳನ್ನು ಮಾಡಿ ಇತರರಿಗೂ ಹಂಚುತ್ತಾ ಲವಲವಿಕೆಯಿಂದಿರುವ ಇವರ ಜೀವನೋತ್ಸಾಹ ಅಪರಿಮಿತ. ಈ ವಯಸ್ಸಿನಲ್ಲಿಯೂ ಬೀಜ ಬಿತ್ತುವುದು, ಕಳೆ ತೆಗೆಯುವುದು, ತೆನೆ ಕುಯ್ಯುವುದು, ಒಕ್ಕುವುದು ಮುಂತಾದ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ.

ತಲೆಮಾರುಗಳಿಂದ ದೇವದಾಸಿ ವ್ಯವಸ್ಥೆಯಲ್ಲಿ ನಲುಗುತ್ತಿರುವ ಕುಟುಂಬವಿದು. ಆದರೆ ತನ್ನ ಮೊಮ್ಮಗಳನ್ನು ಆ ಪದ್ಧತಿಯಿಂದ ಹೊರತಂದಿದ್ದಾರೆ. ಅದಕ್ಕೆ ನಾಗಮ್ಮ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಇವರನ್ನೇ ಅನುಸರಿಸಿ ಹಲವು ಕುಟುಂಬಗಳು ದೇವದಾಸಿಯನ್ನು ತೊರೆದು ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಆ ನೆನಪುಗಳನ್ನೆಲ್ಲಾ ಮರೆತು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೆ ಪ್ರೇರಣೆ ನಾಗಮ್ಮಜ್ಜಿ. ಹೊಸಪೇಟೆಯ ಸಖಿ ಸಂಸ್ಥೆಯು ಇವರಿಗೆ ಬೆನ್ನೆಲುಬಾಗಿ ನಿಂತಿದೆ.
ಎಲ್ಲಾ ದೇವದಾಸಿ ತಾಯಂದಿರ ಪ್ರತಿನಿಧಿಯಾಗಿರುವ ನಾಗಮ್ಮಜ್ಜಿಗೆ ಸಂದಿರುವ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಸಾರ್ಥಕ. ವೈಯಕ್ತಿಕವಾಗಿ ನನಗೂ ಹೆಮ್ಮೆಯ ಕ್ಷಣ.
