“ಹಣ, ಜನ ಜಾಸ್ತಿ ಇದ್ದಕಡೆ ಹೋಗೋದು, ಬದ್ಧತೆ ಇಲ್ಲ ಎಂಬುದನ್ನು ತೋರಿಸುತ್ತದೆ.”
ಬೀದರ
ಸೇಡಂನಲ್ಲಿ ಸಂಘ ಪರಿವಾರ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ನೀಡಲು ‘ಬಸವ ರಥ’ ಮಂಗಳವಾರ ಬೀದರದಿಂದ ಹೊರಟಿತು.
ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಬೆಂಬಲ ಸೂಚಿಸಿದ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಡಾ. ಅಕ್ಕ ಗಂಗಾಂಬಿಕೆ ಅಕ್ಕನವರ ವಿರುದ್ಧ ಬಸವ ಭಕ್ತರು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದರ ಬಗ್ಗೆ ಮಾತನಾಡಲು ಪ್ರಯತ್ನಿಸಿದ ಬಸವ ಮೀಡಿಯಾದ ಹಲವಾರು ಕರೆಗಳನ್ನು ಅಕ್ಕ ಗಂಗಾಂಬಿಕೆ ಸ್ವೀಕರಿಸಲಿಲ್ಲ. ವಾಟ್ಸ್ ಆಪ್ ಸಂದೇಶಗಳಿಗೂ ಸ್ಪಂದಿಸಲಿಲ್ಲ.
ಅವರ ಪರವಾಗಿ ಮಾತನಾಡಿದ ಬೀದರಿನ ಬಸವಕೇಂದ್ರದ ಮುಖ್ಯಸ್ಥ ಟೋಕ್ರೆ ಶಿವಶಂಕರ
ನಾನು ಮತ್ತು ಅಕ್ಕ ಮಂಗಳವಾರ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಅವರ ಕಾರ್ಯಕ್ರಮಕ್ಕೆ ಹೋದೆವು.
“ಅಕ್ಕ ಸಂಘ ಪರಿವಾರದ ರಥಕ್ಕೆ ಚಾಲನೆ ನೀಡಿಲ್ಲ, ಯಾವುದೇ ವೇದಿಕೆ ಹಂಚಿಕೊಂಡಿಲ್ಲ, ಬರೀ ಶುಭ ಹಾರೈಸಿದರು. ಅಲ್ಲಿ ನಮ್ಮವರೇ (ಲಿಂಗಾಯತರು) ಇದ್ದರು, ಅವರೇ ಕರೆದಿದ್ದರಿಂದ ಹೋದೆವು,” ಎಂದು ಟೋಕ್ರೆ ಹೇಳಿದರು.
ಬಸವರಾಜ ಪಾಟೀಲ ಸೇಡಂ ‘ನಮ್ಮವರಾದರೂ’ RSS ಪರವಾಗಿ ದಶಕಗಳಿಂದ ಈ ಭಾಗದಲ್ಲಿ ಕೆಲಸ ಮಾಡಿರುವುದು ಅಕ್ಕನವರಿಗೆ ಗೊತ್ತಿಲ್ಲವೇ ಎಂದು ಕೇಳಿದಾಗ ಅದನ್ನು ಅವರನ್ನೇ ಕೇಳಿ, ಎಂದು ಟೋಕ್ರೆ ಹೇಳಿದರು.
ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಸೌಹಾರ್ದ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ಸಮಾವೇಶದಲ್ಲಿ ಅಕ್ಕ ಗಂಗಾಂಬಿಕೆ ಭಾಗವಹಿಸಿ ಮಾತನಾಡಿದರು.
“ಶೋಷಣಕಾರಿಗಳು ಭಾರತೀಯ ಸಮಾಜವನ್ನು ಧರ್ಮದ ವ್ಯವಸ್ಥೆಯಲ್ಲಿ ವಿಭಾಗಿಸಿ ಬಹು ಸಮಾಜದ ಮೇಲೆ ಅನ್ಯಾಯ ಎಸಗಿದ್ದಾರೆ. ವಿದೇಶಿಯರನ್ನು ಎದುರಿಸಿ ತಡೆಯುವ ಶಕ್ತಿಯೂ ಅವರಲ್ಲಿ ಇರಲಿಲ್ಲ,” ಎಂದು ಸೇಡಂ ಉತ್ಸವದ ಆಯೋಜಕರ ವಿರುದ್ಧ ಭಾಷಣವೂ ಮಾಡಿದ್ದರು.
RSSನವರು ಬಸವಣ್ಣನವರನ್ನ ಹೆಸರನ್ನು ಬಳಸಿಕೊಂಡು ತಮ್ಮ ಸಿದ್ದಾಂತವನ್ನು ಹೇರುವ ಪ್ರಯತ್ನ ನಿರಂತರವಾಗಿ ಮಾಡುತ್ತಿದ್ದರೂ ಅಕ್ಕನಂತವರು ಅದನ್ನು ಬೆಂಬಲಿಸುತ್ತಿರುವುದು ಶೋಚನೀಯ ಸಂಗತಿ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ಅಕ್ಕ ಗಂಗಾಬಿಕೆಯ ವಿರುದ್ಧ ಬಂದಿರುವ ಕೆಲವು ಪ್ರತಿಕ್ರಿಯೆಗಳು
ಮೀನಾಕ್ಷಿ ಬಾಳಿ: ಆಘಾತವಾಗಿದೆ
ಅಕ್ಕ ಗಂಗಾಂಬಿಕಾ ಅವರು ಕೋಮುವಾದಿಗಳ ರಥಕ್ಕೆ ಚಾಲನೆ ನೀಡಿದ್ದು ನೋಡಿ ಆಘಾತವಾಗಿದೆ. ಬಸವಾದಿ ಶರಣರ ವಚನಗಳನ್ನು ನಿಜವಾಗಿ ಅರ್ಥ ಮಾಡಿಕೊಂಡವರಾರು ಹೀಗೆ ಮಾಡಲು ಸಾಧ್ಯವಿಲ್ಲ.
ಸೇಡಂ ಪಾಟೀಲನಂಥ ಆಷಾಢಭೂತಿಗಳೊಂದಿಗೆ ಗುರುತಿಸಿಕೊಳ್ಳುವ ಅನಿವಾರ್ಯತೆ ಇವರಿಗೇನಿದೆಯೋ ನನಗಂತೂ ಅರ್ಥವಾಗುತ್ತಿಲ್ಲ. ಇವರಿಗೆ ನಾನು ವೈಯಕ್ತಿಕವಾಗಿಯೂ ಆರ್.ಎಸ್. ಎಸ್ ನವರ ಬಹುರೂಪಗಳ ಕುರಿತು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಆದಾಗ್ಯೂ ಅವರಲ್ಲಿ ಅರಿವಿನ ಕಿರಣ ಸ್ಫುರಿಸುತ್ತಿಲ್ಲವಾದರೆ ಬಸವ ಭಕ್ತರೆ ಅವರಿಗೆ ಪಾಠ ಕಲಿಸಬೇಕು ಅಷ್ಟೇ.
(ಸೌಹಾರ್ದ ಕರ್ನಾಟಕ)
ಪ್ರಭುಲಿಂಗ ಮಹಾಗಾಂವ್ಕರ್: ಬದ್ಧತೆ ಇಲ್ಲದವರು
ಹೋದ್ರೆ ವಿಷ ಕೊಟ್ಟು ಹೋಗಿ, ಲಿಂಗ ಬಿಚ್ಚಿಟ್ಟು ಹೋಗಿ ಎಂದು ಹೇಳಿದ್ದರೂ ಇವರು ಹೋಗಿದ್ದಾರೆ. ಇವರಿಗೆ ಏನು ಹೇಳಬೇಕು, ಇದಕ್ಕಿಂತ ಹೆಚ್ಚಿಗೇನು ಹೇಳಬೇಕು.
ಅಕ್ಕಾ ಅವರನ್ನು ನಾವು ಪ್ರಶ್ನಿಸಿದರೆ, ಆರೆಸ್ಸೆಸ್ ನವರು ನಮ್ಮ ಮಠದವರೆಗೂ ಬಂದರೆ ನಾವು ಏನು ಮಾಡಬೇಕು, ಬಂದವರಿಗೆ ಹಾಗೇ ಕಳಿಸಬಾರದೆಂದು ಚಾಲನೆ ಕೊಟ್ಟು ಕಳಿಸಿದ್ದೇನೆ ಎಂದು ಅವರು ನೆಪ ಹೇಳಿ ಸರಿದುಕೊಂಡು ಬಿಡುತ್ತಾರೆ.
ಹಣ, ಜನ ಜಾಸ್ತಿ ಇದ್ದಕಡೆ ಹೋಗೋದು, ಬದ್ಧತೆ ಇಲ್ಲ ಎಂಬುದನ್ನು ತೋರಿಸುತ್ತದೆ.
