ನಗರದಲ್ಲಿ ನೂತನ ‘ಅನುಭವ ಮಂಟಪ’ದ ಉದ್ಘಾಟನೆಯೊಂದಿಗೆ ಎರಡು ದಿನಗಳ ಕಮ್ಮಟ ನಡೆಯಿತು.
ಹುಬ್ಬಳ್ಳಿ:
ಒಂದು ಶಿಕ್ಷಣ ವ್ಯವಸ್ಥೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯವರೆಗೆ ಹಲವು ಹಂತಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತದೆ. ಮುಂದೆ ಆ ಶಿಕ್ಷಣ ಹೊಸ ಹೊಸ ಭಾಷಾ ಆವಿಷ್ಕಾರಗಳ ಹುಟ್ಟಿಗೆ ಕಾರಣವಾಗುತ್ತದೆ. ಅದು ಆಯಾ ವಿದ್ಯಾಕಾಂಕ್ಷಿಗಳನ್ನು ಆಧರಿಸಿ ವಿಷಯಗಳನ್ನು ನೀಡುತ್ತದೆ.
ಅದೇ ರೀತಿ ಬಸವ ಸಿದ್ಧಾಂತವೂ ಸಹ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಮಟ್ಟದ ವಿಷಯಗಳನ್ನು ಒಳಗೊಂಡಿರುವ, ಸೃಷ್ಟಿಯ ಒಡಲನ್ನು ಭೇದಿಸಿ, ಅದರ ಒಡಲೊಳಗೆ ಇರುವ ಮಹಾಸತ್ಯವನ್ನು ಅನುಭಾವದ ಅಕ್ಷರಗಳ ಮೂಲಕ ಬಹಿರಂಗಗೊಳಿಸಿದ ಮಹಾನ್ ಸಂಪತ್ತು, ಈ ವಚನಗಳ ಸಂಪತ್ತು ಬಸವಾದಿ ಶರಣರು ಮನುಕುಲಕ್ಕೆ ಕೊಟ್ಟ ಕೊಡುಗೆಯಾಗಿದೆ.
ವಚನಗಳನ್ನು ಓದಿದ ಕೂಡಲೇ ಎಲ್ಲವೂ ಎಲ್ಲರಿಗೂ ತಿಳಿಯಲಾರದು. ಅದರ ಓದುವಿಕೆ ಎಲ್ಲರಿಗೂ ಸಾಧ್ಯವಾದರೂ ಅರ್ಥ ಮಾಡಿಕೊಳ್ಳುವಿಕೆ ಅವರವರ ಅಂತರಂಗದ ಪ್ರಜ್ಞಾ ವಿಸ್ತಾರವನ್ನು ಅವಲಂಭಿಸಿರುತ್ತದೆ. ಅದು ಪ್ರಾರಂಭದ ಹಂತದಲ್ಲಿ ಬದುಕಿನಲ್ಲಿ ಹೇಗೆ ನಡೆಯಬೇಕು, ನುಡಿಯಬೇಕು, ಉಣ್ಣಬೇಕು, ಉಡಬೇಕು, ಸೃಷ್ಟಿಯ ಇತರ ಜೀವಿಗಳೊಡನೆ ಹೇಗೆ ವರ್ತಿಸಬೇಕು, ಸಮಾಜದ ಜೊತೆಗಿನ ಬದುಕು ಹೇಗಿರಬೇಕು ಎನ್ನುವುದನ್ನು ತಿಳಿಸುತ್ತಾ, ಅದರ ಸರಿಯಾದ ನಡವಳಿಕೆಯೇ ಧರ್ಮ ಎನ್ನುವ ಸ್ಪಷ್ಟ ವ್ಯಾಖ್ಯಾನವನ್ನು ನೀಡುತ್ತದೆ.

ವಚನಗಳು ಸೃಷ್ಟಿಯ ಸ್ವರೂಪ, ಸೃಷ್ಟಿಕರ್ತನ ನೆಲೆ, ಸೃಷ್ಟಿ ಮತ್ತು ಮಾನವ ಸಂಬಂಧ, ಮಾನವ ಮತ್ತು ಇತರ ಜೀವಿಗಳೊಡನೆ ಇರುವ ಸಂಬಂಧಗಳನ್ನಂತೂ ಯಾವ ಧರ್ಮ ಶಾಸ್ತ್ರಗಳಲ್ಲಿಯೂ ನೀಡದ ಮಾಹಿತಿಯನ್ನು ನೀಡುತ್ತವೆ. ದೇವನ ಸ್ವರೂಪ, ದೇವ ಮತ್ತು ಮಾನವನ ಸಂಬಂಧದ ಬಗ್ಗೆ, ವೇದ, ಶಾಸ್ತ್ರ, ಆಗಮ ಉಪನಿಷತ್ತುಗಳಲ್ಲಿಯೂ ಸಿಗದ ಅದ್ಭುತ ನೆಲೆ ಕಲೆಯನ್ನು ವಚನಗಳು ಒದಗಿಸುತ್ತವೆ.
ಈ ರೀತಿಯಲ್ಲಿರುವ ವಚನಗಳು ಕೇವಲ ಸಾಮಾಜಿಕ ನೆಲೆಗಳಲ್ಲಿ ಮಾತ್ರ ಇಲ್ಲ, ಅದು ಮಾನವ ಸೃಷ್ಟಿಯ ಒಡೆಯನಾಗಿ ನಿಲ್ಲಬಹುದಾದ ಅಖಂಡ ತತ್ವಗಳನ್ನು ಬೋಧಿಸುತ್ತವೆ. ಇದನ್ನು ತಿಳಿಯಲು ವಚನಗಳ ಅಧ್ಯಯನ, ಸಾಧನಾ ಕ್ರಮ ಇವೆಲ್ಲವನ್ನೂ ತಿಳಿಯುವ ಪ್ರಯುಕ್ತ, ಉಳವಿಯ ಚೆನ್ನಬಸವಾನಂದ ಸ್ವಾಮೀಜಿ ಅವರು ಹುಬ್ಬಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಯಕಲಾಸಪುರ ಕುಟುಂಬದ,
”ಅನುಭವ ಮಂಟಪ” ಮತ್ತು” ವೀರಮ್ಮ ಫಾರ್ಮ್ ಹೌಸ್” ಉದ್ಘಾಟನಾ ಸಮಾರಂಭದ ಜೊತೆಗೆ ಎರಡು ದಿನಗಳ ಕಮ್ಮಟವನ್ನು ಆಯೋಜಿಸಲು ಸೂಚಿಸಿದರು. ಅದನ್ನು ಕೂಡಲೇ ಒಪ್ಪಿಕೊಂಡ ಶರಣ ಮುರುಗೇಶ್ ಯಕಲಾಸಪುರ ಅವರು ಅದನ್ನು ಇದೇ ಅಕ್ಟೋಬರ್ 24 ಮತ್ತು 25 ರಂದು ನಡೆಸಲು ಸಿದ್ಧರಾದರು. ಅವರ ಪ್ರಯತ್ನದ ಫಲವಾಗಿ ಉತ್ಕೃಷ್ಟ ವಚನಧಾರಿತ ಚಿಂತನೆಗಳ ಮೂಲಕ ಶಿಬಿರಾರ್ಥಿಗಳ ಸಂತೃಪ್ತಿಗೆ ಕಾರಣವಾಯಿತು.


ದೂರದ ಭದ್ರಾವತಿ, ಮೈಸೂರು, ರಾಯಚೂರು, ಬೆಳಗಾವಿ, ಧಾರವಾಡ, ವಿಜಯಪುರ, ದಾವಣಗೆರೆ, ಚಿತ್ರದುರ್ಗ ಮತ್ತಿತರ ಕಡೆಗಳಿಂದ ಸುಮಾರು 250 ರಿಂದ 300 ಜನ ಬಸವಾಸಕ್ತರು ಪಾಲ್ಗೊಂಡರು. 24 ರಂದು ಷಟಸ್ಥಲ ಧ್ವಜಾರೋಹಣದೊಂದಿಗೆ ಕಮ್ಮಟ ಪ್ರಾರಂಭವಾಯಿತು. ಹುಬ್ಬಳ್ಳಿಯ ರುದ್ರಾಕ್ಷಿಮಠದ ಪೂಜ್ಯರು ಷಟಸ್ಥಲ ಧ್ವಜಾರೋಹಣ ಮಾಡಿದರು, ಭದ್ರಾವತಿಯ ರಾಷ್ಟ್ರೀಯ ಬಸವ ದಳದ ತಾಯಂದಿರು ಧ್ವಜಗೀತೆ ಹಾಡಿದರು. ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು.
