ಸುತ್ತೂರು
ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಗುರುವಾರ ಅದ್ದೂರಿ ಚಾಲನೆ ದೊರೆಯಿತು.
ಮಠದ ಆವರಣದಿಂದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಕರ್ತೃ ಗದ್ದುಗೆಗೆ ಕರೆತರುವ ಮೂಲಕ ಸಂಜೆ ಜಾತ್ರಾ ಮಹೋತ್ಸವ ಆರಂಭವಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದರಾದ ಜಗದೀಶ ಶೆಟ್ಟರ್ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಗಾರಿ ಬಾರಿಸಿ ಚಾಲನೆ ನೀಡಿದರು.
ಸುತ್ತೂರು ಜಾತ್ರೆಯು ಅರಿವಿನ ಉತ್ಸವವೂ ಆಗಿದ್ದು, ಮೊದಲ ದಿನ ಕೃಷಿ ಮೇಳ ಹಾಗೂ ವಸ್ತುಪ್ರದರ್ಶನಗಳು ಜನರ ಜ್ಞಾನ ಹೆಚ್ಚಿಸಿದವು. 15 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ವಿವಿಧ ತಾಕುಗಳ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಪ್ರಯೋಗಗಳು ರೈತರನ್ನು ಆಕರ್ಷಿಸಿದವು. 320ಕ್ಕೂ ಹೆಚ್ಚು ಮಳಿಗೆಗಳಲ್ಲಿನ ವೈವಿಧ್ಯಮಯ ಪ್ರದರ್ಶನ ಜನರನ್ನು ಸೆಳೆಯಿತು. ಜೊತೆಗೆ ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಪಿಲಾ ನದಿಯಲ್ಲಿ ದೋಣಿ ವಿಹಾರಕ್ಕೂ ಚಾಲನೆ ದೊರೆಯಿತು.
