ಹೊಳಲ್ಕೆರೆ ಗ್ರಾಮದಲ್ಲಿ ಅರ್ಥಪೂರ್ಣ, ತತ್ವಬದ್ದ ಬಸವ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಹೊಳಲ್ಕೆರೆ/ಚಿತ್ರದುರ್ಗ

ಆಚಾರವೇ ಸ್ವರ್ಗ, ಅನಾಚಾರವೇ ನರಕ. ಇದರಲ್ಲಿ ಎಂತಹ ಮಹತ್ವದ ಮನುಷ್ಯರೆಲ್ಲರೂ ಬಸವಣ್ಣನವರ ಈ ಒಂದು ವಚನದ ಸಾಲನ್ನು ಅರ್ಥ ಮಾಡಿಕೊಂಡರೆ ಸಾಕು ಇಡೀ ಜೀವನವೇ ಸಾರ್ಥಕವಾಗುತ್ತದೆ. ಅದರಂತೆ ನಾವು ಲೋಕಾನುಭವದ ಜೊತೆಗೆ ಶಿವಾನುಭವವನ್ನು ಕೇಳುವುದರ ಮುಖೇನ ನಮ್ಮ ಬದುಕನ್ನು ಸಾಗಿಸುತ್ತಾ ಹೋದರೆ ಬದುಕು ಹಸನಾಗುವುದರಲ್ಲಿ ಸಂಶಯವೇ ಇಲ್ಲ ಎಂದು ರಾವಂದೂರು ಮುರಘಾಮಠದ ಮೋಕ್ಷಪತಿ ಮಹಾಸ್ವಾಮಿಗಳು ಕರೆ ನೀಡಿದರು.

ಶ್ರೀಗಳವರು ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಎರಡು ದಿನಗಳ ಬಸವ ಜಯಂತಿ ಸಮಾರಂಭದ ಎರಡನೇ ದಿನವಾದ ಸೋಮವಾರ ಗ್ರಾಮದ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಾ ನಾವು ಆಚಾರ ವಿಚಾರದಲ್ಲಿ ಎಲ್ಲಿಯೂ ಎಡವದೇ ನಡೆದರೆ ಅದು ನಾವು ಬಸವಣ್ಣನವರಿಗೆ ಸಲ್ಲಿಸುವ ನಿಜವಾದ ಪೂಜೆ ಅಥವಾ ತತ್ವವೆಂದೇ ತಿಳಿಯಬೇಕು.

ನಾವು ಬದುಕಲಿಕ್ಕೆ ಗಾಳಿ ನೀರು ಬೆಳಕು ಈ ಪಂಚಭೂತಗಳ ಎಷ್ಟು ಅವಶ್ಯಕತೆ ಇದೆ. ಆದರೆ ನಾವು ಇಂದು ಅವುಗಳನ್ನು ಕಲುಷಿತಗೊಳಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಬೆಳೆದ ಆಹಾರ ಪದಾರ್ಥ ಏನೇ ಆಗಿರಬಹುದು ನಾವು ಮೊದಲು ಸೇವಿಸಿ ನಂತರ ಉಳಿದದ್ದನ್ನು ಮಾರಾಟ ಮಾಡಬೇಕು. ಈಗ ಅದನ್ನು ಹೊರತುಪಡಿಸಿ ಎಲ್ಲವನ್ನು ಮಾರಾಟ ಮಾಡಿ ಉಳಿದಿದ್ದ ಕಚ್ಚಾ ಪದಾರ್ಥವನ್ನು ನಾವು ಸೇವಿಸುವುದರಿಂದ ನಾವು ಗಟ್ಟಿ ಮುಟ್ಟಾಗಿ ಉಳಿದಿಲ್ಲ. ಒಳ್ಳೆಯ ಆಹಾರ ಪದಾರ್ಥವನ್ನು ಸೇವಿಸಿದರೆ ನಮ್ಮ ದೇಹ ಸದೃಢವಾಗುತ್ತದೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರ ಮುಖಾಂತರ ಲೋಕಜ್ಞಾನದ ಜೊತೆಗೆ ಶಿವಾನುಭವವನ್ನು ಕಲಿಸುವ ಮೂಲಕ ಇಂತಹ ಧಾರ್ಮಿಕತೆಯ ಕಾರ್ಯಕ್ರಮಗಳು ಆಗಾಗ ಗ್ರಾಮಗಳಲ್ಲಿ ನಡೆದರೆ ಸದ್ವಿಚಾರಗಳ ಮನವರಿಕೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ನುಡಿದರು.

ಸಮ್ಮುಖ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ 12ನೇ ಶತಮಾನದ ಒಂದೇ ಒಂದು ಶರಣು-ಶರಣಾರ್ಥಿ ಎನ್ನುವ ಪದ ಅಗಾಧ ತತ್ವ ಬೋಧಿಸುತ್ತದೆ. ನಮ್ಮ ನಡೆ ನುಡಿ ಆಚಾರ ವಿಚಾರಗಳಲ್ಲಿ ಕುಹಕ ಆಡಂಬರ, ವ್ಯಂಗ್ಯಗಳಿಲ್ಲದ ಸಹಜ ಸ್ವಬಾವದ ಮೂಲಕ ನಮ್ಮ ಬದುಕನ್ನು ಸಾಗಿಸಬೇಕಿದೆ. ನಮ್ಮ ನಾಡಿನ ಶ್ರೇಷ್ಠ ಚಿಂತಕರಾದ ಆಚಾರ್ಯ ವಿನೋಬಾ ಭಾವೆಯವರು ಬಸವಣ್ಣನವರ ಕುರಿತು ಜಗತ್ತಿನ ಯಾವುದೇ ತತ್ವಜ್ಞಾನಿ ಕಾಯಕವೇ ಕೈಲಾಸ ಎಂಬ ತತ್ವವನ್ನು ನೀಡಿಲ್ಲ .ಆದರೆ ಬಸವಣ್ಣನವರು ಅಂತಹ ಉದಾತ್ತ ತತ್ವವನ್ನು ನೀಡಿ ಜಗತ್ತಿಗೆ ಮಾರ್ಗದರ್ಶಕರಾಗಿದ್ದಾರೆ ಎಂಬುದನ್ನ ಉದಾಹರಿಸಿದರು.

ಬಸವ ಜಯಂತಿಯನ್ನು ನಾವು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಬಸವಣ್ಣನವರ ಜಯಂತಿಯನ್ನು ಈ ಗ್ರಾಮದಲ್ಲಿ ಎಲ್ಲ ರೀತಿಯಿಂದ ಅರ್ಥಪೂರ್ಣ, ವೈಶಿಷ್ಟ ಪೂರ್ಣವಾಗಿ ಹಬ್ಬದ ರೀತಿಯಲ್ಲಿ ಆಚರಿಸಿರುವುದು, ಇದು ಬೇರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ವರ್ಷ ವ್ಯಕ್ತಪಡಿಸಿದರು. ಶಾಂತಿ, ಸಹಕಾರ, ಕರುಣೆ ವಿನಯದಿಂದ ಪರಸ್ಪರ ಎಲ್ಲರೂ ಒಗ್ಗೂಡಿ ಬದುಕುವುದೇ ಬಸವ ತತ್ವದ ತಿರಳು ಎಂದು ಪ್ರತಿಪಾದಿಸಿದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾಕ್ಟರ್ ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ ಯಾರು ಬದ್ಧತೆಯನ್ನು ರೂಢಸಿಕೊಂಡಿರುತ್ತಾರೋ, ಅವರು ಸಹಜವಾಗಿ ಸಂಸ್ಕಾರಯುತ ಬದುಕು ನಡೆಸುತ್ತಾರೆ. ವಿಶ್ವದಲ್ಲಿ ಶಾಂತಿ ಬರಬೇಕಾದರೆ ಅದು ಬಸವ ತತ್ವದ ಆಚರಣೆಯಿಂದ ಮಾತ್ರ ಸಾಧ್ಯವೆಂದು ಪ್ರತಿಪಾದಿಸಿದರು. ವಿಶ್ವ ಕುಟುಂಬವು ಶಾಂತಿ ಮತ್ತು ಸಹಭಾವಗಳಿಂದ ಮಾತ್ರ ಸಾಧ್ಯವಿದೆ. ಇದರಿಂದ ಜಗತ್ತಿನಲ್ಲಿ ಯಾವುದೇ ಯುದ್ಧಭೀತಿಗಳು ಬರುವುದಿಲ್ಲವೆಂದು ನುಡಿದರು. ತತ್ವ ಪಾಲನೆ ಮಾಡುವವರು ಶಾಂತಿಯ ಪ್ರಿಯರಾಗಿರುತ್ತಾರೆ.

ಶಾಂತಿಯುತ ಭಾರತದ ಮೇಲೆ ನೆರೆಯ ರಾಷ್ಟ್ರ ಪಾಕಿಸ್ತಾನ ಒಪ್ಪಂದ ಮಾಡಿಕೊಂಡರೂ ಸಹ ನಿಯಮ ಉಲ್ಲಂಘಿಸುತ್ತದೆ. ಕಾರಣ ಅವರಿಗೆ ಸನ್ಮಾರ್ಗ ಶಾಂತಿ ಬೇಕಾಗಿಲ್ಲ. ಅಂಥವರಿಗೆ ಬಸವ ತತ್ವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಹೊಳಲ್ಕೆರೆ ಮಾಜಿ ಶಾಸಕರಾದ ಪಿ. ರಮೇಶ್ ಮಾತನಾಡಿ ಮನುಷ್ಯ ದುರ್ಗುಣಗಳನ್ನು ತ್ಯಜಿಸಿದರೆ ಶರಣಾಗುತಾನೆ. ಅಂತಹ ಶರಣಾಗುವ ಬಗೆ ಬಸವೇಶ್ವರರ ತತ್ವದಲ್ಲಿದೆ.

ಗ್ರಾಮೀಣ ಭಾಗದ ಜನರು ತಮ್ಮ ದುಡಿಮೆಯ ಜೊತೆಜೊತೆಗೆ ಇಂತಹ ತತ್ವದ ವಿಚಾರಗಳನ್ನು ಮನನ ಮಾಡಿಕೊಂಡರೆ ಸ್ವರ್ಗವನ್ನೇ ದರೆಗಿಳಿಸಬಹುದು ಅದನ್ನೇ ಬಸವಾದಿ ಶಿವಶರಣರು ಕಾಯಕ ತತ್ವ ಬೋಧಿಸಿದ್ದಾರೆ. ಅದರಲ್ಲಿ ಎಲ್ಲವು ಅಡಗಿದೆ ಎಂದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಈಚ್ಘಟ್ಟದ ಸಿದ್ಧವೀರಪ್ಪ ಅವರು ಮಾತನಾಡಿ
ಕೇವಲ ಶರಣರ ,ದಾರ್ಶನಿಕರ ಹೆಸರನ್ನ ಶೋಕಿಗಾಗಿ, ಆಡಂಬರಕ್ಕಾಗಿ ,ಭಾಷಣಕ್ಕಾಗಿ ಸೀಮಿತಗೊಳಿಸಿದೆ ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ತತ್ವ ಪ್ರಬುದ್ಧಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ನುಡಿದರು. ಸುಂದರವಾದ ಕಾರ್ಯಕ್ರಮ ಮಾಡಿರುವ ನಾವು ವಚನಗಳನ್ನು ನಮ್ಮ ಜೀವನದ ಅಂಗವಾಗಿ ತೆಗೆದುಕೊಂಡಾಗ ಜೀವನ ಸಮೃದ್ಧವಾಗಿ ಇರಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರ ಕೆ ಎಸ್. ನವೀನ್ ಅವರು ಮಾತಾಡಿ ಬಸವಣ್ಣನವರ ಜಯಂತಿಯನ್ನು ಎಲ್ಲ ವರ್ಗದವರು ಸೇರಿಕೊಂಡು ಮಾಡಿದರೆ ಅದಕ್ಕೆ ನಿಜವಾದ ನಿಜವಾದ ಅರ್ಥ ಬರುತ್ತದೆ. ವಿಶ್ವಕ್ಕೆ ಪ್ರಜಾಪ್ರಭುತ್ವ ತತ್ವವನ್ನು ಪಸರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಿಸುತ್ತದೆ. ಹಾಗಾಗಿ ನಾವು ಕೇವಲ ಔಪಚಾರಿಕವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡದೆ ಜನಸಂಘಟನೆಗಾಗಿ ನಮ್ಮ ಜೀವನದ ಏಳಿಗೆಗಾಗಿ ನೈತಿಕವಾಗಿ ಬದುಕಲು ವಚನ ತತ್ವ ಅಗತ್ಯವಾಗಿದೆ.

ನಾನು ಚಿತ್ರದುರ್ಗದ ಮುರುಘಾಮಠದಲ್ಲಿ ನಡೆದ ಬಸವ ಜಯಂತಿ ಆಚರಣೆ ಸಂದರ್ಭದಲ್ಲಿ ನನಗೆ 100 ಹಳ್ಳಿಗಳನ್ನು ಬಸವತತ್ವ ಪ್ರಚಾರಕ್ಕಾಗಿ ನೇಮಿಸಿ ಕೊಡಿ, ಕಾರ್ಯಕ್ರಮ ಮಾಡಿಸುವ ಜವಾಬ್ದಾರಿ ನನ್ನದು ಎಂದಿದ್ದೆ. ಅಂತಹ ಕಾರ್ಯ ಬರಲಿ, ಹಳ್ಳಿಗಳು ಸುಭಿಕ್ಷವಾಗಿರಲಿ ಅದು ಬಸವಣ್ಣನವರ ಆಶಯದಂತೆ ನಡೆಯಲಿ ಎಂದು ಹೇಳಿದರು.

ಮತ್ತೋರ್ವ ಅತಿಥಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎಸ್. ಗಿರೀಶ್ ಮಾತನಾಡಿ ಹಿಂದಿನ ನಮ್ಮ ಬಸವಣ್ಣ ಎಂದರೆ ಎತ್ತುಗಳನ್ನು ಸ್ನಾನ ಮಾಡಿಸಿ, ಕೊಡುಗಳನ್ನು ಉಜ್ಜಿ ಬಣ್ಣ ಹಚ್ಚಿ ಮೆರವಣಿಗೆ ಮಾಡಿಸುವುದಾಗಿತ್ತು. ಆದರೆ ಈಗ ಬದಲಾವಣೆ ಆದಂತೆ ಎತ್ತು ಅಂದರೆ ಬಸವಣ್ಣ ಅಲ್ಲ, ಅದೊಂದು ತತ್ವ ಎನ್ನುವ ಮನೋಭಾವ ಬಂದು, ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಅಂತಹ ಗಾಳಿಯಲ್ಲಿ ನಾವೆಲ್ಲರೂ ಸೇರಿಕೊಳ್ಳಬೇಕು ಎಂಬ ಸಲಹೆ ನೀಡಿದರು.

ಚಿತ್ರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಕಾಂತರಾಜ್ ಅವರು ಮಾತನಾಡಿ ಬದುಕಿಗೆ ಬೇಕಾದ ಎಲ್ಲಾ ಆದರ್ಶ ಮೌಲ್ಯಗಳು ಬಸವಣ್ಣನವರ ವಿಚಾರಗಳಲ್ಲಿವೆ. ಕಾಯಕವೇ ಕೈಲಾಸ ಎನ್ನುವ ಒಂದು ಸಾಲು ಮಹತ್ವದ್ದಾಗಿದೆ ಎಂದು ಹೇಳಿದರು.

ಕುಂಚಿಗ ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಬ್ರಹ್ಮಪುರದ ಕುಬೇಂದ್ರಪ್ಪ ಅವರು ಬಸವಣ್ಣನವರ ವಿಚಾರವಾಗಿ ಅನೇಕ ಮೌಲ್ಯಯುತ ಮಾತುಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪ ಮಾಡಿ ಅವುಗಳ ಮೇಲೆ ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ಗ್ರಾಮದಲ್ಲಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಹಾಗೆ ನಿನ್ನೆ ನಡೆದ ರಂಗೋಲಿ ಹಾಗೂ ಬಸವೇಶ್ವರ ಭಾವ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ತನು ಮತ್ತು ಸ್ನೇಹ ಅವರಿಗೆ ಪ್ರಥಮ ಬಹುಮಾನ , ಲಕ್ಷ್ಮಿ ಭದ್ರಾಚಾರಿ ಅವರಿಗೆ ದ್ವಿತೀಯ ಬಹುಮಾನ ಹಾಗೂ ಗೌರಮ್ಮ ಮತ್ತು ವಿಜಯಮ್ಮ ಅವರಿಗೆ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹೊಳಲ್ಕೆರೆ ಒಂಟಿಕಂಬದ ಮಠದ ತಿಪ್ಪೇರುದ್ರಸ್ವಾಮಿ, ಕಲ್ಕೆರೆಯ ಬಸವಪೂರ್ಣಾನಂದ ಸ್ವಾಮಿಗಳು ಈ ಕಾರ್ಯಕ್ರಮಕ್ಕೆ ಶಾಸಕರಾದ ಎಮ್ .ಚಂದ್ರಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಅನ್ಯ ಕಾರ್ಯ ನಿಮಿತ್ತ ನಿರ್ಗಮಿಸಿದರು. ಮಾಜಿ ಶಾಸಕರಾದ ಎಂ.ಬಿ. ತಿಪ್ಪೇರುದ್ರಪ್ಪ, ವೀರಭದ್ರೇಶ್ವರದಲ್ಲಿ ಸೇವಾ ಸಮಿತಿ ಕಾರ್ಯದರ್ಶಿ ಯು.ಎಸ್. ಉಜ್ಜನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ಕಲ್ಲೇಶ್,ಹೆಚ್ಡಿ ಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವಾಕರ್, ಅಪ್ಫರನಸ್ಹಹಳ್ಳಿ ಗ್ರಾಮ ಪಂಚಾಯತಿ ಸದಸ್ಯರ ದಯಾನಂದ್ ,ಎಚ್ .ಡಿ. ಪುರದ ಬಸವ ತತ್ವ ಚಿಂತಕ ಅಣ್ಣಪ್ಪ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಮುಖ್ಯಸ್ಥ ,ವಕೀಲರಾದ ಡಿ.ಎಂ. ಪ್ರಸನ್ನ ಕುಮಾರ್ ಅವರು ವಹಿಸಿ ನಡೆಸಿಕೊಟ್ಟರು.

ಸಮಾರಂಭದ ಆರಂಭಕ್ಕೆ ಚಿತ್ರದುರ್ಗ ಮುರಘಾಮಠದ ಮಠದ ಜಮರಾಕಲಾ ಲೋಕದ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ಯು.ಎಸ್. ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಇವರು ಸ್ವಾಗತಿಸಿದರು. ವಕೀಲ ಮೂಲೆಮನೆ ಪರಮೇಶ್ವರ ಕಾರ್ಯಕ್ರಮ ನಿರ್ವಹಿಸಿರೆ ನಿವೇದ ಶರಣು ಸಮರ್ಪಣೆಯನ್ನು ಯು.ಆರ್. ಉಜ್ಜೀನಸ್ವಾಮಿ ನೆರವೇರಿಸಿದರು.

ಗ್ರಾಮದ ಯುವಕರು, ಹಿರಿಯರು ,ಮಹಿಳೆಯರು, ಮಕ್ಕಳು ಅತಿ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಹಾಗೆಯೇ ಈಚಘಟ್ಟ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಸಮಾರಂಭದ ರಾಜಭೀದಿಯಲ್ಲಿ ಮಹಾಸ್ವಾಮಿಗಳವರನ್ನು ಅತಿಥಿಗಳನ್ನು ಮೆರವಣಿಗೆ ಮೂಲಕ ಭಕ್ತರು ,ಅಭಿಮಾನಿಗಳು ಸ್ವಾಗತಿಸಿ ವೇದಿಕೆಯತ್ತ ಕರೆತಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *