ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಹಾಗೂ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಧ್ಯಾಪಕ ರಾಜಶೇಖರ ಹಳೇಮನಿ ಮಾತನಾಡುತ್ತಾ, ಚಾಲುಕ್ಯ ಸಾಮ್ರಾಜ್ಯವು ಬಸವಣ್ಣನವರ ಜಗತ್ ಕಲ್ಯಾಣ ಕಾರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿತ್ತು.

ಯುರೋಪಿಗಿಂತ ಮುಂಚೆ ಸಂವಿಧಾನ, ಆಧುನಿಕ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವವಾದಿ ಪರಿಕಲ್ಪನೆ, ಮಾನವ ಘನತೆ, ಮಾನವ ಹಕ್ಕುಗಳ ಪ್ರತಿಪಾದನೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ ಮುಂತಾದ ಆಧುನಿಕ ಜನಕಲ್ಯಾಣ ಕಾರ್ಯಗಳು ಕಲ್ಯಾಣದಲ್ಲಿ ಅನುಷ್ಠಾನಗೊಂಡವು.
ಬಸವಣ್ಣನವರು ಸಮಾನತೆಯ ಕುರುಹುವಾಗಿ ಇಷ್ಟಲಿಂಗವನ್ನು ಕೊಟ್ಟು, ಪ್ರತಿಯೊಬ್ಬರನ್ನು ಅಪ್ಪಿಕೊಂಡು ಸಮಾನತೆಯ ಹರಿಕಾರರಾದರು. ಅಂದರೆ 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಉದಯದ ಕಾಲಘಟ್ಟವೆಂದರು.
ಇನ್ನೊರ್ವ ಅತಿಥಿಗಳಾದ ಜಯಶ್ರೀ ಮಹಾಜನಶೆಟ್ಟಿ ಅವರು, ಶಿವಯೋಗಿ ಸಿದ್ದರಾಮ ಶರಣರ ಬಗ್ಗೆ ಮಾತನಾಡುತ್ತ, ಶೂನ್ಯಪೀಠದ 3ನೇ ಅಧ್ಯಕ್ಷರಾಗಿ, ಕಲ್ಯಾಣ ಕ್ರಾಂತಿಯ ನಂತರ ವಚನ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು ಸಿದ್ಧರಾಮೇಶ್ವರರು.

ಮುದ್ದುಗೌಡ ಹಾಗೂ ಸುಗ್ಗಲಾದೇವಿ ಅವರ ಮಗನಾಗಿ ಜನಿಸಿದ್ದ ಸಿದ್ದರಾಮರು ಕರ್ಮಯೋಗಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ, ಲೋಕೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಕರ್ಮಯೋಗಿಯಾಗಿದ್ದ ಇವರನ್ನು ಅನುಭಾವದ ಬೆಳಕಿನೆಡೆಗೆ ಕರೆದೊಯ್ಯುವ ಉದ್ದೇಶದಿಂದ ಅಲ್ಲಮಪ್ರಭುಗಳು ಕಲ್ಯಾಣದ ಮಹಾಮನೆಗೆ ಕರೆದುಕೊಂಡು ಬಂದರು. ಅನುಭವ ಮಂಟಪದಲ್ಲಿ ಪ್ರಸಿದ್ಧ ವಚನಕಾರರಾಗಿ ಬಸವ ಪರಂಪರೆಯ ಪ್ರಮಥರಲ್ಲಿ ಅಗ್ರಗಣ್ಯರೆನಿಕೊಂಡರೆಂದರು.
ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡರು, ಶರಣರು ಅತ್ಯಲ್ಪ ಅವಧಿಯಲ್ಲಿ ಜನರ ಮನ ಮತ್ತು ಮನಸ್ಸುಗಳಲ್ಲಿ ಗಟ್ಟಿಯಾಗಿ ಬೇರೂರಿದ್ದ ವೈದಿಕವಾದ ಅನುಷ್ಠಾನಗಳನ್ನು ಬೇರು ಸಮೇತ ಕಿತ್ತು ಹಾಕಿದರು.
ವಚನ ಚಳವಳಿ ಸಾಮೂಹಿಕವಾಗಿ ಜನರನ್ನು ಜಾಗೃತಗೊಳಿಸಿತು. ಅದೇ ವೈದಿಕತೆಯ ಕುರಿತು ಅರಿವು ಗೊಂಡವರನ್ನು ಲಿಂಗಾಯತರೆಂದು ಕರೆಯಲಾಯಿತು ಎಂದರು.
ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆ ಮೇಲೆ ಜೆ. ಬಸವರಾಜ, ಜಗದೇವಿ ಚನ್ನಬಸವ ಉಪಸ್ಥಿತರಿದ್ದರು. ಲಲಿತಾ ಡಾ.ಬಸನಗೌಡ ರಾಜಶೇಖರ ಹಳೆಮನೆ ಅವರ ಪರಿಚಯ ಮಾಡಿಕೊಟ್ಟರು.
ಶರಣ- ಶರಣೆಯರು ವಚನ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಸವೇಶ್ವರ ಕಾಲನಿಯ ಉದ್ಯಾನವನದಿಂದ ಬಸವ ಕೇಂದ್ರದವರೆಗೆ ಬಸವ ಜೈಕಾರದೊಂದಿಗೆ ಪಥಸಂಚಲನ ಮಾಡಿದರು. ನಂತರ ಷಟಸ್ಥಲ ಧ್ವಜಾರೋಹಣವನ್ನು ಕೋಶಾಧ್ಯಕ್ಷರಾದ ಎಸ್. ಶಂಕರಗೌಡರು, ಮಹಾದೇವಪ್ಪ ಏಗನೂರ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಾರ್ವತಿ ಪಾಟೀಲ ಪ್ರಾರ್ಥನೆ ಗೀತೆ ಹಾಡಿದರು. ಬೆಟ್ಟಪ್ಪ ಕಸ್ತೂರಿ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಸಿ.ಬಿ. ಪಾಟೀಲ ವಂದಿಸಿದರು. ಇದೇ ಸಂದರ್ಭದಲ್ಲಿ ರಾಜಶೇಖರ್ ಹಳೆಮನಿ ದಂಪತಿಗಳನ್ನು ಗೌರವಿಸಲಾಯಿತು.
