ಹರಿಹರ
ಆಂಗ್ಲರ ಮೇಲೆ ರಾಣಿ ಚನ್ನಮ್ಮ ದಾಖಲಿಸಿದ ವಿಜಯೋತ್ಸವವನ್ನು ಮುಂದಿನ ವರ್ಷದಿಂದ ಕೇಂದ್ರ ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಹರ ಜಾತ್ರೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯನ್ನು ಸಂಸತ್ತಿನ ಆವರಣದಲ್ಲಿ ಸ್ಥಾಪಿಸಲಾಗಿದೆ. ವಿಜಯೋತ್ಸವದ ದಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗಿದೆ. ಮುಂದಿನ ವರ್ಷದಿಂದ ಈ ವಿಜಯೋತ್ಸವವನ್ನು ಕೇಂದ್ರ ಸರ್ಕಾರದ ವತಿಯಿಂದಲೇ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸುವೆ’ ಎಂದು ಭರವಸೆ ನೀಡಿದರು.
‘ವೀರರಾಣಿ ಕಿತ್ತೂರು ಚನ್ನಮ್ಮನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಅವರು ಪಂಚಮಸಾಲಿ ಸಮುದಾಯಕ್ಕೆ ಮಾತ್ರವಲ್ಲ, ಸರ್ವ ಕನ್ನಡಿಗರಿಗೆ ಸ್ಫೂರ್ತಿಯ ಚಿಲುಮೆ’ ಎಂದು ಹೇಳಿದರು.
‘ವೀರಶೈವ ಲಿಂಗಾಯತಕ್ಕೆ ಸ್ವಾತಂತ್ರ್ಯ ಧರ್ಮ ಸ್ಥಾನ ಸಿಗುವವರೆಗೂ ಹಿಂದೂವೇ ನಮ್ಮ ಧರ್ಮ. ಜಾತಿ ಗಣತಿ ಸಂದರ್ಭದಲ್ಲಿ ಸ್ಪಷ್ಟ ನಿಲುವು ತಳೆದು ಸಮುದಾಯಕ್ಕೆ ಮಾರ್ಗದರ್ಶನ ನೀಡಲಾಗಿದೆ. ಈ ನಿಲುವಿಗೆ ಸದಾ ಬದ್ಧವಾಗಿರೋಣ’ ಎಂದು ಪಂಚಮಸಾಲಿ ಹರಿಹರದ ಪೀಠಾಧ್ಯಕ್ಷ ವಚನಾನಂದ ಸ್ವಾಮಿ ಹೇಳಿದರು.
ಚಿತ್ರದುರ್ಗದ ಶ್ರೀ ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಸಿದ್ಧರಹಳ್ಳಿಯ ಪಾರಮಾರ್ಥಿಕ ಗವಿಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮನಗೂಳಿ ಹಿರೇಮಠದ ಶ್ರೀ ಷ.ಬ್ರ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಈ ಸಮಾರಂಭದಲ್ಲಿ, ಪ್ರಧಾನ ಧರ್ಮದರ್ಶಿಗಳಾದ ಶ್ರೀ ಬಿ.ಸಿ.ಉಮಾಪತಿಗಳು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು, ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
