ಕುಂಭಮೇಳ ಭಾಗ್ಯ: ಹೆಚ್ಚುತ್ತಿರುವ ಬಸವ ಪ್ರಜ್ಞೆ ಭಯ ಹುಟ್ಟಿಸಿದೆ (ಶ್ರೀಶೈಲ ಮಸೂತೆ)

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಶ್ರೀಶೈಲ ಮಸೂತೆ ಅವರ ಪ್ರತಿಕ್ರಿಯೆ.

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

1) ಕುಂಭ ಮೇಳದ ವಿಶೇಷ ಆಹ್ವಾನದ ಉದ್ದೇಶವೇನು?

ಅನೇಕ ವರ್ಷಗಳಿಂದ ಕುಂಭಮೇಳಕ್ಕೆ ಇಲ್ಲಿಯವರೆಗೆ ಲಿಂಗಾಯತರನ್ನು ಯಾರೂ ಆಹ್ವಾನಿಸಿಲ್ಲ ಇದ್ದಕಿದ್ದಂತೆ ಈಗ ಲಿಂಗಾಯತರನ್ನು ಆಹ್ವಾನಿಸುವ ನಿರ್ಣಯ‌ RSSನ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ತೆಗೆದುಕೊಂಡಿದೆ ಎಂದು ಓದಿ ಆಶ್ಚರ್ಯವಾಯಿತು.

ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದವರು ಸ್ವತಂತ್ರ ಧರ್ಮಕ್ಕೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಲಿಂಗಾಯತರಲ್ಲಿ ಬಸವ ಪ್ರಜ್ಞೆ ಹೆಚ್ಚೆಚ್ಚು ಜಾಗ್ರತೆ ಆಗುತ್ತಿರುವುದು ಮನುವಾದಿ ಸಂಘ ಪರಿವಾರಕ್ಕೆ ಭಯ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ಬಸವಣ್ಣನವರ ಬಗ್ಗೆ ಎಂದೂ ಮಾತನಾಡದ, ಪ್ರೀತಿ ತೋರದ RSS ವಚನ ದರ್ಶನ, ಶರಣರ ಶಕ್ತಿ ಚಲನ ಚಿತ್ರಗಳ ಮೂಲಕ ಲಿಂಗಾಯತ ಸಮುದಾಯದವರನ್ನು ವೈದಿಕ ಪ್ರಣೀತ ಹಿಂದುತ್ವದ ಭಾಗವೆಂದೂ, ವಚನ ಚಳುವಳಿ ಸಮಾನತೆಯ ಚಳುವಳಿಯಲ್ಲ ಕೇವಲ ಭಕ್ತಿ ಚಳುವಳಿ ಎಂದು ಬಿಂಬಿಸುವ ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ. ಕುಂಭಮೇಳದ ವಿಶೇಷ ಆಹ್ವಾನದ ಹಿಂದಿರುವ ಉದ್ದೇಶ ಇದೇ.

2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ?

ಕರ್ನಾಟಕದ RSS ತೆಕ್ಕೆಯಲ್ಲಿ ಇರುವ ಲಿಂಗಾಯತ ಮಠಾಧೀಶರಿಗೆ, ರಾಜಕಾರಣಿಗಳಿಗೆ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ವಿರೋಧ ಮಾಡಿದ ಲಿಂಗಾಯತ ಮನುವಾದಿಗಳಿಗೆ, ಅಧಿಕಾರದ ಲಾಲಸೆಗೆ ಹಿಂದುತ್ವದ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವ ಲಿಂಗಾಯತ ಉದ್ಯಮಿಗಳಿಗೆ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಆಹ್ವಾನ ಬರಬಹುದು. ಭಾರತ ಮಾತೆಯ ಮಂತ್ರಾಕ್ಷತೆ ರೂಪದಲ್ಲಿ, ಪ್ರಯಾಣದ ವೆಚ್ಚ ಭರಿಸುವ ರೂಪದಲ್ಲಿ, ಧಾರ್ಮಿಕ ಮತಾಂಧತೆಯ ರೂಪದಲ್ಲಿ ಆಮಿಷಗಳನ್ನು ನೀಡುವುದರ ಮೂಲಕ ಆಹ್ವಾನ ನೀಡಬಹುದು.

