ಹೊಳಲ್ಕೆರೆ:
ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ 853ನೇ ಶ್ರೀ ಸಿದ್ದರಾಮೇಶ್ವರರ ಜಯಂತೋತ್ಸವದ ಎರಡನೇ ದಿನ ಗುರುವಾರದ ಕಾರ್ಯಕ್ರಮದಲ್ಲಿ “ಸಮತಾಯೋಗಿ ಸಿದ್ಧರಾಮೇಶ್ವರ” ಗ್ರಂಥ ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದ ಗ್ರಂಥದ 10 ಸಾವಿರ ಪ್ರತಿಗಳನ್ನು ಸಮಾರಂಭದಲ್ಲಿ ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡುತ್ತ, ಕಾಯಕವೇ ಕೈಲಾಸ ಎಂಬ ನುಡಿಯಂತೆ ಶರಣ ಶ್ರೀ ಸಿದ್ಧರಾಮೇಶ್ವರರು ಕಾಯಕ ಮತ್ತು ಕಾಲ ಎರಡಕ್ಕೂ ಮಹತ್ವ ನೀಡಿ ಮಹಾತ್ಮರಾಗಿದ್ದಾರೆ.
ಇಂತಹ ಮಹಾತ್ಮರ ಮಹೋತ್ಸವಕ್ಕೆ ಜನ ಸಾಗರೋಪವಾಗಿ ಬರುತ್ತಾರೆ. ವೇದಿಕೆಯ ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆಯಬೇಕಾದರೆ ಆಯೋಜಕರ ಜವಾಬ್ದಾರಿ ಹೆಚ್ಚಿನದಾಗಿರುತ್ತದೆ. ಕಾರ್ಯಕ್ರಮದ ವೇದಿಕೆಯಲ್ಲಿ ವಿಚಾರಗಳು ಜನರ ಮನಸ್ಸನ್ನು ಪ್ರಗತಿಪರತೆ ಕಡೆ ಕೊಂಡೊಯ್ಯುವಂತಿರಬೇಕು ಎಂದರು.

ಅತಿಥಿಯಾಗಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮಾತನಾಡಿ, ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಬಸವಾದಿ ಶರಣರ ಪ್ರಭಾವಕ್ಕೆ ಒಳಗಾದರು. ವಚನ ಚಳುವಳಿಯ ಮೂಲಕ ಸಾಮಾಜಿಕ ಸಮಾನತೆ ತರಲು ಶ್ರಮಿಸಿದರು.
ನೀರಾವರಿ ಕಾರ್ಯಗಳು ಸೇರಿದಂತೆ ಸಮಾಜಕ್ಕೆ ಅವರು ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆಂದು ಭಕ್ತಿಯಿಂದ ಸ್ಮರಿಸಿದರು.
ಹನ್ನೆರಡನೇ ಶತಮಾನದ ಶರಣರು ಸಾರಿದ ಸಮಾನತೆ, ಕಾಯಕ, ದಾಸೋಹ, ಜಲ ಸಂರಕ್ಷಣೆಗಳಂತಹ ವಿಚಾರಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಹಾಕಿ ಕೊಟ್ಟ ನೀಲಿನಕ್ಷೆಯಂತಿವೆ. ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸಿದ್ದರಾಮೇಶ್ವರರ ನಾಮವನ್ನು ಘೋಷಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಹೇಳಿದರು.
ಬಿಡುಗಡೆಗೊಂಡ ವಿಜಯಪುರದ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ‘ಸಮತಾ ಯೋಗಿ ಸಿದ್ದರಾಮೇಶ್ವರ’ ಕೃತಿ ರಚಿಸಿದ ಡಾ. ಎಸ್. ಕೆ. ಕೊಪ್ಪಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಜಯಪುರದ ಶರಣತತ್ವ ಚಿಂತಕ ಡಾ. ಜೆ.ಎಸ್ ಪಾಟೀಲ ಉಪನ್ಯಾಸ ನೀಡಿದರು. ಗೋಡೆಕೆರೆ ಸಂಸ್ಥಾನದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾಜಿ ಸಚಿವ ಅಂಜನೇಯ, ಅರಸೀಕರೆ ಶಾಸಕ ಶಿವಲಿಂಗೇಗೌಡ, ಮಾಜಿ ಶಾಸಕರು, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಹಾಲಿ, ವಿವಿಧ ಸಮುದಾಯದ ಮುಖಂಡರು, ಜಿಪಂ ಮಾಜಿ ಜಿಪಂ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯ ಬಸವ ಭಕ್ತರು, ಸಿದ್ಧರಾಮೇಶ್ವರ ಭಕ್ತರು ಸೇರಿದ್ದರು.