(ಜಿಲ್ಲಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಕಲಬುರಗಿ)
ಬಾಲಾಜಿ ಕುಂಬಾರ: ಸೈದ್ಧಾಂತಿಕ ಬದ್ಧತೆಯಿಲ್ಲ
ಬಹುತೇಕರು ಬಸವಣ್ಣನಿಗೆ ಗುರುವಾಗಿ ಸ್ವೀಕರಿಸಿದರೂ ‘ವಚನತತ್ವ’ ಆಶಯಗಳನ್ನು ಒಪ್ಪಿಕೊಂಡು ಮುನ್ನಡೆಸಲು ಸಿದ್ಧರಿಲ್ಲ, ಸೈದ್ಧಾಂತಿಕ ಬದ್ಧತೆ ಎಂಬುದು ಮೊದಲೇ ಇಲ್ಲ.
‘ಕರೆದ ಕಡೆಗೆ ಹೋಗಿ ಡುಂ ಡುಂ ಬಾರಿಸುತ್ತಾರೆ, ಕೇಳಿದ್ರೆ ನಮ್ಗೆ ಎಲ್ಲರೂ ಬೇಕ್ರಿ, ಅವ್ರೂ ನಮ್ಮವ್ರೇ’ ಎಂದು ಸಮರ್ಥಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ‘ನಾ ಬೇಳಿಬೇಕು’ ಅಷ್ಟೇ!
(ಪತ್ರಕರ್ತ)
ಸಿದ್ದಪ್ಪ ಮೂಲಗೆ: ಬೆನ್ನಿಗೆ ಚೂರಿ
ಬಸವಣ್ಣನವರನ್ನು ಹೀಗೂ ಅವಮಾನಿಸಿ ಕೊಲ್ಲಬಹುದು. ಛೇ!
ಆರೆಸ್ಸೆಸ್ ಕಾಲಾಳು ಬಸವರಾಜ ಪಾಟೀಲ ಸೇಡಂ ಅವರು ಹೊರಡಿಸಿರುವ ಬಸವ ರಥಕ್ಕೆ (ಭಾಗವತ್ ರಥ) ಬೀದರಿನ ಅಕ್ಕ ಗಂಗಾಂಬಿಕೆ ಪಾಟೀಲ ಶುಭ ಹಾರೈಸಿದರು.
ಎಂ.ಎಂ. ಕಲಬುರ್ಗಿಯವರ ಎದೆಯಿಂದ ಚಿಮ್ಮಿದ ರಕ್ತ ಇನ್ನೂ ಆರಿಲ್ಲ. ಒಂದೆಡೆ ಲಿಂಗಾಯತ ತತ್ವ ಉಳಿಸಲು ಪ್ರಾಣದ ಹಂಗು ತೊರೆದು ಹೊರಾಡುತ್ತಿರುವ ನಿಜಗುಣಾನಂದ ಸ್ವಾಮೀಜಿ, ಸಾಣೇಹಳ್ಳಿ ಶ್ರೀಗಳು, ಇತರರು. ಮತ್ತೊಂದು ಕಡೆ ಗಂಗಾಂಬಿಕೆ ಪಾಟೀಲ ಮತ್ತು ಇತರರು ಬಸವಣ್ಣನವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ.
ಒಂದು ಸ್ಪಷ್ಟತೆಯಾಗಲಿ, ಬದ್ಧತೆಯಾಗಲಿ, ಕನಿಷ್ಠ ಕಾಳಜಿಯಾಗಲಿ ಇಲ್ಲದವರಿಂದ ಇದಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ?
(ಪತ್ರಕರ್ತ)
ಓಂಕಾರೇಶ್ವರ ಶ್ರೀ: ಬಸವ ದ್ರೋಹ
ಬಸವಣ್ಣ ಅವರ ತತ್ವ ಸಿದ್ದಾಂತ ಮೇಲೆ ಆಗುತ್ತಿರುವ ದಾಳಿ ತಪ್ಪಿಸಲು ಬಸವಪರ ಭಕ್ತರು ಹೋರಾಟ ಮಾಡ್ತಾ ಇದ್ರೆ, ಅಕ್ಕಾ ಅವರು ಮನುವಾದಿಗಳು ನಡೆಸುವ ರಥಯಾತ್ರೆಗೆ ಚಾಲನೆ ಕೊಡುತ್ತಾರಂದ್ರೆ ಏನು ಅರ್ಥ …
ಮನುವಾದಿಗಳಿಂದ ಬಸವಣ್ಣನವರ ವಿಚಾರಗಳ ಮೇಲೆ ಸತತ ದಾಳಿ ನಡೆಯುತ್ತಿದೆ. ಮನುವಾದಿ ಆರೆಸ್ಸೆಸ್ ಬಸವ ಧರ್ಮಕ್ಕೆ ಅಪಚಾರ ಮಾಡುತ್ತಿದೆ. ಅವರ ಕಾರ್ಯಕ್ಕೆ ಚಾಲನೆ ನೀಡಿರುವ ಬಸವಗಿರಿಯ ಗಂಗಾಬಿಕ ಅಕ್ಕ ಅವರು ದಯವಿಟ್ಟು ಇಷ್ಟಲಿಂಗ ತೊರೆದು, ಲಿಂಗಾಯತ ಧರ್ಮ ಬಿಟ್ಟು ಮನುವಾದಿ ಸಂಘ ಸೇರಬೇಕು. ಅಕ್ಕ ಅವರದು ಬಸವದ್ರೋಹ ಅದಕ್ಕಾಗಿ ಅವರಿಗೆ ಧಿಕ್ಕಾರ, ಧಿಕ್ಕಾರ.
ಅಕ್ಕ ಅವರು ಮಾಡಲು ಹೊರಟಿರುವದು ವಚನ ವಿಜಯೋತ್ಸವ ಅಲ್ಲ, ಅದು ಮನುವಾದಿ ಉತ್ಸವ. ಯಾವುದೇ ಕಾರಣಕ್ಕೂ ಬಸವ ಧರ್ಮದ ಮಠಾಧಿಪತಿಗಳು, ಶರಣರು ಅಲ್ಲಿಗೆ ಹೋಗಬಾರದು.
(ಸಂಚಾರಿ ಜಂಗಮ)
ಶ್ರೀಶೈಲ ಜಿ. ಮಸೂತೆ: ತೋರಿಕೆಯ ಬಸವತತ್ವ
ಕಲಬುರಗಿಯಲ್ಲಿ ಏಕಸಂಸ್ಕೃತಿ ಹೇರಿಕೆ ವಿರುದ್ಧ ಬಹುತ್ವ ಸಂಸ್ಕೃತಿ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡದ್ದು ಯಾಕೆ? ಇದೆಂಥ ಎಡಬಿಡಂಗಿತನ.
ಮನಸಾಕ್ಷಿ ಇದ್ದರೆ ಬಸವಗುರು ಕೊಟ್ಟ ಇಷ್ಟಲಿಂಗವನ್ನು ಬಿಚ್ಚಿಡಬೇಕು. ಗಂಗಾಂಬಿಕೆಯವರು ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನು ಲಿಂಗಾಯತ ಧರ್ಮೀಯರು ಬಹಿಷ್ಕರಿಸಬೇಕು.
(ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು)
ವಚನ ಚಳುವಳಿಯ ಮಹಾದಾಶಯಕ್ಕೆ ಕೇಡು ಬಯಸುವ ಸನಾತನ ಸಿದ್ಧಾಂತಕ್ಕೆ ಚಾಟಿ ಬೀಸುವ ಬದಲಾಗಿ ಹೂವಿನ ಹಾಸಿಗೆ ಹಾಸಿ ಸ್ವಾರ್ಥಕ್ಕಾಗಿ ಸಹಕಾರ ನೀಡುತ್ತಿರುವ ಇಂತವರಿಗೆ ಬಹಿಷ್ಕಾರ ಹಾಕಬೇಕು ಲಿಂಗಾಯತರು
ಇವರೇನು ಇದನ್ನು ಫೋಟೋಶೂಟ್ ಅಂದುಕೊಂಡಿದ್ದಾರೋ ಏನೋ?
ಇಂತಹ ಘಟನೆಗಳನ್ನು ನೋಡಿದರೆ ಒಂದು ಕಪ್ಪೆ ಹಿಡಿದು ಹಾಕಿದರೆ ಮತ್ತೊಂದು ಕಪ್ಪೆ ಹಾರಿ ಹೋಗಿತ್ತಂತೆ. ಇಷ್ಟೇ ಇವರ ಕಥೆ.ಧರ್ಮಕ್ಕೆ ನಿಷ್ಠೆ ಇಲ್ಲಾ .ಮೊನ್ನೆ ಮೊನ್ನೆ ಅರವಿಂದ್ ಜತ್ತಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ವಚನ ಸಾಹಿತ್ಯವೆಲ್ಲಾ ವೆದಗಳ ನಕಲು ಎಂದು ಮಂಗಳಾರತಿ ಮಾಡಿದ್ದಾರೆ.ಇವತ್ತು ಈ ಅಮ್ಮನವರು ಮಾಡುವ ರಾದ್ಧಾಂತ. ಬಸವ ಸಾಹಿತ್ಯ ಎಲ್ಲರಿಗೂ ವ್ಯಾಪಾರದ ಸರಕುಗಳಾಗಿವೆ. ಇಂತಹ ಘಟನೆಗಳು ಬೇಸರ ತರಿಸುತ್ತಿವೆ.
ಯಾವ ಆಸೆ ಆಮಿಷಕ್ಕೆ ಒಳಗಾದರೋ ಗೊತ್ತಿಲ್ಲ..ಎಲ್ಲವನ್ನೂ ಗಾಳಿಗೆ ತುರಿದಂತಾಗಿದೆ. ಇವರಿಂದ ನಮ್ಮ ನಂಬಿಕೆಗೆ ಪೆಟ್ಟು ಬಿದ್ದಿದೆ. ಏಕೆಂದರೆ ಇವರು ಅಕ್ಕ…
ಬಹಿರಂಗ ವೇದಿಕೆಯಿಂದ ಎಚ್ಚರಿಕೆ….
ಬಸವಣ್ಣನವರು ಕೊಟ್ಟ ಇಷ್ಟಲಿಂಗ ಬಿಚ್ಚಿಹಾಕಿ
ಸಮಗಾರ ಹರಳಯ್ಯನವರ ಮಠ ಬಿಟ್ಟು ..
ಹೆಣ್ಣ ಶೂದ್ರಳು, ಮಡಿ ಮೈಲಿಗೆಯಿಂದ ಸಮಾಜದಿಂದ ದೂರ ಇಟ್ಟ ಮನುವಾದಿ ಮತಕ್ಕೆ ಮತಾಂತರ ಆಗಿ..
ನಮದೇನು ಅಭ್ಯಂತರವಿಲ್ಲ…
ಶರಣ ಶ್ರೀಶೈಲ ಮಸೂತಿಯವರು ಹೇಳಿರುವ ಬಸವ ತತ್ವಗಳ ನೇರ ನುಡಿಗಳು ಅರ್ಥ ಮಾಡಿಕೊಳ್ಳುವಷ್ಟು ಬದ್ಧತೆ ಅಕ್ಕಾ ಗಂಗಾಂಬಿಕ ತಾಯಿಯವರಿಗಿದೆಯೇ ?
ಮನುಕುಲಕ್ಕೆ ಅದರಲ್ಲೂ ಮಹಿಳೆಗೆ ಸಮಾನತೆ ಕೊಟ್ಟ ಅಪ್ಪ ಬಸವಣ್ಣನವರ ಹೆಸರನ್ನು ಬಳಸಿಕೊಂಡು ಸಾಕಷ್ಟು ಆಸ್ತಿ ಅಂತಸ್ತು ಮಾಡಿ ಬಸವ ತತ್ವ ಪ್ರಚಾರ ಮಾಡುವ ನಾಟಕ ಮಾಡತಾ ಆರ್ ಎಸ್ ಎಸ್ ಬೆಳೆಸತ್ತಾ ಇರೋ..
ಶರಣ ತತ್ವಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವ
ಕೋಮುವಾದಿ ಸಂಘಟನೆಗಳ ಜೊತೆಗೆ ಕದ್ಧು ಮುಚ್ಚಿ ಕೈ ಜೊಡಿಸಿ ಬಸವಾದಿ ಶರಣರ ಬಗ್ಗೆ ತಾಸು ಗಟ್ಟಲೆ ಭಾಷಣ ಮಾಡುವ, ಬಸವಣ್ಣನವರು ಕೊಟ್ಟ ಇಷ್ಟಲಿಂಗ ದೀಕ್ಷೆ ಬಹಿರಂಗದಲ್ಲಿ ತೋರಿಸಿ ವಚನಗಳ ಬಾಯಿಪಾಠ ಮಾಡಿಕೊಂಡ.
ಬಿಳಿಯ ಬಟ್ಟೆ ಹಾಕಿಕೊಂಡ ಗಂಗಾಂಬಿಕೆ ಅಕ್ಕಾ
ಬಸವಕಲ್ಯಾಣ ದಲ್ಲಿ
ಲಿಂಗಾಯತ ಹರಳಯ್ಯ ಮಠ
ಎಂಬ ಸಂಸ್ಥೆ ಕಟ್ಟಿಕೊಂಡು ತೋರಿಕೆಗೆ ಬಸವ ತತ್ವ ಪ್ರಸಾರ ಮಾಡುವ ಬಸವ ದ್ರೋಹಿಗಳು ನೀವು, ನಿಮ್ಮಂತವರಿಗಾಗಿಯೇ ಬಸವಣ್ಣನವರ ವಚನ
” ಒಲೆ ಹತ್ತಿ ಉರಿದೋಡೆ ನಿಲ್ಲಬಹುದಲ್ಲದೆ
ದರೆಹತ್ತಿ ಉರಿದೊಡೆ ನಿಲ್ಲಬಾರದು
ಏರಿ ನೀರುಂಬೊಡೆ, ಬೇಲಿ ಕೆಯ್ಯ ಮೇದೊಡೆ
ನಾರಿ ತನ್ನ ಮನೆಯಲ್ಲಿ ಕಳುವೊಡೆ
ತಾಯಿಯ ಮೊಲೆಹಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವ ”
ಇದೇ ತಿಂಗಳ ೧೯-೦೧-೨೦೨೫ ರಂದು
ಕಲಬುರಗಿಯಲ್ಲಿ ನಡೆದ ಸೌಹಾರ್ದ ಕರ್ನಾಟಕ ವೇದಿಕೆ ಯಲ್ಲಿ ನೀವು ಆಡಿದ ಮಾತು ಮರೆತು ಮರುದಿನವೆ
ಸೇಡಂ ನಲ್ಲಿ ನಡೆಯುವ
ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಕುವೆಂಪು ತತ್ವ ವಿರೋಧಿ ಕಾರ್ಯಕ್ರಮಕ್ಕೆ
“ಬಸವ ರಥ” ಯಾತ್ರೆ ವಾಹನಕ್ಕೆ ಚಾಲನೆ ನೀಡುತ್ತಿರಿ ?
ಏನು ನಿಮ್ಮ ನಡೆ ?
ಲಿಂಗಾಯತ ಸೋಗಿನಲ್ಲಿ ವೀರಶೈವರು ಬಂದು ಶರಣ ತತ್ವಗಳನ್ನು ಹಾಳು ಮಾಡಿದರು,
ಇವಾಗ ಆರ್ ಎಸ್ ಎಸ್ ನವರು ನಿಮ್ಮನು ಸಾಕಿ ನಿಮ್ಮ ಕೈಯಿಂದ ಶರಣ ತತ್ವಗಳನ್ನು ಹಾಳು ಮಾಡಿಸುತ್ತಿದ್ಧಾರೆ
ಎಂದರೆ ನಿಮಗೇಕೆ ಶರಣರ ತತ್ವಗಳನ್ನ ಕಂಡರೆ ಉರಿ,
ಬಸವಾದಿ ಶರಣರು
ಮಹಿಳೆಯರನ್ನು ಸಾಕ್ಷಾತ ಕಪಿಲಸಿದ್ಧಮಲ್ಲಿಕಾರ್ಜುನ ಅಂದರೊ ಅದೇ ಬಸವ ಸಂಕುಲ ಹಾಳು ಮಾಡಲು ಮನಸ್ಸು ಹೇಗೆ ಬಂತೋ ನಿಮಗೆ ?
ವೀರಶೈವರು ಬಸವಣ್ಣನವರ ಬಹಿರಂಗ ಮತ್ತು
ಅಂತರಂಗ ಎರಡರ ವಿರೋದಿಗಳೂ
ನೀವು ಬಸವಣ್ಣನವರ ಅಂತರಂಗದ ವಿರೋದಿಗಳು..
ನಿಮ್ಮ ನಡೆ ಹೇಗಿದೆ ನೋಡಿ..
ಕನ್ನಡಿಯ ಮುಂದೆ ನಿಂತು ನಿಮ್ಮ ಬಸವ ತತ್ವ ಆಚರಣೆ ನೋಡಿಕೊಳ್ಳಿ, ಕೇಳಿಕೊಳ್ಳಿ..
ಮಹಾಂತೇಶ ಕಲಬುರ್ಗಿ
ಡಾ. ಎಂ ಎಂ ಕಲಬುರ್ಗಿ ವಿಚಾರ ವೇದಿಕೆ,
ಕಲಬುರಗಿ…
ಕೆಳಗಿನ ಲೇಖನದ ಮುಂದುವರಿದ ಭಾಗ
– ಶರಣ ಶ್ರೀಶೈಲ ಜಿ ಮಸೂತೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ
ಸೌಹಾರ್ದ ಕರ್ನಾಟಕ ಬಹುತ್ವ ಸಂಸ್ಕೃತಿ ಸಂಘ ಕಲಬುರ್ಗಿ
ಬಸವರಾಜ್ ಪಾಟೀಲ್ ಸೇಡಂ ಅವರೊಡನೆ ಅಕ್ಕನವರು ಬಾಂಧವ್ಯ ಒಳ್ಳೆಯ ಹೊಂದಿದ್ದರು ಎನ್ನುವದನ್ನು ನಾನು ಒಮ್ಮೆ BKDB ಯಲ್ಲಿ ನಡೆದ ಸಭೆಗೆ ಹೋದಾಗ ನೋಡಿದ್ದೇ, ವಯಕ್ತಿಕ ಬಾಂಧವ್ಯ ಏನೇ ಇರಲಿ ಹೃದಯಾ0ತಾರಾಳದ ಬಸವ ಬಾಂಧವ್ಯದ ಮುಂದೆ ಉಳಿದೆಲ್ಲ ಗೌಣ.. ಸಂಘ ಪರಿವಾರ ಮಾಡುವ ಒಳಸಂಚು, ಬಸವವಿರೋಧಿ ನಿಲುವು ಗೊತ್ತಿದ್ದೋ ಅಲ್ಲಿಗೆ ಹೋಗಿದ್ದು ಬಸವಭಕ್ತರಿಗೆ ಅಘತವಾಗಿದೆ. ಆಂತರ್ಯದಲ್ಲಿ ಸಂಘ ಪರಿವಾರದ ಸಖ್ಯ ಹೊಂದಿದ ಅನೇಕ ಸ್ವಾಮಿಗಳು ಸಂಘಟನೆಗಳು ಇವೆ. ಬಸವ ಭಕ್ತರ ಭಯದಿಂದ ಅವರು ಬಹಿರಂಗವಾಗಿ ಹೊರ ಬಂದಿಲ್ಲ.
ವೀರಭದ್ರಗೌಡ ಅಮರಾಪುರ ಬಸವ ಅನುಯಾಯಿಗಳಲ್ಲಿ ದ್ವಂದ್ವ ನಿಲುವು ಸಲ್ಲ. ಅನುಸರಣೆಯೇ ಅನಾಚಾರ. ಲಿಂಗಾಯತ ಧರ್ಮ ವೈದಿಕತೆಯ ಪೊಳ್ಳುಗಳನ್ನು ಬಯಲು ಮಾಡಿದೆ ತಾವು ಬಸವ ಪ್ರತಿಪಾದಕರಾಗಿ ಇತ್ತ ಬಸವ ತತ್ವ ಅತ್ತ ಬಸವ ವಿರೋಧಿಗಳ ರಥಕ್ಕೆ ಚಾಲನೆ ಇದಾವ ನ್ಯಾಯ. ಇದು ಇಂಥ ಅನುಸರಣೆ ಸಲ್ಲ. ಇದು ಬಸವವಾದಿಗಳಿಗೆ ಮಾನ್ಯವಲ್ಲ. ಡಾ. ಗಂಗಾಂಬಿಕೆಯವರೆ, ವಿವೇಚಿಸಿ ಬಸವಣ್ಣನವರ ವಿಚಾರ ಹೇಳುತ್ತಾ ಅಪಚಾರಕ್ಕೆ ಗುರಿಯಾಗಬೇಡಿ ನಿಮ್ಮ ನಿಲುವಿಂಗೆ ನಾಚಬೇಡವೆ. ಅನ್ಯರ ಕೈಯಲಿ ಅಲ್ಲವೆಂಬ ನಡೆನುಡಿ ಏಕೆ? ಅಕ್ಕಮಹಾದೇವಿ ವಚನ.
ಓಂ ಶ್ರೀಗುರು ಬಸವಲಿಂಗಾಯ ನಮಃ .. ಯಾರನ್ನು ನಂಬುವುದು ಯಾರನ್ನು ಬಿಡುವುದು ತಿಳಿಯದಂತಾಗಿದೆ.. ಡಾ. ಗಂಗಾಂಬಿಕಾ ತಾಯಿಯವರನ್ನು ನಾವು ಬಸವತತ್ವದ ಪರ ಇರುವವರೆಂದುಕೊಂಡಿದ್ದೇವು… ಆದರೆ ಆರ್. ಎಸ್. ಎಸ್.ನವರ ಪ್ರೀತಿಯನ್ನು ಗಳಿಸುವುದಕ್ಕಾಗಿ ಬಸವ ತತ್ವವನ್ನು ಬಲಿ ಕೊಡಲು ಹೊರಟಿದ್ದೀರಿ..? ಯಾವ ಆಸೆ ಆಮಿಷಕ್ಕಾಗಿ ನಿಮ್ಮ ನಿಲುವು ಬದಲಾಯಿಕೊಂಡಿದ್ದಿರೋ ನಮಗಂತು ಗೊತ್ತಿಲ್ಲ..! ನಮ್ಮ ವಿರೋಧಿಗಳು ಯಾರೆಂದು ತಿಳಿದು ತಿಳಿದೂ ನೀವು ಅವರೊಂದಿಗೆ ಕೈ ಜೋಡಿಸಿದ್ದು ನೋಡಿ ತುಂಬಾ ಅಘಾತವಾಗಿದೆ. ನಿಮಗೆ ಕನಿಷ್ಠ ಬದ್ಧತೆಯು ಬೇಡವೇ..? ನಿಮ್ಮ ಸ್ವಾರ್ಥಕ್ಕಾಗಿ ಲಿಂಗಾಯತ ಧರ್ಮ ಗುರು ಬಸವಣ್ಣನವರು ಬಂಡವಾಳ ಮಾಡಿಕೊಂಡವರು ನೀವುಗಳೆಂದು ನಮಗೀಗ ಗೊತ್ತಾಗಿದೆ..!
