ಬಸವ ಮಂಟಪದ ಹತ್ತಿರವಿರುವ ಪುತ್ತಳಿ ಈಗ ಸರಿಯಾದ ನಿರ್ವಹಣೆಯಿಲ್ಲದೆ ಮಾಸಿ, ಅಲ್ಲಲ್ಲಿ ಬಿರುಕು ಬಿಟ್ಟುಕೊಂಡಿದೆ, ಎಂದು ಸ್ಥಳೀಯರು ಹೇಳುತ್ತಾರೆ.
ಬೆಂಗಳೂರು
ಸ್ಥಳೀಯ ಶಾಸಕರ, ಸಂಸದರ ಮತ್ತು ಜಿಲ್ಲಾ ಸಚಿವರ ನಿರ್ಲಕ್ಷ್ಯದಿಂದ ಎರಡು ವರ್ಷವಾದರೂ ಲೋಕಾರ್ಪಣೆಯಾಗದೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ತಳಿ ನಗರದ ರಾಜಾಜಿನಗರದಲ್ಲಿ ಮುಸುಕು ಮುಚ್ಚಿಕೊಂಡು ನಿಂತಿದೆ.
ನವರಂಗ ಮುಖ್ಯರಸ್ತೆಯಲ್ಲಿ ಬಸವ ಮಂಟಪದ ಹತ್ತಿರ ಸ್ಥಾಪಿತವಾಗಿರುವ ಕಂಚಿನ ಪುತ್ತಳಿ ಈಗ ಸರಿಯಾದ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಮಾಸಿ, ಅಲ್ಲಲ್ಲಿ ಬಿರುಕು ಕೂಡ ಬಿಟ್ಟುಕೊಂಡಿದೆ ಎಂದು ತಿಳಿದು ಬಂದಿದೆ. ಹೊದಿಸಿದ ಬಟ್ಟೆ ಹರಿದು ಚಿಂದಿಯಾಗಿ ಬಸವಣ್ಣನವರ ಮುಖ ಮುಚ್ಚುವಷ್ಟು ಮಾತ್ರ ಇತ್ತೀಚಿನವರೆಗೆ ಉಳಿದುಕೊಂಡಿತ್ತು.

ಬಸವಣ್ಣರವರ ಪುತ್ಥಳಿ ಇರಿಸಿರುವ ಸ್ಥಳವು ಕುಡುಕರ ತಂಗು ದಾಣವಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಅನೈತಿಕ, ಅಕ್ರಮ ಚಟುವಟಿಕೆ ನಡೆಸುವವರ ಕೇಂದ್ರವಾಗುತ್ತದೆ, ಎಂದು ಸಿದ್ದಗಂಗಾ ಚಾರಿಟಬಲ್ ಟ್ರಸ್ಟಿನ ಚಂದ್ರಶೇಖರ ಟಿ.ಎಂ.
ಹೇಳಿದರು.
ಕಳೆದ ವಾರ ಟ್ರಸ್ಟಿನ ಸದಸ್ಯರು ಸ್ವಂತ ಶ್ರಮ ಮತ್ತು ಖರ್ಚಿನಿಂದ ಸ್ಥಳವನ್ನು ಸ್ವಚ್ಚಗೊಳಿಸಿದರು. ಹರಿದು ಚಿಂದಿಯಾಗಿದ್ದ ಹಳೆ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯಿಂದ ಪುತ್ಥಳಿಯನ್ನು ಮುಚ್ಚಿದರು.

“ಬಸವಣ್ಣನವರು ರಾಜ್ಯದ ಸಾಂಸ್ಕೃತಿಕ ನಾಯಕರು. ಲಕ್ಷಾಂತರ ಜನರು ಆರಾಧಿಸುವ ಧರ್ಮ ಗುರು. ಅವರ ಬಗ್ಗೆ ಈ ನಿರ್ಲಕ್ಷ್ಯ ಅತ್ಯಂತ ನೋವಿನ ಸಂಗತಿ,” ಎಂದು ಚಂದ್ರಶೇಖರ ಹೇಳಿದರು.
“ಪುತ್ಥಳಿಯನ್ನು ಇಲ್ಲಿ ತಂದು ಇಟ್ಟು ಎರಡು ವರ್ಷ ಆಯಿತು. ಒಂದಿಬ್ಬರನ್ನು ತಂದು ಕೆಲಸಕ್ಕೆ ಹಚ್ಚಿದರೆ 15-20 ದಿನಗಳಲ್ಲಿ ಎಲ್ಲಾ ಕೆಲಸ ಮುಗಿದು ಹೋಗುತ್ತೆ.
ಶಾಸಕ ಸುರೇಶ್ ಕುಮಾರ್, ಸಂಸದ ಪಿ. ಸಿ. ಮೋಹನ್ ಅವರಿಗೆ ಮತ್ತೆ ಮತ್ತೆ ಪತ್ರಗಳನ್ನು ಬರೆದಿದ್ದೇವೆ, ಭೇಟಿಯಾಗಿದ್ದೇವೆ. ಯಾವುದಕ್ಕೂ ಅವರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಬೆಂಗಳೂರು ಉಸ್ತುವಾರಿ ಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರ ಗಮನಕ್ಕೂ ಈ ವಿಳಂಬ ತಂದಿದ್ದಾಗಿದೆ,” ಎಂದು ಹೇಳಿದರು.
ಸೈದ್ಧಾಂತಿಕ ವಿರೋಧ
“ಸ್ಥಳೀಯ ಶಾಸಕ ಸುರೇಶ್ ಕುಮಾರ್ ಮತ್ತು ಸಂಸದ ಪಿ. ಸಿ. ಮೋಹನ್ ಬಿಜೆಪಿಯವರು. ಅದರಲ್ಲೂ ಸುರೇಶ್ ಕುಮಾರ್ ಆರೆಸ್ಸೆಸ್ ನಾಯಕರಾಗಿ ಹೆಸರು ಮಾಡಿದವರು. ಅವರುಗಳು ಬಸವಣ್ಣನವರ ಪುತ್ಥಳಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿರುವ ಸಾಧ್ಯತೆಯಿದೆ.
ಪ್ರತಿಮೆ ಬಸವ ಮಂಟಪದ ಹತ್ತಿರವೇ ಇದೆ. ಬಸವ ಧರ್ಮ ಪೀಠದ ಮುಖ್ಯಸ್ಥರಾದ ಪೂಜ್ಯ ಗಂಗಾ ಮಾತಾಜಿ ಅವರು ಸುರೇಶ್ ಕುಮಾರ್ ಅವರ ಜೊತೆ ಮಾತನಾಡಿ ಕೆಲಸ ಮುಗಿಯುವಂತೆ ಒತ್ತಡ ತರಬೇಕು,” ಎಂದು ಲಿಂಗಾಯತ ಅಧ್ಯಯನ ಕೇಂದ್ರದ ಶ್ರೀಶೈಲ ಮಸೂತಿ ಹೇಳಿದರು.
ಪೂಜ್ಯ ಗಂಗಾ ಮಾತಾಜಿ ಅವರು ಸುರೇಶ್ ಕುಮಾರ್ ಅವರ ಜೊತೆ ಮಾತನಾಡಿ ಕೆಲಸ ಮುಗಿಯುವಂತೆ ಒತ್ತಡ ತರಬೇಕು
ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಮೌಳಿ, “ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. ಈ ವಿಳಂಬದ ಬಗ್ಗೆ ಸಂಬಂಧಪಟ್ಟವರಲ್ಲಿ ವಿಚಾರಿಸಿ ಬೇಗ ಲೋಕಾರ್ಪಣೆಯಾಗುವಂತೆ ಒತ್ತಡ ತರುತ್ತೇವೆ,” ಎಂದು ಹೇಳಿದರು.

ಆರಂಭದಿಂದಲೂ ವಿಳಂಬ
ಪ್ರತಿಮೆಯ ಕೆಲಸ ಶುರುವಾಗಿದ್ದು ಸುಮಾರು ಏಳು ವರ್ಷಗಳ ಹಿಂದೆ. ಗಂಗಾಂಬಿಕೆ ಅವರು ಬೆಂಗಳೂರಿನ ಮೇಯರ್ ಆಗಿದ್ದಾಗ (2018-2019) ಇಲ್ಲಿ ಪ್ರತಿಮೆ ಸ್ಥಾಪಿಸಲು ಜಾಗ ನೀಡಿ, ಒಂದು ಕೋಟಿಗಿಂತ ಹೆಚ್ಚು ಅನುಧಾನ ನೀಡಲಾಗಿತ್ತು.
“ಈ ವಿಳಂಬ ಸರಿಯಲ್ಲ. ಶಾಸಕರು ಮತ್ತು ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ ಸ್ವಲ್ಪ ಸಮಯದಲ್ಲಿಯೇ ಲೋಕಾರ್ಪಣೆ ಮಾಡಬಹುದು,” ಎಂದು ಮಾಜಿ ಮೇಯರ್, ಗಂಗಾಂಬಿಕಾ, ಹೇಳಿದರು.
RSS ಶಾಸಕರು ಸಂಸದರು ಇರುವಾಗ ಮೂರ್ತಿ ಇನ್ನೂ ಭಗ್ನ ವಾಗುವಾದರಲ್ಲಿ ಅನುಮಾನವಿಲ್ಲ. ಎಲ್ಲದಕ್ಕೂ ಈಗ ಹೋರಾಟ ಬೇಕು
ಬಸವ ಮಂಟಪದ ಹತ್ತಿರವೇ ಎರಡು ವರ್ಷದಿಂದ ಬಸವಣ್ಣನವರ ಪ್ರತಿಮೆ ದೂಳು ಕುಡಿಯುತ್ತಿದೆ. ಆದರೂ ಇದು ಗಂಗಾ ಮಾತಾಜಿ ಅವರ ಗಮನಕ್ಕೆ ಬಂದಿಲ್ಲ ಅಂದರೆ ಏನರ್ಥ?