ಶೇಗುಣಸಿ
ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ
ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್
ಕಣ್ತೆರೆಸಿದ ತೇರದಾಳ 3: ಅಲ್ಲಮರ ಪ್ರಭಾವ, ಬಸವಣ್ಣನವರ ಜನಪ್ರಿಯತೆ
ಕಣ್ತೆರೆಸಿದ ತೇರದಾಳ 4: 21,000 ಜನರಿಂದ 11 ವಚನ ಹೇಳಿಸಿದ ಅದ್ಭುತ ಅನುಭವ
(ಇತ್ತೀಚೆಗೆ ತೇರದಾಳದಲ್ಲಿ ಅಲ್ಲಮ ಪ್ರಭುಗಳ ದೇವಾಲಯದ ಲೋಕಾರ್ಪಣೆಗಾಗಿ ನಡೆದ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದವು. ಅಲ್ಲಿ ಹರಿದು ಬಂದ ಜನಸಾಗರ, ಅವರು ನಡೆಸಿದ ನಿಸ್ವಾರ್ಥ ದಾಸೋಹ, ಅಲ್ಲಮ ಬಸವಾದಿ ಶರಣರಿಗೆ ಅವರು ತೋರಿದ ಭಕ್ತಿ ಗೌರವ ಎಲ್ಲರ ಮನಸ್ಸುಗಳನ್ನು ಕಲಕಿದವು.
28 ದಿನಗಳು (ಅಕ್ಟೋಬರ್ 14 ರಿಂದ ನವೆಂಬರ್ 11)ಸಹಸ್ರಾರು ಶರಣ ಬಂಧುಗಳನ್ನು ಸೆಳೆದ ಬಸವ ಪುರಾಣ ಪ್ರವಚನ ಈ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿತ್ತು. ಅದನ್ನು ನಡೆಸಿಕೊಟ್ಟ ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ ತಮ್ಮ ಮರೆಯಲಾಗದ ತೇರದಾಳದ ಅನುಭವಗಳನ್ನು ಬಸವ ಮೀಡಿಯಾದ ಓದುಗರೊಡನೆ ಹಂಚಿಕೊಂಡಿದ್ದಾರೆ.)
ಬಸವ ಮೀಡಿಯಾ: ಕಾರ್ಯಕ್ರಮದ ಕಡೆಯ ದಿನ 21 ಸಾವಿರ ಜನರಿಂದ ಅಲ್ಲಮ ಪಭುಗಳ 11 ವಚನಗಳನ್ನು ಹೇಳಿಸಿದ್ದು ಅದ್ಭುತ ಅನುಭವ. ಆ 11 ವಚನಗಳು ಯಾವುವು?
ಡಾ. ಮಹಾಂತ ಪ್ರಭು ಸ್ವಾಮೀಜಿ: ಮೊದಲಿನಿಂದ ಕೊನೆಯವರೆಗೆ ಕ್ರಮವಾಗಿ –
ಆಯತದಲ್ಲಿ ಪೂರ್ವಚಾರ್ಯರ ಕಂಡೆ …,
ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ …
ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷ ಗಂಗೆಯ ನಿಂದಡಿಲ್ಲ…,
ಮಹಾಘನವೇ ತಾನಾಗ ಬಳಿಕ ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ…,
ಕಂಡುದ ಹಿಡಿಯಲಲ್ಲದೇ ಕಾಣದುದ ಅರಿತು ಹಿಡಿದಿಹೆನೆಂದರೆ …,
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ …,
ಆಸೆಗೆ ಸತ್ತುದು ಕೋಟಿ ಕೋಟಿ …,
ಹುಷಿಯುಳ್ಳಾತ ಭಕ್ತನಲ್ಲ…,
ಸತ್ಯವು ಇಲ್ಲ ಸತ್ಯವು ಇಲ್ಲ …,
ಅರಿದೆನೆಂಬುದು ತಾ ಬಯಲು ಅರಿಯನೆಂಬುದು ತಾ ಬಯಲು …,
ಆದಿ ಆಧಾರವಿಲ್ಲದಂದು ಹಮ್ಮು ಬಿಮ್ಮು …
ಈ ರೀತಿಯಾಗಿ 11 ವಚನಗಳ ಹೇಳಿಸಿದೆವು.
ಬಸವ ಮೀಡಿಯಾ: ಯಾವ ಕಾರಣಕ್ಕೆ ಇವುಗಳನ್ನು ಆಯ್ಕೆ ಮಾಡಿಕೊಂಡಿರಿ
ಡಾ. ಮಹಾಂತ ಪ್ರಭು ಸ್ವಾಮೀಜಿ: ಬೇರೆ ಬೇರೆ ಕಾರಣಗಳಿಂದ ಈ ವಚನಗಳನ್ನು ಆಯ್ದುಕೊಂಡೆವು.
ಒಂದನೆಯದು ಬಸವಣ್ಣನವರ ಬಗ್ಗೆ ಅಲ್ಲಮ ಪ್ರಭುಗಳಿರುವಂಥ ಘನತೆ, ಗೌರವಗಳನ್ನು ನಾವು ಜನರಿಗೆ ತೋರಿಸಬೇಕಾಗಿದೆ. ಆಯತದಲ್ಲಿ ಪೂರ್ವಚಾರ್ಯರ ಕಂಡೆ ವಚನದಲ್ಲಿ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಸ್ವತಃ ಅಲ್ಲಮಪ್ರಭುದೇವರೇ ಹೇಳುತ್ತಾರೆ.
ಉಭಯ ದೃಷ್ಟಿ ಏಕದೃಷ್ಟಿ ವಚನ – ಇದೇಕೆಂದರೆ ದಂಪತಿಗಳದು. ನಮ್ಮದು ಶರಣರ ಧರ್ಮ ದಾಂಪತ್ಯದ ಧರ್ಮ. ಹೀಗಾಗಿ ದಾಂಪತ್ಯ ಧರ್ಮದ ಬಗ್ಗೆ ಯಾರಿಗೂ ಕೀಳರಿಮೆ ಇರಬಾರದು, ಅಲ್ಲಿ ನಾವು ಬೆಳಕನ್ನು ಕಾಣಬೇಕು ಅನ್ನುವಂತದ್ದು ಎಂಬ ಸಂದೇಶ ನಾವು ಕೊಡಬೇಕಾಗಿತ್ತು.
ಆಮೇಲೆ ಸುತ್ತಿ ಸುತ್ತಿ ಬಂದಡಿಲ್ಲ ವಚನ – ಈ ವಚನ ನೀವು ಮನಸ್ಸನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳದಿದ್ದರೆ, ಮನಸ್ಸು ನಿಮಗೆ ನರಕಾನೂ ಆಗಬಹುದು ಸ್ವರ್ಗಾನೂ ಆಗಬಹುದು. ಸ್ವರ್ಗ-ನರಕ ಮೇಲೆ-ಕೆಳಗೆ ಇಲ್ಲ. ನೀವು ಮನಸ್ಸನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಂಡರೆ ಅದೇ ಸ್ವರ್ಗ ಆಗುತ್ತೆ, ಅದನ್ನು ಎತ್ತಬೇಕತ್ತ ಹರಿಯಾಕ ಬಿಟ್ರೆ ಅದು ನರಕವಾಗಿ ಬಿಡುತ್ತೆ.
ಗುರುವಿನ ಮಹತ್ವದ ಕಂಡುದ ಹಿಡಿಯಲೊಲ್ಲದೆ ಎಂಬ ವಚನ ಹೇಳಲಾಯಿತು.
