ಬಸವ ಜಯಂತಿ: ವಿಜಯೇಂದ್ರ ಅಭಿಮಾನಿಗಳ ಗದ್ದಲದಿಂದ ಹೊರನಡೆದ ಗಣೇಶ್ ಪ್ರಸಾದ್

ಬಸವ ಮೀಡಿಯಾ
ಬಸವ ಮೀಡಿಯಾ

ಒಗ್ಗಟ್ಟಿನಿಂದ ಪಕ್ಷಾತೀತವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಬಂದ ಒಡಕು

ನಂಜನಗೂಡು

ವಿಜಯೇಂದ್ರ ಅಭಿಮಾನಿಗಳ ಗದ್ದಲದಿಂದ ಬೇಸೆತ್ತು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಭಾಷಣ ಮೊಟಕುಗೊಳಿಸಿ ರವಿವಾರ ಬಸವ ಜಯಂತಿ ಕಾರ್ಯಕ್ರಮದಿಂದ ಹೊರನಡೆದರು.

ಪಟ್ಟಣದಲ್ಲಿ ಪಕ್ಷಾತೀತವಾಗಿ ನಡೆದ ಅದ್ದೂರಿ ಬಸವ ಜಯಂತಿಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಈಶ್ವರ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ದರ್ಶನ್ ಧ್ರುವನಾರಾಯಣ ಪ್ರಮುಖವಾಗಿ ಪಾಲ್ಗೊಂಡಿದ್ದರು.

ತಾಲೂಕು ವೀರಶೈವ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 5,000 ಜನ ಪಾಲ್ಗೊಂಡಿದ್ದರು ಎಂದು ಅಂದಾಜು ಮಾಡಲಾಗಿದೆ.

ಖಂಡ್ರೆ, ಧ್ರುವನಾರಾಯಣ ಅವರ ಭಾಷಣದ ನಂತರ ಗಣೇಶ್ ಪ್ರಸಾದ್ ಮಾತನಾಡಲು ಎದ್ದು ನಿಂತಾಗ ಪ್ರಕ್ಷಕರಲ್ಲಿದ್ದ ಗುಂಪೊಂದು ‘ವಿಜಯೇಂದ್ರ ವಿಜಯೇಂದ್ರ’ ಎಂದು ಜೋರಾಗಿ ಕೂಗಲು ಶುರು ಮಾಡಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಭಾಷಣ ಮೊಟಕುಗೊಳಿಸಿ ಗಣೇಶ್ ಪ್ರಸಾದ್ ವೇದಿಕೆಯಿಂದ ನಿರ್ಗಮಿಸಿದರು.

ವಿಜಯೇಂದ್ರ ಅಭಿಮಾನಿಗಳು ಗಣೇಶ್ ಪ್ರಸಾದ್ ಅವರ ಭಾಷಣಕ್ಕೆ ಅಡ್ಡಿಪಡಿಸಿ ಅವಮಾನ ಮಾಡಿದ್ದು ಸರಿಯಲ್ಲ ಎಂದು ವೀರಶೈವ ಮಹಾಸಭಾದ ನಿರ್ದೇಶಕ ದೇಬೂರು ಅಶೋಕ್ ಖಂಡಿಸಿದರು.

ಮೈಸೂರು ಭಾಗದಲ್ಲಿ ಗಣೇಶ್ ಪ್ರಸಾದ್ ಅವರು ಲಿಂಗಾಯತ ಸಮಾಜದ ಪ್ರಭಾವಿ ಮುಖಂಡರಾಗಿದ್ದಾರೆ. ನಮ್ಮ ಕ್ಷೇತ್ರದ ಶಾಸಕರಲ್ಲದಿದ್ದರೂ ಸಹ ಬಸವಣ್ಣನವರ ಮೇಲಿನ ಅಭಿಮಾನದಿಂದ ಬಸವ ಜಯಂತಿ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ನೆರವು ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವ ಬದಲು ಅವಮಾನ ಮಾಡಲಾಯಿತು. ಅಭಿಮಾನಿಗಳನ್ನು ನಿಯಂತ್ರಿಸಬೇಕಾಗಿದ್ದವರು ಮೂಕ ಪ್ರೇಕ್ಷಕರಾಗಿದ್ದರು.

“ಘಟನೆಯಿಂದ ಅಸಮಾಧಾನಗೊಂಡ ಸುತ್ತೂರು ಶ್ರೀಗಳು ಕೂಡ ಕೊನೆಯಲ್ಲಿ ಆಶೀರ್ವಚನ ನೀಡಲು ನಿರಾಕರಿಸಿದರು,” ಎಂದು ದೇಬೂರು ಅಶೋಕ್ ಹೇಳಿದರು.

ಸುತ್ತೂರು ಶ್ರೀಗಳು ಬೇರೆ ಕಾರ್ಯಕ್ರಮವಿರುವುದರಿಂದ ಆಶೀರ್ವಚನ ನೀಡುವುದಿಲ್ಲವೆಂದು ಮುಂಚೆಯೇ ಹೇಳಿದ್ದರು ಎಂದು ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಹೇಳಿದರು.

“ಸಭೆಯಿಂದ ಗಣೇಶ್ ಪ್ರಸಾದ್ ಹೊರನಡೆದ ಮೇಲೆ ಅವರನ್ನು ಮತ್ತೆ ಕರೆಯಲು ಹಿಂದೆಯೇ ಹೋದೆ. ಆದರೆ ಅಷ್ಟರಲ್ಲಿಯೇ ಅವರು ಕಾರು ಹತ್ತಿ ಹೊರಟುಹೋಗಿದ್ದರು. ಪ್ರಮಾದ ನಡೆದು ಹೋಗಿದೆ. ವೀರಶೈವ ಮಹಾಸಭಾ ತಾಲೂಕು ಘಟಕದ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿದ್ದ ವಿಶ್ವ ಬಸವ ಸೇನೆಯ ಸೇನೆಯ ಬಸವ ಯೋಗೀಶ್, “ಇದು ಕಿಡಿಗೇಡಿಗಳು, ಅಪ್ರಬುದ್ದರು ಮಾಡಿರುವ ಕೆಲಸ. ಸಮಾಜ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಒಡಕು ತಂದರು,” ಎಂದು ಹೇಳಿದರು.

ಗುಂಡ್ಲುಪೇಟೆಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಬೇರೆಯವರು ಭಾಷಣ ಮಾಡಿದಾಗ ಸುಮ್ಮನಿದ್ದ ಜನ ಗಣೇಶ್ ಪ್ರಸಾದ್ ಅವರಿಗೆ ಮಾತ್ರ ಯಾಕೆ ಅಡ್ಡಿ ಪಡಿಸಿದರು ಎಂದು ಕೇಳಿದರು. “ಇದು ನಮ್ಮ ಕ್ಷೇತ್ರದ ಆಚೆ ಗಣೇಶ್ ಪ್ರಸಾದ್ ಅವರ ಪ್ರಭಾವ ಬೆಳೆಯಬಾರದೆಂದು ನಡೆದಿರುವ ಕೆಲಸ. ಹಾಗಾದರೆ ಗುಂಡ್ಲುಪೇಟೆಯಲ್ಲಿ ಬೆಂಬಲ ಬೇಡವೇ ಎಂದು ವಿಜಯೇಂದ್ರ ಯೋಚಿಸಬೇಕು,” ಎಂದು ಹೇಳಿದರು.

ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಪಕ್ಷದ ಆಧಾರದ ಮೇಲೆ ಘಟನೆಯನ್ನು ಟೀಕಿಸುತ್ತಿದ್ದಾರೆ.

ಘಟನೆಯ ಮುಂಚೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ದುಡಿಮೆಯ ಹಿರಿಮೆಯನ್ನು ಸಾರಿದ್ದರು, ದುಡಿಮೆಗೆ ಬೆಲೆ ನೀಡಿದರೆ ಬಡತನ ನಿರ್ಮೂಲನೆ ಶತಃಸಿದ್ದ, ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ವಿಜಯೇಂದ್ರ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಈಗಿನ ರಾಜಕಾರಣಿಗಳು ಬಸವಣ್ಣನವರ ಹೆಸರು ಬಳಸಿಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ. ಬಸವಣ್ಣನವರ ಫೋಟೋಗಳನ್ನು ಕಚೇರಿಗಳಲ್ಲಿ ಇರಿಸಿದರಷ್ಟೇ ಸಾಲದು, ಸಮಾಜದ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರು ಬೇಕಾಗಿದ್ದಾರೆ, ಎಂದು ಹೇಳಿದರು.

ವೀರಶೈವರು ಬೇರೆ ಲಿಂಗಾಯಿತರು ಬೇರೆ ಎಂದು ವಿಂಗಡಣೆ ಮಾಡಬಾರದು. ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತರಲ್ಲಿ ಏಕತೆಯನ್ನು ಮೂಡಿಸಿ ಎಲ್ಲಾ ಒಳ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ ಎಂದರು.

ಮೆರವಣಿಗೆ

ಇದಕ್ಕೂ ಮುನ್ನ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ಆಕರ್ಷಕ ಕಲಾ ತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗಾವಡಗೆರೆ ಗುರು ಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತ ಮಠದ ಶ್ರೀ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಖಾದಿ ಗ್ರಾಮೋ ದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಕಾರ್ಯದರ್ಶಿ ಶಿವಪ್ಪದೇವರು, ಹಗಿನವಾಳು ಚೆನ್ನಪ್ಪ, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಗುರು ಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ವೀರಶೈವ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ. ಬಸವಣ್ಣ, ಮುಖಂಡರಾದ ಮಹದೇವಪ್ಪ, ಶ್ಯಾಂಪಟೇಲ್, ಅಶೋಕ್, ಕಣೆನೂರು ಪರಶಿವ ಮೂರ್ತಿ, ನಾಗೇಶ್ ರಾಜ್, ಬದನವಾಳು ಮಹೇಶ್, ಹಾಡ್ಯ ಶಂಕರ್, ಯುವ ಘಟಕ ಅಧ್ಯಕ್ಷ ಮಲ್ಕುಂಡಿ ಮಹಾದೇವಸ್ವಾಮಿ ಮೊದಲಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
6 Comments
  • ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಅನಂತ ಶರಣು

  • ವೀರಶೈವ ಧರ್ಮ ಮತ್ತು ಲಿಂಗಾಯತ ಧರ್ಮದ ಅಂತರ ತಿಳಿಯದ ಅಯೋಗ್ಯ ಒಂದು ಪಕ್ಷದ ಅಧ್ಯಕ್ಷ ಆಗಿದ್ದಾನೆ.
    ಆಯೋಗ್ಯನನ್ನು ತಂದು ಅನಪಡ ಮೋದಿ ಕುರಿಸಿದ್ದು, ಕಾಗೆ ಕೈಯಲ್ಲಿ ಕಚೇರಿ ಕೊಟ್ಟಂತೆ ಆಗಿದೆ.

    ಮೂರ್ಖ ವಿಜೇಂದ್ರ ರಾಜಕೀಯ ಮಾಡಲು, ಹೇಸಿಗೆ ತಿನ್ನುವ ಕೆಲಸ ಮಾಡಿ, ಎರಡು ಒಂದೇ ಅನ್ನಬೇಡ.
    ನಾಲಾಯಕ ವಿಜೇಂದ್ರ, ಅನುಭವ ಮಂಟಪ ಬೇಕಿತ್ತೆ ಅಂತ ಕೇಳಿದ್ದಾನೆ. ಈತನಿಗೆ ಬೆಂಬಲಿಸುವ ಲಿಂಗಾಯತರು ನಾಲಾಯಕರು.

  • ವಿಜಯೇಂದ್ರ ಬ್ರಷ್ಟ ಹಣದಿಂದ ಬಸವ ತತ್ವದ ಮೇಲೆ ಆಧಾರಿತ ಆಗಿರುವ ಲಿಂಗಾಯತ ಧರ್ಮ ದ ಜೊತೆ ಬಸವ ತತ್ವಗಳ ತದ್ವಿರುದ್ಧ ಇರುವ ವೀರಶೈವ ತತ್ವಗಳನ್ನು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಲವಂತವಾಗಿ ಸೇರಿಸಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂಚಕಾರ ತರುವ ಕೆಲಸ ಮಾಡುತ್ತಿದ್ದಾರೆ. ವಚನೂಕ್ತ ಲಿಂಗಾಯತ ಧರ್ಮ ಮತ್ತು ಆಗಮೋಕ್ತ ವೀರಶೈವ ಧರ್ಮ ಒಂದೇ ಆಗಲು ಸಾಧ್ಯವಿಲ್ಲ. ಸ್ವಾರ್ಥ ಸಾಧನೆಗಾಗಿ ಸಮಾಜಮುಖಿ ಚಿಂತನೆ ಹೊಂದಿರುವ ಲಿಂಗಾಯತ ಧರ್ಮಕ್ಕೆ ಚ್ಯುತಿ ಬಾರದಂತೆ ರಾಜಕೀಯ ನಾಯಕರು ನಡೆದುಕೊಳ್ಳ ಬಾರದು.

  • ಇದೊಂದು ನಡೆಯಬಾರದಾಗಿದ್ದ ಘಟನೆ. ಕೇವಲ ರಾಜಕೀಯ ಅಧಿಕಾರಕ್ಕೋಸ್ಕರ ಜನರನ್ನು ಧರ್ಮದ ಆಧಾರದಲ್ಲಿ ಸಂಘಟಿಸಿದರೆ ಇಂತಹ ದುರ್ಘಟನೆಗಳು ನಡೆಯುತ್ತವೆ. ಧರ್ಮದ ಮತ್ತು ಅದರ ಆಚರಣೆಯ ಲವಲೇಶವೂ ತಿಳಿಯದೆ ಕೇವಲ ಹಣದಿಂದಲೇ ಒಂದು ಸಮೂಹದ ನಾಯಕನಾಗಬಲ್ಲೆ ಎಂಬ ಹಣದ ಮದ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. ವಿಜಯೇಂದ್ರ ಹೋದಲ್ಲೆಲ್ಲ ಅಥವಾ ಭಾಗವಹಿಸಿದಡೆಯೆಲ್ಲಾ ಅವರ ಪಡೆಯ ಇಂತಹ ವರ್ತನೆಗಳು ಹಲವು ಬಾರಿ ಗಮನಕ್ಕೆ ಬಂದಿವೆ.

    ವೀರಶೈವರು ಮತ್ತು ಲಿಂಗಾಯತರನ್ನು ನಿಮ್ಮ ಹಣ ಬಲ, ತೋಳ್ಬಲ ಮತ್ತು ಅಧಿಕಾರ ಕೇಂದ್ರಿತ ರಾಜಕೀಯದಿಂದ ದೂರವಿಡಿ. ಲಿಂಗಾಯತ ಮತ್ತು ವೀರಶೈವದ ಮೂಲ ಸಿದ್ಧಾಂತಗಳು, ನಂಬಿಕೆಗಳು ಮತ್ತು ಆಚರಣೆಗಳಿಗೆ ಒಂದುಮಾಡಲಾಗದ ಭಿನ್ನತೆಯಿದೆ. ಬೇರೆ ಬೇರೆ ಇರಲಿಬಿಡಿ. ವೀರೇಶೈವರಿಗೂ ಹಿಂದೂ ಧರ್ಮದಿಂದ ಬೇರ್ಪಟ್ಟು ಪ್ರತ್ಯೇಕ ವೀರಶೈವ ಧರ್ಮದ ಮಾನ್ಯತೆ ಬೇಕಿದ್ದಲ್ಲಿ ಹೋರಾಟ ಮಾಡಲು ಯಾರ ಅಡ್ಡಿಯೂ ಇಲ್ಲ. ಆದರೆ, ಲಿಂಗಾಯತ ಧರ್ಮದ ಪ್ರತ್ಯೇಕ ಮಾನ್ಯತೆಗೆ ತಡೆಯೊಡ್ಡುವುದು ಮಾನ್ಯವಲ್ಲ. ರಾಜಕಾರಣಿಗಳು ಈ ವಿಷಯವನ್ನು ಗಂಭೀರವಾಗಿ ಚಿಂತಿಸಲಿ.

  • ಲಿಂಗಾಯತ ಧರ್ಮದ ಬಸವ ಜಯಂತಿ ಅಥವಾ ಧರ್ಮದ ಯಾವುದೇ ಸಭೆ ಸಮಾರಂಭಗಳನ್ನು ನಡೆಸುವ ಸಂಘಟಕರು ದಯಮಾಡಿ ನಾಲಾಯಕ್ ರಾಜಕಾರಣಿಗಳನ್ನು ಕರೆಯದೆ,ಬಸವ ತತ್ವಗಳನ್ನು ನಂಬಿದ ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡ , ಜಾತಿ ಭೇದಗಳೆನ್ನದೆ ಕಾಯಕದಿಂದಲೆ ಜೀವನ ಸಾಗಿಸುತ್ತಿರುವ ಸಾಮಾನ್ಯ ಜನರು (ವಚನ ಕಲಿತ) ಇಂತವರನ್ನು ಇಟ್ಟುಕೊಂಡು ಕಾರ್ಯಕ್ರಮ ನಿರೂಪಿಸಿದರೆ “ಲಿಂಗಾಯತ” ಧರ್ಮ ಎನ್ನುವುದು ಹಿಮಾಲಯ ಪರ್ವತ ಮೀರಿ ಬೆಳೆಯುವದರಲ್ಲಿ ಯಾವುದೇ ಸಂದೆೀಹವಿಲ್ಲ ಓಂ ಶ್ರೀ ಗುರು ಬಸವಲಿಂಗಾಯ ನಮಃ

Leave a Reply

Your email address will not be published. Required fields are marked *