ನರಗುಂದ:
ತಾಲ್ಲೂಕಿನ ಶಿರೋಳ ತೋಂಟದಾರ್ಯ ಮಠದ ಮಹಾರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಗುರುವಾರ ಸಾಯಂಕಾಲ ೦೫ ಗಂಟೆಗೆ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ನವಲಗುಂದ ಗವಿಮಠದ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳ ಸಮ್ಮುಖತ್ವದಲ್ಲಿ, ಅಪ್ಪಯ್ಯ ಹಿರೇಮಠ, ರುದ್ರಯ್ಯ ಹಿರೇಮಠದ, ಪರಯ್ಯ ಹಿರೇಮಠ ನೇತ್ರತ್ವದಲ್ಲಿ ಸಾವಿರಾರು ಭಕ್ತಾದಿಗಳ ಸಂಗಮದೊಂದಿಗೆ ಜರುಗಿತು.
ರಥೋತ್ಸವದಲ್ಲಿ ಶ್ರೀಮಠದ ಕಟ್ಟಿಗೆ ಪಲ್ಲಕ್ಕಿಯನ್ನು ಬೆಳ್ಳಿ ಆಭರಣಗಳೊಂದಿಗೆ ಶೃಂಗರಿಸಿ, ಧರ್ಮಗುರು ಬಸವಣ್ಣನವರ, ಯಡೆಯೂರು ಸಿಧ್ಧಲಿಂಗೇಶ್ವರರ ಭಾವಚಿತ್ರಗಳ ಮೆರವಣಿಗೆ ನೆರವೇರಿತು.

ಕಲ್ಮೇಶ್ವರ ಯುವಕ ಮಂಡಳದ ನಂದಿಕೋಲಿನ ಮೇಳ, ಬಸವೇಶ್ವರ ಯುವಕ ಮಂಡಳದ ಕರಡಿ ಮಜಲು ಮೇಳ, ಬೀರೇಶ್ವರ ಡೊಳ್ಳಿನ ಮೇಳ, ಜ್ಯೋತಿಬಾ ಪುಲೆ ಯುವಕ ಮಂಡಳದ ಹಲಗೆ ಮೇಳದವರು ಹಾಗೂ ಸಹಸ್ರಾರು ಭಕ್ತಾಧಿಗಳ ಭಕ್ತಿಯ ಜಯ ಘೋಷದೊಂದಿಗೆ ರಥವನ್ನು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.
ಕೃಷಿ ಪ್ರಾತ್ಯಕ್ಷಿಕೆ:
ಜಾತ್ರಾ ಮಹೋತ್ಸವದ ಮೊದಲ ದಿನ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಹದೇವ ಯರಗೊಪ್ಪ ಉಪನಿರ್ದೇಶಕರು ಕೃಷಿ ಇಲಾಖೆ ಚಿಕ್ಕೋಡಿ ಭಾಗವಹಿಸಿ ಮಾತನಾಡಿ, ಕೃಷಿ ಸುಧಾರಿಸಿದರೆ ಹಬ್ಬ-ಹರಿದಿನ, ಜಾತ್ರೆಗಳು ಅದ್ದೂರಿಯಾಗಿ ನೆರವೇರುತ್ತವೆ.
ಕೃಷಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ಇರುವುದರಿಂದ ವಿದ್ಯಾವಂತ ಯುವಕರು ಸಾವಯವ ಕೃಷಿ, ಜೈವಿಕ ಕೃಷಿ, ರಾಸಾಯನಿಕ ಕೃಷಿಗಳತ್ತ ಮುಖ ಮಾಡಬೇಕು. ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಶಿರೋಳ ತೋಂಟದಾರ್ಯ ಜಾತ್ರೆಯು ಸಮಾಜ ಪರಿವರ್ತನೆಯ ಜಾತ್ರೆಯಾಗಿದೆ ಎಂದು ಬಸವಣ್ಣನವರ, ಅಕ್ಕಮಹಾದೇವಿಯವರ, ಮತ್ತು ಸರ್ವಜ್ಞನ ವಚನಗಳ ಮೂಲಕ ವ್ಯವಸಾಯದ ಮಹತ್ವ ತೀಳಿಸಿಕೊಟ್ಟರು. ರೈತರು ಹೊಲದಲ್ಲಿಯ ಕಸ, ಮೇವು, ಕಬ್ಬು ರವದಿಯನ್ನು ಸುಡಬಾರದು, ಭೂಮಿಗೆ ಕ್ರಿಮಿನಾಶಕ ಸಿಂಪರಣೆ ಮಿತವಾಗಿರಲಿ, ಕಳೆನಾಶಕ ಬಳಸಬಾರದೆಂದು ಯರಗೊಪ್ಪ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಗೋಪಾಲ ಅಗರವಾಲ ಅವರನ್ನು ಸನ್ಮಾನಿಸಲಾಯಿತು. ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ರವೀಂದ್ರ ಹಿರೇಮಠ, ಉಪಾದ್ಯಕ್ಷರಾದ ದ್ಯಾಮಣ ತೆಗ್ಗಿ, ಕಾರ್ಯದರ್ಶಿ ಚಂದ್ರಶೇಖರ ಸೊಬರದ, ಸಹಕಾರ್ಯದರ್ಶಿ ಸತ್ಯವಾನಪ್ಪ ಚಿಕ್ಕನರಗುಂದ, ಪ್ರಕಾಶಗೌಡ ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ ಇದ್ದರು.
ಆರ್. ಆಯ್. ನಧಾಪ ನಿರೂಪಿಸಿದರು. ಚಂದ್ರಶೇಖರ ಸೊಬರದ ಸ್ವಾಗತಿಸಿದರು. ರೈತರು, ಸಾರ್ವಜನಿಕರು ಭಾಗವಹಿಸಿದ್ದರು.
