ಗುಳೇದಗುಡ್ಡ:
ಬಸವಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ವಿರೂಪಾಕ್ಷಪ್ಪ ಚಿಂದಿ ಅವರ ಮನೆಯಲ್ಲಿ ನಡೆಯಿತು.
ಚಿಂತನೆಗಾಗಿ ಆಯ್ದುಕೊಂಡ ಆದಯ್ಯ ತಂದೆಗಳ ವಚನ ಹೀಗಿದೆ –
ಎತ್ತನೇರಿ ಎತ್ತನರಿಸುವಂತೆ
ತಾನಿರ್ದು ತನ್ನನರಸಿ ಕೇಳುವಂತೆ
ಹೊತ್ತ ನಿಜವನರಿಯದತ್ತಲಿತ್ತ
ಸುತ್ತಿ ಬಳಲುವನಂತೆ
ಅವರ ಹಿಡಿದಿರ್ದ ಲಿಂಗವ ಕಾಣದೆ
ಮೂವಿಧಿಗಾಣ್ಬರನೇನೆಂಬೆನಯ್ಯ!
ತನ್ನಲ್ಲಿ ಗುರು ಲಿಂಗ ಜಂಗಮ ಪ್ರಸಾದ
ಒಂದೆಂದು ಅರಿಯದೆ
ಅಜ್ಞಾನಬದ್ಧರನೆನಗೆ ತೋರದಿರಯ್ಯಾ
ಸೌರಾಷ್ಟ್ರ ಸೋಮೇಶ್ವರಾ.
ವಚನದ ಚಿಂತನೆಯನ್ನು ಪ್ರಾರಂಭಿಸಿದ ಪ್ರೊ. ಶ್ರೀಕಾಂತ ಮ. ಗಡೇದ, ವಚನ ರಚಿಸಿದವರು ಆದಯ್ಯ ಶರಣರು. ಹಿರಿಯ ಅನುಭಾವಿಗಳು. ಸೌರಾಷ್ಟ್ರದವರಾದ ಇವರು ವ್ಯಾಪಾರಕ್ಕಾಗಿ ಬಂದು, ವಚನ ಚಳವಳಿಗೆ ಮಾರುಹೋಗಿ ಕರ್ನಾಟಕದ ಪುಲಿಗೆರೆಯಲ್ಲಿಯೇ ನೆಲೆ ನಿಂತರು. ಇಷ್ಟಲಿಂಗ ರೂಪದ ದೇವರು ಎಲ್ಲೆಲ್ಲೂ ಇದ್ದಾನೆ ಎಂದುಕೊಂಡವರಾಗಿ, ಅದನ್ನೇ ತಮ್ಮ ವಚನದಲ್ಲಿ ಬಿತ್ತರಿಸಿದ್ದಾರೆ.
ವ್ಯಾಪಾರದಲ್ಲಿ ಒದಗುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಹಾಗೆಯೇ ಹೊರಗಿನ ವ್ಯಾಪಾರದಂತೆ ಇಂದ್ರಿಯ ಮುಖೇನ ನಡೆಯುವ ವ್ಯಾಪಾರಗಳೆಲ್ಲವೂ ಲಿಂಗಮಯವಾಗಬೇಕು.

ಗುರು, ಲಿಂಗ, ಜಂಗಮ ಒಂದೇ. ಅವು ಬೇರೆ ಬೇರೆಯಲ್ಲ. ನಮ್ಮಳೊಗೆ ಉಂಟಾಗುವ ಅರಿವೇ ಗುರು, ನಾವು ಅದನ್ನು ಕಾರ್ಯರೂಪಕ್ಕೆ ತರುವುದೇ ಆಚಾರ, ಅದುವೇ ಲಿಂಗ, ನಮ್ಮೊಳಗಿನ ಚಲನಶೀಲತೆಯೇ ಜಂಗಮ ಇವೆಲ್ಲ ಒಂದೇ, ಬೇರೆ ಬೇರೆಯಲ್ಲ. ಆದರೆ, ನಮಗೆ ಬೇರೆ ಬೇರೆಯೆಂಬ ಭ್ರಾಂತಿಯಾಗಿದೆ. ಅದನ್ನು ಕಿತ್ತೆಸೆದು ಜೀವನವನ್ನು ಸುಧಾರಿಸಿಕೊಳ್ಳಬೇಕೆಂದು ಆದಯ್ಯನವರು ಈ ವಚನದಲ್ಲಿ ತಮ್ಮ ವಸ್ತುನಿಷ್ಠ ಸ್ಥಿತಿ ವ್ಯಕ್ತಪಡಿಸಿದ್ದಾರೆ ಎಂದು ಪ್ರೊ. ಗಡೇದವರು ಹೇಳಿದರು.
ಜಂಗಮಾನುಭಾವಿ, ನಿವೃತ್ತ ಪ್ರಾಚಾರ್ಯ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿ ಇದೇ ವಚನವನ್ನು ಚಿಂತನೆಗೆ ಒಳಪಡಿಸುತ್ತ, “ಜಗದ ಜನರಿಗೆ ಗುರು, ಲಿಂಗ, ಜಂಗಮ ಎಂದರೆ ಏನು ಎಂಬುದು ಗೊತ್ತಿದೆ. ಆದರೆ ಅವರು ಭ್ರಾಂತಿಯ ಸುಳಿಗೆ ಸಿಲುಕಿದ್ದಾರೆ. ಇದು ಹೇಗಿದೆ ಎಂದರೆ ತನ್ನ ಕಂಕುಳದಲ್ಲಿದ್ದ ಕೂಸನ್ನೇ ಓಣಿಯಲ್ಲೆಡೆ ಹುಡುಕಿದ ಸ್ತ್ರೀಯಂತೆ, ನಮ್ಮ ಸ್ಥಿತಿಯೂ ಆಗಿದೆ.