ಬಸವ ಭಕ್ತರಿಗೆ ಆಘಾತ ತಂದಿದೆ.
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ವಿರೋಧ ಮಾಡಿ ಅಡ್ಡಗಾಲಾಗಿರುವ ಸಂಘಟನೆಯ ಕಾರ್ಯಕ್ರಮದ ಪ್ರಚಾರಕ್ಕೆ ಚಾಲನೆ ನೀಡಿರುವುದು ಅತ್ಯಂತ ವಿಪರ್ಯಾಸದ ಸಂಗತಿ.
ಧಿಕ್ಕಾರವಿರಲಿ ನಿಮ್ಮ ದ್ವಂದ್ವ ನೀತಿಗೆ.
ಅಮ್ಮಾ ಗಂಗಾಬಿಕೆ ತಾಯಿ, ಜನೆವರಿ 12 ರಂದು ಯತ್ನಾಳ ರನ್ನು ಜರಿದು, ಪುರುಷ ಅಹಂಕಾರದ ಬಗ್ಗೆ ಮಾತಾಡಿ, ಇಂದು ಯಾರ ಕೆಟ್ಟ ಸಂಪ್ರದಾಯದವರ ವಿರುದ್ಧ ಲಿಂಗಾಯತ ಧರ್ಮ ಹುಟ್ಟಿತೋ, ಯಾರು ಲಿಂಗಾಯತ ಧರ್ಮವನ್ನು ತುಳಿಯುತ್ತಾರೋ ಅವರೆ ನಮ್ಮನ್ನು ನೋಡಿ ಕುಹಕ ನಗೆ ಬಿರುವಂತೆ ಮಾಡಿದೆ ಅಲ್ಲ, ತಾಯಿ?
ಇದು ಸರಿ ಅಂತ ನಿಮ್ಮ ಮನದಾಳ ಹೇಳುತ್ತದೆಯೆ?
ಬೇಗನೆ ಪ್ರತಿಕ್ರಿಯೆ ಯನ್ನು ಸಾರ್ವಜನಿಕವಾಗಿ ಕೊಡಿರಿ.
ಯಾವಾಗ ವ್ಯಕ್ತಿ ಸಾರ್ವಜನಿಕವಾಗಿ ವೇದಿಕೆ ಹತ್ತುತ್ತಾನೋ ಆಗಲೇ ಅವರ ವಯುಕ್ತಿಕ ಜೀವನ ನಿಗದಿತ ವಾಗಿ ಬಿಡುತ್ತದೆ.
ನೀವು ಹೀಗೆ ಮಾಡಿದ್ದು, ಬಸವ ತತ್ವ ಪ್ರಿಯರಿಗೆ ಆಘಾತ ಕಾರಿ ಬೆಳವಣಿಗೆ ಆಗಿದೆ.
2017 ರಲ್ಲಿ ನಡೆದ ವಚನ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ನಾನು ಭಾಗವಹಿಸಿದ್ದೆನು. ಅಕ್ಕಅನ್ನಪೂರ್ಣ ತಾಯಿವರ ಜೊತೆಗೂಡಿ ಅಕ್ಕ ಗಂಗಾoಬಿಕೆ ಯವರು ಕಾರ್ಯಕ್ರಮ ವನ್ನು ಅದ್ಭುವಾಗಿ ಆಯೋಜಿಸಿದ್ದರು. ಇಬ್ಬರು ಹೆಣ್ಣು ಮಕ್ಕಳು ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದ್ದನ್ನು ನೋಡಿ ಅಭಿಮಾನ ಪಟ್ಟಿದ್ದೆವು. ಕಾರ್ಯಕ್ರಮ ಮುಗಿದ ನಂತರ ಇಬ್ಬರು ಅಕ್ಕ ನವರಿಗೆ ಹಣೆಮಣಿದು ಬಂದಿದ್ದೆವು.. ಈ ಕ್ಷಣದವರೆಗೂ ತಮ್ಮ ಮೇಲೆ ತುಂಬಾ ಅಭಿಮಾನ ವಿಟ್ಟುಕೊಡಿದ್ದೇವೆ. ಆದರೆ, ಅಕ್ಕವರೇ ಯಾಕೆ ಹೀಗೆ ಮಾಡಿದಿರಿ. ಲಕ್ಷಾಂತರ ಬಸವ ಅಭಿಮಾನಿಗಳಿಗೆ ನಿಮ್ಮ ನಡೆ ನೋವು ತಂದಿದೆ ಅಕ್ಕನವರೇ.