ಮನೆಗೊಂದು ವಚನ ಘೋಷವಾಕ್ಯವಾಗಲಿ: ಆಯನೂರು ಮಂಜುನಾಥ್‌

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ

‘ಬಸವಣ್ಣವರ ಒಂದು ವಚನವನ್ನಾದರೂ ಘೋಷವಾಕ್ಯವಾಗಿ ಮನೆಯಲ್ಲಿ ರೂಢಿಸಿಕೊಳ್ಳಬೇಕು. ಅದಕ್ಕೆ ಬದ್ಧವಾಗಿ ಇಡೀ ಕುಟುಂಬ ನಡೆದುಕೊಳ್ಳಬೇಕು. ಇಂದು ವಚನಗಳು ಭಾಷಣಗಳಲ್ಲಿ ಮಾತ್ರ ಬಳಕೆ ಆಗುತ್ತಿವೆ, ಬದುಕಿನಲ್ಲಿ ಬಳಕೆಯಾಗುತ್ತಿಲ್ಲ, ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಭಾನುವಾರ ಹೇಳಿದರು.

ವಿದ್ಯುತ್‌ ಇಲಾಖೆಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಸಂಘದ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅವರ ವಚನಗಳು ಬದುಕಿನ ಮೇಲೆ ಪರಿಣಾಮ ಬೀರಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು. ‘ಕಾಯಕವೇ ಕೈಲಾಸ’ ಎಂದು ಪ್ರತಿಪಾದಿಸಿದ ಬಸವಣ್ಣನವರ ಜಯಂತಿಯಂದೂ ರಜೆ ನೀಡಲಾಗುತ್ತಿದೆ. ಅದರ ಬದಲು ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು, ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಬಸವಣ್ಣ ಎಲ್ಲರಿಗೂ ಗೌರವದಿಂದ ಬದುಕುವ ಅವಕಾಶ ಮಾಡಿದರು. ಮಾದಾರ ಚನ್ನಯ್ಯರನ್ನು ಅಪ್ಪನೆಂದು ಸಂಬೋಧಿಸಿದರು ಎಂದು ಹೇಳಿದರು.

ಪ್ರಪಂಚದಲ್ಲಿ ಸಾಕಷ್ಟು ಸಂವಾದಗಳು ನಡೆದಿವೆ. ಆದರೆ ಅಕ್ಷರದ ಪರಿಚಯವಿಲ್ಲದ, ಮುಖ್ಯವಾಹಿನಿಯಿಂದ ಹೊರಗಿದ್ದವರು ಅನುಭವ ಮಂಟಪದಲ್ಲಿ ಚರ್ಚೆ ನಡೆಸಿದರು. ಆದರೆ ಅನುಭವ ಮಂಟಪವೇ ಇರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ, ಅದರಿಂದ ಯಾವ ಪ್ರಯೋಜನವೂ ಇಲ್ಲ. ಅನುಭವ ಮಂಟಪ ಸಂವಾದ ಪರಂಪರೆಯ ಅಭಿವ್ಯಕ್ತಿಯಾಗಿತ್ತು, ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್‌, ಸಂಘದ ಅಧ್ಯಕ್ಷ ಎಸ್‌.ಜಿ. ಶಶಿಧರ್‌, ಕಾರ್ಯಾಧ್ಯಕ್ಷ ಎಂ.ಆರ್‌. ಜಯದೇವಪ್ಪ, ಪ್ರಮುಖರಾದ ಎಸ್‌.ಪಿ. ದಿನೇಶ್‌, ರುದ್ರಮುನಿ ಸಜ್ಜನ್‌, ಎಚ್‌.ಎನ್‌. ಮಹಾರುದ್ರ, ಎಸ್‌.ಪಿ. ಮೋಹನ ಕುಮಾರ್‌, ಜಯದೇವಪ್ಪ ಇದ್ದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾನಪದ ವಿದ್ವಾಂಸ ಶಂಭು ಬಳಿಗಾರ ಉಪನ್ಯಾಸ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *