103 ಪಂಗಡಗಳ ಸಹಸ್ರಾರು ಕಾರ್ಯಕರ್ತರ ಒಗ್ಗಟ್ಟಿನ ಶಕ್ತಿ ಪ್ರದರ್ಶನ
ಬೆಳಗಾವಿ
ಜಿಲ್ಲೆಯ ಎಲ್ಲಾ ಲಿಂಗಾಯತ ಪಂಗಡಗಳು ಸೇರಿ ವೈಭವದ ಬಸವ ಜಯಂತಿ ಮೆರವಣಿಗೆಯನ್ನು ಭಾನುವಾರ ನಗರದಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ ನಡೆಸಿದರು.
ಪ್ರತಿ ವರ್ಷ ಎಲ್ಲ ಪಂಗಡಗಳೂ ಪ್ರತ್ಯೇಕವಾಗಿ ಜಯಂತಿ ಆಚರಿಸುತ್ತಿದ್ದವು. ಈ ಬಾರಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಎಲ್ಲ ಒಳಪಂಗಡಗಳು ವೈಮನಸ್ಸು ಮರೆತು ಮೆರವಣಿಗೆಯಲ್ಲಿ ಭಾಗವಹಿಸಿದವು. ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ, ಪಂಚಮಸಾಲಿ ಸಮಾಜ, ರಾಷ್ಟ್ರೀಯ ಬಸವ ದಳ ಸೇರಿ ವಿವಿಧ ಲಿಂಗಾಯತ ಸಂಘಟನೆ ಸದಸ್ಯರು ಭಾಗಿಯಾಗಿದ್ದರು.

15ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, 20ಕ್ಕೂ ಹೆಚ್ಚು ಮಠಾಧೀಶರು, ಸಾವಿರಾರು ಸಂಖ್ಯೆಯ ಬಸವಾಭಿಮಾನಿಗಳು ಒಂದಾಗಿ ಹೆಜ್ಜೆ ಹಾಕಿದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮಠಾಧೀಶರಿಂದ ಚಾಲನೆಗೊಂಡ ಉತ್ಸವದ ಮೆರವಣಿಗೆ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಕಾಲೇಜುವರೆಗೆ ಮಧ್ಯರಾತ್ರಿವರೆಗೂ ನಡೆಯಿತು. 10-12 ಸಾವಿರ ಶರಣರು ಮೆರವಣಿಗೆಯಲ್ಲಿದ್ದರು. ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಮಾರ್ಗದುದ್ದಕ್ಕೂ ಬಸವಣ್ಣನವರ ವಚನಗಳ ಪಠಣ, ಗಾಯನ ನಡೆಯಿತು. ಡಿ.ಜೆ ಸೌಂಡ್ ಸಿಸ್ಟಮಿನ ಅಬ್ಬರದ ಸಂಗೀತ, ದೇಸಿ ವಾದ್ಯಮೇಳಗಳು, ರೂಪಕಗಳು, ಕೋಲಾಟ ತಂಡಗಳು, ಶರಣರ ವೇಷ ಧರಿಸಿದ ಶಾಲಾ ಮಕ್ಕಳು ಗಮನ ಸೆಳೆದರು.
ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮಿಗಳು, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಗಳು, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸೇರಿ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್, ಶಾಸಕ ಆಸೀಫ್ ಸೇಠ್, ಗಣೇಶ ಹುಕ್ಕೇರಿ, ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ, ಜಾ.ಲಿಂ.ಮಹಾಸಭಾದ ಬಸವರಾಜ ರೊಟ್ಟಿ, ವೀ.ಲಿಂ. ಮಹಾಸಭಾದ ರತ್ನಪ್ರಭಾ ಬೆಲ್ಲದ, ಲಿಂಗಾಯತ ಸಂಘಟನೆಯ ಈರಣ್ಣ ದೇಯನ್ನವರ, ರಾ.ಬ.ದಳದ ಅಶೋಕ ಬೆಂಡಿಗೇರಿ, ಆನಂದ ಗುಡಸ, ಶಂಕರ ಗುಡಸ, ಅಶೋಕ ಮಳಗಲಿ, ಸತೀಶ ಚೌಗಲಾ, ಮುರುಘೇಂದ್ರ ಪಾಟೀಲ, ಮುರಿಗೆಪ್ಪ ಬಾಳಿ, ಪ್ರಭು ಪಾಟೀಲ, ಮಲ್ಲನಗೌಡ ಪಾಟೀಲ, ಸುನೀಲ ಸಾಣಿಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೂರಾ ಮೂರು ಒಳಪಂಗಡಗಳೂ ಸೇರಿ ಈ ಬಾರಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿವೆ, ಎಲ್ಲ ಲಿಂಗಾಯತ ಸಂಘಟನೆಗಳೂ ಜಾಗೃತರಾಗಿವೆ. ಬೀದರ್ನಿಂದ ಚಾಮರಾಜನಗರವರೆಗೂ, ಕಲಬುರಗಿಯಿಂದ ಬೆಳಗಾವಿಯವರೆಗೂ ಈ ಬಾರಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.


ಮೆರವಣಿಗೆಯಲ್ಲಿ ಮೊಳಗಿದ ಘೋಷಣೆಗಳು
ಭಾರತ ದೇಶ ಜೈ ಬಸವೇಶ
ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರಿಗೆ ಜಯವಾಗಲಿ
ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ
ಸಾಂಸ್ಕೃತಿಕ ನಾಯಕ ಬಸವೇಶ್ವರರಿಗೆ ಜಯವಾಗಲಿ
ಅನುಭವ ಮಂಟಪದ ಕರ್ತೃ ಬಸವಣ್ಣನವರಿಗೆ ಜಯವಾಗಲಿ
ಲಿಂಗಾಯತರು ಒಂದಾಗಲಿ
ಬಸವೇಶ್ವರ ಜಯಂತ್ಯುತ್ಸವಕ್ಕೆ ಜಯವಾಗಲಿ
ಈಗಿನ ಕಾಲಘಟ್ಟದಲ್ಲಿ ಈ.ರೀತಿಯ ಸುಂದರ ಒಗ್ಗಟ್ಟಿನ ಕಾರ್ಯಕ್ರಮ ಅತಿಅವಶ್ಯ.ಭಾಗವಹಿಸಿದ 103ಒಳಪಂಗಡದ ಗಣ್ಯರಿಗೆ, ಮುಖಂಡರಿಗೆ ಹಾಗೂ ಬಸವ ಅಭಿಮಾನಿಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
🎉💐
ಈ ಸಲದ ಬಸವ ಜಯಂತಿಯ ಕಾರ್ಯಕ್ರಮವು ಬೆಳಗಾವಿಯಲ್ಲಿ ಲಿಂಗಾಯತ ಧರ್ಮದ ಎಲ್ಲ ೧೦೩ ಉಪ ಪಂಗಡಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅದ್ದೂರಿಯಾಗಿ ಆಚರಿಸಿದ್ದು ಹೆಮ್ಮೆಯ ವಿಷಯ.
ಈ ಕಾರ್ಯಕ್ರಮವು ಇತರ ಎಲ್ಲಾ ನಗರ / ಗ್ರಾಮಗಳಿಗೂ ಮಾದರಿಯಾಯಿತು.
ಇದು ಹಿಗೆಯೇ ಮುಂದುವರೆಯಲಿ, ಉಳಿದವರೂ ಸಹ ಇದನ್ನು ಅನುಸರಿಸಲಿ.
🙏🙏
ತುಂಬಾ ಅಚ್ಚುಕಟ್ಟಾಗಿ ಎಲ್ಲರೂ ಒಂದಾಗಿ ಆಚರಿಸಿದ ಈ ಜಯಂತಿಗೆ ಅಪ್ಪ ಬಸವ ಹರುಷಪಟ್ಟಿರಬೆಕು ,ಈ ಸನ್ನಿವೆಶ ನೊಡಿ ತುಂಬಾ ಸಂತೋಷವಾಯಿತು ,ಈ ಕಾಯ೯ಗಳಿಗೆ ಶ್ರಮಿಸಿದ & ಸಣ್ಣಪುಟ್ಟ ವೈಮನಸ್ಸುನ್ನು ಬದಿಗಿಟ್ಟು ಭಾಗವಹಿಸಿದ ಬಸವ ಹೃದಯಿಗಳಿಗೆ ಶರಣು ಶರಣಾರ್ಥಿ ಗಳು.
ಭಾರತ ದೇಶ ಜೈ ಬಸವೇಶ
ಈ ಒಗ್ಗಟ್ಟು ಹೀಗೆಯೇ
ಸದಾಕಾಲ ಮುಂದುವರೆಯಲಿ
ಓಂ ಶ್ರೀ ಗುರುಬಸವ ಲಿಂಗಾಯನಮಃ
ಬಸವೇಶ್ವರರಿಗೆ ಜಯವಾಗಲಿ. ಒಗ್ಗಟ್ಟಿನಿಂದ ಕೂಡಿ ಬಸವ ಜಯಂತಿಯನ್ನು ಆಚರಿಸಿದ ಎಲ್ಲಾ ಶರಣ ಶರಣೆಯರಿಗೆ ಶರಣು ಶರಣಾರ್ತಿಗಳು.
🙏🙏🙏🙏🙏🙏🙏🙏🙏
ಮೆರವಣಿಗೆ ನೋಡ್ತಾಯಿದ್ದರೆ ಹೃದಯ ತುಂಬಿ ಬರುತ್ತದೆ. ತುಂಬಾ ಒಳ್ಳೆಯ ಪ್ರಯತ್ನ. ಎಲ್ಲಾ ಲಿಂಗಾಯತರು ಒಂದಾಗುವುದು ಒಗ್ಗಟ್ಟು ಪ್ರದರ್ಶಿಸುವುದು ಬರೀ ಬಸವ ಜಯಂತಿ ಮೆರವಣಿಗೆಗೆ ಮಾತ್ರ ಸೀಮಿತವಾಗದೆ ನಿಜವಾಗಿಯೂ ಒಗ್ಗಟ್ಟಾಗಲಿ. ಈ ಪ್ರಯತ್ನ ಮಾಡಿದ ನಿಮಗೆಲ್ಲರಿಗೂ ಶುಭಾಷಯಗಳು 🌹🙏.
ತುಂಬಾ ಸಂತೋಷ, ಎಲ್ಲರೂ ಒಟ್ಟಿಗೆ ಬಸವ ಜಯಂತಿ ಆಚರಣೆ ಮಾಡಿದ್ದೀರಿ.
ಅದ್ದೂರಿಯಾಗಿ ನಮ್ಮ ಬೀದರಿನಲ್ಲೂ ಹಾಗೂ ವಿವಿಧ ಗ್ರಾಮಾಂತರ ಗಳಲ್ಲೀಯೂ ಬಸವ ಜಯಂತಯನ್ನು ವೖಭವದಿಂದ ಆಚರಿಸಲಾಯಿತು.