ದಾವಣಗೆರೆ:
ಸಂವಿಧಾನದ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬಂದಾಗ ಹಿಂದಿನಿಂದ ಬೈಯುವುದನ್ನು ಬಿಟ್ಟು ಧೀರೋದಾತ್ತ ಮನೋಭಾವ ಮೈಗೂಡಿಸಿಕೊಂಡು ಸಂವಿಧಾನಕ್ಕೆ ಅಪಚಾರ ಎಸಗುವವರ ವಿರುದ್ಧ ಎದೆ ಎತ್ತಿ ಪ್ರತಿಭಟನೆ ಮಾಡಿದಾಗ ಮಾತ್ರ ದೇಶದ ಬಹುತ್ವ ಉಳಿಯಲು ಸಾಧ್ಯವಾಗುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನಕ ನೌಕರರ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ‘ತಲ್ಲಣಿಸದಿರು ಮನವೇ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಏನೇ ಮಾತನಾಡಿದರೂ ಅದಕ್ಕೆ ಅಪಾರ್ಥ ಕಲ್ಪಿಸಿಕೊಳ್ಳುವ ವರ್ಗ ನಮ್ಮ ಸಮಾಜದಲ್ಲಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಬೇಕಿದೆ. ಮಾತನಾಡುವುದೇ ಅಪಾಯಕಾರಿ ಎನ್ನುವ ಸಂದರ್ಭ ಬಂದಿದೆ.
ಬಸವಣ್ಣನವರು ಆ ಕಾಲದಲ್ಲಿಯೇ ಮೊದಲು ನಿಮ್ಮ ಧ್ವನಿ ಎತ್ತುವುದನ್ನು ರೂಢಿಸಿಕೊಳ್ಳಿ, ಹೆದರುವ ಅಗತ್ಯವಿಲ್ಲ ಎಂದು ವಚನಗಳ ಮೂಲಕ ಹೇಳಿದ್ದಾರೆ ಎಂದರು.

ಇಂದು ನಾವು ಅನೇಕ ರೀತಿಯ ತಲ್ಲಣಗಳಿಗೆ ತುತ್ತಾಗಿದ್ದೇವೆ. ಎಲ್ಲಕ್ಕಿಂತ ರಾಜಕೀಯ ತಲ್ಲಣ ಹೆಚ್ಚಾಗಿದೆ. ಸಮಾಜದಲ್ಲಿ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ಒಂದು ವರ್ಗ ಇದ್ದರೆ, ಸಂವಿಧಾನವನ್ನೇ ಬದಲಾಯಿಸಿ ಹೊಸ ಸಂವಿಧಾನ ತರಬೇಕು ಎಂದು ಒಂದು ಗುಂಪು ಇದೆ.
ಆದರೆ, ಅಂಬೇಡ್ಕರ್ ಹೇಳಿದ್ದು ಸಂವಿಧಾನವನ್ನು ಬದಲಾವಣೆ ಮಾಡುವುದಲ್ಲ, ಅದರಲ್ಲಿರುವ ಆಶಯಗಳು ಬದಲಾವಣೆ ಆಗಬೇಕು ಎನ್ನುವುದಾದರೆ ಮಾಡಬಹುದು ಎಂದಿದ್ದರು. ಹಾಗಾಗಿ ಅನೇಕ ಸುಧಾರಣೆಗಳನ್ನು ಅದರಲ್ಲಿ ಮಾಡಲಾಗಿದೆಯೇ ವಿನಃ ಪೂರ್ಣ ಸಂವಿಧಾನವನ್ನೇ ಬದಲಾವಣೆ ಮಾಡುವ ವ್ಯವಸ್ಥೆ ಇಲ್ಲ. ದುರ್ದೈವದ ಸಂಗತಿ ಎಂದರೆ ಸಂವಿಧಾನವನ್ನೇ ಸುಟ್ಟು ಹಾಕುವಂತಹ ರಾಜಕೀಯ ಪ್ರತಿನಿಧಿಗಳು ನಮ್ಮ ನಡುವೆ ಇದ್ದಾರೆ ಎಂದು ವಿಷಾದಿಸಿದರು.
ಇಂದು ಮತ್ತೆ ನಾವು ಜಾತಿಯ ಬೇಲಿ ನೆಡುತ್ತಿದ್ದೇವೆ. ಜಾತಿ ಗೋಡೆಗಳ ಕೆಡವಿ, ಮೇಲು, ಕೀಳು ಎಂಬ ಬೇಲಿ ಸುಟ್ಟು ಒಬ್ಬರನೊಬ್ಬರು ಅಪ್ಪಿಕೊಳ್ಳಬೇಕೆನ್ನುವುದು ಸಂವಿಧಾನದ ಮೂಲ ಆಶಯ.

ಸಂವಿಧಾನ ಕೇವಲ ಸ್ವಾತಂತ್ರ್ಯವನ್ನು ಮಾತ್ರ ಕೊಟ್ಟಿಲ್ಲ, ಹಕ್ಕುಗಳನ್ನು ಜವಾಬ್ದಾರಿಗಳನ್ನೂ ನೀಡಿದೆ. ಆದರೆ, ನಾವು ಜವಾಬ್ದಾರಿಗಳಿಂದ ಜಾರಿಕೊಳ್ಳುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.
ಕನಕ ಗುರುಪೀಠದ ಡಾ. ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮಾಜದಲ್ಲಿ ಇಂದು ಅನೇಕ ತಲ್ಲಣಗಳಿವೆ. ಈ ಎಲ್ಲವುಗಳನು ಹೊರತುಪಡಿಸಿ ಜ್ಞಾನದ ತಲ್ಲಣಗಳಿಗೆ ಸಾಂತ್ವನ ನೀಡಬೇಕೆನ್ನುವುದೇ ಈ ಕಾರ್ಯಕ್ರಮದ ಮೂಲ ಆಶಯವಾಗಿದೆ.
ಸಮಾಜದ ಜನರಲ್ಲಿ ಜ್ಞಾನ ಕಟ್ಟಬೇಕು, ಮೌಡ್ಯಗಳನ್ನು ತೊಡೆದು ಹಾಕಬೇಕು, ಪ್ರಜ್ಞಾವಂತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ತಲ್ಲಣಿಸದಿರು ಮನವೇ ಶೀರ್ಷಿಕೆಯಡಿ ಕಾರ್ಯಕ್ರಮ ರಾಜ್ಯಾದ್ಯಂತ ಆಯೋಜನೆಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಉದ್ಘಾಟಿಸಿದರು. ‘ಸಂವಿಧಾನ ಮತ್ತು ಬಹುತ್ವ’ ಕುರಿತು ಬಂಜಗೆರೆ ಜಯಪ್ರಕಾಶ ಮಾತನಾಡಿದರು. ಸಾಹಿತಿ ರಾಮಲಿಂಗಪ್ಪ ಬೇಲೂರು ಆಶಯ ನುಡಿಯಾಡಿದರು. ಕಾರ್ಯಕ್ರಮದ ರಾಜ್ಯ ಸಂಚಾಲಕ ಮಂಜಪ್ಪ ಮಾಗೋಡಿ, ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

ಅದ್ಭುತವಾದ ಮಾತುಗಳು.