ಲಿಂಗಾಯತ ಧರ್ಮದ ಪರ ಧ್ವನಿಯೆತ್ತುವ ಈ ವಿಡಿಯೋದಲ್ಲಿಯೂ ಒಂದು ಗೊಂದಲವಿದೆ.
ಬೆಂಗಳೂರು
ಇಂದು ಲಿಂಗಾಯತ ಸಮಾಜದ ಮುಂದಿರುವ ಬಹುಮುಖ್ಯ ಪ್ರಶ್ನೆಯನ್ನು ಚರ್ಚಿಸುವ ಐದು ನಿಮಷದ ವಿಡಿಯೋ ವೈರಲ್ ಆಗುತ್ತಿದೆ.
ಪ್ರತ್ಯೇಕ ಧರ್ಮ ಮಾನ್ಯತೆ ಕೇಳುತ್ತಿರುವ ಲಿಂಗಾಯತ ಸಂಘಟನೆಗಳನ್ನು, ಮುಖಂಡರನ್ನು, ಕಾರ್ಯಕರ್ತರನ್ನು ಧರ್ಮ ಒಡೆದವರು ಎಂದು ದೂಷಿಸಿಕೊಂಡು ಬರಲಾಗುತ್ತಿದೆ.
ಆದರೆ ನಿಜಕ್ಕೂ ಧರ್ಮ ಒಡೆದವರು ಯಾರು?
ಲಿಂಗಾಯತ ಧರ್ಮದ ಕೂಗೆದ್ದಾಗಲೆಲ್ಲ ಅದಕ್ಕೆ ಅಡ್ಡಗಾಲು ಹಾಕುತ್ತಿರುವುದು ಪಂಚಾಚಾರ್ಯರು. ಇವರು ಲಿಂಗಾಯತ ಧರ್ಮವನ್ನು ವಿರೋದಿಸುವ ವೈದಿಕ ಶಕ್ತಿಗಳಿಗೆ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗೆ ಪ್ರತಿ ಪಂಗಡವೂ ಪ್ರತ್ಯೇಕವಾಗಿ ಹೋರಾಡುವ ಅಗತ್ಯವಿರುವುದಿಲ್ಲ. ಅಲ್ಪ ಸಂಖ್ಯಾತ ಧರ್ಮಕ್ಕೆ ಸಿಗುವ ಸವಲತ್ತುಗಳನ್ನು ಎಲ್ಲರೂ ಅನುಭವಿಸಬಹುದು.
ವಿಪರ್ಯಾಸವೆಂದರೆ ಲಿಂಗಾಯತ ಧರ್ಮ ವಿರೋಧಿಸುವ ಪಂಚಾಚಾರ್ಯರು ತಮ್ಮ ಜಂಗಮ ಜಾತಿಗೆ ಪರಿಶಿಷ್ಟ ಪಂಗಡಗಳಿಗೆ ಸಿಗುವ ಮೀಸಲಾತಿಯನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡೇ ಬಂದಿದ್ದಾರೆ.
ಜಾತಿಗಣತಿಯಲ್ಲಿ ಸಮಾಜದ ಮುಂದಿರುವ ಗೊಂದಲಗಳಿಗೂ ಇವರೇ ಕಾರಣ.
ಲಿಂಗಾಯತರು, ವೀರಶೈವರು ಒಂದೇ ಎನ್ನುವ ಇವರು ತಮ್ಮ ಕಾರ್ಯಕ್ರಮಗಳಲ್ಲಿ ಇಂದಿಗೂ ಬಸವಣ್ಣನವರ ಚಿತ್ರ ಹಾಕುವುದಿಲ್ಲ.
ಲಿಂಗಾಯತ ಧರ್ಮದ ಪರ ಧ್ವನಿಯೆತ್ತುವ ಈ ವಿಡಿಯೋದಲ್ಲಿಯೂ ಒಂದು ಗೊಂದಲ ಕಾಣಿಸುತ್ತದೆ. ವೀರಶೈವರು ಲಿಂಗಾಯತ ಸಮಾಜದ ಒಂದು ಪಂಗಡವಷ್ಟೇ. ಆದರೆ ವಿಡಿಯೋದಲ್ಲಿ ಪದೇ ಪದೇ ಇಡೀ ಸಮಾಜವನ್ನು ‘ವೀರಶೈವ ಲಿಂಗಾಯತ’ ಹೆಸರಿನಿಂದ ಕರೆಯುವ ಔಚಿತ್ಯವೇನು?