ದಾವಣಗೆರೆ:
ಸಾಮಾನ್ಯ ಮನುಷ್ಯನೂ ಸಹ ದೈವತ್ವಕ್ಕೆ ಏರಬಹುದು ಎಂದು ತೋರಿಸಿಕೊಟ್ಟವರು ಬಸವಾದಿ ಶರಣರು ಎಂದು ಸಾಹಿತಿ ಬಿ.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಸಂದರ್ಭದಲ್ಲಿ ಅನುಭಾವ ನೀಡುತ್ತ ತಿಳಿಸಿದರು.
ಮಹಾನ್ ಶರಣ ಸಿದ್ಧರಾಮೇಶ್ವರರು ಜಗತ್ತಿನ ಮೊಟ್ಟಮೊದಲ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿದ್ದರು. ಈ ಆಧುನಿಕ ಕಾಲದಲ್ಲೂ ಮಾತನಾಡಲು ಯೋಚಿಸಬೇಕಾದ ವೈಜ್ಞಾನಿಕ ಚಿಂತನೆಯನ್ನು ಶಿವಯೋಗಿ ಸಿದ್ಧರಾಮೇಶ್ವರರು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗೌರವ ಉಪಸ್ಥಿತರಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಉಪಾಧ್ಯಕ್ಷ ವಿನೋದ ಅಜಗಣ್ಣನವರು ಮಾತನಾಡಿ, ವಚನಗಳಲ್ಲಿ ಜೀವನ ಮೌಲ್ಯಗಳು ಇವೆ, ಮಕ್ಕಳಿಗೆ ವಚನಗಳನ್ನು ಕಲಿಸಿದರೆ ಮಕ್ಕಳ ವ್ಯಕ್ತಿತ್ವ ವಿಕಸನ ಆಗುತ್ತದೆ ಎಂದರು.
ಪರಿಷತ್ತಿನ ಗೌರವಾಧ್ಯಕ್ಷ ಶಾಮನೂರು ಲಿಂಗರಾಜ ಮಾತನಾಡಿ, ಜಗತ್ತಿಗೆ ಮೊದಲು ಮಾದರಿ ಪ್ರಜಾಪ್ರಭುತ್ವ ಸ್ಥಾಪಿಸಿದ ಬಸವಾದಿ ಶರಣರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ರುದ್ರೇಗೌಡರು ಮಾತನಾಡಿ, ಸನಾತನ ಧರ್ಮದ ವಿರುದ್ಧ ತೊಡೆತಟ್ಟಿ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮ. ಶರಣರನ್ನು ಗಡಿಪಾರು ಮಾಡಿದ ಕುತಂತ್ರಿಗಳೇ ಇಂದು ಲಿಂಗಾಯತ ಧರ್ಮದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಂದಿನ ಲಿಂಗಾಯತರು ಹನ್ನೆರಡನೆಯ ಶತಮಾನದಲ್ಲಿ ದಲಿತರೇ ಆಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಕುಸುಮಾ ಲೋಕೇಶ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಶರಣ ವಿಶ್ವೇಶ್ವರಯ್ಯ ಬಿ.ಎಂ. ಮಾತನಾಡಿದರು. ಸ್ವಾಗತವನ್ನು ಕಲಿವೀರ ಕಳ್ಳಿಮನಿ ಮಾಡಿದರು.
ಶರಣ ನಾಗರಾಜ ಕಕ್ಕರಗೊಳ್ಳ ನಿರೂಪಿಸಿದರು. ಶರಣು ಸಮರ್ಪಣೆಯನ್ನು ಟಿ.ಎಂ. ಶಿವಮೂರ್ತಯ್ಯ ಮಾಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ರೈತ ಮುಖಂಡರಾದ ಆವರಗೆರೆ ರುದ್ರಮುನಿ ಪ್ರಕಾಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