3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?

ಲಿಂಗಾಯತ ಧರ್ಮಿಯರಿಗೆ ತಮ್ಮದೇ ಆದ ಪರಂಪರೆ, ನಿಜಾಚರಣೆಗಳಿವೆ. ಬಸವಾದಿ ಶರಣರ ವಚನ ಸಂವಿಧಾನದ ಅನ್ವಯ ಲಿಂಗಾಯತ ಧರ್ಮದಲ್ಲಿ ಕುಂಭಮೇಳದಂತ ಮೌಢ್ಯ ಜಾತ್ರೆ ಮತ್ತು ತೀರ್ಥಯಾತ್ರೆಗಳು ಇಲ್ಲ. ಇದರ
ಬಗ್ಗೆ ಶರಣರು, ವಚನಕಾರರು ತಮ್ಮ ವಚನಗಳ ಮುಖಾಂತರ ನಮ್ಮನ್ನು ಎಚ್ಚರಿಸಿದ್ದಾರೆ.

ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು,
ಧರೆಯ ಮೇಲೆ ಪ್ರತಿಷ್ಠಿಸಿದ ಭವಿಶೈವದೈವ,
ತೀರ್ಥಕ್ಷೇತ್ರಂಗಳಿಗೆ ಹರಿದುಹೋಗುವ ಪರವಾದಿಗಳಿಗೆ
ಅಘೋರನರಕ ತಪ್ಪದೆಂದ, ಕಲಿದೇವಯ್ಯ.

(ಮಡಿವಾಳ ಮಾಚಯ್ಯ)

ಹಾಗಾಗಿ ಬಸವತತ್ವ ನಿಷ್ಟ ಲಿಂಗಾಯತರು ಬಸವ ಮೌಲ್ಯಕ್ಕೆ ಬದ್ಧರಾಗಿ ಕುಂಭಮೇಳದ ಆಹ್ವಾನ ತಿರಸ್ಕರಿಸಬೇಕು. ಜನರಲ್ಲಿ RSSನ ಕುತಂತ್ರದ ಬಗ್ಗೆ ಅರಿವು ಮೂಡಿಸುವುದು ಲಿಂಗಾಯತ ಧರ್ಮಿಯರ ನಿಜವಾದ ಪ್ರತಿಕ್ರಿಯೆ.

4) ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ ಏನು? ನೀವೇನು ಮಾಡುತ್ತಿರಿ?

ಅವೈಜ್ಞಾನಿಕ, ಅಂಧಶ್ರೃದ್ದೆಯ ಮೌಢ್ಯ ಆಚರಣೆಯ ಕುಂಭಮೇಳದ ಮೂಲಕ ನಡೆಯುವ ಜೀವಜಲ, ನೆಲದ ಮಾಲಿನ್ಯ ವಿರೋಧಿಸುತ್ತೇನೆ. ಈ ದೇಶದ ಪ್ರಜೆಯಾಗಿ ನಮ್ಮ ಹೆಮ್ಮೆಯ ಸಂವಿಧಾನದ 51A(h) ಪರಿಚ್ಚೇದ ಹಾಗೂ ಬಸವ ಸಂವಿಧಾನದ ಅನ್ವಯ ಜನರಲ್ಲಿ ಬಸವ ಪ್ರಜ್ಞೆಯ ಅರಿವು ಮೂಡಿಸುವ, ಕರಪತ್ರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಮಾಡುತ್ತೇವೆ.

ಮತ್ತಷ್ಟು ಓದು

Share This Article
2 Comments
  • ನಾವು ಲಿಂಗಾಯತರು ಹುಚ್ಚರ ಸಂತೆ ಮಾಡುವವರಲ್ಲ. RSS ಏಕೆ ಲಿಂಗಾಯತರ ಗೊಡವೆಗೆ ಬರುತ್ತಿದೆ. ಅದರಲ್ಲಿರುವ ಎಲ್ಲಾ ಲಿಂಗಾಯತರು ನಿಜಲಿಂಗಾಯತರಾಗಿ RSS ತ್ಯಜಿಸಲು ಇದು ಯೋಗ್ಯ ಸಮಯ. ದಯವಿಟ್ಟು ಈ ನಿರ್ಣಾಯಕ ಹಂತದಲ್ಲಿ ಲಿಂಗಾಯತದ ಎಲ್ಲಾ ಪಂಗಡಗಳು ಒಗ್ಗಟ್ಟಾಗಿ ಮನುವಾದಿ ಕುಂಭಮೇಳ ನಮ್ಮ ಆಚರಣೆಯಲ್ಲ ಎಂದು ಘಂಟಾಘೋಷವಾಗಿ ಹೇಳಿ, ಲಿಂಗಾಯತರು ಆಚರಿಸುವ ಗುರು,ಲಿಂಗ ಜಂಗಮದ ಕಡೆ ಉಳಿದ ಸಮೂದಾಯದವರು ವಾಲುವದು ದೇಶಸಂಘಟನೆಗೆ ಒಂದು ಪ್ರಜ್ಞಾಪೂರ್ವಕ ಪ್ರಯತ್ನವಾದೀತು. ಶರಣು ಶರಣಾರ್ಥಿಗಳು.

  • ನಾವೂ ವಿಶ್ವ ಗುರು ಬಸವಣ್ಣನವರು ಸ್ಥಾಪಿಸಿದ ವಿಶ್ವದ ಸವ೯ಶೇಷ್ಟ ಲಿಂಗಾಯತ ಧಮ೯ದವರು ನಮ್ಮ ಧಮ೯ ನಮ್ಮ ಅಸ್ಮಿತೆ ೧೨ನೇ ಶತಮಾನದಿಂದಲೂ ವೈದಿಕರು ನಮ್ಮನ್ನು ಹಿಂದೂಗಳ ಗುಂಪಿನಲ್ಲಿ ಸೇರಿಸಲು ಶತ ಪ್ರಯತ್ನ ಮಾಡುತ್ತಲೇ ಬಂದಿರುವರು ಅದರ ಮುಂದುವರಿದ ಭಾಗವಾಗಿ RSS ನಮ್ಮ ಧಮ೯ದ ಹೋರಾಟದ ಒಗ್ಗಟ್ಟನ್ನು ಹತ್ತಿಕ್ಕಲು ಈ ಕುಂಭಮೇಳಕ್ಕೆ ಇರುವೆಗೆ ಸಕ್ಕರೆ ಚೆಲ್ಲಿ ಬಲಿ ಹಾಕುವ ರೀತಿಯಲ್ಲಿ ನಮಗೆ ಆಮಂತ್ರಣ ನೀಡಿರುವರು ಬಂಧುಗಳೆ ದೇಹವೆ ದೇವಾಲಯವಾಗರಲು ನಮ್ಮ ಮನೆಯ ಜಲವೆ ಪಾವನ ತಿಥ೯ವಾಗಿರಲು ಆ ದೂರದ ಶಾರೀರಿಕ ಬಳಲಿಕೆಯ ಪ್ರಯಾಗರಾಜ ಬೇಕೆ? ಅಲ್ಲಿ ಪ್ರತಿ ವಷ೯ ಸಾವು ನೋವುಗಳೆ ಸಂಭವಿಸಿರುವದು ಮಾಧ್ಯಮದಲ್ಲಿ ನೋಡಿರುವಿ ಕಾರಣ ನಿಮ್ಮ ಅರಿವನ್ನು ಗುರುವಾಗಿಸಿಕೋಳ್ಳಿ.

Leave a Reply

Your email address will not be published. Required fields are marked *