ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಶಾಶ್ವತ ಶೂದ್ರರನ್ನಾಗಿ ಮಾಡುವ ಕುತಂತ್ರ (ರಾಜಶೇಖರ ನಾರನಾಳ)

ಬಸವ ಮೀಡಿಯಾ
ಬಸವ ಮೀಡಿಯಾ

ಇಂತಹ ಮೌಢ್ಯತೆಗಳನ್ನು ಸರಕಾರದ ವೆಚ್ಚದಲ್ಲಿಯೇ ಆಚರಿಸುತ್ತಿರುವುದು ನಮ್ಮ ದೇಶದ ದುರಂತವೆ ಸರಿ.

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಗಂಗಾವತಿಯ ಶರಣತತ್ವ ಚಿಂತಕ ಡಾ. ರಾಜಶೇಖರ ನಾರನಾಳರ ಪ್ರತಿಕ್ರಿಯೆ.

ನಿಮ್ಮ ಮತ

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

ಈ ಸಲ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶೇಷವಾಗಿ ಲಿಂಗಾಯತರನ್ನು ಆಹ್ವಾನ ಮಾಡುತ್ತಿರುವುದರ ಹಿಂದಿನ ಕುತಂತ್ರವನ್ನು ಲಿಂಗಾಯತರು ಅರಿಯಬೇಕಿದೆ. ಇಷ್ಟು ವರ್ಷಗಳಿಂದ ನಡೆದ ಕುಂಭಮೇಳದಲ್ಲಿ ಒಬ್ಬ ಲಿಂಗಾಯತನಿಗೂ ಆಹ್ವಾನ ಇಲ್ಲದೆ ಇರುವಾಗ, ಈ ಸಾರಿ ನಡೆಯುವ ಕುಂಭಮೇಳದಲ್ಲಿ ಲಿಂಗಾಯತರು ನೆನಪಾಗಿದ್ದು ಯಾಕೆ?

ಶತ ಶತಮಾನಗಳಿಂದ ಕುತಂತ್ರದಿಂದಲೇ ಶೂದ್ರ ಸಮುದಾಯಗಳನ್ನು ಆಳುತ್ತಾ ಬಂದ ಪಟ್ಟಭದ್ರ ಹಿತಾಸಕ್ತಿಗಳು, ಇಂದು ಮತ್ತೊಮ್ಮೆ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಲಿಂಗಾಯತರನ್ನು ಗುರಿ ಮಾಡಿಕೊಂಡಿವೆ. ಇದಕ್ಕೇ ವಿಶೇಷ ಆಹ್ವಾನ ನೀಡುತ್ತಿರುವುದು.

ಜನಸಾಮಾನ್ಯನಿಗೆ ಅರ್ಥವಾಗದ ಭಾಷೆಯಲ್ಲಿ ಬರೆದ ವೇದ ಪುರಾಣಗಳನ್ನು ಜನರ ಮೇಲೇರಲಾಗಿದೆ. ಮೊದಲು ಪಟ್ಟಭದ್ರಹಿತಾಸಕ್ತಿಗಳು ಮತೀಯ ನಶೆಯನ್ನು ಆಳುವ ವರ್ಗಕ್ಕೆ ಕುಡಿಸಿ, ನಂತರ ಅವರ ಮೂಲಕ ಜನಸಾಮಾನ್ಯನ ತೆಲೆಗೆ ಆ ನಶೆ ಏರಿಸಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಇಲ್ಲಿವರೆಗೂ ಕಾಪಾಡಿಕೊಂಡು ಬಂದಿದೆ. ಇಂತಹ ಮತೀಯ ಭ್ರಾಂತಿ ಕೇವಲ ವ್ಯಕ್ತಿಗಳ ಜೀವನವನ್ನು ನಿಯಂತ್ರಿಸದೆ ಸಮಾಜವನ್ನು, ಸರಕಾರವನ್ನು ನಿಯಂತ್ರಿಸುತ್ತಿದೆ.

ನಮ್ಮ ಸಂವಿಧಾನದ ಆರ್ಟೀಕಲ್ 51A(h)ನಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಅಭಿವೃದ್ದಿಪಡಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಸಂವಿಧಾನಾತ್ಮಕ ಶಾಸನವಿದ್ದರೂ, ಕೆಲವೊಂದು ಇಂತಹ ಮೌಢ್ಯತೆಗಳನ್ನು ಸರಕಾರದ ವೆಚ್ಚದಲ್ಲಿಯೇ ಆಚರಿಸುತ್ತಿರುವುದು ನಮ್ಮ ದೇಶದ ದುರಂತವೆ ಸರಿ. ಧರ್ಮವೆಂದರೆ ಮೋಸವಲ್ಲ, ಮೌಢ್ಯತೆಗಳನ್ನು, ಮೂಢನಂಬಿಕೆಗಳನ್ನು ಬಿತ್ತುವ ಫ್ಯಾಕ್ಟರಿ ಅಲ್ಲ, ಧರ್ಮವೆಂದರೆ ಪರಿಪೂರ್ಣತೆಯ ಕಡೆ ಸಾಗುವುದು. ಇದೆ ಈ ಭಾರತ ಮೂಲ ಧರ್ಮವಾಗಬೇಕಿತ್ತು ಆದರೆ ಆದದ್ದೆ ಬೇರೆ.

ಇಂತಹ ಕುತಂತ್ರಗಳ ಒಂದು ಸ್ಯಾಂಪಲ್ ಈ ಕುಂಭಮೇಳ. ಸಮುದ್ರ ಮಂಥನದ ಒಂದು ಕಥೆಯನ್ನು ಇಟ್ಟುಕೊಂಡು, ದೇವತೆ ರಾಕ್ಷಸರಿಗೆ ಯುದ್ದ ಮಾಡಿಸಿ ಅಮೃತಕ್ಕಾಗಿ ಜಗಳ ಹಚ್ಚಿ, ಆ ಅಮೃತದ ನಾಲ್ಕು ಹನಿಗಳು ಭಾರತದಲ್ಲಿ ಬಿದ್ದು, ಅದು ಉತ್ತರ ಪ್ರದೇಶದ ಪ್ರಯಾಗರಾಜ್, ಉತ್ತರಖಂಡದ ಹರಿದ್ವಾರ, ಮಹಾರಾಷ್ಟ್ರದ ನಾಸಿಕ್ ಮತ್ತು ಮಧ್ಯ ಪ್ರದೇಶದ ಉಜ್ಜನಿಗಳಲ್ಲಿ ಬಿದ್ದುದೇ ಸೋಜಿಗ. ಯಾಕೆ ಜಗತ್ತಿನ ಬೇರೆ ದೇಶಗಳ ಮೇಲೆ ಬೀಳಲಿಲ್ಲ, ಅಷ್ಟೇಕೆ ನಮ್ಮ ದಕ್ಷಿಣ ಭಾರತದ ನೆಲದ ಮೇಲೆಯೂ ಬೀಳದೆ ಉತ್ತರದಲ್ಲಿ ಯಾಕೆ ಬಿದ್ದವು ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ. ಹೀಗೆ ಬಿದ್ದ ಹನಿಗಳ ಜಾಗಗಳು ಪವಿತ್ರ ಎಂದು ಹೇಳಿ ಅಲ್ಲಿ ಮೌಢ್ಯತೆಯನ್ನು ಬಿತ್ತಿ ತನ್ನ ಕೆಲಸವನ್ನು ಸಾಧಿಸಿಕೊಳ್ಳುತ್ತದೆ ಈ ಪಟ್ಟಭದ್ರ ಹಿತಾಸಕ್ತಿ.

ಇನ್ನು ಲಿಂಗಾಯತರಿಗೂ ಮತ್ತು ಕುಂಭಮೇಳಕ್ಕೂ ಎತ್ತಣದ ಸಂಭಂಧ? ವೇದಕ್ಕೆ ಒರೆಯ ಕಟ್ಟಿ, ಶಾಸ್ತ್ರಕ್ಕೆ ನಿಗಳನಿಕ್ಕಿ, ಆಗಮದ ಮೂಗ ಕ್ಯೊಯ್ದ ಲಿಂಗಾಯತ ಮತ್ತು ಲಿಂಗಾಯತರನ್ನು ಆಹ್ವಾನಿಸುತ್ತಿರುವುದರ ಹಿಂದೆ ರಾಜಕೀಯವಾದ ಒಂದು ಕುತಂತ್ರವೆ ಇದೆ. ಸೇತುಬಂಧ, ರಾಮೇಶ್ವರ, ಗೋಕರ್ಣ, ಕೇದಾರ ಮೊದಲಾದ ತೀರ್ಥ ಕ್ಷೇತ್ರಗಳನ್ನು ಧಿಕ್ಕರಿಸಿದ ಲಿಂಗಾಯತರಿಗೆ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳ ಅದು ಹೇಗೆ ಪವಿತ್ರವಾಗುತ್ತೊ ಗೊತ್ತಿಲ್ಲ. “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ” ಎನ್ನುವ ಬಸವಣ್ಣನವರ ಮಾತು ಲಿಂಗಾಯತರು ಮರೆಯಬಾರದು.

ಇಂದು ಲಿಂಗಾಯತ ಸಮುದಾಯ ಜಾಗೃತಗೊಂಡಿದೆ, ಮಠಮಾನ್ಯಗಳಿಗೂ ಮೊದಲಿನಂತೆ ಮಾನ್ಯತೆ ಸಿಗುತ್ತಿಲ್ಲ,

ಕೆಲವೊಂದು ಮಠಾಧೀಶರು ಅಪ್ಪಟ ಬಸವಾನುಯಾಯಿಗಳು ಆಗಿ ಲಿಂಗಾಯತ ತತ್ವ ಸಿದ್ದಾಂತವನ್ನು ಬಿತ್ತುತ್ತಿದ್ದಾರೆ, ಅಂತವರ ಹತ್ತಿರ ಸುಳಿಯದ ಪಟ್ಟಭದ್ರರು, ಕೆಲವೊಂದು ಮಠಮಾನ್ಯಗಳು ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಅಂತಹವನ್ನು ಹಿಡಿದು ಸಾಮಾನ್ಯ ಲಿಂಗಾಯತನಲ್ಲಿ ಮತ್ತೆ ತನ್ನ ಮೌಢ್ಯ ವಿಚಾರಗಳನ್ನು ಬಿತುತ್ತ ಲಿಂಗಾಯತರನ್ನು ಕುಲಗೆಡಿಸಿ, ಮತ್ತದೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಸಿಲುಕಿಸಿ ಶಾಶ್ವತ ಶೂದ್ರರನ್ನಾಗಿ ಮಾಡುವ ಒಂದು ಸೈದ್ದಾಂತಿಕ ಕುತಂತ್ರವು ಇದರ ಹಿಂದಿದೆ. ಇಂತಹ ಕುತಂತ್ರವನ್ನು ಅರಿತು ಇಂದಿನ ಲಿಂಗಾಯತ ಸಮುದಾಯ ವಿಶೇಷವಾಗಿ ಲಿಂಗಾಯತ ಯುವ ಸಮುದಾಯ ಮುಂದಿನ ಲಿಂಗಾಯತ ಉಳಿವಿನ ಪ್ರಶ್ನೆಯಾಗಿದ್ದರಿಂದ ಎಚ್ಚರಿಕೆ ಹೆಜ್ಜೆ ಇಡುವ ಸಂದಿಗ್ಧದ ಕಾಲಘಟ್ಟದಲ್ಲಿ ಇದೆ ಎಂದು ಅನಿಸುತ್ತೆ.

Share This Article
11 Comments
  • ಡಾಕ್ಟರ್ ರಾಜಶೇಖರ ನರನಾಳ ರವರಿಗೆ ತುಂಬು ಹೃದಯದ ಶರಣು ಶರಣಾರ್ಥಿಗಳು ನಿಮ್ಮ ಚಿಂತನೆ ಅದ್ಭುತವಾಗಿದೆ ಇದೇ ರೀತಿ ಚಿಂತನೆಗಳನ್ನು ಬರೆಯುತ್ತಾ ಮುಂದೆ ಸಾಗಿರಿ, ಎಲ್ಲಾ ಲಿಂಗಾಯಿತರು ಲಿಂಗಾಯಿತವನ್ನೇ ಪ್ರತಿಪಾದಿಸಬೇಕೆಂದು ನೀವು ಹೇಳುವ ವಿಷಯ ಎಲ್ಲರಿಗೂ ಅರ್ಥವಾಗಬೇಕೆಂದು ಬಯಸುವ.

  • ಸರಿಯಾದ ಚಿಂತನೆಯ ವಿಮರ್ಶೆ.
    ಈ ದುರುದ್ದೇಶವನ್ನು ನಾವು ತಡೆಯಲೇಬೇಕು.
    ಶರಣು ಶರಣಾರ್ಥಿ.

  • ನಾರನಾಳ ಶರಣರಿಗೆ ಶರಣು ಶರಣಾರ್ಥಿಗಳು. ತಕ್ಕದಾದ ಪ್ರತಿಕ್ರಿಯೆ. ಎಲ್ಲವನ್ನೂ ಮೆಟ್ಟಿನಿಂತ ಲಿಂಗಾಯತ ಸಮುದಾಯಕ್ಕೆ ಇಂತಹ ಗಾಳಹಾಕುವ ಹುನ್ನಾರವನ್ನು ತುಂಬಾ ಜಾಗರೂಕವಾಗಿ ಎದುರಿಸಿ/ವಿರೋಧಿಸಿ ಇದನ್ನು ನಮ್ಮ ಧರ್ಮಪ್ರಚಾರ/ಪ್ರಸಾರಕ್ಕೆ ಬಳಸಿಕೊಳ್ಳುವ ಕೆಲಸವನ್ನು ಎಲ್ಲಾ ಬಸವ ಸಂಘಟನೆಗಳು ಮಾಡಬೇಕು. ಒಂದು ಸಭೆ ಕರೆದು ನಿರ್ಣಯ ತೆಗೆದುಕೊಳ್ಳುವ ಪ್ರಯತ್ನ ವಾಗಬೇಕು. ಜಯ ಬಸವ! ಜೈ ಲಿಂಗಾಯತ!

  • ಜೈ ಲಿಂಗಾಯತ ಜೈ ಬಸವಣ್ಣ

Leave a Reply

Your email address will not be published. Required fields are marked *