ಆರೆಸ್ಸೆಸ್ ಸಂಸ್ಕೃತಿ ಉತ್ಸವದ ಬೃಹತ್ ವೈಫಲ್ಯ ಸಮಾಧಾನ ತಂದಿದೆ

ಈ ಆಕ್ರಮಣಕಾರಿ ಪ್ರಯತ್ನವನ್ನು ಸೋಲಿಸಲು ಹಗಲಿರುಳು ದುಡಿದ ಕಾರ್ಯಕರ್ತರಿಗೆ ಮುಖ್ಯವಾಗಿ ಡಾ. ಮೀನಾಕ್ಷಿ ಬಾಳಿ ಅವರಿಗೆ ನಾಡಿನ ಪ್ರಗತಿಪರರು ಋಣಿಯಾಗಿರಬೇಕು.

ಬೆಂಗಳೂರು

ಇಪ್ಪತೈದು ಲಕ್ಷ ಜನ, ಲಕ್ಷಾಂತರ ತಾಯಂದಿರು ಮಕ್ಕಳಿಗೆ ತುತ್ತು ನೀಡುವ ಕಾರ್ಯಕ್ರಮ, ೨೫೦ ಎಕರೆ ಪ್ರದೇಶದ ಕಾರ್ಯಕ್ರಮದ ಪೆಂಡಾಲುಗಳು, ೭೦೦೦೦ ಕುರ್ಚಿಗಳು, ನೂರಾರು ಮೂಟೆ ಅಕ್ಕಿ-ಬೇಳೆ…

ಕಲಬುರಗಿ ಜಿಲ್ಲೆಯ ಸೇಡಂ ನಗರದಲ್ಲಿ ಆಯೋಜಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವ (ವಾಸ್ತವವಾಗಿ ಅದು ಆರ್‌ಎಸ್‌ಎಸ್ ಉತ್ಸವ – ಸಂಘ ಪರಿವಾರದ ಶಕ್ತಿ ಪ್ರದರ್ಶನ) ಸಂಪೂರ್ಣವಾಗಿ ವಿಫಲವಾಗಿರುವುದನ್ನು ಅದರ ಕಾರ್ಯಕರ್ತೆ ಮತ್ತು ಕೇಂದ್ರದ ಸಚಿವರಾದ ಶ್ರೀಮತಿ ಶೋಭಾ ಕರದ್ಲಾಜೆ ಅಲ್ಲಿಗೆ ಭೇಟಿ ನೀಡಿದ್ದಾಗ ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಪತ್ರಕರ್ತರ ಜೊತೆ ಮಾತನಾಡುತ್ತಾ “ನಮ್ಮ ಸಂಸ್ಕೃತಿ”ಯ ಪರಿಚಯ ಮಾಡಿದರೆ ಅದನ್ನು ಯಾಕೆ ವಿರೋಧಿಸಬೇಕು ಎಂದು ಪ್ರಶ್ನೆ ಹಾಕಿದ್ದಾರೆ.

ವಾಸ್ತವವಾಗಿ ಅದು “ನಮ್ಮ ಸಂಸ್ಕೃತಿ, ನಮ್ಮ ಕೃಷಿ, ಆರೋಗ್ಯ ಪದ್ಧತಿ”ಯ ಕಾರ್ಯಕ್ರಮವಾಗಿರಲಿಲ್ಲ. ಅದು ಬ್ರಾಹ್ಮಣ್ಯದ-ಆರ್‌ಎಸ್‌ಎಸ್ – ಸಂಘ ಪರಿವಾರದ ಉತ್ಸವವಾಗಿತ್ತು. ಇದು ಎಲ್ಲರಿಗೂ ಕಣ್ಣು ಕುಕ್ಕುವಷ್ಟೇ ಸ್ಪಷ್ಟವಾಗಿ ಕಾಣಿಸುತ್ತಿತ್ತು ಎಂದು ಬಸವರಾಜ ಪಾಟೀಲ್ ಸೆಡಂ ಮತ್ತವರ ಬಾಂಧವರು ಅರ್ಥ ಮಾಡಿಕೊಳ್ಳಬೇಕು.

ಈ ಉತ್ಸವದ ವೈಫಲ್ಯಕ್ಕೆ ಅದರ ಮೂಲಾಧಾರವಾಗಿದ್ದ ಬಸವರಾಜ ಪಾಟೀಲ ಸೇಡಂ ಅವರೇ ಕಾರಣ ಎಂದು ಸಂಘ ಪರಿವಾರದವರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಆಪ್ತರಾಗಿರುವ ಸ್ನೇಹಿತರೊಬ್ಬರು ಹೇಳಿದರು.

ಕರ್ನಾಟಕದ ಸಾಮಾಜಿಕ ಸೌಹಾರ್ದ ಪಡೆಗೆ, ಲಿಂಗಾಯತ ಸಮುದಾಯಕ್ಕೆ, ದಲಿತ–ಆದಿವಾಸಿ ಸಮುದಾಯಗಳಿಗೆ ಈ ಆಕ್ರಮಣಕಾರಿ ಬಹುತ್ವ ವಿರೋಧಿ ಉತ್ಸವದ ಸೋಲಿನಿಂದ ತೃಪ್ತಿಯಿಲ್ಲದಿದ್ದರೂ ಒಂದು ಸಮಾಧಾನ ಉಂಟಾಗಿದೆ. ಇದರ ವೈಫಲ್ಯದಿಂದ ಸಂಘ ಪರಿವಾರ ಶೋಕತಪ್ತವಾಗಿದ್ದರೆ ನಾಡಿನ ಬಹುತ್ವವಾದಿಗಳು-ಬಹುವಚನವಾದಿಗಳು ನೆಮ್ಮದಿಯ ಉಸಿರು ಬಿಡುತ್ತಿದ್ದಾರೆ.

ಈ ಕಾರ್ಯಕ್ರಮವನ್ನು ಮತ್ತು ಅಲ್ಲಿನ ವೇದಾಗಮಶಾಸ್ತ್ರಪುರಾಣ ನೆಲೆಯ ಉಂಡೆ ಸಂಸ್ಕೃತಿಯನ್ನು ವಿರೋಧಿಸಿ ಹಗಲಿರುಳು, ರಾಜ್ಯಾದ್ಯಂತ ಜನಸಂಘಟನೆ ಮಾಡಿದ ಕಾರ್ಯಕರ್ತರಿಗೆ ಬಹುಮುಖ್ಯವಾಗಿ ಹಿರಿಯ ವಿದ್ವಾಂಸರೂ, ಹೋರಾಟಗಾರರೂ ಆದ ಡಾ. ಮೀನಾಕ್ಷಿ ಬಾಳಿ ಅವರಿಗೆ ದೊಡ್ಡ ಧನ್ಯವಾದಗಳು. ನಾಡಿನ ಎಲ್ಲ ಪ್ರಗತಿಪರರು ಅವರಿಗೆ ಋಣಿಯಾಗಿರಬೇಕು.

ಆರ್‌ಎಸ್‌ಎಸ್, ಸಂಘ ಪರಿವಾರ ಮತ್ತು ಬ್ರಾಹ್ಮಣ್ಯ ಪಡೆಯ ಹುನ್ನಾರಗಳನ್ನು ಇದೇ ರೀತಿಯಲ್ಲಿ ಎಲ್ಲೆಡೆ ಸೋಲಿಸಿ ಕರ್ನಾಟಕವನ್ನು ಬಸವ ನಾಡನ್ನಾಗಿ, ಕನಕ ನಾಡನ್ನಾಗಿ, ಮಾದಾರ ಚೆನ್ನಯ್ಯನ ನಾಡನ್ನಾಗಿ, ಶರೀಫರ ನಾಡನ್ನಾಗಿ, ಚೆನ್ನಮ್ಮನ ನಾಡನ್ನಾಗಿ ಕಾಪಿಟ್ಟುಕೊಳ್ಳುವ ಕೆಲಸ ನಿರಂತರ ನಡೆಸುತ್ತೇವೆ ಎಂದು ಪಣ ತೊಡೋಣ.

ಕೆಲವು ಆಷಾಢಭೂತಿ ಲಿಂಗಾಯತ ಗುರುಗಳು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ ಮೇಲೆ ಅವರ ವಿರುಧ್ಧ ಇಡೀ ಲಿಂಗಾಯತ ಸಮುದಾಯ ತಿರುಗಿ ಬಿದ್ದಿದೆ. ಭಕ್ತರ ಮುಂದೆ ತಲೆಯೆತ್ತಿ ನಿಲ್ಲವ ಬಗ್ಗೆ ಅವರಿಗೆ ಆತಂಕ ಪ್ರಾರಂಭವಾಗಿದೆ. ಇದೂ ಕೂಡ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕಾಂಗ್ರೇಸ್‌ನ ಯಾರೂ ಉತ್ಸವದಲ್ಲಿ ಭಾಗವಹಿಸಿಲ್ಲ ಎಂಬುದು ಸಮಾದಾನಕರ ಸಂಗತಿ. ಆದರೆ ಇಂದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಬಿಜೆಪಿ ಸರ್ಕಾರಕ್ಕೂ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರಕ್ಕೂ ಭಿನ್ನತೆ ಕಾಣುತ್ತಿಲ್ಲ. ಇನ್ನಾದರೂ ಚಾತುರ್ವರ್ಣವಾದಿಗಳ ಬಲೆಗೆ ಸಿದ್ಧರಾಮಯ್ಯನವರ ಸಂಪುಟದ ಸದಸ್ಯರಾರೂ ಬೀಳಬಾರದು ಎಂಬುದು ಜನರ ಬಯಕೆ.

ಕುಂಭಮೇಳಕ್ಕೆ ಹೋದ ಅಲ್ಲಿ ಪಾಪವನ್ನು ಕಳೆದುಕೊಳ್ಳುವುದಕ್ಕೆ ಗಂಗೆಯಲ್ಲಿ ಜಳಕ ಮಾಡಿದ ಲಿಂಗಾಯತ ಸ್ವಾಮಿಗಳಿಗೆ ಲಿಂಗಾಯತರು ಬಹಿಷ್ಕಾರ ಹಾಕುವ ಬಗ್ಗೆ ಚಿಂತಿಸಬೇಕು. ಇದು ಮಾನವ ಹಕ್ಕು-ಜನತಂತ್ರ ಮೌಲ್ಯ ವಿರೋಧಿ ನಿಲುವು ನಿಜ. ಆದರೆ ಇಂತಹ ಬೆದರಿಕೆ ಅವರಿಗೆ ತಲುಪಬೇಕು.

ನಮ್ಮ ವಿಧಾನಸಭೆಯ ಸಭಾಧ್ಯಕ್ಷರಿಗೆ ನಿಜವಾಗಿ ಬಹುತ್ವ ಸಂಸ್ಕೃತಿಯ ಬಗ್ಗೆ, ಜಾತ್ಯತೀತತೆಯ ಬಗ್ಗೆ, ಸಾಮಾಜಿಕ ಸೌಹಾರ್ದತೆಯ ಬಗ್ಗೆ, ತಮ್ಮ ಕಾಂಗ್ರೇಸ್ ಹಿನ್ನೆಲೆಯ ಬಗ್ಗೆ ಅರಿವು ಮತ್ತು ವೈಜ್ಞಾನಿಕತೆ-ವೈಚಾರಿಕತೆಗೆ ರವಷ್ಟು ಬದ್ಧತೆಯಿದ್ದರೆ ರಮ್ಮ ಸಭಾಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮ ನೀಡಿ ನಾಗಪುರಕ್ಕೋ, ಕೇಶವಕೃಪಾಕ್ಕೋ ಹೋಗಿ ಕೇಸರಿ ಪೇಟ, ಕೇಸರಿ ಶಾಲು ಧರಿಸಿಕೊಂಡು “ಪರಿಶುದ್ಧರಾಗಬೇಕು”. ಅವರು ಸಂಘಪರಿವಾರದಾಟವನ್ನು ನಿಲ್ಲಿಸಬೇಕು.

