ಬೆಂಗಳೂರು
ಆಗಸ್ಟ್ 17 ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ಬಸವ ಮೀಡಿಯಾದವರು ಏರ್ಪಪಡಿಸಿದ್ದ ಬಸವ ಸಂಜೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಎಂ.ಎಂ. ಕಲಬುರ್ಗಿ ಅವರ ನೆನಹು ಮತ್ತು ಲಿಂಗಾಯತ ಸಂಘರ್ಷ, ಸವಾಲು, ಸಾಧ್ಯತೆಗಳು ಎನ್ನುವ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಂವಾದದಲ್ಲಿ ಚರ್ಚಿತ ಎರಡು ವಿಷಯಗಳು ಮರುಪರಿಶೀಲನೆಗೆ ಮತ್ತು ಚರ್ಚೆಗೆ ಗ್ರಾಸವಾದವು. ಒಂದು ಲಿಂಗಾಯತದಲ್ಲಿ ಆಹಾರ ಪದ್ಧತಿ ಮತ್ತು ಬಸವಧರ್ಮ ಭಕ್ತಿಪ್ರಣೀತವಲ್ಲ ಅದೊಂದು ಸಾಮಾಜಿಕ ಹೋರಾಟ ಎನ್ನುವ ನಿಲುವುಗಳು.
ಮೊದಲನೇ ಪ್ರಶ್ನೆಗೆ ಸಮಂಜಸವಾಗಿ ಉತ್ತರವನ್ನು ಕಂಡುಕೊಳ್ಳಲಾಯಿತು. “ದಯವೇ ಧರ್ಮದ ಮೂಲ” ಎನ್ನುವುದು ಶರಣ ಧರ್ಮದ ತಳಹದಿ. ಇದು ಸರಿಯಾಗಿ ಮಾನವನಲ್ಲಿ ಅರಳಲು ಆತನಿಗೆ ಸಂಸ್ಕಾರ ಬೇಕು. ಸಂಸ್ಕಾರ ಇಲ್ಲದೆ ಇಂತಹ ಸೂಕ್ಷ್ಮ ವಿಷಯಗಳನ್ನು ಅವಲೋಕನ ಮಾಡಲು ಹೊರಟರೆ ಅದು ವಾದ ತರ್ಕ ಆಗುತ್ತದೆಯೋ ಹೊರತು ಸತ್ಯವಾಗುವದಿಲ್ಲ. ಹಾಗಾಗಿ ಶರಣರು ತಿಳಿಸಿದಂತೆ ಲಿಂಗಧಾರಿಯಾಗಿ ಸೃಷ್ಟಿಯನ್ನು, ಸೃಷ್ಟಿಯಲ್ಲಿನ ಜೀವಿಗಳ ಬದುಕನ್ನು ಅವಲೋಕಿಸಿದಾಗ ಸರಿಯಾದ ಉತ್ತರ ತನ್ನೊಳಗೆ ಸಿಗುತ್ತದೆ ಎನ್ನುವ ನಿರ್ಣಯದ ನುಡಿಗಳು ಹೊರಬಂದವು. ಅವುಗಳನ್ನು ಒಪ್ಪಲು ಯೋಗ್ಯವೂ ಆಗಿದ್ದವು.
ಎರಡನೇ ಪ್ರಶ್ನೆ ಬಸವಧರ್ಮ ಭಕ್ತಿಪ್ರಣೀತ ಧರ್ಮ ಅಲ್ಲ ಬದಲಾಗಿ ಅದು ಒಂದು ಸಾಮಾಜಿಕ ಹೋರಾಟ ಎನ್ನುವದು. ಇದರ ಸಂಪೂರ್ಣ ಚರ್ಚೆ ಪೂರ್ಣಗೊಳಿಸಲು ಸಮಯದ ಅಭಾವ ಅಡ್ಡಿಯಾಯಿತು. ಆದರೆ ಅಲ್ಲಿದ್ದ ಸರ್ವ ಬಸವ ಭಕ್ತರು ಆ ವಾದವನ್ನು ಒಪ್ಪಲು ಸಾಧ್ಯವಿರಲಿಲ್ಲ. ಈ ಮೂಲಕ ಅದನ್ನು ವಿಶ್ಲೇಷಣೆ ಮಾಡಬಹುದು.
ಶರಣರ ಲಭ್ಯವಿದ್ದ ಎಲ್ಲ ವಚನಗಳನ್ನು ಅವಲೋಕಿಸಿದಾಗ ಈ ಕೆಳಗಿನ ಅಂಶಗಳು ಸ್ಪಷ್ಟವಾಗಿ ಗೋಚರವಾಗುತ್ತವೆ.
1) ಈ ಸೃಷ್ಟಿ ಮಿಥ್ಯ ಅಲ್ಲ ಬದಲಾಗಿ ಅದು ಶಿವನ ಅಖಂಡ ಅರಿವಿನ ವಿಸ್ತಾರದ ರೂಪ ಎನ್ನುವದು.
2) ಈ ಸಾಕಾರದ ಸೃಷ್ಟಿಗೆ ಆಧಾರವಾಗಿ ಶಿವಚೇತನ ನೆಲೆಯನ್ನು ಒದಗಿಸಿಕೊಟ್ಟಿದೆ. ಅದು ನಿರಾಕಾರ. ಅದನ್ನು ಶರಣರು ಜಂಗಮ ಎಂದು ಕರೆಯುತ್ತಾರೆ. ಜಂಗಮ ಎಂದರೆ ಕೇವಲ ಸಮಾಜ ಅಲ್ಲ, ಅದು ವಿಶ್ವವಿರಾಟ ಸ್ವರೂಪಕ್ಕೆ ಆಧಾರವಾದ ಶಿವಚೇತನ.
3) ಸೃಷ್ಟಿಕರ್ತ ಸಾಕಾರದ ಜಗತ್ತನ್ನೇ ನಿರ್ಮಿಸಿ ತಾನು ಅಡಗಿಕೊಳ್ಳಲು ಮಾಯಾತೆರೆಯನ್ನು ನಿರ್ಮಿಸಿದ. ಆ ತೆರೆಯೇ ಮಾನವನಿಗೆ ತನ್ನ ಸ್ವರೂಪ ಅರಿಯಲು ಅಡ್ಡಿಯಾಗಿದೆ.
4) ಮಾನವ ತನ್ನ ಮಾಯಾ ತೆರೆಯ ಕಾರಣದಿಂದ ಅಜ್ಞಾನಕ್ಕೆ ಒಳಗಾಗಿ ಜಾತಿಭೇದ, ಲಿಂಗಭೇದ ಸೃಷ್ಟಿಸಿಕೊಂಡು ಅಹಂಕಾರಕ್ಕೆ ಒಳಗಾಗಿ ಬದುಕಿನ ಅರ್ಥ ಕಳೆದುಕೊಂಡ, ಸಮಾಜದಲ್ಲಿ ಸಂಘರ್ಷವನ್ನ ಸೃಷ್ಟಿಸಿದ.
5) ಶರಣರು ಮಾನವನಲ್ಲಿನ ಈ ಕತ್ತಲೆಯ ಬಗ್ಗೆ ಅರಿತು ಅದನ್ನು ನಿವಾರಿಸಿಕೊಳ್ಳಲು ಕೊಟ್ಟ ಸಾಧನ ಇಷ್ಟಲಿಂಗ. ಆ ಕತ್ತಲೆಯನ್ನು ಕಳೆದುಕೊಳ್ಳದೆ ಬಾಹ್ಯದ ಸಾಮಾಜಿಕ ಸಮಾನತೆ ಸಾಧ್ಯವಾಗುವದಿಲ್ಲ ಎನ್ನುವದು ಶರಣರಿಗೆ ತಿಳಿದಿತ್ತು.
6) ಆ ಕತ್ತಲೆಯನ್ನು ಕಳೆದುಕೊಂಡು ಸೃಷ್ಟಿಯ ನೆಲೆಗೆ ಅರ್ಹನಾಗುವದು ಶರಣ ಮಾರ್ಗದಲ್ಲಿ “ಭಕ್ತಿ” ಎನಿಸಿಕೊಳ್ಳುತ್ತದೆ. ಅಂತರಂಗದ ಭಕ್ತಿಯ ತರಂಗಗಳು ಬಾಹ್ಯದಲ್ಲಿ ಕ್ರಿಯೆಯಾಗಿ ರೂಪುಗೊಳ್ಳಬೇಕು, ಎನ್ನುವದು ಶರಣರ ಆಶಯ.
7) ಭಕ್ತಿ ಇಲ್ಲದೆ ಸಾಮಾಜಿಕ ಆರೋಗ್ಯ ಅಸಾಧ್ಯ ಎನ್ನುವದು ಶರಣರ ನಿಲುವು.
ಶರಣರ ಭಕ್ತಿ ಮಾರ್ಗ ಇತರ ಭಕ್ತಿಪಂಥದವುಗಳಿಗಿಂತ ಭಿನ್ನ. ಏಳನೇ ಶತಮಾನದಿಂದ ಪ್ರಾರಂಭವಾದ ಭಕ್ತಿಮಾರ್ಗ ಶರಣರ ಭಕ್ತಿಮಾರ್ಗಕ್ಕಿಂತ ಭಿನ್ನ. ಭಕ್ತಿಪಂಥದ ಸೂಫಿಗಳು, ಶೈವದ ನಯನಾರರು, ವೈಷ್ಣವ ಭಕ್ತಿಪಂಥದವರು ಭಿನ್ನ ಭಿನ್ನ ನೆಲೆಯಲ್ಲಿ ಭಕ್ತಿಯನ್ನು ಮಾಡಿದವರು. ಆದರೆ ಶರಣರನ್ನು ಹೊರತುಪಡಿಸಿ, ಉಳಿದ ಭಕ್ತಿಪಂಥಗಳೆಲ್ಲ ತಮ್ಮ ಆರಾಧ್ಯ ದೈವವನ್ನು ಇದಿರಿಟ್ಟು ನೋಡಿದರೆ ಹೊರತು ತಮ್ಮ ಅಂತರಂಗದ ಕುರುವಾಗಿ ದೇವ ಸ್ವರೂಪವನ್ನು ಅನುಭವಿಸಲಿಲ್ಲ.
ಬದುಕಿನ ಈ ಅನುಭವವೇ “ಅನುಭಾವ” ಸಿಂದ್ಧಾಂತವಾಯಿತು. ಭಕ್ತಿ ಇಲ್ಲದಿದ್ದರೆ ಅನುಭಾವಕ್ಕೆ ಮಾರ್ಗವಿಲ್ಲ ಎನ್ನುವದು ಆ ಸಭೆಯಲ್ಲಿ ಚರ್ಚೆಗೆ ಬರಬೇಕಾಗಿತ್ತು, ಆದರೆ ಅದು ಸಾಧ್ಯವಾಗದೆ, ಮೂಲ ಪ್ರಶ್ನೆ ಹಾಗೆಯೇ ಉಳಿಯಿತು.
ಪ್ರಾಜ್ಞರು ಈ ಕುರಿತು ಲೇಖನಗಳನ್ನು ಪ್ರಕಟಿಸಬೇಕು, ಇಲ್ಲವಾದರೆ ಶರಣ ಮಾರ್ಗದ ಬಗ್ಗೆ ತಪ್ಪು ಸಂದೇಶ ಸಮಾಜಕ್ಕೆ ಹೋಗುತ್ತದೆ.
ನಿಮ್ಮ ಟಿಪ್ಪಣಿ ಸರಿಯಾಗಿದೆ.
ಶರಣ ರಾಜಶೇಖರ ಇದನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ಮೂಲಭೂತ ವ್ಯವಸ್ಥೆಯು ಮಂಡಿಸಿದ್ದ ಭಕ್ತಿಮಾರ್ಗದ ಕುರಿತು ಚರ್ಚೆಯನ್ನು ಆರಂಭಿಸಿದ್ದಾರೆ.
ತಾವೇ ಈ ಲೇಖನದಲ್ಲಿ ಮಂಡಿಸಿದ ವಿವಿಧ ಅನ್ಯಭಿನ್ನ ಸಂಸ್ಕ್ರತಿಯ ಪ್ರತಿಪಾದಕರ ಭಕ್ತಿಗೂ, ಗುರುಬಸವಭೋದಿತ ಭಕ್ತಿಗೂ ಇರುವ ಭಿನ್ನತೆಯನ್ನು ಸ್ಪಷ್ಟಪಡಿಸುವುದೇ ಅವರ ಉದ್ದೇಶವಾಗಿರುವುದನ್ನು ಸಭೆ ಗಮನಿಸಿದೆ.
