ಚಿಕ್ಕಮಗಳೂರು
ಲಿಂಗಾಯತ ಮಠಾಧೀಶರ ಒಕ್ಕೂಟದ ಶ್ರೀಗಳ ಬಗ್ಗೆ ಅವಮಾನಕರ, ಮಾನಹಾನಿಕರವಾಗಿ ಮಾತನಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಮತ್ತು ಬಸವಪರ ಸಂಘಟನೆಗಳು ಎಚ್ಚರಿಸಿವೆ.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್. ಗಂಗಾಧರಪ್ಪ ಮಾತಾಡುತ್ತ, ಶ್ರೀಗಳ ಹೇಳಿಕೆಯಿಂದ ಲಿಂಗಾಯತ ಮಠಾಧೀಶರು ಮತ್ತು ವಿರಕ್ತ ಮಠಾಧಿಪತಿಗಳಿಗೆ ಅವಮಾನವಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಘಟನೆಯಿಂದ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಕನ್ನೇರಿ ಶ್ರೀ ಹೇಳಿಕೆ ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ, ದ್ವೇಷ ಹರಡಲು ಕಾರಣವಾಗುತ್ತದೆ. ಹಾಗಾಗಿ ಅವರು ಈ ಕೂಡಲೇ ಹೇಳಿಕೆಯನ್ನು ವಾಪಸ್ ಪಡೆದು, ನಾಡಿನ ಜನರ ಕ್ಷಮೆ ಯಾಚಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಬಾಣೂರು ಚನ್ನಪ್ಪ, ಎಚ್.ಬಿ. ಗಣೇಶ, ಜಿ. ಚಂದ್ರಶೇಖರ, ಎಂ.ಸಿ. ಚನ್ನೇಗೌಡ, ವಿ ಎನ್ ರಾಜಶೇಖರ ಉಪಸ್ಥಿತರಿದ್ದರು.