ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದ ಶಿವಾನಂದ ಮಠದಲ್ಲಿ ಬಸವ ಕೇಂದ್ರದ ೩೫೪ನೇ ಸೋಮವಾರದ ವಚನ ಚಿಂತನ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಸಿಂಧನೂರಿನ ಲಿಂಗೈಕ್ಯ ಶರಣ ಕುರಕುಂದಿ ವೀರಭದ್ರಪ್ಪ ಅವರ ಮೊದಲ ವಷ೯ದ ನೆನಹು ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅನುಭಾವ ನೀಡಿದ ವೆಂಕಟಾಪುರದ ಬಸವರಾಜಪ್ಪ ಶರಣರು, ವೀರಭದ್ರಪ್ಪನವರು ವಚನ ಸಾಹಿತ್ಯವನ್ನು ಪ್ರಚಾರ ಮಾಡಿದಷ್ಟು ಲಿಂಗಾಯತ ಧಮ೯ದ ಮಠಾಧೀಶರು ಕೂಡಾ ಮಾಡಿರಲಿಲ್ಲ. ನಿಸ್ವಾರ್ಥತೆಯಿಂದ ಬಸವಾದಿ ಶರಣರ ಸಂದೇಶ ಎಲ್ಲರಿಗೂ ತಲುಪಿಸಲು ತಮ್ಮ ಆರೋಗ್ಯವನ್ನು ಕೂಡಾ ಲೆಕ್ಕಿಸದೆ ಬಯಲು ಪೂಜೆಗಾಗಿ ದುಡಿದ ಧೀರ ಶರಣ ಅವರಾಗಿದ್ದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಬಸವತತ್ವ ಚಿಂತಕರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ, ಬಸವಾದಿ ಶರಣ ಶರಣೆಯರ ವಚನಗಳನ್ನು ಜನಮಾನಸದಲ್ಲಿ ಬಿತ್ತುತ್ತಾ, ಸಾಧಕರಿಗೆ ಮಾಗ೯ದಶ೯ಕರಾಗಿ, ಲಿಂಗಾಯತ ಧಮ೯ದ ನಿಜಾಚರಣೆಯ ಮೂಲಕ ಜನರನ್ನು ಜಾಗೃತಗೊಳಿಸಿ ಧರ್ಮ ಪ್ರಚುರಗೊಳಿಸಿದ ಮಹಾಶರಣ ವೀರಭದ್ರಪ್ಪ ಎಂದು ಸ್ಮರಿಸಿದರು.
ಮೂಢನಂಬಿಕೆಯಿಂದ ಜನರನ್ನು ಹೊರತಂದು ಸ್ವತಂತ್ರ ಜೀವನ ನಡೆಸಲು ವಚನಗಳ ಮೂಲಕ ಅರಿವು ಮೂಡಿಸಿದ ನಿಜ ಜಂಗಮ ವೀರಬಧ್ರಪ್ಪ ಅವರಾಗಿದ್ದರು ಎಂದು ಮುಖ್ಯ ಅತಿಥಿಯಾಗಿದ್ದ ತುರುವಿಹಾಳದ ಬಸವರಾಜಪ್ಪ ಬ್ಯಾಲಿಹಾಳ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನಮಂತಪ್ಪ ಮಡಿವಾಳ ವಹಿಸಿದ್ದರು. ಅತಿಥಿಗಳಾಗಿ ದೇವಪ್ಪ ಕೋಳೂರು, ಅಮರೇಶಪ್ಪ ದೇವಲ್, ಮಲ್ಲೇಶಪ್ಪ ಮಾಟಲದಿನ್ನಿ, ನರಸಪ್ಪ ತೇಲಗರ್, ಷಣ್ಮುಖಪ್ಪ ಬಳ್ಳಾರಿ, ಮಹಾಲಿಂಗಪ್ಪ ಮೇಟಿ, ಶರಣಪ್ಪ ಮರಕಟ್ಟ ಭಾಗವಹಿಸಿದ್ದರು.

ಆರಂಭದಲ್ಲಿ ಬಸವಾದಿ ಶರಣರು ಹಾಗೂ ಲಿಂಗೈಕ್ಯ ವೀರಭದ್ರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ನಿರೂಪಣೆಯನ್ನು ಹನಮಂತಪ್ಪ ಹುಣಿಸಿಹಾಳ ನೆರವೇರಿಸಿದರು. ಗ್ರಾಮದ ಶರಣ ಶರಣೆಯರು ಉಪಸ್ಥಿತರಿದ್ದರು.