Share This Article
7 Comments
  • ಲಿಂಗಾಯತ ಧರ್ಮದ ಜಾಗೃತಿಯು ಇಲ್ಲಿಗೆ ನಿಲ್ಲಬಾರದು ಮತ್ತು ಆರ್.ಎಸ್ ಎಸ್ ಈ ಕಾರ್ಯಕ್ರಮದ ವೈಫಲ್ಯವನ್ನು ಖಂಡಿತವಾಗಿ ಗಂಭೀರವಾಗಿ ಪರಿಗಣಿಸಲಿದೆ. ಅದು ಲಿಂಗಾಯತ ಪ್ರಾಬಲ್ಯ ಕಡಿಮೆ ಮಾಡಲು ಹಗಲಿರುಳು ಶ್ರಮಿಸಲಿದೆ ಹಾಖು ತಂತ್ರ,ಕುತಂತ್ರಗಳನ್ನ ಹೆಣೆಯಲಿದೆ. ಆದ್ದರಿಂದ ಲಿಂಗಾಯತ ಪರ, ಬಸವ ಪರ ಅನುಯಾಯಿಗಳು ಮತ್ತು ಲಿಂಗಾಯತ ಧರ್ಮೀಯರು ನಿರಂತರ ಅರಿವು ಮೂಡಿಸುವಲ್ಲಿ ಜಾಗೃತರಾಗಬೇಕು.
    ಅಷ್ಟೇಯಲ್ಲದೆ ಬಸವನ ಬಾಗೇವಾಡಿಯಲ್ಲಿಯೇ ಹೋಗಿ ಇತ್ತೀಚೆಗೆ ಈಶ್ವರಪ್ಪ ಬ್ರಿಗೇಡ್ ಕಾರ್ಯಕ್ರಮವು ಕೂಡಾ ಆತಂಕಕಾರಿಯಾಗಿದೆ.

  • ನಾವು ನಮ್ಮ ಧರ್ಮ ವನ್ನು ಪ್ರಚಾರ ಮಾಡುತ್ತಾ ಹೋದರೆ ಅವರೆಲ್ಲರೂ ಮನೆಗೆ ಸೇರುವುದು ಖಂಡಿತ ನಾವು ಮನೆಯಿಂದ ಹೊರಗಡೆ ಬರುವುದನ್ನು ಕಲಿಯಬೇಕು

  • ಡಾ. ಮೀನಾಕ್ಷಿ ಬಾಳಿ ಅವರಿಗೆ ಅಭಿನಂದನೆಗಳು. ಅಂದು ಅವರ ಕಾರ್ಯಕ್ರಮಕ್ಕೂ ಬಂದು ಉತ್ಸವಕ್ಕೂ ಹೋಗಿರುವ ಮಠಾಧಿಪತಿಗಳು/ಪೀಠಾಧಿಪತಿಗಳು ಧಿಕ್ಕಾರವಿರಲಿ. ಬಸವತತ್ವದಲ್ಲಿ ಇವರಿಗೆ ಏನಾದರೂ ಒಪ್ಪಿಕೊಳ್ಳಲು ಸಾಧ್ಯವಿರುವ ವಿಷಯಗಳಿದ್ದರೆ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೆ ಮಠಗಳನ್ನು ಬಿಟ್ಟು ಹೋಗಲಿ. ವಿಧಾನಸಭಾ ಅಧ್ಯಕ್ಷರು ದಕ್ಷಿಣ ಕನ್ನಡದವರು. ಅವರಿಗೆ ಅಲ್ಪಸ್ವಲ್ಪ ಕಲ್ಲಡ್ಕದ ಪ್ರಭಾವವಿದೆ ಮತ್ತು ರಾಜಕೀಯವಾಗಿ ಎಲ್ಲರನ್ನೂ ತಬ್ಬಿ ಒಪ್ಪಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ.

    • ಬಾಳಿ ಅಕ್ಕವರು ಹಾಗೂ ಅವರ ಬಳಗ ಅತ್ಯಂತ ಯೋಜನಾಬದ್ಧವಾದ ಕಾರ್ಯಕ್ರಮ ಹಾಕಿಕೊಂಡಿದ್ದಕ್ಕೆ ಸಂಘೀಗಳ ಕಾರ್ಯಕ್ರಮ ವಿಫಲವಾಯ್ತು.

      ವಿರಕ್ತ ಮಠಾಧೀಶರು ಪಾಪಾ ತೊಳೆಯಲು ಹೋಗಿದ್ದು ಹಾಗೂ RSSಸಮಾವೇಶಕ್ಕೆ ಹೋಗಿದ್ದು ನೋಡಿದರೆ
      ಹಿಂದೆ ಉತ್ತಂಗಿ ಚನ್ನಪ್ಪನ್ನವರು,
      ಪಂಚಾಚಾರ್ಯರು ಬಸವಣ್ಣನವರ ಬಹಿರಂಗ ವಿರೋಧಿಗಳು , ವಿರಕ್ತರು ಬಸವಣ್ಣನವರ ಅಂತರಂಗ ವಿರೋಧಿಗಳು ಎಂದಿದ್ದು ಮತ್ತೊಮ್ಮೆ ಸಾಬೀತಾಯ್ತು.

  • ಮಿನಾಕ್ಷಿ ಬಾಳಿ,ಡಾ”ಜೆ ಎಸ್ ಪಾಟೀಲ್ ಮುಂತಾದ ಮುಖಂಡರು ಈ ಕಾಯ೯ಕ್ರಮದ ಮೂಲ ಉದ್ದೇಶವನ್ನು & RSS ನ ಕುತಂತ್ರವನ್ನು ಜನತೆಗೆ ತಿಳಿಸುವಲ್ಲಿ ಯಶಸ್ವಿಯಾದರು ,ಅವರಿಗೆ ಅನಂತ ಶರಣಾಥಿ೯ಗಳು.
    ಮುಂದಿನ ದಿನಗಳಲ್ಲಿ ಲಿಂಗಾಯತ ಧಮಿ೯ಯರ ಶಕ್ತಿಯನ್ನು /ಉತ್ಸಾಹವನ್ನು ಕುಂದಿಸಲು ,ಅರವಿಂದ ಜತ್ತಿ ಅಣ್ಣನವರನ್ನು ,ಬಾಲ್ಕಿ ಶ್ರೀ ಗಳನ್ನು ,ಗಂಗಾಂಬಿಕಾ ಅಕ್ಕಾ ,ಇನ್ನೂ ಅನೇಕರನ್ನು RSS ನವರು ಬಳಸಿಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿದೆ ,ಈ ಬಗ್ಗೆ ಬಸವಾಯತರು ಸನ್ನದ್ದರಾಗುವಕಾಲ ಸನ್ನಿಹಿತವಾಗಿದೆ ,ಯಚ್ಚರಗೊಳ್ಳು ಲಿಂಗಾಯತ .

  • ಪೂಜ್ಯ ಶ್ರೀ ಬಸವಗೀತಾ ಮಾತಾಜಿ ಗುರುಬಸವ ಮಠ ನಾಗನೂರ says:

    ಈ ಶ್ರೇಯಸ್ಸೆಲ್ಲಾ ಮೀನಾಕ್ಷಿ ಬಾಳಿ ಅಮ್ಮನಿಗೆ ಸೇರಬೇಕು.
    ಇಂಥವರು ಊರಿಗೊಬ್ಬಬ್ಬರು ಇದ್ರು ಸಾಕು ಧರ್ಮ ರಕ್ಷಣೆ ಆಗುತ್ತದೆ. ನಮ್ಮ ಧರ್ಮ ಮತ್ತು ಸಂಕೃತಿಯ ಉಳಿವಿಕೆಗಾಗಿ ಬಾಳಿ ಅಮ್ಮನವರಂತಹ ಅವಶ್ಯಕತೆ ತುಂಬಾ ಇದೆ.
    ವಿಶ್ವಗುರು ಬಸವಣ್ಣನವರು ಮೀನಾಕ್ಷಿ ಅಮ್ಮನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇವೆ.

  • ಉತ್ತಮ ಬೆಳವಣಿಗೆ, ಶರಣ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡಿದ ಎಲ್ಲರಿಗೂ ಶರಣು ಶರಣಾರ್ಥಿಗಳು 💝🙏

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು