ಹುಲಸೂರ:
‘ಬಸವಾದಿ ಶರಣೆ ಅಕ್ಕಮಹಾದೇವಿಯವರ ವಚನಗಳನ್ನು ಮಹಿಳೆಯರು ಅರಿತು, ಬರುವ ಬೆದರಿಕೆಗೆ ಬಗ್ಗದೆ, ಹೊಗಳಿಕೆಗೆ ಹಿಗ್ಗದೆ ಸಮಾಧಾನ ಚಿತ್ತದಿಂದ ಸಾಧನಾ ಪಥದಲ್ಲಿ ಸಾಗಬೇಕು’ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅಲ್ಲಮಪ್ರಭುದೇವರ ಶೂನ್ಯಪೀಠದ ಅನುಭವ ಮಂಟಪದಲ್ಲಿ ನಡೆದ ‘ಶರಣ ಸಂಸ್ಕೃತಿ ಉತ್ಸವ’ ಮತ್ತು ‘ವಚನ ರಥೋತ್ಸವ’ ಸಮಾರಂಭದಲ್ಲಿ ‘ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಸಾಮರ್ಥ್ಯ ಮಹಿಳೆಯರಿಗಿದೆ. ಪ್ರಗತಿ ಸಾಧಿಸಲು ಮಹಿಳೆಯರು ಮೊದಲು ಶಿಕ್ಷಣವಂತರಾಗಿ ಆರ್ಥಿಕ ಸಬಲತೆ ಸಾಧಿಸಬೇಕು.
ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ತಾವೇ ಹೋರಾಟ ಮಾಡಬೇಕು. ಯಾವುದೇ ತೆರನಾದ ಕಷ್ಟ ಬಂದಾಗ ಎದೆಗುಂದದೆ, ಶರಣೆ ಅಕ್ಕಮಹಾದೇವಿಯವರ ನೆನಪು ಮಾಡಿಕೊಂಡು ಮುನ್ನುಗ್ಗಬೇಕು ಎಂದರು.
ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಣೆ ಮಾಡಬೇಡಿ ಅವರನ್ನು ಬಾಲ್ಯ ವಿವಾಹಕ್ಕೆ ದೂಡಬೇಡಿ ಎಂದು ನೆರೆದವರಲ್ಲಿ ವಿನಂತಿ ಮಾಡಿಕೊಂಡರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಅವರು ಶರಣರ ವಿಚಾರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ‘ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರಶಸ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಶಾಸಕ ಶರಣು ಸಲಗರ ಮಾತನಾಡಿ, ಶರಣರ, ಅನೇಕ ಮಹಿಳಾ ಸಾಧಕರ ಸಾಧನೆ ನಮ್ಮ ಮಹಿಳೆಯರಿಗೆ ಆದರ್ಶವಾಗಲಿ ಎಂದರು.
ಸಮಾರಂಭದ ಸಾನಿಧ್ಯವನ್ನು ಪೂಜ್ಯ ಶಿವಾನಂದ ಸ್ವಾಮೀಜಿ ವಹಿಸಿದ್ದರು. ಸ್ವಾಮೀಜಿ ಅವರ 74ನೇ ಜನ್ಮದಿನಾಚರಣೆ ಅಂಗವಾಗಿ ಸಾಹಿತ್ಯ, ಸಮಾಜಸೇವೆ, ಶಿಕ್ಷಣ, ಸೈನಿಕ ಸೇವೆ ಸೇರಿದಂತೆ ವಿವಿಧ ರಂಗದಲ್ಲಿ, ವಿವಿಧ ರೀತಿಯಲ್ಲಿ ಸೇವೆಗೈದ 74 ಸಾಧಕರಿಗೆ ‘ಕಾಯಕ ರತ್ನ ಪ್ರಶಸ್ತಿ’ ನೀಡಲಾಯಿತು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸೋನಾಲ ವಿಜಯಸಿಂಗ್, ಸುಧೀರ ಕಾಡಾದಿ, ಲತಾ ಹಾರಕೂಡೆ, ಸುವರ್ಣ ಧನ್ನೂರ, ಲಕ್ಷ್ಮಿ ಬಾವಗೆ, ಉಲ್ಲಾಸಿನಿ ಮುದಾಳೆ, ರಾಜಕುಮಾರ ತೊಂಡಾರೆ, ಬಸವರಾಜ ರಗಟೆ, ಸಪ್ನಾ ಪಟ್ನೆ, ಅಪ್ಪಾರಾವ ಖಂಡಾಳೆ, ಸಿಪಿಐ ಅಲಿಸಾಬ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು, ಮಹಿಳಾ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ನವಲಿಂಗ ಪಾಟೀಲ ನಿರೂಪಿಸಿದರು.
ವಚನ ರಥೋತ್ಸವ
ವಚನ ಸಾಹಿತ್ಯ ಕಟ್ಟುಗಳನ್ನು ಶರಣೆಯರು ತಲೆಮೇಲೆ ಹೊತ್ತುತಂದು ರಥದಲ್ಲಿರಿಸಿದರು. ನಂತರ ವಚನ ಗ್ರಂಥಗಳನ್ನು ಹೊತ್ತ ರಥೋತ್ಸವಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಪೂಜ್ಯ ಡಾ. ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡುತ್ತ, ಯುವಜನರು ಯಾವುದೇ ಗೊಂದಲಕ್ಕೆ ಒಳಗಾಗದೆ ಬಸವಾದಿ ಶರಣರ ವಚನಗಳನ್ನು ಓದಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ವೈದಿಕರು ಅಂದು ವಚನ ಸಾಹಿತ್ಯ ಸುಟ್ಟರು. ಆದಕಾರಣ ಕೇವಲ 23 ಸಾವಿರ ವಚನಗಳು ಮಾತ್ರ ನಮಗೀಗ ಲಭ್ಯವಾಗಿವೆ. ವಚನ ಸಾಹಿತ್ಯದ ಮೌಲ್ಯಗಳನ್ನು ವಿರಕ್ತಮಠಗಳು, ಮಠಾಧೀಶರು ಜನರಿಗೆ ತಲುಪಿಸಿ ಅರಿವು ಮೂಡಿಸಬೇಕಾಗಿದೆ ಎಂದರು.
ನೆರೆದಿದ್ದ ನೂರಾರು ಮಹಿಳೆಯರು ವಚನ ಸಾಹಿತ್ಯವನ್ನು ಹೊತ್ತ ರಥವನ್ನು ಬಸವಾದಿ ಶರಣರ ಜಯಘೋಷಗಳೊಂದಿಗೆ ಎಳೆದರು.
