ಬಾಲಿ
ಇಲ್ಲಿನ ಹ್ಯಾರೀಸ್ ಕನ್ವೇನ್ಷಿಯಲ್ ಹಾಲ್ ನಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಭಾರತ ವಚನ ಸಾಂಸ್ಕೃತಿಕ ಯಾತ್ರಾ – 2024ರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮ ನಡೆಯಿತು.
ಭಾರತದಿಂದ ಬಂದಿದ್ದ ನಿಯೋಗದ ಜೊತೆ 140 ಜನ ಪ್ರವಾಸಿಗರು ಹಾಗೂ ಇಂಡೋನೇಷಿಯಾದ ಪ್ರಜೆಗಳು ಭಾಗವಹಿಸಿದ್ದರು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸುರೇಶ ಸ್ವಾಗತಿಸಿದರೆ, ಇಂಡೋನೇಷಿಯಾದ ವಿದ್ಯಾರ್ಥಿಗಳು ನಿರೂಪಿಸಿದರು. ಶಿವಕುಮಾರ ಕಲಾಸಂಘದ ಕಲಾವಿದರು ಉರಿಲಿಂಗ ಪೆದ್ದಿ ನಾಟಕ ಪ್ರದರ್ಶಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಯಾವ ದೇವರ ಪೂಜೆ ಮಾಡಿದರೂ ಫಲ ನೀಡಲು ಸಾಧ್ಯವಿಲ್ಲ. ಸಮಾಜ ಸುಖವೇ ಎನ್ನ ಸುಖ, ಸಮಾಜ ದುಃಖವೇ ಎನ್ನ ದುಃಖದ ಭಾವನೆ ಇದ್ದಾಗ ಮಾತ್ರ ದೇವರ ಒಲಿಮೆ ಸಾಧ್ಯ. ಇದು ಬಸವನ ಭಾವವಾಗಿತ್ತು.
ಬಸವಣ್ಣ ಪರಿಪೂರ್ಣ ವ್ಯಕ್ತಿ. ಅಂದು ಇಂದು ಮುಂದು ಎಂದೆಂದಿಗೂ ಪ್ರಸ್ತುತ. ಇಡೀ ವಿಶ್ವಕ್ಕೆ ಬಸವಣ್ಣ ಗುರು. ಬದುಕಿನ ಎಲ್ಲ ಆಯಾಮಗಳನ್ನು ಕೊಟ್ಟಂಥ ಮಹಾನ್ ಪುರುಷ. ಇಂಥವರ ತತ್ವಗಳನ್ನು ಆಚರಣೆಗೆ ತರದೇ ಹೋದರೆ ಬಸವದ್ರೋಹಿಗಳಾಗುತ್ತೇವೆ. ಆದ್ದರಿಂದ ಬಸವಣ್ಣನವರ ತತ್ವಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವ ತತ್ವ ವಿಶ್ವವ್ಯಾಪಿಯಾಗಲಿ. ಮಠಾಧೀಶರು ಮಾಡದೇ ಕೆಲಸವನ್ನು ಬಸವ ಪ್ರತಿಷ್ಠಾನದವರು ಮಾಡುತ್ತಿರುವುದು ಶ್ಲಾಘನೀಯ. ಈ ದೇಶದ ರಾಜಕೀಯ ಧಾರ್ಮಿಕ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮಗೆ ತುಂಬ ಸಂತೋಷವಾಗಿದೆ.
ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು, ಸಾಂಸ್ಕೃತಿಕ ನಾಯಕರುಗಳ ಸರಳತೆಯನ್ನು ನೋಡಿದರೆ ನಿಜವಾಗಿಯೂ ಬಸವತತ್ವ ನೆಲೆಸಿರುವುದು ಇಂಡೋನೇಷಿಯಾದಲ್ಲಿ ಎನ್ನುವ ಭಾವ ಮೂಡುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವ ತತ್ವ ಚಿಂತಕ ರಂಜಾನ್ ದರ್ಗಾ ಮಾತನಾಡಿ, ಬಸವಣ್ಣ ಸಕಲ ಜೀವಾತ್ಮರ ಬಗ್ಗೆ ಒಳಿತು ಬಯಸಿದರು. ತತ್ವಶಾಸ್ತ್ರಜ್ಞ, ಆರ್ಥಿಕತಜ್ಞ, ಸಮಾಜ ಸುಧಾರಕರಾಗಿ ಸಮಸಮಾಜ ನಿರ್ಮಾಣದಲ್ಲಿ ದೊಡ್ಡಕ್ರಾಂತಿಯನ್ನೇ ಮಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿದ್ದು ಯಾಪಲಪರವಿ ಮಾತನಾಡಿ; ಇದೊಂದು ಆಧ್ಯಾತ್ಮಿಕ ಪ್ರವಾಸ. ಕರ್ನಾಟಕದಲ್ಲಿ ಬಸವಣ್ಣನ ವಾರಸುದಾರರು ಎಂದು ಹೇಳುತ್ತಿರುವವರಿಗೆ ದುಸ್ಥಿತಿ ಬಂದಿದೆ. ಬಸವಣ್ಣನವರ ಹೆಸರು ಹೇಳಿಕೊಂಡು ಅನೇಕ ಮಠಗಳು, ಲಿಂಗಾಯತರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ಅನುಭವ ಮಂಟಪ ಪ್ರವೇಶಕ್ಕೆ ಮಹಿಳೆಯರಿಗೆ ಮೊದಲ ಅವಕಾಶ ಕೊಟ್ಟವರು ಬಸವಣ್ಣ. ಭಾರತ ದೇಶದಲ್ಲಿ ನಮ್ಮ ಧರ್ಮ ಶಾಶ್ವತವಾಗಿ ಉಳಿಯಲಿ ಎಂದು ಸಾವಿಗೆ ಅಂಜದೇ ವಚನಗಳನ್ನು ಉಳಿಸಿದವರು ಬಸವಾದಿ ಶಿವಶರಣರು. ಇಡೀ ಕರ್ನಾಟಕದಲ್ಲಿ ಬಸವತತ್ವ ಉಳಿದಿದೆ ಎಂದರೆ ಅದು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳಿಂದ. ಕರ್ನಾಟಕದಲ್ಲಿ ಎಷ್ಟೇ ಬುದ್ಧಿ ಹೇಳಿದರೂ ಬದಲಾಗಲಿಲ್ಲ ಎಂದು ಪಂಡಿತಾರಾಧ್ಯ ಶ್ರೀಗಳು ನಮ್ಮನ್ನು ಸಮುದ್ರದ ಮೇಲೆ ವಿಮಾನದ ಮೂಲಕ ಕರೆದುಕೊಂಡು ಇಂಡೋನೇಷಿಯಾ ನಗರಕ್ಕೆ ಬುದ್ಧಿ ಹೇಳಲಿಕ್ಕೆ ಕರೆದುಕೊಂಡು ಬಂದಿದ್ದಾರೆ. ನೀವೆಲ್ಲರೂ ಏಳುನೂರಾ ಎಪ್ಪತ್ತು ಅಮರಗಣಂಗಳ ತತ್ವ, ಸಿದ್ಧಾಂತಗಳ ಪಾಲಕರಾಗಿ ಲಿಂಗವಂತರಾಗಿ ಎಂದರು.
ಇಸ್ರೋದ ಮಾಜಿ ಅಧ್ಯಕ್ಷ ಕಿರಣಕುಮಾರ್ ಮಾತನಾಡಿ, ಬಸವಾದಿ ಶಿವಶರಣರ ತತ್ವಗಳು ನಿಮ್ಮೆಲ್ಲರಿಗೂ ದಾರಿದೀಪವಾಗಲಿ. ಬಸವಣ್ಣ ನಮ್ಮ ಧರ್ಮಗುರು. ಅಂತಹ ಧರ್ಮ ಗುರುವಿನ ತತ್ವ ವಿಚಾರಗಳು ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದರು.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ್ರು ಮಾತನಾಡಿ; ಬಸವ ಜಯಂತಿಯನ್ನು ಇಂಡೋನೇಷಿಯಾದ ಒಂದು ದ್ವೀಪದಲ್ಲಿ ಮಾಡುತ್ತಿರುವುದು ಕರ್ನಾಟಕದವರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ. ಇಡೀ ವಿಶ್ವದ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿದ ಕಾಲ 12ನೆಯ ಶತಮಾನ. ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಬಸವಣ್ಣ. ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಯ ಹರಿಹಾರ ಬಸವಣ್ಣ. ಆದ್ದರಿಂದಲೇ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರ ಕ್ರಾಂತಿಕಾರಕ ವಿಚಾರಗಳನ್ನು ಮನೆಮನಗಳಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮಿಗಳು ಮಾತಾನಾಡಿ, ಬಾಲಿಯಲ್ಲಿ ಹಚ್ಚಿದ ದೀಪ ಮನದ ಕತ್ತಲೆಯನ್ನು ಕಳೆದ ದೀಪ. ಇದನ್ನು ಹಚ್ಚಿದ್ದು ಬಸವಣ್ಣ. ಜಗತ್ತಿಗೆ ಮಂಗಳವನ್ನುಂಟು ಮಾಡುವವನೇ ಶಿವಸ್ವರೂಪಿಗಳು. ಅಂತಹ ಶಿವಸ್ವರೂಪಿಗಳು ಬಸವಣ್ಣ. ಬಸವಪ್ರಜ್ಞೆ ನಿಜವಾಗಿ ಆಚರಣೆಯಲ್ಲಿ ತಂದಿರುವುದು ಇಂಡೋನೇಷಿಯಾದ ಜನರು. ಕಾಯಕವನ್ನೇ ಕೈಲಾಸ ಮಾಡಿದ ಬಸವಣ್ಣ. ಕೆಲವು ಮಠಗಳು ಕಾರ್ಫೋರೇಟ್ ಕಂಪನಿಗಳಾಗಿವೆ. ಆದರೆ ಸಾಣೇಹಳ್ಳಿಯ ಶ್ರೀಗಳು ತಾಯ್ತನದವರು. ಅಂತಹ ತಾಯಿಯ ಮಕ್ಕಳು ಸಾಣೇಹಳ್ಳಿ ಮಠದ ಶಿಷ್ಯರು. ವೈಯಕ್ತಿಕ ಹಿತಾಸಕ್ತಿ ಬಸವಣ್ಣನವರಿಗಿರಲಿಲ್ಲ. ಸಮಾಜಿಕ ಹಿತಾಸಕ್ತಿಗೋಸ್ಕರ ದುಡಿದವರು. ಹಾಗೇಯೇ ಸಾಣೇಹಳ್ಳಿ ಶ್ರೀಗಳು ನಿಷ್ಠುರವಾದಿತನದಿಂದ ಲೋಕಕಲ್ಯಾಣಕ್ಕೋಸ್ಕರ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತಹ ಸಮರ್ಥ ಗುರು ನಮ್ಮ ಪಂಡಿತಾರಾಧ್ಯ ಶ್ರೀಗಳು ಎಂದರು.

ಇಂಡೋನೇಷಿಯಾದ ರಮೇಶ ಶಾಸ್ತ್ರೀಜಿ ಮಾತನಾಡಿ; ಸಾಣೇಹಳ್ಳಿ ಶ್ರೀಗಳ ಐದು ನಿಮಿಷದಲ್ಲಿ ಇಡೀ ವಿಶ್ವವನ್ನೇ ಪರಿಚರಿಸಿದರು. ಮುಂದೊಂದು ದಿನ ಸಾಣೇಹಳ್ಳಿಯ ಶಾಖೆ ಇಂಡೋನೇಷಿಯಾದಲ್ಲೂ ಆಗಬಹುದು ಎಂದು ಭವಿಷ್ಯ ನುಡಿದರು. ಪ್ರತಿನಿತ್ಯ ಬಸವನ ಚರ್ಚೆ ಆಗಲಿ. ಬಸವ ಕಲ್ಯಾಣ ಇಂಡೋನೇಷಿಯಾದಲ್ಲಿ ತಮ್ಮಿಂದ ನಡೆಯುವಂತಾಗಲಿ ಎಂದು ಪಂಡಿತಾರಾಧ್ಯ ಶ್ರೀಗಳಲ್ಲಿ ಕೇಳಿಕೊಂಡರು.
ಮುಂದಿನ ವರ್ಷ ಬಸವಣ್ಣನವರ ತತ್ವ ವಿಚಾರಗಳು ಬಗ್ಗೆ ಅಂತರಾಷ್ಷ್ರೀಯ ವಿಚಾರ ಸಂಕಿರಣ ಇಂಡೋನೇಷಿಯಾದಲ್ಲಿ ನಡೆಯಬೇಕು ಎಂದರು.
ಬಾಲಿಯ ರಮೇಶ ಗುರೂಜಿಯವರಿಗೆ ಚೀಫ್ ಸಿವಿಲಿಯನ್ – 2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಇಂಡೋನೇಷಿಯಾದ ರಾಜನ ಮಗ ವೇದಾಂತ, ಪ್ರವಾಸೋದ್ಯಮ ಇಲಾಖೆಯ ಮಂತ್ರಿ ಇಗ್ನೋನಾ, ಧಾರ್ಮಿಕ ಇಲಾಖೆಯ ಅಧಿಕಾರಿ ಕೊರಾಸನ ಮಾತನಾಡಿದರು.

ವಿಶ್ವಕ್ಕೆ ಬಸವ ಬೆಳಕು ಪ್ರಸರಿಸುತ್ತಿದೆ. ಈ ಕಾರ್ಯಕ್ರಮ ಆಯೋಜಿದ ಎಲ್ಲರಿಗೂ ಶರಣು ಶರಣಾರ್ಥಿಗಳು…ಬಸವಮೀಡಿಯಾ ಇಂತಹ ಮಹತ್ತರವಾದ ಕಾರ್ಯಕ್ರಮಗಳನ್ನ ಮಾಧ್ಯಮ ಮುಖಾಂತರ ತಲುಪಿಸಲು ಸಹಕಾರಿಯಾಗಿದೆ ಬ.ಮೀ.ಗೆ ಅನಂತ ಶರಣು
ಲಿಂಗಾಯತ ಧರ್ಮ ವಿಶ್ವ ವ್ಯಾಪಿಯಾಗಿ ಬೆಳೆಯಲು ಶುಭ ಕೋರಿದ ಇಂಡೋನೇಷಿಯಾದ ಪ್ರಜೆಗಳಿಗೆ ಹಾಗೂ ಭಾರತದ ಲಿಂಗಾಯತ ಧರ್ಮದ ತಂಡನಾಯಕರಾದ ಸಾನಿಹಳ್ಳಿ ಪೂಜ್ಯರಿಗೆ ಹಾಗೂ ನಾಡಿನ ಶ್ರೇಷ್ಠ ಬಸವ ತತ್ವ ಚಿಂತಕರಿಗೆ ಭಾಗವಹಿಸಿ ಯಶಸ್ವಿಗೊಳಿಸಿದ ದೇಶವಿದೇಶಗಳ ಸರ್ವ ಶರಣ ಸಮೂಹಕ್ಕೆ ಧನ್ಯವಾದಗಳು ಶರಣು ಶರಣಾರ್ಥಿಗಳು
ಪ್ರೇಮಕ್ಕ ಅಂಗಡಿ ಬೈಲ್ಹೊಂಗಲ