ಗುಳೆ ಗ್ರಾಮದಲ್ಲಿ ಮನೆಯಿಂದ ಮನೆಗೆ ವಚನ ಜೋತಿ ಕಾರ್ಯಕ್ರಮಕ್ಕೆ ಚಾಲನೆ

ಯಲಬುರ್ಗಾ

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ, ಯುವ ಘಟಕ ಹಾಗು ಅಕ್ಕನಾಗಲಾಂಬಿಕ ಮಹಿಳಾ ಗಣದ ವತಿಯಿಂದ, ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಮನೆಯಿಂದ ಮನೆಗೆ, ಮನದಿಂದ ಮನಕ್ಕೆ ಎಂಬ ವಚನ ಜ್ಯೋತಿ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಸಾಗಿತು.

ಸಂಜೆ ಸಮಯ ವಿಶ್ವಗುರು ಬಸವ ಮಂಟಪದಿಂದ ಶರಣ ಮಂಜುನಾಥ ಕುಂಟೆಪ್ಪ ಮಂತ್ರಿ ಅವರ ಮನೆಗೆ ಗುರುಬಸವ ಸ್ತೋತ್ರ ಪಠಣ ಮಾಡುತ್ತಾ, ವಚನ ಕಟ್ಟು ಹಾಗು ಗುರು ಬಸವೇಶ್ವರ ಭಾವಚಿತ್ರ ಮತ್ತು ಜ್ಯೋತಿ ಹೊತ್ತುಕೊಂಡು ಬರಲಾಯಿತು.

ಕಾರ್ಯಕ್ರಮ ಚಾಲನೆಗೊಳಿಸಿ ಮಾತನಾಡಿದ ಶರಣ ದೇವಪ್ಪ ಕೋಳೂರು ಮಾತನಾಡಿ, ವರ್ಷಕ್ಕೊಮ್ಮೆ ಬರುವ ಈ ಶ್ರಾವಣ ಮಾಸ ಶಿವನನ್ನು ಒಲಿಸಿಕೊಳ್ಳುವ ಮಾಸ. ಶರಣ ಸಂಸ್ಕೃತಿ ಕಲಿಯುವ ಮಾಸ ಇದಾಗಿದೆ. ಬಸವಪರ ಸಂಘಟಕರು ಮಾಡುವ ಈ ಕಾರ್ಯ ಶ್ಲಾಘನೀಯವಾದದ್ದು.

ಇಂದಿನ ದಿನಮಾನದಲ್ಲಿ ಅರಿವಿನ ಪ್ರಜ್ಞೆ ಇದ್ದರೂ ಕೂಡ ಅರಿತುಕೊಳ್ಳದೆ, ಕೊಲೆ, ಸುಲಿಗೆ, ಸ್ತ್ರೀಯರ ಮೇಲೆ ಶೋಷಣೆ ಅತ್ಯಾಚಾರ ಹೆಚ್ಚಾಗುತ್ತಿವೆ. ಕಾರಣ ಅವೈಜ್ಞಾನಿಕತೆ ಮತ್ತು ಅರ್ಥವಿಲ್ಲದ ಸಂಸ್ಕೃತಿಯಿಂದ. ಅದಕ್ಕಾಗಿ ಜನ ಯಸಮುದಾಯಕ್ಕೆ, ಲಿಂಗ ಬೇದ, ವರ್ಗಬೇದ, ವರ್ಣಬೇದವಿಲ್ಲದ ಬಸವಾದಿ ಶರಣರ ವಚನ ಸಾಹಿತ್ಯ, ಮನೆ ಮತ್ತು ಮನ ಪರಿವರ್ತನೆಗೆ ಮದ್ದಾಗಿದೆ. ಈ ವಚನ ಸಾಹಿತ್ಯದ ಮನೆಮದ್ದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರೆ ಪಾವನರಾಗುತ್ತೇವೆ ಎಂದು ತಿಳಿಸಿದರು.

ಗುಳೆ ಗ್ರಾಮದ ರಾಷ್ಟ್ರೀಯ ಬಸವ ದಳ ಉಪಾಧ್ಯಕ್ಷ ಶರಣಪ್ಪ ಹೊಸಳ್ಳಿ ಇವರು ಮಾತನಾಡಿ, ಈ ಶ್ರಾವಣ ಮಾಸದ ೩೦ ದಿನಗಳ ಕಾಲ ಸಂಜೆ ೬ ರಿಂದ ೮ ರವರೆಗೆ ಸಾಮೂಹಿಕ ಪ್ರಾರ್ಥನೆ, ವಚನ ಪಠಣ, ಜೊತೆಗೆ ಬಸವಾದಿ ಶಿವ ಶರಣರ ಸಂಸ್ಕಾರ ಸಂಸ್ಕೃತಿಯನ್ನ ಜನ ಮನಕ್ಕೆ ಮುಟ್ಟಿಸುವ ಕಾರ್ಯವೇ ಈ ಕಾರ್ಯಕ್ರಮದ ಉದ್ದೇಶ ಆಗಿದೆ.

“ಪಂಪನಿಂದ ಕುವೆಂಪುವರೆಗೆ” ಮಾಲಿಕೆಯಡಿ ಕನ್ನಡದ ಪ್ರಸಿದ್ಧ ಕವಿಗಳು – ವಚನಕಾರರು – ದಾಸಶ್ರೇಷ್ಟರು – ತತ್ವಪದಕಾರರು – ಆಧುನಿಕ ಕವಿಗಳ ಪರಿಚಯವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಕಾರಣ ಇಂದಿನ ಯುವ ಪೀಳಿಗೆಗಳು ಹಲವಾರು ದುಶ್ಚಟಕ್ಕೆ ಒಳಗಾಗುತಿದ್ದಾರೆ. ದುಶ್ಚಟದಿಂದ ದೂರ ಮಾಡುವ ಸಲುವಾಗಿ ವಚನ ಸಾಹಿತ್ಯದ ಸಂಗೀತಗಳ ಮಧುರತೆಯೊಂದಿಗೆ ಮನೆಯಿಂದ ಮನೆಗೆ; ಮನದಿಂದ ಮನಕ್ಕೆ ಸಂಸ್ಕೃತಿಯ ಉಣಬಡಿಸುವ ಕಾರ್ಯ ಅರ್ಥಗರ್ಭಿತವಾದದ್ದು.

ಆಸಕ್ತಿಯಿಂದ ಮನೆಯಂಗಳದಲ್ಲಿ ಸಂಗಮಗೊಂಡು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ಯಾನ, ಸಾಮೂಹಿಕ ಪ್ರಾರ್ಥನೆ, ಗೀತ ಗಾಯನ, ವಚನ ಸಂವಾದ – ವ್ಯಾಖ್ಯಾನಗಳ ಮೂಲಕ ಈಗ ವಚನ ಶ್ರಾವಣ ನಡೆಸುವುದರಿಂದ ಜನ ಮನಗಳ ಪರಿವರ್ತನೆ ಆಗಲು ಸಾಧ್ಯ ಇದೆ ಎಂದರು.

ಪ್ರಥಮದಲ್ಲಿ ಗುರುಪೂಜೆ ಮತ್ತು ಸಾಮೂಹಿಕ ಇಷ್ಟಲಿಂಗ ಯೋಗ ನೆರವೇರಿಸಿ ಪ್ರಾಸ್ತಾವಿಕ ಮಾತನಾಡಿದ ಬಸವರಾಜ ಹೂಗಾರ, ನಾವು ವಾಸಿಸುವ ಮನೆ ನಮ್ಮ ಮನವು ಅನುಭವ ಮಂಟಪದಂತಾಗಬೇಕು ಎಂಬ ಸತ್ ಸಂಕಲ್ಪ ನಮ್ಮದಾಗಿದೆ. ಇಂದಿನ ದಿನಮಾನದಲ್ಲಿ ಹಳ್ಳಿಯ ಜನಸಮುದಾಯ, ಕಾಯಕದಲ್ಲಿ ಮತ್ತು ದವಸ ಧಾನ್ಯ, ದಾಸೋಹ ಸೇವೆ ಮಾಡುವಲ್ಲಿ ಬಲು ಮುಂದು.

ಆದರೆ ಸಾಂಸ್ಕೃತಿಕವಾಗಿ, ಧರ್ಮದ ಸಂಸ್ಕೃತಿಯ ಜ್ಞಾನದಲ್ಲಿ ಮೌಢ್ಯಾಚರಣೆಯಲ್ಲಿದ್ದಾರೆ. ಆ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಹಲವಾರು ರೀತಿ ಆಚರಣೆಗೆ ಬಲಿಯಾಗಿ, ಧರ್ಮದ ಸಂಸ್ಕೃತಿಯ ಆಚರಣೆಗಳಲ್ಲಿ ಬಡವರಾಗಿದ್ದಾರೆ. ಅದಕ್ಕಾಗಿ ಶ್ರಾವಣ ಮಾಸ ನೆಪ ಮಾಡಿಕೊಂಡು ” ಮನೆ ಮನೆಗೆ ವಚನ ಜ್ಯೋತಿ” ಕಾರ್ಯಕ್ರಮ ಎಂಬ ಶೀರ್ಷಿಕೆ ಇಟ್ಟುಕೊಂಡು, ವಚನಕಾರರನ್ನು ಪರಿಚಯಿಸುವ, ವಚನ ಸಂಸ್ಕೃತಿಯನ್ನು ಪಸರಿಸುವ ಪ್ರಧಾನ ಆಶಯವುಳ್ಳ ಈ ಕಾರ್ಯಕ್ರಮ ಸಂಗೀತದೊಂದಿಗೆ ಸಾಹಿತ್ಯದ ಕಂಪನ್ನು, ವಚನಕಾರರ ವಿಚಾರಗಳನ್ನು, ವಚನಗಳ ಸಾರಸತ್ವವನ್ನು ಆಸಕ್ತರ ಮನೆಯಂಗಳದಲ್ಲಿ ವಚನ ಶ್ರಾವಣವಾಗಿ ರೂಪಾಂತರಗೊಂಡು ವಚನಕಾರರ ವಿಚಾರ ಕ್ರಾಂತಿಯನ್ನು ಬಿತ್ತುತ್ತಿರುವುದೇ ನಮ್ಮ ಸಂಘಟನೆಯ ಉದ್ದೇಶ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣ ರೇಣುಕಪ್ಪ ಮಂತ್ರಿ, ಬಸಣ್ಣ ಹೊಸಳ್ಳಿ, ಗಿರಿಮಲ್ಲಪ್ಪ ಪರಂಗಿ ವನಜಭಾವಿ, ವೀರನಗೌಡ ವನಜಭಾವಿ, ಬಸವಂತಪ್ಪ ಮಂತ್ರಿ, ಪಂಪಾಪತಿ ಹೊಸಳ್ಳಿ, ಶಿವಪುತ್ರಪ್ಪ, ಲಿಂಗನಗೌಡ ದಳಪತಿ, ಯಮನೂರಪ್ಪ ಕೋಳೂರು, ಪಕೀರಪ್ಪ ಮಂತ್ರಿ, ಸೋಮಣ್ಣ ಮಂತ್ರಿ, ದೇವೇಂಪ್ಪ, ಹನಮೇಶ್ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ , ವಿರುಪಾಕ್ಷಪ್ಪ ಕೆ. ಮಂತ್ರಿ, ಜಗದೀಶ್ ಮೇಟಿ, ನಿಂಗಪ್ಪ ಜಾಲಿಹಾಳ, ಚನ್ನಬಸವಣ್ಣ ಮಂತ್ರಿ, ಮಲ್ಲಿಕಾರ್ಜುನ ಮಂತ್ರಿ, ನಿಂಗಪ್ಪ ಮಂತ್ರಿ, ನಿಂಗಪ್ಪ ಗಾಳಿ, ಮಲ್ಲಿಕಾರ್ಜುನ ಹೊಸಳ್ಳಿ, ಬಸವರಾಜ ಕೋಳೂರು, ಬಸವರಾಜ ಹೊಸಳ್ಳಿ, ಪ್ರಕಾಶ್, ಹನಮಂತಪಜ್ಜ, ನಿಂಗಪ್ಪ ಮಂತ್ರಿ, ಶಿವಕುಮಾರ ಹೊಸಳ್ಳಿ, ಶಾಂತಪ್ಪ ಹೊಸಳ್ಳಿ, ಶ್ರೀಶೈಲ ಹಾಗು ಮಹಿಳಾ ಗಣದ ಸಾವಿತ್ರಮ್ಮ ಆವಾರಿ, ಗುರುಲಿಂಗಮ್ಮ ಮಂತ್ರಿ, ವಿಶಾಲಾಕ್ಷಮ್ಮ ಮಂತ್ರಿ, ಅಕ್ಕಮಹಾದೇವಿ ಮೇಟಿ, ವಿಶಾಲಾಕ್ಷಮ್ಮ ಕೋಳೂರು, ಗುರುಲಿಂಗಮ್ಮ ಉಚ್ಚಲಕುಂಟಿ, ಶರಣಮ್ಮ ಹೊಸಳ್ಳಿ, ಶಂಕ್ರಮ್ಮ ಹೊಸಳ್ಳಿ, ಮಂಜಮ್ಮ ಹೊಸಳ್ಳಿ, ನೇತ್ರಮ್ಮ , ಹನಮವ್ವ ಬಸವರಾಜೇಶ್ವರಿ ಮಂತ್ರಿ, ನಾಗಮ್ಮ ಜಾಲಿಹಾಳ, ಮಲ್ಲಮ್ಮ ಮಂತ್ರಿ, ಶಿವಕಲ್ಲಮ್ಮ, ಭೀಮಮ್ಮ, ರೇಣುಕಮ್ಮ ಮಂತ್ರಿ, ಸುಮಂಗಲಮ್ಮ ಮಂತ್ರಿ, ನಿಂಗಮ್ಮ ಮಂತ್ರಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *