“ಪೀಠದಲ್ಲಿ ಸ್ವಾಮೀಜಿಗಳು ಇರುವುದು ಕಡಿಮೆ, ಅದನ್ನು ಟೂರಿಂಗ್ ಟಾಕೀಸ್ ತರಹ ಮಾಡಿದ್ದಾರೆ.”
ಬಾಗಲಕೋಟೆ
ಕೂಡಲ ಸಂಗಮದಲ್ಲಿರುವ ಪಂಚಮಸಾಲಿ ಪೀಠದ ಕಟ್ಟಡಕ್ಕೆ ಬೀಗ ಹಾಕಿರುವುದು ರಾಜ್ಯದಲ್ಲಿ ಭಾರಿ ಚರ್ಚೆ ಸೃಷ್ಟಿಸಿದೆ.
ಇದರ ಬಗ್ಗೆ ಮಾಧ್ಯಮಗಳಿಗೆ ಇಂದು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ “ಪೀಠದಲ್ಲಿ ಸ್ವಾಮೀಜಿಗಳು ಇರುವುದು ಕಡಿಮೆ, ಅದನ್ನು ಟೂರಿಂಗ್ ಟಾಕೀಸ್ ತರಹ ಮಾಡಿದ್ದಾರೆ.
ಹೀಗಾಗಿ ಅದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿತ್ತು. ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಅದಕ್ಕೆ ಬೀಗ ಹಾಕಿಸಿದ್ದೇನೆ. ನಾನು ಪೀಠದ ಟ್ರಸ್ಟ್ ಅದ್ಯಕ್ಷನಾಗಿದ್ದೇನೆ. ನನ್ನ ಟ್ರಸ್ಟ್ ಕಾಪಾಡಿಕೊಳ್ಳುವುದು ನನ್ನ ಕರ್ತವ್ಯ,” ಎಂದು ಹೇಳಿದರು.
ಕಟ್ಟಡದ ನಿರ್ವಾಹಕ ಚಂದ್ರಶೇಖರ್ ಚಿತ್ತರಗಿ ಮಾಧ್ಯಮಗಳ ಜೊತೆ ಮಾತನಾಡಿ ಇಲ್ಲಿ ಯಾರೂ ಇಲ್ಲದ್ದರಿಂದ ಗೇಟಿಗೆ ಬೀಗ ಹಾಕಿದೇನಿ. ಸ್ವಾಮೀಜಿ ಬಂದರೆ ಬೀಗ ಕೊಡುತ್ತೇನೆ, ಎಂದು ಹೇಳಿದರು. “ಇಲ್ಲಿ ಯಾರೂ ಇಲ್ಲದಿದ್ದರೆ ಹಾಗೆ ಬಿಟ್ಟು ಹೋಗಬೇಕಾ,” ಎಂದು ಕೇಳಿದರು.
ನಾಲ್ಕು ದಿನದ ಹಿಂದೆ ಹಾಕಿದ್ದ ಬೀಗವನ್ನು ಭಾನುವಾರ ತೆಗೆಯುವ ಪ್ರಯತ್ನ ಆಗಿದೆ ಎಂದು ಕಾಶಪ್ಪನವರ್ ಬೆಂಬಲಿಗರು ಹುನಗುಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ನಂತರ ಪೀಠದ ಬೀಗ ಒಡೆದ ಆರೋಪದ ಮೇರೆಗೆ ಐದು ಜನರ ವಿರುದ್ಧ ಎಫ್ಐಆರ್ ಕೂಡ ಆಗಿದೆ.
ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಮೃತ್ಯಂಜಯ ಶ್ರೀಗಳು ನಾನು ಸಮಾಜ ಮೀಸಲಾತಿ ಹೋರಾಟಕ್ಕೆ ಸಮಾಜದ ಜನರನ್ನು ಸಂಘಟಿಸಲು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಆದ್ದರಿಂದ ಪೀಠದ ಕಡೆಗೆ ಹೋಗಲು ಆಗಿಲ್ಲ. ವಿವಾದ ಬೆಳೆಸುವುದು ಬೇಡ, ಕೂಡಲ ಸಂಗಮಕ್ಕೆ ಹೋಗಿ ಬೀಗ ಹಾಕಿರುವವರ ಮನ ಒಲಿಸಲು ಪ್ರಯತ್ನಿಸುವುದಾಗಿ ಹೇಳಿದರು.