ಲಿಂಗಾಯತರ ಮದುವೆಗಳು ಸರಳವಾಗಿ ನಡೆಯಲಿ, ಸಾಲ ಮಾಡಿ ಮದುವೆ ಮಾಡಬೇಡಿ: ಮುರುಗರಾಜೇಂದ್ರ ಶ್ರೀ
ಮರಿಯಾಲ
ಚಾಮರಾಜನಗರ ಜಿಲ್ಲೆ ಮರಿಯಾಲದ ಶ್ರೀ ಬಸವ ಮಹಾಮನೆಯಲ್ಲಿ ಏಪ್ರಿಲ್ 23ರ ಬುಧವಾರದಂದು ವಚನ ಕಲ್ಯಾಣ ಮಹೋತ್ಸವ ಜರುಗಿತು.

ಶರಣ ದಂಪತಿ ಸುನಂದ ಮತ್ತು ಶಿವಸ್ವಾಮಿ ಕಾಳನಹುಂಡಿ ಇವರ ಮಗ ಎಸ್. ಗುರುಪ್ರಸಾದ ಅವರ ಕಲ್ಯಾಣವು ಶರಣ ದಂಪತಿ ಸುರ್ವಣಮ್ಮ ಮತ್ತು ಮಲ್ಲಣ್ಣ ಮೂಡ್ಲುಪುರ ಇವರ ಮಗಳಾದ ಎಂ. ಮಹೇಶ್ವರಿ ಅವರ ಜೊತೆ ಬಸವಾದಿ ಶರಣರ ಆಶಯದಂತೆ ವಚನ ಕಲ್ಯಾಣ ನೆರವೇರಿತು.

ಪೂಜ್ಯ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳು ಮತ್ತು ಕಲ್ಯಾಣವಾಗುವ ವಧು, ವರರು ಇಷ್ಟಲಿಂಗ ಪೂಜೆಯನ್ನು ಮಾಡಿಕೊಂಡರು. ರಾಮಸಮುದ್ರದ ಪ್ರಸನ್ನ ಮತ್ತು ತಂಡದವರ ವಚನ ಧ್ವಜಗೀತೆ ಜೊತೆ ಮರಿಯಾಲದ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ಸಂಮುಖದಲ್ಲಿ ವಧು, ವರರು ಷಟ್ಸ್ಥಲ ಧ್ವಜಾರೋಹಣ ಮಾಡಿದರು.
ವಚನಮೂರ್ತಿಗಳಾದ ಮೇಲಾಜಿಪುರ ಶಿವಕುಮಾರ ಸ್ವಾಮೀಜಿ ಮತ್ತು ಕುಮಾರಸ್ವಾಮಿ ಕಾಳನಹುಂಡಿ ಇವರುಗಳು ಬಸವಾದಿ ಶರಣರ ಆಶಯದಂತೆ ಗಂಡು ಹೆಣ್ಣಿಗೆ ಮಾಂಗಲ್ಯ ಧಾರಣೆಯನ್ನು ಹಾಗೂ ಮದುವೆಯ ಹೆಣ್ಣು ಗಂಡಿಗೆ ರುದ್ರಾಕ್ಷಿ ಧಾರಣೆಯನ್ನು ಮಾಡಿಸುವ ಮೂಲಕ ವಚನ ಕಲ್ಯಾಣ ಜರುಗಿತು. ನವದಂಪತಿಗಳಿಗೆ ನೆರೆದಿರುವ ಎಲ್ಲರೂ ಪುಷ್ಪಾರ್ಚನೆ ಮಾಡಿದರು

ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಲಿಂಗಾಯತರ ಮದುವೆಗಳು ಸರಳವಾಗಿ ಜರುಗಬೇಕು. ಲಿಂಗಾಯತರು ಸಾಲಮಾಡಿ ಮದುವೆ ಮಾಡಿಕೊಳ್ಳಬಾರದೆಂದು ಹಾಗೂ ಮದುವೆಗೋಸ್ಕರ ಅಸ್ತಿಗಳನ್ನು ಮಾರಿಕೊಳ್ಳಬಾರದೆಂದು ನುಡಿದರು.

ಮೇಲಾಜಿಪುರ ಶಿವಕುಮಾರ ಸ್ವಾಮಿಗಳು ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಪೂಜ್ಯ ಚನ್ನಬಸವಸ್ವಾಮಿಗಳು ಚಾಮರಾಜನಗರ ಉಪಸ್ಥಿತರಿದ್ದರು ಹಾಗೂ ಬಂಧು ಮಿತ್ರರು ಪಾಲ್ಗೊಂಡಿದ್ದರು. ಯಶಸ್ವಿ ವಚನ ಕಲ್ಯಾಣ ಮಹೋತ್ಸವದಲ್ಲಿ ಶರಣ ಶರಣೆಯರು ಉಪಸ್ಥಿತರಿದ್ದರು.