ಲಿಂಗಸುಗೂರಿನಲ್ಲಿ ಮೂರು ದಿನಗಳ ಯಶಸ್ವಿ ಶರಣ ಸಂಸ್ಕೃತಿ ಮಹೋತ್ಸವ 

ಲಿಂಗಸುಗೂರು

ರಾಯಚೂರು ಜಿಲ್ಲೆಯ ಲಿಂಗಸುಗೂರ ನಗರದಲ್ಲಿ ವಿಶ್ವ ಬಸವಧರ್ಮ ಪ್ರವಚನ, ಲಿಂಗೈಕ್ಯ ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ 113ನೇ ಸಂಸ್ಮರಣೆ ಹಾಗೂ ಶರಣ ಸಂಸ್ಕೃತಿ ಮಹೋತ್ಸವವು ಇದೇ ನವಂಬರ್ 4ರಿಂದ 6ರವರೆಗೆ ಯಶಸ್ವಿಯಾಗಿ ನಡೆಯಿತು.

ಮೂರು ದಿನಗಳ ಕಾರ್ಯಕ್ರಮದಲ್ಲಿ ನಡೆದ ವಿಚಾರ ಘೋಷ್ಟಿ, ಪ್ರವಚನ, ನಾಟಕ, ವಚನ ಮೆರವಣಿಗೆಗಳು ಜನರಲ್ಲಿ ಬಸವ ತತ್ವವನ್ನು ಬಿತ್ತುವಲ್ಲಿ ಸಫಲವಾದವು. 

4ರಂದು ಷಟಸ್ಥಲ ಧ್ವಜಾರೋಹಣವನ್ನು ಲಿಂಗಸುಗೂರು ಪುರಸಭೆ ಅಧ್ಯಕ್ಷ ಶರಣ ಬಾಬುರೆಡ್ಡಿ ಮುನ್ನೂರು ಅವರು ನೆರವೇರಿಸಿದರು. ವಿಚಾರ ಗೋಷ್ಠಿಯ ಮುಖ್ಯ ಅನುಭಾವಿಗಳಾಗಿದ್ದ ವಿಜಯಪುರದ ಶರಣತತ್ವ ಚಿಂತಕ ಶರಣ ಡಾ. ಜೆ.ಎಸ್. ಪಾಟೀಲ ಅವರು ಲಿಂಗಾಯತ ಧರ್ಮದ ಅಳಿವಿನ ಬಗ್ಗೆ ಎಚ್ಚರಿಕೆ ಸಂದೇಶ ನೀಡಿ, ಲಿಂಗಾಯತ ಧರ್ಮ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದರು. 

ಸಭೆಯ ಸಾನಿಧ್ಯವನ್ನು ವಹಿಸಿ ಪಾಂಡೊಮಟ್ಟಿಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 

ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಮೊಮ್ಮಗ ಶರಣ ಗಿರೀಶ ಗುರುಪುತ್ರಪ್ಪ ಹಳಕಟ್ಟಿ, ವಿಜಯಪುರ ಇವರಿಗೆ ಗೌರವಪೂರ್ವಕವಾಗಿ ಸತ್ಕಾರಿಸಲಾಯಿತು.

ಪ್ರಸಾದ ದಾಸೋಹ ಸೇವೆಯನ್ನು ಲಿಂಗಸುಗೂರು ನಗರದ ಬಸವೇಶ್ವರ ಆಸ್ಪತ್ರೆಯ ಮುಖ್ಯಸ್ಥರಾದ ಶರಣ ಡಾ. ಶಿವಬಸಪ್ಪ ಹೆಸರೂರ ದಂಪತಿಗಳು ಮಾಡಿದರು.

5ರಂದು ನಡೆದ ಮಹಿಳಾ ಗೋಷ್ಠಿಯಲ್ಲಿ ಶರಣೆ ಜಯಶ್ರೀ ದಂಡೆ ಇವರು ಜಗನ್ಮಾತೆ ಅಕ್ಕನ ಬದುಕು ಬರಹ ಹಾಗೂ ಚೆನ್ನಮಲ್ಲಿಕಾರ್ಜುನನ ಒಲುಮೆಯ ಬಗ್ಗೆ ಅನುಭಾವ ನೀಡಿದರು.

ಸನ್ನಿಧಾನ ವಹಿಸಿ ಗದುಗಿನ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಶ್ರೀ ವಿಜಯ ಮಹಾಂತ  ಶಿವಯೋಗಿಗಳ ಶರಣಾದರ್ಶವನ್ನು ತಿಳಿಸಿದರು. 

ಪೂಜ್ಯ ಬಸವಲಿಂಗ ಸ್ವಾಮಿಗಳು ಸಿದ್ದಯ್ಯನಕೋಟೆ ಇವರು ಸಹ ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿ ಅನುಭಾವ ಗೈದರು.

ಕಿರುನಾಟಕ ‘ಕಲ್ಯಾಣ ಕ್ರಾಂತಿಯ ಕಿಡಿ’ ಪ್ರದರ್ಶನಗೊಂಡಿತು. ಸ್ಥಳೀಯ ಸಧ್ಭಕ್ತರು ನಾಟಕದ ಪಾತ್ರಧಾರಿಗಳಾಗಿದ್ದರು. 

ಮುಖ್ಯ ಅತಿಥಿಯಾಗಿ ಮಾಜಿ ಸಂಸದ ಶರಣ ರಾಜ ಅಮರೇಶ್ವರ ನಾಯಕ ಮಾತನಾಡಿದರು. ರಾಯಚೂರು- ಕೊಪ್ಪಳ ಎಂಎಲ್ಸಿ ಶರಣ ಶರಣಗೌಡ ಪಾಟೀಲ ಬಯ್ಯಾಪುರ ಭಾಗವಹಿಸಿದ್ದರು.

ಪ್ರಸಾದ ಸೇವೆಯನ್ನು ಲಿಂಗಸುಗೂರಿನ ಗಣ್ಯವರ್ತಕರಾದ ಶರಣರಾದ ಅಮರಪ್ಪ ಸಕ್ರಿ ಹಾಗೂ ವಿಶ್ವನಾಥ ಸಕ್ರಿ ಸಹೋದರರು ವಹಿಸಿಕೊಂಡಿದ್ದರು.

6 ರಂದು ವಿಶ್ವ ಬಸವಧರ್ಮ ಸಮಾವೇಶ ನಡೆಯಿತು. ಹಾಗೂ ವಚನ ಗ್ರಂಥ ತಾಡೋಲೆ ಕಟ್ಟಿನ ಹಾಗೂ ಧರ್ಮಗುರು ಬಸವಣ್ಣನವರ ಮತ್ತು ವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರವಿರುವ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಜರುಗಿತು. ನಾಡಿನ ಹಲವು ಕಲಾತಂಡಗಳು ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿದವು.

ಸಮಾರೋಪ ಸಮಾರಂಭದಲ್ಲಿ ಚಿತ್ತರಗಿ, ಇಲಕಲ್ಲ ಮಹಾಂತೇಶ್ವರ ಮಠದ ಪೀಠಾಧ್ಯಕ್ಷರಾದ ಗುರು ಮಹಾಂತ ಸ್ವಾಮೀಜಿಗಳು ಮಾತನಾಡಿ, ಸಕಲ ಸದ್ಭಕ್ತರಿಗೆ ಒಳಿತಾಗಲೆಂದು ಶುಭ ಹಾರೈಸಿದರು.

ಪ್ರಸಾದ ಸೇವೆಯನ್ನು ಲಿಂಗಸುಗೂರಿನ  ಜವಳಿ ವರ್ತಕರಾದ ಶರಣ ಬಸವರಾಜ ಶರಣಪ್ಪ ಐದನಾಳ ಅವರು ವಹಿಸಿಕೊಂಡಿದ್ದರು.

ಮೂರುದಿನಗಳ ಕಾಲ ನಡೆದ ಉತ್ಸವವು ನಾಡಿನ ಜನತೆಯಲ್ಲಿ ಶರಣ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತೆನ್ನಬಹುದು.

Share This Article
2 Comments

Leave a Reply

Your email address will not be published. Required fields are marked *