ಚಿಕ್ಕಮಗಳೂರಿನಲ್ಲಿ ಸಾಧು, ನೊಳಂಬ ಲಿಂಗಾಯತರು ಎಚ್ಚರದಿಂದಿರಲಿ
ದಾವಣಗೆರೆ
2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ತಮ್ಮಣ್ಣನ ಎದುರು ಬಿಜೆಪಿ ನಾಯಕ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಸೋಲುಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹೊಳಲ್ಕೆರೆಯಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಸಂದರ್ಭದಲ್ಲಿ ನೊಳಂಬ ಸಮುದಾಯದ ಬೆಂಬಲದಿಂದ ನಾನು ಚುನಾವಣೆಯಲ್ಲಿ ನಾಲ್ಕು ಸಲ ಗೆಲ್ಲಲು ಸಾಧ್ಯವಾಗಿದೆ, ಮುಂದಿನ ಬಾರಿ ಚಿಕ್ಕಮಗಳೂರಿನಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.
ನಾಲ್ಕು ಬಾರಿ ಗೆದ್ದಾಗ ನೆನಪಾಗದ ನೊಳಂಬ ಲಿಂಗಾಯತ ಸಮುದಾಯ ಮತ್ತು ಶಿವಯೋಗಿ ಸಿದ್ಧರಾಮೇಶ್ವರರು ಈಗ ಏಕಾಏಕಿ ಸಿ.ಟಿ. ರವಿಗೆ ನೆನಪಾಗಿರುವುದು ಯಾಕೆ?
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಿ.ಟಿ. ರವಿ ವಿರುದ್ಧ ಗೆದ್ದ ತಮ್ಮಣ್ಣ ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿ.
ಸಿ.ಟಿ.ರವಿಯ ನಾಲ್ಕು ಸಲ ಗೆಲುವಿಗೆ ಪ್ರಮುಖ ಕಾರಣೀಕರ್ತರಾಗಿದ್ದ ತಮ್ಮಣ್ಣ 2023ರಲ್ಲಿ ಅವರ ವಿರುದ್ಧ ನಿಂತು ಗೆಲುವು ಸಾಧಿಸಿದ್ದರು.
ಇದೇ ರೀತಿ ಮುಂದಿನ ಚುನಾವಣೆಗಳಲ್ಲಿ ತಮ್ಮಣ್ಣ ತಮ್ಮ ಎದುರಾಳಿಯಾದರೆ ಲಿಂಗಾಯತ ಜನರ ಮತ ಬೀಳುವುದು ಕಷ್ಟ ಎಂದು ಸಿ ಟಿ ರವಿ ಅವರಿಗೆ ಅರ್ಥವಾಗಿದೆ. ಅದಕ್ಕೆ ಈಗ ಅದೇ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಇನ್ನೊಂದು ಪಂಗಡವಾದ ನೊಳಂಬ ಸಮುದಾಯವನ್ನು ಓಲೈಸುತ್ತಿದ್ದಾರೆ.
ಚಿಕ್ಕಮಗಳೂರಿನ ಲಿಂಗಾಯತ ಸಮುದಾಯವನ್ನು ಸಾಧು ವರ್ಸಸ್ ನೊಳಂಬ ಆಧಾರಿತವಾಗಿ ವಿಭಜಿಸುವ ಪ್ರಯತ್ನ ಶುರುವಾಗಿದೆ ಎಂದೇ ಇದರ ಅರ್ಥ.
ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಲಿಂಗಾಯತರ ವಿರುದ್ಧವಾಗಿ ಕೆಲಸ ಮಾಡಿರುವ ವ್ಯಕ್ತಿ ಸಿಟಿ ರವಿ.


ಬಸವಾದಿ ಶರಣರ ವಿರೋಧಿಯಾದ ವಚನ ದರ್ಶನ ಪುಸ್ತಕವನ್ನು ಮೊದಲು ಬಿಡುಗಡೆ ಮಾಡಿದ್ದು ಸಿಟಿ ರವಿ. ಲಿಂಗಾಯತ ಮಠಾಧೀಶರಿಗೆ ಹೊಲಸು ಮಾತನಾಡಿದ ಕನ್ನೇರಿ ಶ್ರೀಗಳ ಪರವಾಗಿ ನಿಂತಿದ್ದು ಇದೇ ಮನುಷ್ಯ. ಲಿಂಗಾಯತ ಹೆಣ್ಣು ಮಗಳು ಲಕ್ಷ್ಮಿ ಹೆಬ್ಬಾಳಕರ್ ಅವರ ಮೇಲೆ ಅವರು ಬಳಸಿದ ಭಾಷೆ ಲಿಂಗಾಯತರು ಇನ್ನೂ ಮರೆತಿಲ್ಲ. ಬಿಜೆಪಿ ಯಲ್ಲಿ ಯಡಿಯೂರಪ್ಪನವರ ಪ್ರಬಲ ವೈರಿಯೆಂದರೆ ಸಿಟಿ ರವಿ.
ಇಂತಹ ಅನೇಕ ಲಿಂಗಾಯತ ವಿರೋಧಿ ನಾಯಕರ ಭವಿಷ್ಯ ನಿಂತಿರುವುದು ಲಿಂಗಾಯತ ಮತಗಳ ಮೇಲೆಯೇ? ಇದನ್ನು ಲಿಂಗಾಯತರು ಅರ್ಥ ಮಾಡಿಕೊಂಡು ಜಾಗೃತರಾಗಬೇಕು. ಇವರ ಒಡೆದು ಆಳುವ ನೀತಿಗೆ ಬಲಿಯಾಗದೆ ಇವರನ್ನು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸ ಶುರುಮಾಡಬೇಕು.
ಹಿಂದೂ ಹುಲಿ ಎಂದು ಬಿಂಬಿಸಿಕೊಳ್ಳಲು ಮಿತಿಯಿಲ್ಲದ ಕೋಮುವಾದಿ ರಾಜಕೀಯ ಮಾಡುವ ವ್ಯಕ್ತಿ ಸಿಟಿ ರವಿ. ಉರಿಗೌಡ, ನಂಜೇಗೌಡ ಎಂಬ ಎರಡು ಕಾಲ್ಪನಿಕ ಪತ್ರಗಳನ್ನು ಸೃಷ್ಟಿಸುವಲ್ಲಿ ಸಿಟಿ ರವಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಕುತಂತ್ರಕ್ಕೆ ಒಕ್ಕಲಿಗ ಸಮುದಾಯ ಬಲಿಯಾಗಲಿಲ್ಲ.
ಲಿಂಗಾಯತರು ಈಗ ಅದೇ ಜಾಣ್ಮೆ, ಜಾಗೃತಿ ತೋರಿಸಬೇಕಾಗಿದೆ.

C T ರವಿಯ ಊಸರವಳ್ಳಿ ಮನಸ್ಸಿನ ಹುರಣ ಸರಿಯಾಗಿ ಹೇಳಿದ್ದೀರಿ.
ಲೆಖನ ವಸ್ತು ನಿಷ್ಠೆಗೆ ಹತ್ತಿರವಾಗಿದೆ.
ಬಸವ ಮಿಡಿಯಾ ಸಂಪಾದಕೀಯ ಮಂಡಳಿಗೆ ಅಭಿನಂದನೆಗಳು 🙏💐