ಸಿದ್ಧಲಿಂಗ ಶ್ರೀಗಳಲ್ಲಿ ನಾವು ಬಸವೇಶ್ವರರನ್ನು ಕಾಣುತ್ತಿದ್ದೆವು: ಹೊರಟ್ಟಿ

ನಗರದ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದ ವರೆಗೆ ಭಾವೈಕ್ಯತಾ ಯಾತ್ರೆ ಜರುಗಿತು

ಗದಗ

ಬಸವತತ್ವಗಳ ಅಕ್ಷರಶ: ಆರಾಧಕರಾಗಿದ್ದ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಗುರುಗಳಲ್ಲಿ ನಾವು ಬಸವೇಶ್ವರರನ್ನು ಕಾಣುತ್ತಿದ್ದೆವು, ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹೇಳಿದರು.

ಅವರು ಶುಕ್ರವಾರ ನಗರದ ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭೬ನೇ ಜಯಂತಿ ಅಂಗವಾಗಿ ಜರುಗಿದ ಭಾವೈಕ್ಯತಾ ದಿನಾಚರಣೆ, ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದ ಘನ ಉಪಸ್ಥಿತಿ ವಹಿಸಿ ಪಾಲ್ಗೊಂಡು ಮಾತನಾಡಿದರು.

ಸಿದ್ಧಲಿಂಗ ಮಹಾಸ್ವಾಮಿಗಳ ಜೊತೆಗೆ ನನ್ನದು ಮೂರು ದಶಕಗಳ ಒಡನಾಟ. ನನ್ನ ಸಾರ್ವಜನಿಕ ಜೀವನದ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಅವರಿಂದ ಉದ್ಘಾಟನೆ ಮಾಡಿಸಿದ್ದೇನೆ.

ಪ್ರವಾಹದ ವಿರುದ್ಧ ಈಜುವ ಎದೆಗಾರಿಕೆಯುಳ್ಳ ಸ್ವಾಮೀಜಿಗಳಾಗಿದ್ದ ಅವರು ಸಮಾಜೋದ್ಧಾರಕ್ಕಾಗಿ ದಿಟ್ಟ ನಿಲುವುಗಳನ್ನು ಕೈಗೊಂಡಿದ್ದರು. ಹಳ್ಳಿಗುಡಿ ಸೇರಿದಂತೆ ಗದಗ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಗಣಿಗಾರಿಕೆಗಾಗಿ ರೈತರು ತಮ್ಮ ಜಮೀನುಗಳನ್ನು ಮಾರುವ ಹಂತಕ್ಕೆ ತಲುಪಿದ್ದರು, ಆದರೆ ಸಿದ್ಧಲಿಂಗ ಶ್ರೀಗಳ ಪ್ರಭಾವದಿಂದ ಅವರು ತಮ್ಮ ಜಮೀನುಗಳನ್ನು ತಮ್ಮಲ್ಲೇ ಉಳಿಸಿಕೊಂಡರು, ಇಂದು ಆ ಜಮೀನುಗಳಿಗೆ ಬಂಗಾರದ ಬೆಲೆ ಬಂದಿದೆ, ರೈತರೆಲ್ಲ ಲಿಂಗೈಕ್ಯ ಗುರುಗಳಿಗೆ ಋಣಿಯಾಗಿದ್ದಾರೆ.

ಇಂಥ ಅನೇಕ ಸಮಾಜಮುಖಿ ಕಾರ್ಯ ಮಾಡಿದ ಶ್ರೀಗಳು ಇಲ್ಲದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ, ಅವರು ಲಿಂಗೈಕ್ಯರಾದಾಗ ವಿಧಾನ ಪರಿಷತ್ತಿನಲ್ಲಿ ಸರ್ವಸಮ್ಮತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದ ಕ್ಷಣವನ್ನು ಹೊರಟ್ಟಿ ಸ್ಮರಿಸಿದರು.

ನನ್ನ ಜೀವನವೇ ನನ್ನ ಸಂದೇಶ ಎಂಬ ಮಹಾತ್ಮ ಗಾಂಧೀಜಿಯವರ ಮಾತಿನಂತೆ ಸಿದ್ಧಲಿಂಗ ಮಹಾಸ್ವಾಮಿಗಳ ಆದರ್ಶಮಯವಾದ ಜೀವನವೇ ಅವರ ಸಂದೇಶವಾಗಿತ್ತು ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.

ಸಿದ್ಧಲಿಂಗ ಶ್ರೀಗಳು ಗದಗ ಮಠಕ್ಕೆ ಆಗಮಿಸಿದ ನಂತರ ಈ ಭಾಗದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು, ಜನಪರ-ವೈಚಾರಿಕ ನಿಲುವುಗಳನ್ನು ಹೊಂದಿದ್ದ ಲಿಂಗೈಕ್ಯ ಗುರುಗಳು ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರು ಹಾಕಿಕೊಂಡು ಅನಿಷ್ಠ ಪದ್ಧತಿಗಳ ವಿರುದ್ಧ ಸಮರ ಸಾರಿದರು.

ಸಮಾಜದ ಗೊಡವೆಯೇ ಇಲ್ಲದೇ ಆಧ್ಯಾತ್ಮಿಕ ಜೀವನ ಸಾಗಿಸುವ ಸಂತರು ಶ್ರೇಷ್ಠರಾಗಿರಬಹುದು ಆದರೆ ಸಮಾಜದ ಮಧ್ಯದಲ್ಲೇ ಇದ್ದುಕೊಂಡು ಅದರ ಓರೆ-ಕೋರೆಗಳನ್ನು ತಿದ್ದುವ ಸಿದ್ಧಲಿಂಗ ಸ್ವಾಮೀಜಿಗಳಂಥರು ವಿಶೇಷ ಮಾನ್ಯತೆ ಪಡೆಯುತ್ತಾರೆ. ಈಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಹ ಶ್ರೇಷ್ಠ ವೈಚಾರಿಕ ಚಿಂತಕರಾಗಿದ್ದು, ಅವರ ನೇತೃತ್ವದಲ್ಲಿ ಶ್ರೀಮಠ ಇನ್ನೂ ಉತ್ತರೋತ್ತರ ಬೆಳೆಯಲಿ ಎಂದರು.

ನರಗುಂದ ಮತಕ್ಷೇತ್ರದ ಶಾಸಕರಾದ ಸಿ.ಸಿ ಪಾಟೀಲ ಮಾತನಾಡಿ, ನಡೆದಾಡುವ ವಿಶ್ವಕೋಶದಂತಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಭಾವೈಕ್ಯತೆ ಹಾಗೂ ಭ್ರಾತೃತ್ವವನ್ನು ಬೆಳೆಸಲು ಶ್ರಮಿಸಿದರು. ಗದಗ ಭಾಗದಲ್ಲಿ ಕೋಮು ಸೌಹಾರ್ದತೆ ನೆಲೆನಿಲ್ಲಲು ತೋಂಟದ ಸಿದ್ಧಲಿಂಗ ಶ್ರೀಗಳು ಪ್ರಮುಖ ಕಾರಣರಾಗಿದ್ದಾರೆ. ನಾಡಿಗೆ ಸೇವೆ ಸಲ್ಲಿಸಿದ ಅನೇಕ ಸಾಧಕರ ಜೀವನ ವೃತ್ತಾಂತಗಳನ್ನು ಬರೆಯಿಸಿ ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

೨೦೨೫ನೇ ಸಾಲಿನ ಪದ್ಮಶ್ರೀ ಪುರಸ್ಕೃತರಾದ ಕೊಪ್ಪಳದ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಲಿಂಗೈಕ್ಯ ಪೂಜ್ಯರ ಕುರಿತಾಗಿ ಭೋಜರಾಜ ಸೊಪ್ಪಿಮಠ ಅವರು ಸಂಪಾದಿಸಿರುವ ‘ಕರುಣಾಮಯಿ ಭಾಗ ೩’ ಹಾಗೂ ಮಂಜುನಾಥ ಬಮ್ಮನಕಟ್ಟಿ ರಚಿಸಿದ ‘ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ಧಿ’ ಗ್ರಂಥಗಳು ಲೋಕಾರ್ಪಣೆಗೊಂಡವು.

ಶರಣ ಸಾಹಿತಿ ಡಾ.ರಂಜಾನ್ ದರ್ಗಾ ಮಾತನಾಡಿ, ತುಳಿತಕ್ಕೆ ಒಳಗಾದವರನ್ನು ಎತ್ತಿಹಿಡಿಯುವ ೧೨ನೇ ಶತಮಾನದ ಆದರ್ಶವನ್ನು ಆಚರಣೆಗೆ ತಂದಿದ್ದ ಲಿಂಗೈಕ್ಯ ಗುರುಗಳು ಭಾವೈಕ್ಯತೆಯ ಜಗದ್ಗುರುಗಳಾಗಿದ್ದರು. ಶ್ರೀಗಳು ನಮಗೆಲ್ಲ ಭಾರತರತ್ನರು, ವಿಜ್ಞಾನ-ತಂತ್ರಜ್ಞಾನದಲ್ಲಿ ನಾವು ಉನ್ನತಿ ಸಾಧಿಸಿದ್ದರೂ ನಮ್ಮ ಸಮಾಜ ಸಾಂಸ್ಕೃತಿಕವಾಗಿ ಅಧ:ಪತನವಾಗುತ್ತಿದೆ. ಬಸವಪ್ರಣೀತ ಮಠಗಳು ಶಿಕ್ಷಣ-ಸಮಾನತೆಗಾಗಿ ಅನೇಕ ಕೊಡುಗೆ ನೀಡಿವೆ. ಬಸವತತ್ವ ಕೇವಲ ಬರವಣಿಗೆ ಹಾಗೂ ಭಾಷಣದಲ್ಲಿರದೇ ಬದುಕಿನಲ್ಲಿ ಇರಬೇಕು ಎಂದು ಲಿಂಗೈಕ್ಯ ಗುರುಗಳು ನಿರೂಪಿಸಿ ತೋರಿಸಿದರು ಎಂದರು.

ಪ್ರಸಿದ್ಧ ವೈದ್ಯ ಡಾ. ಸೊಲೊಮನ್ ಮಾತನಾಡಿ, ಲಿಂಗೈಕ್ಯ ಗುರುಗಳು ನನ್ನನ್ನು ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಸುತ್ತಿದ್ದರು. ಅವರ ಜೊತೆಗಿನ ನನ್ನ ಒಡನಾಟ ಅವಿಸ್ಮರಣೀಯವಾಗಿದೆ. ಅನೇಕ ಬಡ ರೋಗಿಗಳನ್ನು ನನ್ನ ಹತ್ತಿರ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಸ್ಮರಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಭಾವೈಕ್ಯತೆ ಎಂಬ ಹೆಸರಿಗೆ ಶ್ರೇಷ್ಠತೆ ಬರುವಂಥ ವ್ಯಕ್ತಿತ್ವ ಶ್ರೀಗಳದ್ದಾಗಿತ್ತು, ಹೀಗಾಗಿ ಅವರ ಜನ್ಮದಿನವನ್ನು ಭಾವೈಕ್ಯತಾ ದಿನಾಚರಣೆ ಎಂದು ಆಚರಿಸುವದು ಸೂಕ್ತ. ಜನಪದ ಪ್ರೇಮಿಗಳಾಗಿದ್ದ ಅವರದ್ದು ಅಪ್ಪಟ ಜವಾರಿ ಭಾಷೆಯ ಧ್ವನಿಯಾಗಿತ್ತು. ಎಂದು ಲಿಂಗೈಕ್ಯ ಗುರುಗಳ ನೆಚ್ಚಿನ ಜನಪದ ಗೀತೆಗಳನ್ನು ಹಾಡಿದರು.

ಅನಂತಪುರದ ಪೂಜ್ಯ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮುಂಡರಗಿ ತೋಂಟದಾರ್ಯ ಶಾಖಾಮಠದ ಡಾ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡಿದರು.

ಸಾನಿಧ್ಯವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಭೈರನಟ್ಟಿಯ ಶಾಂತಲಿಂಗ ಶ್ರೀಗಳು, ಸಂಡೂರಿನ ಪ್ರಭು ಮಹಾಂತಸ್ವಾಮಿಗಳು, ಅರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು, ಬಾಚೆಗೊಂಡನಹಳ್ಳಿ ತೋಂಟದಾರ್ಯ ಶಾಖಾಮಠದ ಶ್ರೀಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು, ಮಾಜಿ ಸಂಸದರಾದ ಐ.ಜಿ. ಸನದಿ, ದೇವೆಂದ್ರಪ್ಪ ಮತ್ತಿತರರು ಇದ್ದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಅಮರೇಶ ಅಂಗಡಿ, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ಸೇರಿದಂತೆ ಬಸವದಳ-ಬಸವಕೇಂದ್ರ ಲಿಂಗಾಯತ ಪ್ರಗತಿಶೀಲ ಸಂಘ ಮುಂತಾದ ಬಸವಪರ ಸಂಘಟನೆಗಳ ಸದಸ್ಯರು, ಶ್ರೀಗಳ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.

‘ಭಾವೈಕ್ಯತಾ ಯಾತ್ರೆ’
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ೮ ಗಂಟೆಗೆ ನಗರದ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದ ವರೆಗೆ ಭಾವೈಕ್ಯತಾ ಯಾತ್ರೆ ಜರುಗಿತು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ತೋಂಟದಾರ್ಯ ಶಾಲಾ ಮಕ್ಕಳಿಂದ ಕೋಲಾಟ ಪ್ರದರ್ಶನ ಜರುಗಿತು. ಮೆರವಣಿಗೆಯುದ್ದಕ್ಕೂ ಲಿಂಗೈಕ್ಯ ಗುರುಗಳ ಸಾವಿರಾರು ಭಕ್ತರು ಹೆಜ್ಜೆಹಾಕಿ ಶ್ರೀಗಳಿಗೆ ಹಾಗೂ ಬಸವಾದಿ ಶರಣರಿಗೆ ಜಯಘೋಷ ಮೊಳಗಿಸಿದರು.

Share This Article
1 Comment
  • ಕನ್ನಡ ನಾಡು ಕಂಡ ಅಪ್ರತಿಮ ಬಸವಪ್ರಣೀತರು ಪೂಜ್ಯ ಲಿಂಗೈಕ್ಯ ತೋಂಟದ ಸಿಧ್ದಲಿಂಗ ಮಹಾಸ್ವಾಮಿಗಳು.

Leave a Reply

Your email address will not be published. Required fields are marked *