ಬಸವ ತತ್ವದಿಂದ ಹಿಂದುತ್ವಕ್ಕೆ ಹೊರಳಿದ ಜಯಮೃತ್ಯುಂಜಯ ಶ್ರೀ

ಕೂಡಲಸಂಗಮ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ, ಭೌತಿಕ ಕಟ್ಟಡಗಳಿಂಗಿಂತ ಸಮಾಜ ಸಂಘಟನೆ ಮುಖ್ಯ, ಮಠ ಕಟ್ಟದೇ ಸಮಾಜ ಸಂಘಟನೆ ಮಾಡಿದ್ದೇನೆ ಎಂದು ಹೇಳಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನಡುವಿನ ಜಗಳ ತಾರಕಕ್ಕೆ ಏರಿ ಬೀದಿಗೆ ಬಂದು ನಿಂತಿದೆ, ಹಲವು ಘಟನೆಗಳಿಗೂ ಸಾಕ್ಷಿಯಾಗಿದೆ.

ದಾವಣಗೆರೆ ಮುರುಘಾ ಮಠದಲ್ಲಿ ಇದ್ದ ಬಸವಜಯಮೃತ್ಯುಂಜಯ ಶ್ರೀಗಳು ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿ ೨೦೦೮ ಫೆಬ್ರವರಿ ೮ ರಂದು ಪೀಠಾರೋಹಣ ಮಾಡಿದರು. ನಾಡಿನ ಲಿಂಗಾಯತ, ಬಸವತತ್ವದ ಮಠಾಧೀಶರು ಈ ಪೀಠಾರೋಹಣಕ್ಕೆ ಸಾಕ್ಷಿಯಾಗಿದ್ದರು. ಕೆಲವು ದಿನಗಳ ನಂತರ ದಾವಣಗೆರೆಯಿಂದ ಕೂಡಲಸಂಗಮಕ್ಕೆ ಬಂದಾಗ ಗ್ರಾಮದ, ಸಮಾಜದ ಮುಖಂಡರು ಕೂಡಲಸಂಗಮ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಚಿಕ್ಕಕೋಣೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ೨೦೦೮ ರಿಂದ ೨೦೧೫ರವರೆಗೆ ಆ ಸ್ಥಳವನ್ನೇ ಮಠವಾಗಿ ಮಾಡಿಕೊಂಡು ಸಮಾಜ ಸಂಘಟನೆ ಮಾಡುತ್ತ, ಮೌಢ್ಯವಿರೋಧಿ ಚಳುವಳಿ, ಕೋಮುಸೌಹಾರ್ದತೆ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಿದರು.

ರಾಷ್ಟ್ರೀಯ ಬಸವ ಪುರಸ್ಕಾರವನ್ನು ಅಣ್ಣಾ ಹಜಾರೆ, ಮೇದಾ ಪಾಟ್ಕರ್, ತ್ರಿಪುರ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ, ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ನೀಡುವ ಮೂಲಕ ನಾಡಿನ ಜನರಿಗೆ ಹತ್ತಿರವಾದರು.

ಜೀವವಿರೋಧಿ ಹಿಂದುತ್ವ ಆಚರಣೆಗಳನ್ನು ಖಂಡಿಸಿ, ವಿರೋಧಿಸಿದ್ದರಿಂದ ಬಲಪಂಥಿಯರ ವಿರೋಧಕ್ಕೆ ಕಾರಣರಾಗಿ, ಪ್ರಗತಿಪರರು, ಎಡಪಂಥಿಯರಿಗೆ ಹತ್ತಿರವಾದರು. ಗೋವಾ ಕನ್ನಡಿಗರಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಗೋವಾದಲ್ಲಿ ಹೋರಾಟ ಮಾಡಿದರು, ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡರು, ಕೃಷ್ಣಾ ನದಿಯ ಕುರಿತು ಮಹಾರಾಷ್ಟ್ರ ಸರ್ಕಾರ ಖ್ಯಾತೆ ಎತ್ತಿದಾಗ ಪ್ರತಿಭಟಿಸಿದರು. ಶ್ರೀಗಳ ಹೋರಾಟದ ಉತ್ಸಾಹವನ್ನು ಮೆಚ್ಚಿ ಜನರು ಹತ್ತಿರವಾದರು.

ಬಸವಾದಿ ಶರಣರ ಚಿಂತನೆಗಳನ್ನು ನುಡಿಯುತ್ತ, ಪ್ರತಿಪಾದಿಸುತ್ತ ೨೦೧೭, ೨೦೧೮ರಲ್ಲಿ ನಡೆದ ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡು ಬಸವ ಭಕ್ತರಿಗೆ ಹತ್ತಿರವಾದರು. ಪಂಚಮಸಾಲಿ ಸಮಾಜದ ಜನರು ಲಿಂಗಾಯತ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಪಂಚಮಸಾಲಿ ಪೀಠ ಕೃಷಿ ಪೀಠವಾಗಿದೆ ಎಂದು ಹೇಳಿದರು.

೨೦೨೧ರಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ೭೦೦ ಕಿ.ಮೀ ಪಾದಯಾತ್ರೆ ಕೈಗೊಂಡು ಪಂಚಮಸಾಲಿ ಶಕ್ತಿ ಪದ್ರರ್ಶನವನ್ನು ಬೆಂಗಳೂರಿನಲ್ಲಿ ಮಾಡಿದರು. ಸಮಾಜದ ಜನರನ್ನು ಒಗ್ಗೂಡಿಸಿದರು. ರಾಜ್ಯ, ರಾಷ್ಟ್ರಮಟ್ಟದ ಗಮನ ಸೆಳೆದರು.

ಕಳೆದ ಎರಡು ವರ್ಷದಲ್ಲಿ ಶ್ರೀಗಳು ಹಿಂದುತ್ವಪರ ವೇದಿಕೆ, ಸಭೆಯಲ್ಲಿ ಪಾಲ್ಗೊಂಡಿರುವುದು, ಪ್ರಯಾಗರಾಜ್ ಕುಂಬಮೇಳದಲ್ಲಿ ಪಾಲ್ಗೊಂಡಿರುವುದು ಪ್ರಗತಿಪರರನ್ನು, ಬಸವತತ್ವ ಅನುಯಾಯಿಗಳನ್ನು ಕೆರಳಿಸಿದೆ. ಶ್ರೀಗಳು ಬಸವಣ್ಣನವರ ಇತಿಹಾಸಕ್ಕೆ ಧಕ್ಕೆ ಉಂಟುಮಾಡುವ ಮಾತು ಹೇಳಿದವರ ಹೇಳಿಕೆಯನ್ನು ಖಂಡಿಸುವುದನ್ನೂ ಮಾಡಿಲ್ಲ. ಶ್ರೀಗಳ ನಡೆಯಿಂದ ಸದ್ಯ ಬಸವಪರ ಸಂಘಟನೆಗಳು, ಲಿಂಗಾಯತ ಮಠಗಳು ಅಂತರ ಕಾಪಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

೨ಎ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಸಮಾಜದ ಜನ, ಮುಖಂಡರನ್ನು ಒಗ್ಗೂಡಿಸಿಕೊಂಡು ನಡೆಯಲು ಅನಿವಾರ್ಯವಾಗಿತ್ತು. ನನ್ನ ನಿಲುವು, ಉಸಿರು ಬಸವತತ್ವದ ಪರ, ನನ್ನ ಆರಂಭ ಅಂತ್ಯ ಕೂಡಲಸಂಗಮ ಎಂದು ಕೆಲವು ಭಕ್ತರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಸದ್ಯ ಶ್ರೀಗಳ ಸುತ್ತ ಇರುವ ಮುಖಂಡರು ಹಿಂದುತ್ವದ ಪರ ಇರುವವರು. ಶ್ರೀಗಳು ತಮ್ಮ ನಿಲುವು ಲಿಂಗಾಯತ ಎಂದು ಸ್ಪಷ್ಟಪಡಿಸಿದರೆ ಅವರೆಲ್ಲ ಶ್ರೀಗಳೊಂದಿಗೆ ಇರುವರೆ? ಶ್ರೀಗಳು ಒಂದು ಕಡೆ ಲಿಂಗಾಯತರಿಂದ ದೂರವಾಗುತ್ತಿದ್ದಾರೆ, ಇನ್ನೊಂದು ಕಡೆ ಹಿಂದುತ್ವವಾದಿಗಳು ಅವರನ್ನು ಒಪ್ಪಿಕೊಳ್ಳುತ್ತಿಲ್ಲ, ಮಧ್ಯದಲ್ಲಿ ಇರುವುದು ಸತ್ಯ. ರಾಜಕೀಯ ಜಂಜಾಟದಿಂದ ಹೊರ ಬಂದು ಭಕ್ತರೊಂದಿಗೆ ಸಮಾಜ ಸಂಘಟನೆ ಮಾಡಿ ನಿಲುವು ಸ್ಪಷ್ಠಪಡಿಸಿ ಎಂಬುದು ಕೆಲವು ಭಕ್ತರು ಶ್ರೀಗಳಿಗೆ ಹೇಳಿದ್ದಾರೆ. ಶ್ರೀಗಳು ಯಾವ ನಿಲುವು ವ್ತಕ್ತಪಡಿಸುತ್ತಾರೆ, ಅನುಸರಿಸುತ್ತಾರೆ ಎಂಬುದು ಕಾದುನೋಡೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
2 Comments
  • ಬಸವಣ್ಣನವರ ಹೆಸರು ಹೇಳುತ್ತಾ ಮೇಲೆ ಬಂದು ನಂತರ ತತ್ವ ಕೈ ಬಿಟ್ಟು ಇನ್ನೊಂದು ಹಿಡಿಯಲು ಹೋದರೆ ಹೀಗೆ ಆಗುವುದು. ಶರಣರೊಡನೆ ಸರಸವಾಡಿದರೆ ಮೂಲೆಗುಂಪಾಗುವುದು ಖಚಿತ

  • ಜಯಮೃತ್ಯುಂಜಯ ಶ್ರೀಗಳು ಒಂದು ಕಡೆ ಲಿಂಗಾಯತರಿಂದ ದೂರವಾಗುತ್ತಿದ್ದರೆ, ಇನ್ನೊಂದು ಕಡೆ ಹಿಂದುತ್ವವಾದಿಗಳು ಅವರನ್ನು ದೂರ ಸರಿಸುತ್ತಿದ್ದಾರೆ,
    ಪಂಚಮಸಾಲಿಗಳನ್ನು ಲಿಂಗಾಯತ ಹೋರಾಟದಿಂದ ದೂರ ಸರಿಸಬೇಕಾಗಿತ್ತು ಆ ಕೆಲಸವನ್ನು ಮನುವಾದಿಗಳು ಮಾಡಿಸಿದ್ದಾರೆ

Leave a Reply

Your email address will not be published. Required fields are marked *