ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿದ ಸುತ್ತೂರು ಶ್ರೀಗಳ ಕೊಡುಗೆ ಅಪಾರ

ಬಸವ ಮೀಡಿಯಾ
ಬಸವ ಮೀಡಿಯಾ

ನ್ಯಾಮತಿ

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ, ಅ. ಭಾ. ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು, ಸುತ್ತೂರು ಮಹಾಸಂಸ್ಥಾನ ಮಠದ ಜಗದ್ಗುರು ಡಾ. ರಾಜೇಂದ್ರ ಮಹಾಸ್ವಾಮಿಗಳವರ 110ನೆಯ ಜಯಂತ್ಯೋತ್ಸವ ಅಂಗವಾಗಿ ಸಂಸ್ಥಾಪಕರ ದಿನ – ಉಪನ್ಯಾಸ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ನಾವೆಲ್ಲ ವಚನ ಸಾಹಿತ್ಯ ಓದಿ ಕಂಠಪಾಠ ಮಾಡಿ ಪ್ರತಿಯೊಬ್ಬರನ್ನು ಶರಣರೆ ಎಂದು ಸಂಬೋಧಿಸಿ, ಶರಣರಂತೆ ಸರಳತೆಯಿಂದ ಬದುಕಬೇಕು. ಸಾಧ್ಯವಾಗದಿದ್ದರೆ ಕನಿಷ್ಠಪಕ್ಷ ಶರಣರ ಒಂದಿಷ್ಟು ವಿಚಾರಗಳನ್ನು ಅರಿತುಕೊಂಡು ಅವರಂತೆ ಬಾಳಿ ಬದುಕಿದರೆ ಸಾರ್ಥಕವಾಗುತ್ತದೆ. ಮುಂದಿನ ಪೀಳಿಗೆ ಸರಿಯಾದ ದಾರಿಯಲ್ಲಿ ನಡೆಯಲಿ ಎಂಬ ಉದ್ದೇಶದಿಂದಲೇ ಅನೇಕ ಮಹನೀಯರಂತೆ ಶರಣ ಸಾಹಿತ್ಯದ ಪ್ರಚಾರ ಪ್ರಸಾರದಲ್ಲಿ ಸುತ್ತೂರು ರಾಜೇಂದ್ರ ಶ್ರೀಗಳವರ ಪ್ರಯತ್ನ ಶರಣ ಸಾಹಿತ್ಯ ಪರಿಷತ್ ಮೂಲಕ ಆಗುತ್ತಿದೆ.

ಬಸವಣ್ಣನವರ ಆದರ್ಶಗಳನ್ನು ಪಾಲಿಸಿದಂತಹ ಅನೇಕರು ದೇವರಾದರು, ಆದರೆ ಬಸವಣ್ಣ ಎಂದಿಗೂ ಬಸವಣ್ಣನೇ ಎಂದು ಕಾರ್ಯಕ್ರಮದ ಉದ್ಘಾಟನೆ ಮಾಡಿದ ನ್ಯಾಮತಿ ತಾಲೂಕು ತಹಶೀಲ್ದಾರ್ ಎಂ.ಪಿ. ಕವಿರಾಜ್ ನುಡಿದರು.

ಶರಣ ಚಳುವಳಿಯ ಫಲವಾಗಿ ವಚನ ಸಾಹಿತ್ಯ ಜನರ ಆಡುವ ಭಾಷೆ ಕನ್ನಡದಲ್ಲಿ ರಚನೆಯಾಗಿ ಭಕ್ತಿ ಭಾವ ದಾರ್ಶನಿಕ ಸಾಮಾಜಿಕ ವಿಚಾರಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.

ಅಂದಶ್ರದ್ಧೆ ನಿವಾರಣೆ ಜಾತ್ಯತೀತತೆಯ ಪ್ರತಿಪಾದನೆ ಸತ್ಯಶುದ್ಧ ಕಾಯಕನಿಷ್ಠಾ ಜೀವನವನ್ನು ನಡೆಸುವಲ್ಲಿ ವಚನಗಳು ಮಾರ್ಗದರ್ಶಿ ಸೂತ್ರಗಳಾದವು. ಇಂಥ ಸಾಹಿತ್ಯವು ಕನ್ನಡದಲ್ಲಿ ರಚನೆಯಾದದ್ದು ಹಾಗೂ ಇಂದಿಗೂ ಸಹ ಅದನ್ನು ಉಳಿಸುವ ಪ್ರಚಾರ ಪ್ರಸಾರ ಮಾಡುವಲ್ಲಿ ಅನೇಕರ ಕೊಡುಗೆ ಇದೆ ಅಂತಹದರಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿದ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ ಕೊಡುಗೆ ಅಪಾರ ಎಂದು ಉಪನ್ಯಾಸ ನೀಡಿದ ಶ್ರೀಮತಿ ಲತಾ ಸಂತೋಷ್ ಕುಮಾರ್ ನುಡಿದರು.

ನ್ಯಾಮತಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶರಣ ಪರಂಪರೆಯ ಕುರುಹುಗಳು ಇದ್ದಾವೆ. ಶರಣ ಸಾಹಿತ್ಯ ಪರಿಷತ್ತು ತಾಲೂಕಿನ ಜನತೆಯಲ್ಲಿ ಶರಣ ಸಾಹಿತ್ಯದ ಶರಣರ ಜೀವನ ಮತ್ತು ಇಲ್ಲಿಯ ಪೂರ್ವಜರ ಕೊಡುಗೆಗಳನ್ನು ತಾಲೂಕಿನ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಉಂಟು ಮಾಡುವ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ ಪರಿಷತ್ತಿನ ಅಧ್ಯಕ್ಷ ಶಿವಯೋಗಿ ಎಂ.ಬಿ. ನುಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಎಚ್. ಮಹೇಶ್ವರಪ್ಪ, ಸ್ವಾಗತವನ್ನು ಕವಿತಾ ವೀರೇಶ, ಶರಣು ಸಮರ್ಪಣೆಯನ್ನು ಅಂಬಿಕಾ ಸುಭಾಷಚಂದ್ರ, ಪ್ರಾರ್ಥನೆಯನ್ನು ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದ ಸದಸ್ಯರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ್ ಪಿ.ಜಿ. ನಡೆಸಿಕೊಟ್ಟರು..

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *