ದುಬೈ:
ನಗರದ ‘ಮಿಲೇನಿಯಂ ಪ್ಲಾಜಾ’ದಲ್ಲಿ ಅನುಭವ ಮೀಡಿಯಾ ಹೌಸ್ ಅಸೋಸಿಯೇಷನ್ (ವಚನ ಟಿವಿ)ನ ರಾಷ್ಟ್ರೀಯ ಪುರಸ್ಕಾರ ಸಮಾರಂಭ ನಡೆಯಿತು.
ಸಮಾರಂಭದ ಸಾನಿಧ್ಯವನ್ನು ವಹಿಸಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತ, ಗಟ್ಟಿ ಮನಸ್ಥಿತಿ ಇದ್ದರೆ ಮಾತ್ರ ಲಿಂಗಾಯತ ತತ್ವಗಳನ್ನು ಹೇಳಲು ಸಾಧ್ಯವಾಗುತ್ತದೆ. ಬಸವತತ್ವಗಳನ್ನು ನಿಷ್ಠುರವಾಗಿ ಹೇಳುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲ ಮಾಡಬೇಕು ಮುಖವಾಡ ಸಲ್ಲದು.

ಬಸವಣ್ಣನವರು ಎಲ್ಲ ಕಾಲಕ್ಕೂ ಸಲ್ಲುವಂಥವರು. ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆಯನ್ನು ಅವರು ಬೆಳೆಸಿದರು.
ಬಸವಣ್ಣ ಸ್ವಾತಂತ್ರ್ಯ ಕೊಟ್ಟಿದ್ದು ಮಹಿಳೆಯರಿಗೆ. ನಾವು ಪ್ರತಿಯೊಬ್ಬರೂ ಬಸವತತ್ವದಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಅಜ್ಞಾನ, ಅಂಧಶ್ರದ್ದೆ, ಮೌಢ್ಯಗಳನ್ನು ಶರಣರು ತೊಲಗಿಸಿದರು ಎಂಬುದನ್ನು ಅರಿಯಬೇಕೆಂದು ಸ್ವಾಮೀಜಿ ಹೇಳಿದರು.

ನಟಿ ಉಮಾಶ್ರೀ ಮಾತನಾಡುತ್ತ, ಮುಖ್ಯವಾಗಿ ಸಹೃದಯತೆಯಿರಬೇಕು. ಅದಿದ್ದರೆ ಮಾತ್ರ ಯಾವುದೇ ಕಾರ್ಯಸಾಧನೆ ಆಗುತ್ತೆ. ಬಸವಾದಿ ಶರಣರ ಮನಸ್ಸು, ಮಾತು, ಚಿಂತನೆ ಸಮಾಜಮುಖಿ ಆಗಿದ್ದವು. ನಮ್ಮ ಸಂವಿಧಾನದ ಆಶಯವೇ ಬಸವತತ್ವವಾಗಿದೆ ಎಂದರು.
ಸಮಾರಂಭದಲ್ಲಿ ಡಾ. ಗಂಗಾ ಮಾತಾಜಿ, ಎಸ್.ಜಿ. ಸಿದ್ದರಾಮಯ್ಯ, ಹಂಸಲೇಖ, ದಾಕ್ಷಾಯಿಣಿ ಶರಣಬಸಪ್ಪ ಅಪ್ಪ, ಅಶ್ವಿನಿ ಪುನೀತರಾಜಕುಮಾರ್, ಐ. ಆರ್. ಮಠಪತಿ, ಪ್ರೊ. ವಿಜಯಲಕ್ಷ್ಮಿ ಹಾಗೂ ಗುರುನಾಥ ಗಡ್ಡೆ ದಂಪತಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು.

ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಡಾ. ಗಂಗಾ ಮಾತಾಜಿ, ನಟಿ ಸುಧಾರಾಣಿ, ಸಂಗೀತ ನಿರ್ದೇಶಕ ಹಂಸಲೇಖ, ಇಸ್ರೋ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಕಿರಣಕುಮಾರ್, ಸಾಹಿತಿ ಎಸ್. ಜಿ. ಸಿದ್ಧರಾಮಯ್ಯ ಸಹ ಸಮಾರಂಭ ಕುರಿತು ಮಾತನಾಡಿದರು.
ವಚನ ಟಿವಿ ಪ್ರಧಾನ ಸಂಪಾದಕ ಸಿದ್ದು ಯಾಪಲಪರವಿ, ಅಲ್ಲಮಪ್ರಭು ನಾವದಗೆರೆ, ಎಸ್.ಎಂ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಟಿಸಿಎಸ್ ಹಾಲಿಡೇಸ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
