‘ಬಸವ ಮೀಡಿಯಾ ಸಾಮಾನ್ಯ ಜನರಿಗೆ ನಮ್ಮ ತತ್ವ, ಸಂಸ್ಕೃತಿ, ಆಚರಣೆಗಳನ್ನು ಸರಳ ಭಾಷೆಯಲ್ಲಿ ತಲುಪಿಸಬೇಕು.‘
ಬೆಂಗಳೂರು
“ಲಿಂಗಾಯತ ಧರ್ಮದ ಹೋರಾಟದಲ್ಲಿ ಧರ್ಮ ಒಡೆದರು ಅಂತ ಅಪಪ್ರಚಾರವಾಯಿತು. ಅದರ ಪರಿಣಾಮ ಎದುರಿಸಿದ್ದೇನೆ, ಎದುರಿಸುತ್ತಿದ್ದೇನೆ, ಆದರೂ ಬದ್ದತ್ತೆ ಬಿಟ್ಟಿಲ್ಲ,” ಎಂದು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಭಾನುವಾರ ಹೇಳಿದರು.
ನಗರದ ಬಸವನಗುಡಿಯಲ್ಲಿನ ತುಂಬಿದ ಸಭಾಂಗಣದಲ್ಲಿ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
“ಲಿಂಗಾಯತ ಧರ್ಮದ ಹೋರಾಟದಲ್ಲಿ 4-5 ಲಕ್ಷ ಜನ ಸೇರಿದರು. ಬೀದರ್ ರ್ಯಾಲಿಯಲ್ಲಿ ನಾನಿರಲಿಲ್ಲ. ನಂತರ ಬೆಳಗಾವಿಯಲ್ಲಿ ರ್ಯಾಲಿಯದಾಗ ಆಫ್ರಿಕದಲ್ಲಿದ್ದೆ. ಆದರೂ ಧರ್ಮ ಒಡೆದರು ಎಂದು ನನ್ನ ಮೇಲೆ ಅಪಪ್ರಚಾರವಾಯಿತು. ಅದರ ಪರಿಣಾಮಗಳು ಏನೇನಾಯ್ತು ಅಂತ ಹೇಳೋಕ್ಕೆ ಹೋಗೋದಿಲ್ಲ. ಆ ಪರಿಣಾಮಗಳು ನನ್ನ ಮೇಲಾಯ್ತು, ಎದುರಿಸಿದ್ದೀನಿ, ಎದುರಿಸಿಕೊಂಡೇ ಬಂದಿದ್ದೀನಿ. ಆದರೆ ಮುಂದೇನೂ ಕೂಡ (ಲಿಂಗಾಯತ ಧರ್ಮಕ್ಕೆ) ಬದ್ದನಾಗಿರುತ್ತೇನೆ.
ಆ ಪರಿಣಾಮಗಳು ನನ್ನ ಮೇಲಾಯ್ತು, ಎದುರಿಸಿದ್ದೀನಿ, ಎದುರಿಸಿಕೊಂಡೇ ಬಂದಿದ್ದೀನಿ.
ನಾನು ಸಕ್ರಿಯವಾಗಿ ಮಾಡದಿದ್ದರೂ ಲಿಂಗಾಯತ ಧರ್ಮಕ್ಕೆ ದುಡಿಯುವವರಿಗೆ ನನ್ನ ಕೈಯಲ್ಲಿ ಏನು ಶಕ್ತಿಯಿದೆ ಆ ಶಕ್ತಿ ತುಂಬೋ ಕೆಲಸ ಮಾಡಿಕೊಂಡೇ ಬಂದಿದ್ದೀನಿ,” ಎಂದು ಹೇಳಿದರು.

ಬಸವ ಮೀಡಿಯಾದ ಬಗ್ಗೆ ಮಾತನಾಡುತ್ತ “ನಮ್ಮ ಮೇಲೆ ದಾಳಿ ಮಾಡಿದರೆ, ಅಪಪ್ರಚಾರ ಮಾಡಿದರೆ, ವಚನಗಳನ್ನು ತಿರುಚಿದರೆ, ಸುಳ್ಳು ಸುದ್ದಿ ಹಾಕಿದರೆ ಪ್ರತ್ಯುತ್ತರ ಕೊಡುವ ಕೆಲಸ ಮಾಡಬೇಕಾಗತ್ತೆ. ಅಂತಹ ಅನೇಕ ಲೇಖನಗಳನ್ನು ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕದಲ್ಲಿವೆ. ಆದರೆ ಪ್ರತ್ಯುತ್ತರ ಕೊಟ್ಟರೆ ಸಾಲದು ಕಟ್ಟೋ ಕೆಲಸಾನೂ ಆಗಬೇಕು.
ನಮ್ಮ ಮೇಲಿನ ದಾಳಿಗೆ ಪ್ರತ್ಯುತ್ತರ ನೀಡುವ ಅನೇಕ
ಲೇಖನಗಳು ಬಸವ ಮೀಡಿಯಾ ಪುಸ್ತಕದಲ್ಲಿದೆ.
ವಾಟ್ಸ್ ಆಪ್ ಯೂನಿವರ್ಸಿಟಿ ತರಹ ಬರೀ ದೂಷಿಸುವುದು ಬೇಡ, ಸಕಾರಾತ್ಮಕವಾಗಿಯೂ ನಮ್ಮ ತತ್ವ, ಆಚರಣೆಗಳನ್ನು ತಿಳಿಸಬೇಕಾಗುತ್ತದೆ. ಬಸವ ಮೀಡಿಯಾ ಸಾಮಾನ್ಯ ಜನರಿಗೆ ನಮ್ಮ ತತ್ವ, ಸಂಸ್ಕೃತಿ, ಆಚರಣೆಗಳನ್ನು ಸರಳ ಭಾಷೆಯಲ್ಲಿ ತಲುಪಿಸಬೇಕು. ದೇಹವೇ ದೇಗುಲ, ನಾವು ದೇವಸ್ಥಾನಕ್ಕೆ ಹೋಗಬಾರದು. ಇದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು. ಸಂಕ್ಷಿಪ್ತವಾಗಿ, ಸರಳವಾಗಿ ಜನರಲ್ಲಿ ತಿಳುವಳಿಕೆ ಮೂಡಿಸುವುದು ಮುಖ್ಯ,” ಎಂದು ಪಾಟೀಲ್ ಹೇಳಿದರು.
“ಇದರ ಜೊತೆಗೆ ಸಂಘಟನೆಯ ಕೆಲಸವೂ ನಡೆಯಬೇಕು. ಶಿವಸೇನಾ, ದಲಿತ ಸಂಘರ್ಷ ಸಮಿತಿ ಮಾದರಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಸಂಘಟನೆ ಬೆಳೆಸಲು ರಾಷ್ಟ್ರೀಯ ಬಸವ ಸೇನಾ ಸ್ಥಾಪಿಸಿದ್ವಿ. ಆದರೆ ಅದು take-off ಆಗಲಿಲ್ಲ. ನಾನು ಯಾರನ್ನೂ ದೂಷಿಸುತ್ತಿಲ್ಲ, ನನ್ನದೂ ಹಣೆಗಾರಿಕೆಯಿದೆ. ಆರ್. ಬಿ. ಎಸ್ ಗೆ ಮತ್ತೆ ಜೀವ ತುಂಬಬೇಕು. ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಇನ್ನಷ್ಟು ಬೆಳೆಯಬೇಕು.
ಸಮಾಜ ನನಗೆ ಕೊಟ್ಟಿದೆ, ಅದನ್ನು ವಾಪಾಸ್ ಸಮಾಜಕ್ಕೆ ಕೊಡಬೇಕಾಗಿರುವುದು ನನ್ನ ಕರ್ತವ್ಯ.

ಬಸವ ಧರ್ಮ ಕನ್ನಡದ ಧರ್ಮ. ನಮ್ಮ ರಾಜ್ಯದಲ್ಲಿ ಹುಟ್ಟಿರುವಂತಹ ಧರ್ಮ. ಅದು ಉಳಿಯಬೇಕು, ಬೆಳಿಯಬೇಕು. ಎಲ್ಲಾ ದಾಳಿಗಳನ್ನು ಎದುರಿಸೋ ಶಕ್ತಿ ಬಸವಾದಿ ಶರಣರು ನೀಡಿದ್ದಾರೆ. ಅದನ್ನ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು,” ಎಂದು ಪಾಟೀಲ್ ಹೇಳಿದರು.
“ಬಸವ ಮೀಡಿಯಾಗೆ ಒಳ್ಳೆದಾಗಲಿ, ತಮಗೆ ಏನು ನೆರವು ಬೇಕೋ ಆ ನೆರವು ಎಲ್ಲಾರೂ ಕೊಡ್ತಾರೆ, ನಾನೂ ನಿಮ್ಮ ಜೊತೆ ಕೈ ಜೋಡಿಸ್ತೀನಿ. ಯಾಕಂದರೆ ಸಮಾಜ ನನಗೆ ಕೊಟ್ಟಿದೆ, ಅದನ್ನು ವಾಪಾಸ್ ಸಮಾಜಕ್ಕೆ ಕೊಡಬೇಕಾಗಿರುವುದು ನನ್ನ ಕರ್ತವ್ಯ,” ಹೇಳಿ ತಮ್ಮ ಮಾತನ್ನು ಮುಗಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೊರುಚ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್, ಸಂಪಾದಕ ಎಂ ಎ ಅರುಣ್ ಮಾತನಾಡಿದರು. ಉಮೇಶ್ ಎಚ್ ಅವರಿಂದ ಪ್ರಾರ್ಥನೆ, ಶ್ರೀಶೈಲ ಮಸೂತಿ ಅವರಿಂದ ಸ್ವಾಗತ, ನಿವೇದಿತಾ ಅವರಿಂದ ನಿರೂಪಣೆ ನಡೆಯಿತು.
ಅಶೋಕ ಬರಗುಂಡಿ, ಜೆ.ಎಸ್. ಪಾಟೀಲ, ಕೆ. ರವೀಂದ್ರನಾಥ, ಬಸವರಾಜ ಹಂಡಿ, ಪಿ. ರುದ್ರಪ್ಪ, ರಾಜಶೇಖರ ನಾರನಾಳ, ಮುಕ್ತಾ ಕಾಗಲಿ, ಸೋಮಶೇಖರಪ್ಪ, ಶಾಂತಕುಮಾರ ಹರ್ಲಾಪುರ, ಕೃಪಾಶಂಕರ, ರವೀಂದ್ರ ಹೊನವಾಡ, ಪ್ರೊ. ವೀರಭದ್ರಯ್ಯ, ಬಸವಪ್ರಕಾಶ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.