ಬಸವರ ಭಕ್ತಿಯು ಅನುಭವದ ಆಂತರಂಗಿಕ ವ್ಯಕ್ತಿತ್ವದ ಊರ್ಧ್ವಮುಖ ವಿಕಾಸದ ನಿರಂತರ ಗತಿಚಲನೆಯ ಬದುಕಿನ ಬದುಕುವ ವಾಸ್ತವವಾಗಿದೆ . ಬಸವರ ಭಕ್ತಿ ಎಂಬುದು ಅರಿವಿಗೆ ಅಡ್ಡಿಯಾದುದನ್ನೆಲ್ಲ ತೊಡೆದು ಹಾಕುತ್ತ ಅರಿವಾಗಿ ಅಂದರೆ ನಿಜಜಂಗಮವೆಂಬ ನಿಜದ ನಿಲುವನ್ನು ತಲುಪುವಂತೆ ಮಾಡುವ ಮಹಾಸಾಧನವಾಗಿದೆ. ಇದನ್ನು ಅರುಹಿಸಬೇಕಾದ ವ್ಯವಸ್ಥೆಯ ಕರ್ತವ್ಯ ಲೋಪದಿಂದ ಲಿಂಗಾಯತ ಸಮೂಹ ಅನ್ಯಭಿನ್ನ ಸಂಸ್ಕ್ರತಿಯ ಪ್ರತಿಪಾದಕರ ಭಕ್ತಿಯನ್ನು ಆಚರಿಸುತ್ತಿರುವ ಸ್ಥಿತಿಯನ್ನು ಕಾಣುತ್ತಿದ್ದೇವೆ.
ಇದನ್ನು ಡಾ. ಎನ್ ಜಿ ಮಹಾದೇವಪ್ಪ ಸರ್ ರವರು ಬಹಳ ಸರಿಯಾಗಿ ಸ್ಪಷ್ಟಪಡಿಸಿದ್ದನ್ನು (ಮಿಥ್ಯೆ ಸತ್ಯ ) ಗಮನಿಸಬೇಕು.
ಈ ಚರ್ಚೆ ಹಲವು ಸಾರ್ಥಕ್ಯಗಳಿಗೆ ಕಾರಣವಾಗಿರುವಂತೆಯೇ ಹಲವು ಒಳಹೊರಗಿನವರ ಕಣ್ಣುಗಳನ್ನುರಿಸಿವೆ. ತಮ್ಮ ಕಣ್ಣೊಳಗಿನ ಕಸವನ್ನು ಕಿತ್ತುಕೊಳ್ಳುವುದು ಪ್ರಾಮಾಣಿಕವಾಗಿ ಬದುಕುವವರ ಬದ್ಧತೆಯಾಗಿರುತ್ತದೆ. ಇದಿಲ್ಲದವರು ಸಂಘಟಕರ ಮೇಲೆ ನಂಜುಕಾರುತ್ತ ಸಾಗುತ್ತಾರೆ.
ಒಟ್ಟಿನಮೇಲೆ ತಾಸಿನ ಚರ್ಚೆ ನೂರೆಂಟು ಭರವಸೆಗಳನ್ನು ಮೂಡಿಸಿದ್ದು ಹಾಗೂ ಅದನ್ನು ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ದ ಸಂಘಟಕರ ಶ್ರಮ ಗೌರವಾರ್ಹ ಎಂಬುದಂತೂ ನಿಜ.
ಕಣ್ಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ!
ಚಿಂತನೆಗಳು ಬಹಳ ಚನ್ನಾಗಿ ಮೂಡಿಬಂದಿರುವಂತೆ ಕಾಣುತ್ತಿದೆ. ಶರಣರ ಭಕ್ತಿ,ಅಂತರಂಗ- ಬಹಿರಂಗವನ್ನು ತುಂಬಿಕೊಂಡಿರುವ ಚೈತನ್ಯಾತ್ಮಕವಾದ ಅರಿವನ್ನು ಕುರಿತಾಗಿ ನಡೆದಿರುವದು, ಜಗತ್ತಿನ ಇತರರು ಅನುಸರಿಸುವ ಭಕ್ತಿ ಮಾರ್ಗಗಳಿಂದ ಭನ್ನವಾಗಿ ಕಾಣುತ್ತದೆ. ತನ್ನಿಂದ ಭಿನ್ನವಾಗಿ ಮತ್ತೊಂದು ಶಕ್ತಿಯು ತನ್ನನ್ನು ನಡೆಸುತ್ತಿರುವದೆಂದು ಭಾವಿಸಿ ಅದರ ಉಪಾಸನೆಯನ್ನು ಮಾಡಿ, ಆ ಮೂಲಕ ಶಕ್ತಿಯನ್ನು ಒಲಿಸಿಕೊಳ್ಳುವ ಮತ್ತು ಮುಕ್ತಿಯನ್ನು ಹೊಂದುವದಾಗಿ ಭಾವಿಸಿರುವ ಭಕ್ತಿ ಮಾರ್ಗವೇ ಬೇರೆ, ಶರಣರು ” ತನ್ನ ತಾನಾರೆಂದರಿದಡೆ ತಾನೇ ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವಾ” ಎನ್ನುತ್ತಾ ಭಕ್ತಿ ಎಂದರೆ ಭಯದಿಂದ ತನ್ನಲ್ಲಿರುವ ವಸ್ತುಗಳನ್ನು ಸಮರ್ಪಿಸುವದನ್ನು (ಪೂರ್ವಾಶ್ರಯವನ್ನು) ಬದಲಿಸಿ ತನ್ನ ತನು ಮನ ಭಾವಗಳನ್ನು ಪ್ರೀತಿಯಿಂದ ಅರಿವು ಅಚಾರ ಅನುಭಾವಗಳಿಗೆ ದಾಸೋಹಗೈಯುವದನ್ನು ಕಲಿಸುತ್ತಾರೆ ಆ ಮೂಲಕವಾಗಿ ವ್ಯಕ್ತಿಯು ಗುರು-ಲಿಂಗ-ಜಂಗಮ ಸ್ವರೂಪ ತಾನೆಯಾಗುವಂತೆ ಅರಹುತ್ತಾರೆ.
ಭಕ್ತಿಯೆಂಬ ಪೃಥ್ವಿಯ ಮೇಲೆ,
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ!
ಅನುವನರಿದು ಅನುಭಾವಿಯಾದ ಕಾರಣ ಸಮ್ಯಗ್‍ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು ಆ ಶಿವಭಾವದಲ್ಲಿ ತನ್ನಹೃದಯವ ಸಮ್ಮೇಳವ ಮಾಡಿದ ಶರಣನು. ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ ಸರ್ವಲೋಕವನು ಶಿವನೊಳಗಡಗಿಸಿದನಾಗಿ, ಆ ಶಿವನ ತನ್ನೊಳಗಡಗಿಸಿ, ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.
ಸ್ವತಂತ್ರ ಸಿದ್ಧಲಿಂಗ
ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ, ದೇವ ನೀನಿಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ. ಈ ಪರಿಯ ಮಾಡುವರಿನ್ನಾರು ಹೇಳಾ?
ಎನಗೆ ನೀನೇ ಗತಿ, ನಿನಗೆ ನಾನೇ ಗತಿ
ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ಇದು ಶರಣರ ಮಾರ್ಗ, ಸರ್ವತಂತ್ರ ಸ್ವತಂತ್ರ ಎತ್ತೆತ್ತ ನೋಡಿದಡತ್ತತ್ತ ನೀನೆ ದೇವಾ ಎನ್ನತ್ತಾ ಸರ್ವರನ್ನು ಶಿವನೆಂದು ಭಾವಿಸಿ,ಲಿಂಗದ ಬಾಯಿ ಜಂಗಮವೆಂಬ ಜೀವಚೈತನ್ನವೇ ಆಗಿದೆ ಎಂದು ಅರುಹಿದವರು. 🙏🙏🙏