ಸನಾತನ ಸಂಸ್ಕೃತಿಯ ಭಕ್ತಿಯಿಂದ ಶರಣರನ್ನು ಮುಕ್ತಿಗೊಳಿಸಿ

ವೈದಿಕ ಭಕ್ತಿ ತೊರೆದು ಜನ ಚಳುವಳಿಯಾದರೆ ಮಾತ್ರ ಲಿಂಗಾಯತ ಉಳಿಯುತ್ತದೆ

ಬೆಂಗಳೂರು

ಆಗಸ್ಟ್ 17ರಂದು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಗಂಗಣದಲ್ಲಿ ಬಸವ ಮೀಡಿಯಾದ ಬೇಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ ಬಿಡುಗಡೆ, ಎಂ.ಎಂ. ಕಲ್ಬುರ್ಗಿಯವರ ನೆನಹು ಮತ್ತು ಲಿಂಗಾಯತ ಸಂಘರ್ಷ ಸವಾಲು ಮತ್ತು ಸಾಧ್ಯತೆಗಳ ಕುರಿತು ಸಂವಾದ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ಈ ಕಾರ್ಯಕ್ರಮಗಳಲ್ಲಿ ಲಿಂಗಾಯತ ಸಂಘರ್ಷ, ಸವಾಲು, ಮತ್ತು ಸಾಧ್ಯತೆಗಳ ಸಂವಾದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ನಿರ್ವಾಹಕರಿಂದ ಮತ್ತು ಸಭಿಕರಿಂದ ಬಂದಂತಹ ಪ್ರಶ್ನೆಗಳು ಎಲ್ಲರನ್ನು ಗಮನ ಸೆಳೆಯುವಂತೆ ಮಾಡಿತು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಚರ್ಚಿತ ವಿಷಯ ಅಂದ್ರೆ, ಇಂದು ಬಸವಾದಿ ಶರಣರನ್ನು ವೈದಿಕರು ಹಾಕಿಕೊಟ್ಟ ಭಕ್ತಿಯ ಚಳುವಳಿಯಿಂದ ಹೊರತಂದು ಅದೊಂದು ಜನ ಚಳುವಳಿಯಾಗಿ ರೂಪಿಸಿದಾಗ ಮಾತ್ರ ಈ ಕಾಲಘಟ್ಟದಲ್ಲಿ ನಾವು ಲಿಂಗಾಯತವನ್ನು, ಜನಸಾಮಾನ್ಯರಲ್ಲಿ, ಯುವ ಜನತೆಯಲ್ಲಿ ಕಟ್ಟಬಹುದೆಂಬ ಸಂವಾದ ಸಭಿಕರಿಗೆ ಇಷ್ಟವಾಯಿತೆಂದು ಅಲ್ಲಿ ಭಾಗವಹಿಸಿದ ಬಹುತೇಕರು ಪೋನ್ ಕರೆ ಮಾತಾಡಿದರು. ಆದರೆ ಕೆಲವರಿಗೆ ಬಸವಣ್ಣನನ್ನು ಭಕ್ತಿ ಜಾಲದಿಂದ ಹೊರತಂದು ಜನಚಳುವಳಿ ಮಾಡಿದರೆ ತಮ್ಮ ಅಸ್ತಿತ್ವ ಗತಿ ಏನೋ ಅನ್ನುವ ಆತಂಕ ಕಾಡಿದ್ದು ಮಾತ್ರ ಸತ್ಯ.

ಅಂದು ಸಂವಾದದಲ್ಲಿ ಚರ್ಚೆಯಾದ ವಿಷಯವೆನಂದರೆ ವೈದಿಕರು ಹಾಕಿ ಕೊಟ್ಟ ಭಕ್ತಿ ಮತ್ತು ಆಧ್ಯಾತ್ಮ ಮಾರ್ಗದಲ್ಲಿಯೆ ಇಂದಿನ ಮಠಾಧೀಶರು, ತತ್ವ ಹೇಳುವ ಅನುಭಾವಿಗಳು ಬಸವಾದಿ ಶರಣರನ್ನು ನೋಡುತ್ತಿದ್ದಾರೆ ಹೊರತು ಶರಣರು ಹಾಕಿ ಕೊಟ್ಟ ಭಕ್ತಿಯ ಮಾರ್ಗದಲ್ಲಿ ಇಂದಿಗೂ ಶರಣರನ್ನು ನೋಡಲು ಆಗುತ್ತಿಲ್ಲ.

ಹಾಗಾಗಿ ಸನಾತನ ಸಂಸ್ಕ್ರತಿಯ ಭಕ್ತಿ ಮಾರ್ಗದಿಂದ ಶರಣನ್ನು ಹೊರ ತಂದು ಶರಣರು ಹಾಕಿ ಕೊಟ್ಟ ಭಕ್ತಿ ಮಾರ್ಗದಲ್ಲಿ ನೋಡಬೇಕೆನ್ನುವ ನನ್ನ ಸದಾಶಯವನ್ನು ಕೆಲವೊಬ್ಬ ಅನುಭಾವಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅಂತ ಅನಿಸಿತು. ಬಸವಣ್ಣನ ಭಕ್ತಿ ಪೂಜೆ ಭಜನೆಗೆ ಸೀಮಿತವಾಗದೆ ಅವರ ಭಕ್ತಿಯಲ್ಲಿ ಒಂದು ಸಂಘರ್ಷ ಇತ್ತು. ಅಂತಹ ಸಂಘರ್ಷ ಭಕ್ತಿ ಇಂದು ನಾವು ಕಾಣುತ್ತಿಲ್ಲ.

“ಭಕ್ತಿಯೆಂಬುದು ಗರಗಸದಂತೆ ಹೋಗುತ್ತಾ ಕೊಯ್ಯುವುದು ಬರುತ್ತಾ ಕೊಯ್ಯುವುದು” ಎನ್ನುವ ಸಂಘರ್ಷದ ಗುಣವಿಲ್ಲದೆ ವೈದಿಕರೆ ಹಾಕಿದ ಕೊಟ್ಟ ವಿಚಾರ ಶೂನ್ಯ ಭಕ್ತಿಯಲ್ಲಿ ಇಂದು ಶರಣರನ್ನು ನೋಡುತ್ತಿದ್ದೆವೆ ಎನ್ನುವುದರ ಚರ್ಚೆಯನ್ನು ಅರಿಯಲು ಅನುಭಾವಿಗಳೆನ್ನುವವರು ಸೋತರೇನೊ ಅಂತ ಅನಿಸುತ್ತೆ. ಚರ್ಚೆಯಲ್ಲಿ ಎಲ್ಲಿಯೂ ಭಕ್ತಿ ಬೇಡ ಅಂದಿಲ್ಲ, ಭಕ್ತಿ ಮಾಡುವುದಾದರೆ ಬಸವಣ್ಣ ಭಕ್ತಿಯಂತೆ ಇರಲಿ ಎನ್ನುವುದರ ಹಿಂದಿನ ನನ್ನ ಲಿಂಗಾಯತದ ಬಗೆಗಿನ ಕಾಳಜಿಯನ್ನು ಅರಿಯದೇ ಹೋದರು ಕೆಲವೊಬ್ಬ ತತ್ವ ಹೇಳುವ ಅನುಭಾವಿಗಳು.

ಅಂತರಂಗ ಬಹಿರಂಗ ಒಂದಾಗಿ ಬದುಕಿದ್ದೆ ಶರಣರ ಸಾಮಾಜಿಕತೆ. ಅಂತಹ ಸಾಮಾಜಿಕತೆಯ ಕುರಿತಾಗಿ ನನ್ನ ಚರ್ಚೆಯ ಮಾತುಗಳಿದ್ದವು. ಶರಣರ ಸಾಮಾಜಿಕತೆಗೆ ಮೂಲವೇ ಶಿವಯೋಗ. ಆದರೆ ಶಿವಯೋಗವೆಂದರೆ ಲಿಂಗ ಹಿಡಿದು ಕೂಡುವುದು ಎಂದು ತಿಳಿದವರಿಗೆ, “ಲಿಂಗ ಪೂಜಿಸಿ ಫಲವೇನಯ್ಯಾ ಸಮರತಿ ಸಮಸುಖ ಸಮಕಳೆ ಇಲ್ಲದನ್ನಕ್ಕ” ಎನ್ನುವ ಶರಣ ಶಿವಯೋಗ ಅರ್ಥವಾಗುವುದಾದರೂ ಹೇಗೆ? ಲಿಂಗಮಯವಾದ ಅಂಗ ಎಲ್ಲವನ್ನು ಲಿಂಗದಂತೆ ಕಾಣಬೇಕು” ಕಾಣುವ ಜಗವೆಲ್ಲಾ ಕೂಡಲಸಂಗಮ ಎನ್ನುವ ಭಾವ ಹುಟ್ಟಬೇಕು ಅಂತಹ ಶಿವಯೋಗದಿಂದ ಮಾತ್ರ ಶರಣರು ಕಂಡ ಜಂಗಮವನ್ನು (ಸಮಾಜವನ್ನು) ಕಾಣಲು ಸಾಧ್ಯ ಎನ್ನುವ ನನ್ನ ಮಾತಿನ ಮೂಲ ಆಸೆಯನ್ನು ಮರೆ ಮಾಚಿದರು. ತಾವು ಹೇಳಿದ್ದೆ ಸತ್ಯವೆನ್ನುವ ಕೆಲವೊಬ್ಬರನ್ನು ನೋಡಿದರೆ ತಾಯಿ ಅಮುಗೆ ರಾಯಮ್ಮನ ಮಾತು ನೆನಪಾಯಿತು. “ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ” ಎನ್ನುವ ಸತ್ಯವಾಯಿತು ಅನಿಸಿತು.

ಸಂವಾದ ಜನರಲ್ಲಿ ಅರಿವಿನ ಪ್ರಜ್ಞೆ ಹುಟ್ಟಿಸುತ್ತೆ. ವಾದ ಎನ್ನುವುದು ನಾನೇ ಸತ್ಯ, ನಾ ಹೇಳಿದ್ದೆ ಸರಿ ಎನ್ನುವ ಅಹಂಮಿಕೆಗೆ ಕಾರಣವಾಗುತ್ತೆ. ಅಂತವರನ್ನು ಕಂಡು ರಾಯಮ್ಮ “ಅನುಭಾವಿಗೆ ನಾಹಂ ಸೋಹಂ ಕೋಹಂ ಎಂಬ ಭ್ರಾಂತಿಯ ಭ್ರಮೆಯುಂಟೆ” ಎಂದು ಪ್ರಶ್ನಿಸುವಲ್ಲಿ ಇಂದಿನ ಅನುಭಾವಿಗಳ ಕುರಿತಾಗಿಯೇ ಇದೆ ಅನಿಸುತ್ತೆ. ಇಂದಿಗೂ ನನಗೆ ಕೆಲವೊಬ್ಬ ಅನುಭಾವಿಗಳ ಕುರಿತಾಗಿ ಕಾಡುತ್ತಿರುವ ಚಿಂತೆ ಎನಂದರೆ ತಮ್ಮ ಶಬ್ದಗಳ ದೊಂಬರಾಟದಿಂದ ತತ್ವವನ್ನು ಕ್ಲಿಷ್ಟಗೊಳಿಸುತ್ತಿರುವುದು.

ಶಬ್ದಗಳ ದೊಂಬರಾಟದಿಂದ ತತ್ವವನ್ನು
ಕ್ಲಿಷ್ಟಗೊಳಿಸುವುದು ಬೇಡ

ಬಸವತತ್ವದಲ್ಲಿ ಇಂದು ಆಗುತ್ತಿರುವ ಕೆಲವೊಂದು ಘಟನೆಗಳು ಕಂಡರೆ ಖೇದ ಅನಿಸುತ್ತೆ. ತಮ್ಮ ಅಧಿಕಾರ ಮತಗಳು ಕಳೆದು ಹೋಗಿ ಬಿಡುತ್ತವೆ ಎನ್ನುವ ಭಯದಲ್ಲಿ ವಾಸ್ತವವನ್ನು ಒಪ್ಪದ ಧುರೀಣರು, ತತ್ವ ಸಿದ್ದಾಂತಗಳಿಗೆ ತಿಲಾಂಜಲಿಯನಿಟ್ಟು ತಮ್ಮ ಸ್ವಾರ್ಥ ಪ್ರತಿಷ್ಠತೆಗಾಗಿ ಸಮಾಜವನ್ನು ಮೌಢ್ಯದಲ್ಲಿಡುವಂತ ಕೆಲವೊಂದು ಮಠಗಳನ್ನು ಕಂಡಾಗ ಖೇದ ಅನಿಸುತ್ತೆ. ಇತ್ತೀಚಿಗೆ ಈ ತತ್ವ ಹೇಳುವ ಹಲವು ಅನುಭಾವಿಗಳನ್ನು ಕಂಡಾಗ ಮತ್ತದೆ ಆತಂಕ ಕಾಡುತ್ತಿರುವುದು ಸತ್ಯ. ವಿಶಾಲ ತತ್ವದ ಲಿಂಗಾಯತವನ್ನು ಮುಂದೊಂದು ದಿನ ಈ ತತ್ವ ಹೇಳುವ ಹಲವು ಅನುಭಾವಿಗಳು ಸಂಕುಚಿತಗೊಳಿಸಿ ಮೂಲತತ್ವಕ್ಕೆ ಕೊಡಲಿ ಪೆಟ್ಟುಕೊಟ್ಟರೂ ಆಶ್ಚರ್ಯಪಡಬೇಕಿಲ್ಲ.

ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ತಗೆದುಕೊಂಡು ಹೋಗುವಂತ ಅನುಭಾವ ನೀಡದಿರುವುದಿಂದಲೇ ಯುವಜನತೆ ಲಿಂಗಾಯತದ ಕಡೆ ಮುಖ ಮಾಡುತ್ತಿಲ್ಲ ಅಂತ ಅನಿಸುತ್ತೆ. ಕೇಳುವ ವ್ಯವಧಾನವಿಲ್ಲ, ಸಮಾಧಾನದಿಂದ ಯುವಕರಿಗೆ ತಿಳಿಸುವಂತ ಪ್ರವೃತ್ತಿಯೂ ಇಲ್ಲ. ತಾವೆ ಹೇಳಿದ್ದೆ ಸತ್ಯ. ತಾವು ಕಂಡಕೊಂಡಿದ್ದೆ ಸತ್ಯ ಎನ್ನುವ ಹೇರಿಕೆಯನ್ನು ಸಮುದಾಯದ ಮೇಲೇರುತ್ತಾರೆ. ಇಂತವರನ್ನೆ ಕಂಡು “ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು ಅನುಭಾವಿಗಳೆಂದರೆ ಅಘೋರ ನರಕ ತಪ್ಪದು ಕಾಣಾ” ಎನ್ನುವ ಅಮುಗೆ ರಾಯಮ್ಮನ ಮಾತು ನಿಜವೆನಿಸುತ್ತವೆ.

ಭವಿಷ್ಯದಲ್ಲಿ ತತ್ವ ಸಿದ್ದಾಂತಗಳನ್ನು ಕಟ್ಟುವಲ್ಲಿ ತಿಳಿ ಹೇಳುವಲ್ಲಿ ಈ ಹೇರಿಕೆಯ ಮನಸ್ಥಿತಿಯಿಂದ ಹೊರಬಂದು, ಲಿಂಗಾಯತದ ಆ ಮೂಲತತ್ವಕ್ಕೆ ಧಕ್ಕೆಯಾಗದಂತೆ ಮಾತಾಡುವವರಿಗೆ ಪ್ರೋತ್ಸಾಹ ಕೊಟ್ಟು ಯುವಕರನ್ನು ಸಮುದಾಯದ ಮುನ್ನಲೆಗೆ ತರುವಂತ ಕಾರ್ಯಗಳಿಗೆ ಸ್ಪಂದಿಸಬೇಕು. ತಮ್ಮ ಅನುಭಾವವೆ ದೊಡ್ಡದು ಎನ್ನುವ ಅಹಂಮಿಕೆಯಿಂದ ಹೊರಬಂದು ಸಮಾಜದಲ್ಲಿ ಮನ ಕಟ್ಟುವ ಕೆಲಸಗಳಗೆ ಕೈಜೋಡಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
2 Comments

Leave a Reply

Your email address will not be published. Required fields are marked *