ರುದ್ರಾಕ್ಷಿಮಠದ ಪೂಜ್ಯರೊಡನೆ ವೇದಿಕೆ ಮೇಲಿದ್ದ ಎಲ್ಲ ಅನುಭಾವಿಗಳು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಮೊದಲನೇ ಗೋಷ್ಠಿಯ ವಿಷಯ “ಕಲ್ಲು ಕಟ್ಟಿಗೆ, ಲೋಹದಿಂದ ಮಾಡಿದ ಪ್ರತಿಮೆಗಳು ದೇವರಲ್ಲ ಎಂದಡೆ ಇಷ್ಟಲಿಂಗವು ದೇವರು ಹೇಗೆ?” ಈ ವಿಷಯದ ಕುರಿತು ವೆಂಕಟಾಪುರ ಬಸವರಾಜಪ್ಪ ಶರಣರು ಪ್ರಸ್ತಾವನೆಯನ್ನು ಮಾಡಿದರು. ಈ ವಿಷಯದ ಮೇಲೆ ಆಳವಾದ ಚರ್ಚೆ ನಡೆಯಿತು. ಸ್ಥಾವರ ಸ್ವರೂಪದ ಪ್ರತಿಮೆಗಳು ಜಂಗಮವಾಗಲಾರವು ಎನ್ನುವ ಅಭಿಪ್ರಾಯವನ್ನು ಅನುಭಾವಿಗಳು ವಿಶ್ಲೇಷಣೆ ಮಾಡಿದರು.
ಸಭಿಕರಿಂದ ಬಂದ ಪ್ರಶ್ನೆ “ಇಷ್ಟಲಿಂಗಕ್ಕೂ ರೂಪವಿದೆ, ಅದು ಕೂಡ ಕೆಲವು ಭೌತಿಕ ವಸ್ತುಗಳ ಸಂಯೋಜನೆಯಾಗಿದೆ. ಅದು ಹೇಗೆ ಜಂಗಮ ಆಗಬಲ್ಲದು?”. ಇದಕ್ಕೆ ಅನುಭಾವಿಗಳು ಉತ್ತರಿಸಿದ್ದು, ದೇವ ಸ್ವರೂಪ ಸಾಕಾರ ನಿರಾಕಾರಗಳನ್ನು ಮೀರಿದ ನೆಲೆಯಾಗಿದ್ದು ಅದು ನಿರಾಕಾರವಾಗಿಯೂ ಸಾಕಾರವಾಗಿಯೂ ಅಸ್ತಿತ್ವವನ್ನು ಹೊಂದಿದೆ.

ಇಷ್ಟಲಿಂಗ ಸಾಕಾರ ಅಂಗದ ಮಲತ್ರಯಗಳನ್ನು ಕಳೆದು ನಿರಾಕಾರದಲ್ಲಡಗಿಸಿ, ಶಿಷ್ಯನಲ್ಲಿಯೇ ಇರುವ ಮೀರಿದ ಬೆಳಕಿನ ಸ್ವರೂಪವಾಗಿ ಶ್ರೀಗುರು ಸಾವಯವ ಮಾಡಿಕೊಟ್ಟಿರುತ್ತಾನೆ. ಅದು ದೃಷ್ಟಿಯೋಗದಲ್ಲಿ ಸಾಕಾರದಿಂದ ನಿರಾಕಾರಕ್ಕೆ ಪಯಣಿಸಿ ಅದನ್ನ ಮೀರಿ ನಿರವಯ ರೂಪವನ್ನು ದರ್ಶನ ಮಾಡಿಸುತ್ತದೆ. ಅದು ಸ್ಥಾವರ ಲಿಂಗದಂತೆ ದೇವರು ಎಂದು ಬಾಹ್ಯವಾಗಿ ಪ್ರಾಣ ಪ್ರತಿಷ್ಠೆ ಮಾಡಿದ ಸ್ವರೂಪ ಅಲ್ಲ ಎನ್ನುವದನ್ನು ವಚನಗಳ ಆಧಾರದ ಮೇಲೆ ವಿವರಣೆ ಕೊಟ್ಟಾಗ ಎಲ್ಲ ಶಿಬಿರಾರ್ಥಿಗಳು ಸಂತೃಪ್ತಿ ವ್ಯಕ್ತ ಮಾಡಿದರು.
ಇದನ್ನು ಮನವರಿಕೆ ಮಾಡಿಕೊಡಲು ಸೃಷ್ಟಿ ಸ್ವರೂಪ, ದೇವನ ಸ್ವರೂಪ, ದೇವ ಸೃಷ್ಟಿಯಲ್ಲಿ ಅಡಗಿ ಕುಳಿತ ಪರಿ, ದೇವನ ಅಖಂಡ ಸ್ವರೂಪ, ಯಾವುದೇ ಖಂಡಿತ(ಎರಡಾದ) ರೂಪದಲ್ಲಿ ದೇವ ಸಿಗಲಾರ ಎನ್ನುವ ಅಂಶಗಳನ್ನು ಮನವರಿಕೆ ಮಾಡಿಕೊಡಲಾಯಿತು.
ಮಧ್ಯಾಹ್ನ 12 ಗಂಟೆಗೆ ಎರಡನೇ ಚಿಂತನ ಗೋಷ್ಠಿ “ಅನುಭವ ಮಂಟಪ ಮತ್ತು ಶೂನ್ಯ ಪೀಠ” ಎನ್ನುವ ವಿಷಯದ ಕುರಿತು ಸಿಂಧನೂರಿನ ಪಿ. ರುದ್ರಪ್ಪ ವಿಷಯ ಪ್ರವೇಶ ಮಾಡಿದರು. ಅನುಭವ ಮಂಟಪ ಎಂದರೇನು? ಅದು ಕೇವಲ ಭೌತಿಕ ರೂಪವೇ? ಅದು ಪ್ರತಿಯೊಬ್ಬನಲ್ಲಿ ಅಸ್ತಿತ್ವದಲ್ಲಿರುವ ಶಿವನ ನೆಲೆ ಎನ್ನುವುದನ್ನ ವಿವರಿಸಿದರು.
ಶರಣರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎನ್ನುವ ಕಪಟ್ರಾಳ ಕೃಷ್ಣರಾಯರ ಲೇಖನಗಳಿಗೆ ಶರಣ ಉತ್ತಂಗಿ ಚನ್ನಪ್ಪನವರು ಗ್ರಂಥದ ಮೂಲಕ ಸಾಬೀತುಪಡಿಸಿದ್ದನ್ನು ನೆನಪಿಸಿಕೊಂಡು, ಆ ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತೆ ವೀಣಾ ಬನ್ನಂಜೆ ಅವರು ಅಪಶ್ರುತಿ ತೆಗೆದಾಗ ಅನುಭಾವಿಗಳು ಅವರಿಗೆ ಉತ್ತರ ನೀಡಿದ್ದನ್ನು ವಿವರಿಸಲಾಯಿತು.
ಇನ್ನು ಶೂನ್ಯ ಪೀಠ ಎನ್ನುವುದು ಭೌತಿಕ ಪೀಠ ಅಲ್ಲ ಅದೊಂದು ಮಾನವನಲ್ಲಿಯೆ ಸಾಧಿಸಬಹುದಾದ ಒಂದು ಅತ್ಯುನ್ನತ ಸಾಧನ ಸ್ಥಿತಿ ಎನ್ನುವುದನ್ನ ವಚನಗಳ ಆಧಾರದಡಿ ಚಿಂತನೆ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಮೂರನೇ ಗೋಷ್ಠಿ, “ಶರಣ ಸಾಹಿತ್ಯದಲ್ಲಿ ಕಲ್ಯಾಣ ಕ್ರಾಂತಿ ಮತ್ತು ಲಿಂಗಯ್ಯ ಸ್ಥಿತಿ”. ಈ ವಿಷಯವನ್ನು ಶರಣ ಪಂಚಾಕ್ಷರಿ ಹಳೇಬೀಡು ಅವರು ವಿಷಯ ಪ್ರಸ್ತಾಪ ಮಾಡಿದರು. ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆ ಮತ್ತು ಹರಳಯ್ಯನವರ ಎಳೆಹೂಟೆ ಶಿಕ್ಷೆಯ ಬಗ್ಗೆ ಚರ್ಚೆ ನಡೆಯಿತು. ಸದೇಹ ಲಿಂಗಯ್ಯಾ ಸ್ಥಿತಿ ಹೊಂದಿದ ಶರಣರಿಗೆ ದೇಹದ ಬಾಧೆ ಉಂಟಾಗಲು ಸಾಧ್ಯವೇ? ಎನ್ನುವ ಚರ್ಚೆ ನಡೆಯಿತು. ದೇಹದ ಮಿತಿಯನ್ನು ಮೀರಿದ ಶರಣರಿಗೆ ಅದು ಯಾವ ಪರಿಣಾಮವನ್ನು ಮಾಡಲಿಲ್ಲ ಎನ್ನುವುದನ್ನ ಚೆನ್ನಬಸವಾನಂದ ಸ್ವಾಮೀಜಿ ಗ್ರಂಥಾಧಾರ ಸಮೇತ ನಿರೂಪಿಸಿದರು.
ದಿನದ ಕೊನೆಯ ಗೋಷ್ಠಿ “ನಮಃ ಶಿವಾಯ ಲಿಂಗ ಓಂ ನಮ್ಹ ಶಿವಾಯ ಬಸವಣ್ಣ” ಎನ್ನುವ ವಿಷಯದ ಕುರಿತು ಶರಣ ಶ್ರೀಧರ ಮುರಾಳೆ ಅವರು ವಿಷಯ ಪ್ರವೇಶ ಮಾಡಿದರು. ಈ ಧರೆ ಹುಟ್ಟದ ಮುನ್ನ ಅಸ್ತಿತ್ವಕ್ಕೆ ಬಂದ ಶಿವನ ಬೆಳಗೆ ಬಸವಣ್ಣ ಎನ್ನುವ ವಿಷಯವನ್ನು ವಚನಗಳ ಆಧಾರ ಸಹಿತ ವಿವರಣೆ ನೀಡಿದರು.
ಮೊದಲನೇ ದಿನದ ಗೋಷ್ಠಿಗಳು ಉತೃಷ್ಟ ನೆಲೆಯಲ್ಲಿ ಚಿಂತನೆ ನಡೆದದ್ದು ಶಿಬಿರಾರ್ಥಿಗಳಿಗೆ ಖುಷಿ ನೀಡಿತು. 25.10.2025 ರಂದು ಬೆಳಿಗ್ಗೆ 9. 30 ಗಂಟೆಗೆ “ಲಿಂಗಾಂಗ ಸಾಮರಸ್ಯ” ಎನ್ನುವ ವಿಷಯವನ್ನು ಪಿ. ರುದ್ರಪ್ಪ ಪ್ರಸ್ತಾಪಿಸಿದರು. ಜಗತ್ತಿನ ಎಲ್ಲ ಧರ್ಮಗಳಿಗಿಂತ ಭಿನ್ನವಾದ ಆರಾಧನ ಮಾರ್ಗ ಇಷ್ಟಲಿಂಗದ ಮೂಲಕ ದೇವನ ಒಡಲೊಳಗೆ ಸೇರಿ ಸೃಷ್ಟಿಯ ಎಲ್ಲ ವಿಧಿಗಳನ್ನು ಮೀರಿ ನಿಲ್ಲುವ ಅದ್ಭುತ ಮಾರ್ಗ. ಶರಣರು ಇಷ್ಟಲಿಂಗದ ಮೂಲಕವೇ ಏಕೆ ದೇವನನ್ನು ಕೂಡುವ ಮಾರ್ಗವನ್ನು ತಿಳಿಸಿದರು ಎನ್ನುವ ವಿಷಯವನ್ನು ವಿಸ್ಟ್ರತವಾಗಿ ತಿಳಿಸಿದರು.” ಲಿಂಗಾಂಗ ಸಾಮರಸ್ಯ” ಮಾನವನೆ ದೇವನಾಗುವ ವಿಶೇಷ ಸಾಧನಾ ಮಾರ್ಗ. ಸೃಷ್ಟಿಯ ಶಕ್ತಿಗಳಾದ ಬ್ರಹ್ಮ, ವಿಷ್ಣು, ರುದ್ರರಿಗೆ ಸಿಗದ ಈ ಮಾರ್ಗ ಶರಣರು ಮನುಕುಲಕ್ಕೆ ಕೊಟ್ಟ ಅದ್ಭುತ ಕೊಡುಗೆ. ಎನ್ನುವದನ್ನು ಕೇಳಿ ಶಿಬಿರಾರ್ಥಿಗಳು ಆನಂದ ಅನುಭವಿಸಿದರು.

ಎರಡನೇ ಗೋಷ್ಠಿ ಮಧ್ಯಾನ್ಹ 12 ರಿಂದ 2 ಗಂಟೆ ವರೆಗೆ ನಡೆಯಿತು. ” ಪಾದೋದಕ ಪ್ರಸಾದ” ಎನ್ನುವ ವಿಷಯದ ಬಗ್ಗೆ ವಿಷಯ ಪ್ರವೇಶ ಮಾಡಿ ಅದ್ಭುತವಾಗಿ ಅನುಭಾವ ನೀಡಿದರು. ಶಿಬಿರಾರ್ಥಿಗಳು ಸಾರ್ಥಕತೆ ಅನುಭವಿಸಿದರು. ಮಧ್ಯಾನ್ಹ 3 ಗಂಟೆಗೆ ” ಜನನ ಮರಣ ರಹಿತರಾದ ಶರಣರ ನೆಲೆ ಯಾವುದು? ಶರಣರು ಮರಳಿ ಮರ್ಥ್ಯಕ್ಕೆ ಬರುತ್ತೇವೆ ಎಂದುದರ ಗೂಡಾರ್ಥವೇನು ” ಎನ್ನುವ ವಿಷಯ ಕುರಿತು ಶರಣ ಬಸವದೇವರು ಪ್ರಸ್ತಾಪಿಸಿದರು. ವಿಷಯ ಆಳವಾಗಿ ಪ್ರಸ್ತಾಪಿಸಿದ ಕಾರಣ ಸಂವಾದಕ್ಕೆ ಅವಕಾಶವೇ ಆಗದಂತೆ ಚಿಂತನೆ ಸಂಪನ್ನಗೊಂಡಿತು.
ಮಧ್ಯಾಹ್ನ 4 ಗಂಟೆಯಿಂದ 5. 30 ಗಂಟೆವರೆಗೆ “ಸಮ್ಯಕ್ ಜ್ಞಾನ ಸತ್ ಕ್ರಿಯೆಗಳ ಮಹತ್ವ” ಕುರಿತು ಬೈಲಹೊಂಗಲದ ಶರಣ ಶಿವಾನಂದ ಅರಭಾವಿ ಅವರು ವಿಷಯ ಮಂಡನೆ ಮಾಡಿದರು. ಕೊನೆಯ ಗೋಷ್ಠಿಯ ಚಿಂತನೆಯನ್ನು ಸಭಿಕರು ಪೂರ್ಣವಾಗಿ ಆನಂದಿಸಿದರು. 26.10.2025 ಬೆಳಿಗ್ಗೆ 11 ಗಂಟೆಗೆ “ಅನುಭವ ಮಂಟಪ” ಮತ್ತು “ವೀರಮ್ಮ ಫಾರ್ಮ್ ಹೌಸ್” ಉದ್ಘಾಟನೆಯನ್ನು ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಎರಡೆತ್ತಿನ ಮಠದ ಸ್ವಾಮೀಜಿ ಮಾಡಿದರು.
ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳಿಂದ ಧ್ವಜಾರೋಹಣ ನಡೆಯಿತು. ಕಮತಗಿ ಹುಚ್ಚೇಶ್ವರ ಮಠದ ಶ್ರೀ, ಅಮೀನಗಡ ಗಚ್ಚಿನಮಠದ ಶ್ರೀ, ಅಭಿನವ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವಾನಂದ ಶ್ರೀ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಶಾಸಕ ಮಹೇಶ ಟೆಂಗಿನಕಾಯಿ, ಉದ್ಯಮಿ ಶಂಕ್ರಣ್ಣ ಮುನವಳ್ಳಿ, ಯಕಲಾಸಪುರ ಬಂಧು ಮಿತ್ರರು, ಬಸವ ಬಳಗ ಉಪಸ್ಥಿತರಿದ್ದರು.

ವರದಿ ಬಹಳ್ವಿವರವಾಗಿ ಬಂದಿದೆ. ಅನುಭವ ಮಂಟಪದ ವಿಳಾಸ ಕಳಿಸಿ. ಈ ತರಹ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ನಡೆಯಬೇಕು. ಧನ್ಯವಾದ
Only such intensive and intentional workshops organised for limited participants strengthen the philosophy of Lingayatism or Basavadharma . Ilkal Vijayamahantaswamiji used to organise such workshops in different parts of Karnataka . We are deeply convinced of Basava way of Life because of His committed works .