ಜಯಮೃತ್ಯುಂಜಯ ಶ್ರೀ ಬೆಂಬಲಕ್ಕೆ ಬಂದ ಬಿಜೆಪಿ ನಾಯಕರು

ಬಾಗಲಕೋಟೆ

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಜೊತೆ ನಡೆಯುತ್ತಿರುವ ಜಟಾಪಟಿಯ ಹಿನ್ನಲೆಯಲ್ಲಿ ಹಲವಾರು ಬಿಜೆಪಿ ನಾಯಕರು ಪೀಠದ ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಬೆಂಬಲ ಸೂಚಿಸಿದ್ದಾರೆ.

ನಗರದ ಕೆರೂಡಿ ಆಸ್ಪತ್ರೆಯಲ್ಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಗ್ಯ ವಿಚಾರಿಸಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠ ಕಟ್ಟಲು ಹಣ ಕೊಟ್ಟವರು ಮುರುಗೇಶ ನಿರಾಣಿ. ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಪೀಠಕ್ಕೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕೊಡುಗೆ ಏನು?’ ಎಂದು ಪ್ರಶ್ನಿಸಿದರು.

‘ಪಾದಯಾತ್ರೆಗೆ, ಪತ್ನಿಗೆ ಟಿಕೆಟ್ ಬೇಕಾದಾಗ ಸ್ವಾಮೀಜಿ ಬೇಕಾಗಿದ್ದರು. ದೆಹಲಿಗೆ ಕರೆದುಕೊಂಡು ಹೋಗಿದ್ದರು. ಎಲ್ಲವನ್ನೂ ಸಮಾಜ ನೋಡುತ್ತಿದೆ’ ಎಂದರು.

‘ಮಠಕ್ಕೆ ಕೀಲಿ ಹಾಕಿ. ಕಾವಲಿಗೆ ಬೇರೆ ಸಮಾಜದವರನ್ನು ನೇಮಿಸಿ. ಬಂದವರ ಫೋಟೊ ತೆಗೆಯುವುದು ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸ್ವಾಮೀಜಿ ಹಣಕ್ಕಾಗಿ ಆಸೆ ಪಟ್ಟವರಲ್ಲ. ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲ. ಯಾವುದೇ ಊರಿಗೆ ಹೋದರೆ ಭಕ್ತರ ಮನೆಯಲ್ಲಿರುತ್ತಾರೆ. ಅವರು ನಮ್ಮ ಸರ್ಕಾರದ ವಿರುದ್ಧವೇ ಹೋರಾಟ ಮಾಡಿದ್ದರು. ಹೋರಾಟಕ್ಕೆ ನಾವೂ ಬೆಂಬಲ ಕೊಟ್ಟಿದ್ದೆವು’ ಎಂದು ನೆನಪಿಸಿಕೊಂಡರು.

‘ನಮ್ಮ ಆಸ್ತಿ ಕಾಶಪ್ಪನವರ ತೆಗೆದುಕೊಂಡಿಲ್ಲ. ನಾನು ಅವರ ಆಸ್ತಿ ತೆಗೆದುಕೊಂಡಿಲ್ಲ. ಅವರ ಅಜೆಂಡಾ ಬೇರೆ ಇದೆ. ಭಿನ್ನಾಭಿಪ್ರಾಯವಿದ್ದರೆ ಚರ್ಚಿಸಿ, ಬಗೆಹರಿಸಿಕೊಳ್ಳೋಣ’ ಎಂದರು.

ಸಮಾಜ ಮುಖ್ಯ, ಟ್ರಸ್ಟ್ ಅಲ್ಲ

‘ಸಮಾಜ ಮುಖ್ಯವೇ ಹೊರತು, ಟ್ರಸ್ಟ್ ಮುಖ್ಯವಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.

ಭಾನುವಾರ ಕೆರೂಡಿ ಆಸ್ಪತ್ರೆಯಲ್ಲಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿ ಅವರು ಮುಗ್ಧ ಜೀವಿ. ಅವರು ಒಂದೆಡೆ ನಿಲ್ಲುವವರಲ್ಲ. ಅವರ ಹೋರಾಟಕ್ಕೆ ನಮ್ಮ‌ ಬೆಂಬಲವಿದೆ. ಶೀಘ್ರದಲ್ಲಿ ಸಮಾಜದ‌ ಮುಖಂಡರ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಭೆಗೆ ಎಲ್ಲರಿಗೂ ಮುಕ್ತ ಆಹ್ವಾನ ಇರುತ್ತದೆ’ ಎಂದರು.

‘ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಹಾಗೂ ಸ್ವಾಮೀಜಿಗಳ ಹೋರಾಟಕ್ಕೆ ಮಣಿದು ಸರ್ಕಾರ 2ಸಿ, 2ಡಿ ಮೀಸಲಾತಿ ನೀಡಿತ್ತು. ಹೋರಾಟ ಸಂದರ್ಭದಲ್ಲಿ ನಮ್ಮೊಂದಿಗಿದ್ದ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಸರ್ಕಾರ ರಚನೆ ನಂತರ ನಮ್ಮೊಂದಿಗೆ ನಿಲ್ಲಲಿಲ್ಲ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಮಾಡುತ್ತಿದ್ದ ಸ್ವಾಮೀಜಿ ಹಾಗೂ ನಮ್ಮ ಮೇಲೆ ಲಾಠಿ ಚಾರ್ಚ್ ಮಾಡಲಾಯಿತು’ ಎಂದು ಹೇಳಿದರು.

‘ಸ್ವಾಮೀಜಿ ಎಂದೂ ಮಠದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಬಸವಣ್ಣ ಹೇಳಿದಂತೆ ನಡೆಯುತ್ತಾ ರಾಜ್ಯದೆಲ್ಲೆಡೆ ಸಂಚರಿಸಿ ಸಮಾಜ‌ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಠದಲ್ಲಿ ಅವ್ಯವಹಾರ ಆಗಿದೆ ಎಂಬ ಹೇಳಿಕೆ ತಪ್ಪು. ಇದನ್ನು ಸಮಾಜ ವಿರೋಧಿಸುತ್ತದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.

‘ಸಮಾಜದ ಒಗ್ಗಟ್ಟು ತೋರಿಸುತ್ತೇವೆ’

ಮಾಜಿ ಶಾಸಕ ಶಿವಶಂಕರ‌ ಎಚ್. ಮಾತನಾಡಿ, ‘ಹಿಂದೆಯೂ ಈ ರೀತಿಯ ಗೊಂದಲವಾದಾಗ ಇಬ್ಬರೊಂದಿಗೆ ಮಾತನಾಡಿ‌ ಸಮಸ್ಯೆ ತಿಳಿಗೊಳಿಸಲಾಗಿತ್ತು. ಸ್ವಾಮೀಜಿ ಯಾರ ಕಪಿಮುಷ್ಟಿಯಲ್ಲಿ ಇಲ್ಲ. ಯಾವ ಪಕ್ಷದ ಏಜೆಂಟರೂ ಅಲ್ಲ. ವೈಯಕ್ತಿಕ ಹೇಳಿಕೆಗಳಿಂದ ಗೊಂದಲವಾಗಿದ್ದು, ಎಲ್ಲವನ್ನೂ ಸರಿಪಡಿಸುತ್ತೇವೆ. ಸ್ವಾಮೀಜಿಗಳಿಗೆ ಮೌನವಾಗಿರುವಂತೆ ತಿಳಿಸಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿದು ಸಮಾಜದ ಒಗ್ಗಟ್ಟು ತೋರಿಸುತ್ತೇವೆ’ ಎಂದು ಹೇಳಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ,ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಆಸ್ಪತ್ರೆಗೆ ಆಗಮಿಸಿ ಬಸವಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯ ವಿಚಾರಿಸಿದರು.

ಸ್ವಾಮೀಜಿ ಡಿಸ್‌ಚಾರ್ಜ್: ಚಿಕಿತ್ಸೆ ಬಳಿಕ ಸ್ವಾಮೀಜಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಆದರು. ‘ನೇರವಾಗಿ ಪೀಠಕ್ಕೆ ಹೋಗುತ್ತಿದ್ದೇನೆ. ಇನ್ನೂ ಎರಡು ದಿನ ಅಲ್ಲಿಯೇ ಇರುತ್ತೇನೆ. ಭಕ್ತರು ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *