ಅಕ್ಟೊಬರ್ 16, 17ರ ಕಾರ್ಯಕ್ರಮಕ್ಕೆ ಬರದಂತೆ ನಿರ್ಬಂಧಿಸಲು ಆಗ್ರಹ
ಬಸವನಬಾಗೇವಾಡಿ
ವಿಶ್ವಗುರು ಬಸವಣ್ಣನವರ ಜನ್ಮಸ್ಥಳದಿಂದ ಆರಂಭಗೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧಿಪತಿಗಳನ್ನು ನಿಂದಿಸಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಬಸವಪರ, ಲಿಂಗಾಯತಪರ, ಸರ್ವ ಸಮಾಜಗಳು, ಬಸವಾನುಯಾಯಿಗಳ ಸಭೆ ಬುಧವಾರ ಸಂಜೆ ಇಲ್ಲಿನ ವಿರಕ್ತಮಠದಲ್ಲಿ ನಡೆಯಿತು.
ಮಠದ ಪೂಜ್ಯರಾದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸಂಘಟನೆಗಳ ಅನೇಕ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕನ್ನೇರಿ ಸ್ವಾಮಿಯ ಹೇಳಿಕೆ, ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.

ಸ್ವಾಮೀಜಿ ಹೇಳಿಕೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರು ಬಸವನಬಾಗೇವಾಡಿಗೆ ಬರದಂತೆ ನಿರ್ಬಂಧ ವಿಧಿಸಲು ಆಗ್ರಹಿಸಿ, ಗುರುವಾರ ಮುಂಜಾನೆ 10.30ಕ್ಕೆ ವಿರಕ್ತಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಬಸವೇಶ್ವರ ವೃತ್ತದವರೆಗೆ ಸಾಗುವುದು. ಅಲ್ಲಿ ಪ್ರತಿಭಟನಾ ಸಭೆ ಮಾಡಿ, ಕನ್ನೇರಿ ಸ್ವಾಮೀಜಿಯ ಪ್ರತಿಕೃತಿ ದಹಿಸುವುದು ಎಂದು ತೀರ್ಮಾನ ಮಾಡಲಾಗಿದೆ.
ಸ್ಥಳಕ್ಕೆ ಬರುವ ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಬೇಡಿಕೆಯ ಮನವಿಪತ್ರ ಸಲ್ಲಿಸಲಾಗುವುದು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವೀರಣ್ಣ ವರ್ತೂರ ವಕೀಲರು ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಹೇಳಿದರು.

ಸಭೆಯಲ್ಲಿ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವಭಕ್ತರು ಭಾಗವಹಿಸಲು ಮನವಿ ಮಾಡಿಕೊಂಡರು.
ನಡೆದ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಶರಣ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ವೀರಣ್ಣ ವರ್ತೂರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಜಾ.ಲಿಂಗಾಯತ ಮಹಾಸಭಾದ ಎಂ.ಜಿ. ಆದಿಗೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ಗೊಳಸಂಗಿ, ಸಂಗಮೇಶ ಓಲೆಕಾರ, ಪ್ರಮುಖರಾದ ಎಸ್.ಎ. ಜಳಕಿ, ಹೆಚ್.ಎಸ್. ಬಿರಾದಾರ, ಮಹಾಂತೇಶ ಯರಗೊಂಡ, ಮಹಾಂತೇಶ ಮಡಿಕೇಶ್ವರ, ಸುರೇಶಗೌಡ ಪಾಟೀಲ, ಪಕ್ಕದ ಗ್ರಾಮಸ್ಥರು, ಊರಿನ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.

ಈಗಾಗಲೇ ಬಸವಪರ ಸಂಘಟನೆಯ ಪ್ರಮುಖರು ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿಕೊಟ್ಟು ಮಾತನಾಡಿ ಬಂದಿದ್ದಾರೆ. ಕನ್ನೇರಿ ಸ್ವಾಮೀಜಿ ಗುರುವಾರ 16 ಹಾಗೂ17 ರಂದು ಊರಿಗೆ ಬರದಂತೆ ನೋಡಿಕೊಳ್ಳಿ, ಬಂದರೆ ಗಲಾಟೆ ಆಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆ ಸ್ವಾಮಿಗಳು ಬರದಂತೆ ನೋಡಿಕೊಳ್ಳಲು ಮನವಿ ಮಾಡುವುದಕ್ಕಿಂತ, ಆ ಸ್ವಾಮಿಗಳ ಮೇಲೆ FIR ಮಾಡಿಸ ಬೇಕಿತ್ತು. ಸ್ವಾಮಿ ಊರಿಗೆ ಬಂದಾಗ ಪೊಲೀಸರು ಬಂಧಿಸ ಬೇಕಾಗಿ ಬರುತಿತ್ತು.