ಬಾಗಲಕೋಟೆ
ಬಸವ ಸಂಸ್ಕೃತಿ ಅಭಿಯಾನದ ವೇದಿಕೆ ಕಾರ್ಯಕ್ರಮ ಇಂದು ಸಂಜೆ ನಗರದ ಕಲಾಭವನದಲ್ಲಿ ನಡೆಯಿತು.
ನೆರೆದಿದ್ದ ಸಾವಿರಾರು ಶರಣ ಶರಣೆಯರ ಮುಂದೆ ಹಲವಾರು ಪೂಜ್ಯರು ಹಾಗೂ ಚಿಂತಕರು ಅನುಭಾವ ಹಂಚಿಕೊಂಡರು.
ಆಶೀರ್ವಚನ ನೀಡಿದ ಚಿತ್ರದುರ್ಗದ ಛಲವಾದಿ ಪೀಠದ ಪೂಜ್ಯ ಬಸವ ನಾಗಿದೇವ ರು ಎಲೆಕ್ಟ್ರಿಕ್ ವಸ್ತುಗಳು ರಿಪೇರಿಗೆ ಬಂದರೆ ಅದನ್ನು ಗ್ಯಾರೇಜಿಗೆ ತೆಗೆದುಕೊಂಡು ಹೋಗುತ್ತೇವೆ. ಹಾಗೇ ಮನುಷ್ಯರನ್ನು ರಿಪೇರಿ ಮಾಡಲು ಇರುವ ಅದ್ಭುತ ಗ್ಯಾರೇಜೇ ಬಸವಣ್ಣ. ಆ ಗ್ಯಾರೇಜಿಗೆ ನಾವೆಲ್ಲಾ ಪೂಜ್ಯರು ಮೆಕ್ಯಾನಿಕ್ ಗಳಿದ್ದಂತೆ, ಎಂದು ಹೇಳಿದರು.
ಬಸವ ಮಹಾವಿದ್ಯಾಲಯದ ಮೊದಲ ವಿದ್ಯಾರ್ಥಿಗಳು ನಾವೆಲ್ಲಾ. ವೈಜ್ಞಾನಿಕ ತಳಹದಿಯ ಲಿಂಗಪೂಜೆಯಿಂದ, ಶಿವಯೋಗದಿಂದ ನಾವು ಇಂದು ಈ ಸ್ಥಾನದಲ್ಲಿದ್ದೇವೆ. ಅತ್ಯಂತ ಕಡಿಮೆ ಸಮಯದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ರಹಸ್ಯ ಮಾರ್ಗ ಯಾವುದಾದರೂ ಇದ್ದರೆ ಅದು ಬಸವಣ್ಣನವರು ಕೊಟ್ಟ ಇಷ್ಠಲಿಂಗ ಪೂಜೆ.
ಕ್ರಿಶ್ಚಿಯನ್ ಧರ್ಮದಲ್ಲಿ ಯಾರಾದರೂ ಪ್ರಾರ್ಥನೆಗೆ ಬಂದರೆ ಮೊದಲು ಅವರನ್ನು ಪರಮ ಪಾಪಿಯೇ ಎಂದು ಸಂಬೋಧಿಸುತ್ತಾರೆ. ಆದರೆ ಇಲ್ಲಿರುವ ಪೂಜ್ಯರೆಲ್ಲ ತಮ್ಮೆಲ್ಲ ಭಕ್ತರಿಗೆ ಶರಣರೇ ಎಂದು ಸಂಬೋಧಿಸುತ್ತಾರೆ. ಉತ್ಕೃಷ್ಟ ನಾಗರಿಕ (Excellent Man) ಎಂದು ಯಾರನ್ನಾದರೂ ಸೂಚಿಸುವುದಾದರೆ ಬಸವಣ್ಣನವರು ಕೊಟ್ಟ ಶರಣರನ್ನು ಸೂಚಿಸಬಹುದು.
ನಾನು ಬಸವಣ್ಣನವರ ವಿಚಾರಗಳನ್ನು ಹತ್ತನೇ ತರಗತಿಯ ಮಕ್ಕಳ ಮೇಲೆ ಪ್ರಯೋಗ ಮಾಡಿದ್ದೇನೆ. ಆ ವರ್ಷ ನಮ್ಮ ಎಲ್ಲಾ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡರು, ಎಂದು ಪೂಜ್ಯರು ಹೇಳಿದರು.