ಯಾವುದು ಮಾಯೆ ಎಂಬುದನ್ನು ಅಲ್ಲಮಪ್ರಭುವಿನಷ್ಟು ಸ್ಪಷ್ಟವಾಗಿ ಯಾರು ಹೇಳಿಲ್ಲ. ಮನದ ಮುಂದಣ ಆಶೆಯೇ ಮಾಯೆ ಎನ್ನುತ್ತಾರೆ ಹೀಗಾಗಿ ಅದೊಂದು ವಚನ,
ಆಶೆಗೆ ಸತ್ತುದು ಕೋಟಿ ಕೋಟಿ ನಾವು ಲಿಂಗಾಂಗ ಸಾಮರಸ್ಯ ಇಟ್ಟುಕೊಂಡು ಸಾಧನೆ ಮಾಡಬಹುದು ಅನ್ನುವುದಕ್ಕಾಗಿ ಈ ಒಂದು ವಚನ.
ಆಮೇಲೆ ಯಾವುದೂ ಇಲ್ಲ. ಸತ್ಯನೂ ಇಲ್ಲ ಅಸತ್ಯನೂ ಇಲ್ಲ, ಸಹಜನೂ ಇಲ್ಲ ಅಸಹಜನೂ ಇಲ್ಲ, ಕೊನೆಗೆ ನಾನು ಇಲ್ಲ ನೀನು ಇಲ್ಲ, ಇಲ್ಲ ಇಲ್ಲ ಇಲ್ಲ ಅನ್ನುವುದೂ ಇಲ್ಲ, ಗುಹೇಶ್ವರ ಎಂಬುದು ತಾ ಬಯಲು ಇದೊಂದು.
ಆದಿ ಆಧಾರವಿಲ್ಲದಂದು ಹಮ್ಮು ಬಿಮು ಇಲ್ಲ, ಶೂನ್ಯ ನಿಶೂನ್ಯ ಇಲ್ಲ, ಚರಾಚರವಿಲ್ಲ ಇದಾವುದು ಇರಲಾರದಂಗ ಗುಹೇಶ್ವರ ಹುಟ್ಟಿರುವನಂತೆ.
ಈ ರೀತಿಯಾಗಿ ಸಹಜವಾದ ವಚನಗಳನ್ನು ಹೇಳಿಸಿ ಜನರಿಗೆ ಬಸವಣ್ಣನವರ ಬಗ್ಗೆ ಕಲ್ಪನೆ ಬರಬೇಕು, ದಾಂಪತ್ಯ ಜೀವನದ ಬಗ್ಗೆ ಕಲ್ಪನೆ ಬರಬೇಕು, ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎನ್ನುವ ಅರಿವು ಬರಬೇಕು, ನಮ್ಮನ್ನು ನಾವು ಅರಿಯಬೇಕು, ಯಾವುದು ಮಾಯೆ ಎಂಬುದು ಗೊತ್ತಾಗಬೇಕು. ಇದು ನಮ್ಮ ಉದ್ದೇಶ.
ಎಲ್ಲ ಗೊತ್ತಾದ ಮೇಲೆ ಉಳಿಯುವಂತಹದ್ದು ಏನಂದ್ರ ಏನೂ ಇಲ್ಲ. ಸತ್ಯನೂ ಇಲ್ಲ, ಅಸತ್ಯನೂ ಇಲ್ಲ. ಹೀಗಾಗಿ ಗುರು ಅಲ್ಲಮರಿಗೆ ಒಂದು ಗೌರವ ಸಲ್ಲಿಸಬೇಕು ಎಂದುಕೊಂಡು ಈ 11 ವಚನಗಳನ್ನು ಆಯ್ಕೆ ಮಾಡಿಕೊಂಡು ಜನರಿಗೆ ಹೇಳಿಸಿದೆವು ನೋಡ್ರಿ.
ಪೂಜ್ಯರ ಬಸವ ಭಕ್ತಿಗೆ ಅನಂತ ಶರಣಾರ್ಥಿ ಗಳು 🙏🏽🙏🏽