ಇದನ್ನೇ ಇನ್ನೆರಡು ಉಪಮೆಗಳಿಂದ ವಚನವನ್ನು ವಿಸ್ತರಿಸಿದ್ದಾರೆ. ತಾನು ಏರಿ ಬಂದ ಎತ್ತನ್ನೇ ಅರಸುವಂತೆ, ತಾನ ಪ್ರತ್ಯಕ್ಷವಾಗಿ ಇದ್ದರೂ ತನ್ನನ್ನೇ ಹುಡುಕಿ ಕೇಳುವವನಂತೆ, ತಾನು ಹೊತ್ತಿರುವ ನಿಜವನ್ನು (ತಾನೇ ಲಿಂಗಂಶವೆಂದು) ಅರಿಯದೇ ಅತ್ತ-ಇತ್ತ ಹುಡುಕಿ ಬಳಲುವವರಂತೆ ಇವರ ಸ್ಥಿತಿಯಾಗಿದೆ. ತನ್ನ ಹಿಡಿದಿರುವ ಲಿಂಗವನ್ನೇ ಭಕ್ತರು ಕಾಣರು. ಇಂಥ ಮೂರು ತೆರನಾದ ಶನಿಗೆ (ತ್ರಿವಿಧಿಗಾಣ್ಬರು) ಅವರು ಒಳಗಾಗಿದ್ದಾರೆ.

ಮೊದಲನೆಯದಾಗಿ ಅವರು ಹಿಡಿದಿರುವ ತನ್ನನ್ನು ಆವರಿಸಿರುವ ಲಿಂಗವನ್ನೇ ಕಾಣದೇ ಹೋಗಿದ್ದಾರೆ. ಈ ಲಿಂಗ ಕೇವಲ ಸ್ಥೂಲ ಶರೀರಕ್ಕಷ್ಟೆ ಅಲ್ಲ. ಒಟ್ಟಿನಲ್ಲಿ ಅರಿವನ್ನೇ ಗುರುವನ್ನಾಗಿಸಿ, ಆಚಾರವನ್ನೇ ಲಿಂಗವಾಗಿಸಿ, ಅನುಭಾವವನ್ನೇ ಜಂಗಮವಾಗಿಸಿಕೊಂಡು ಇಡೀ ಶರೀರದಲ್ಲಿನ ಕಸವನ್ನು ತೆಗೆದು ಹಾಕಿ ಸ್ವಚ್ಛವಾಗುತ್ತ ತನುಮನಗಳು ಸ್ವಚ್ಛಗೊಂಡು ತನುಮನಭಾವಗಳಲ್ಲೆಲ್ಲ ಪ್ರಸನ್ನತೆ ಮೂಡುತ್ತದೆ. ಇದನ್ನೇ ಪ್ರಸಾದ ಎಂದು ಕರೆಯುತ್ತಾರೆ.
ಹೀಗಾಗಿ ಗುರು ಲಿಂಗ ಜಂಗಮ ಹಾಗೂ ಪ್ರಸಾದ ಒಂದೇ. ಆದರೆ, ರೂಪ ಬೇರೆ. ಇವುಗಳನ್ನು ಒಂದೇ ಎಂದು ತಿಳಿಯದ ಅಜ್ಞಾನಿಗಳನ್ನು ತನ್ನಡೆಗೆ ತೋರದಿರು ಎಂದು ಬೇಡಿಕೊಳ್ಳುತ್ತಾರೆ ಆದಯ್ಯ ತಂದೆಗಳು ಎಂದು ಬರಗುಂಡಿಯವರು ವಿವರವಾಗಿ ತಿಳಿಸಿದರು.
ಶ್ರೀಮತಿ ಮೆಂತೇದ ಅವರು ಕೇಳಿದ ಪ್ರಶ್ನೆಗಳಿಗೆ ನೆರೆದಂತ ಅನುಭಾವಿಗಳು ಸೂಕ್ತ ಹಾಗೂ ತೃಪ್ತಿಕರವಾಗಿ ಉತ್ತರಿಸಿ, ಅವರನ್ನು ಉತ್ಸಾಹಗೊಳಿಸಿದರು.
ಜಯಶ್ರೀ ಬರಗುಂಡಿ ಅವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರೇವಣಸಿದ್ದೇಶ್ವರ ಮಠ, ಬಸಯ್ಯ ಕಂಬಾಳಿಮಠ, ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ವಿಶಾಲಕ್ಷೀ ಗಾಳಿ, ದಾಕ್ಷಾಯಣಿ ತೆಗ್ಗಿ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ರಾಘವೇಂದ್ರ ಶಿವರಾತ್ರಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಸೇರಿ ಬಸವ ಬಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ, ಡಾ. ಗೀರಿಶ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ.ಎಸ್., ಮಹೇಂದ್ರಕರ, ಮನ್ನಿಕಟ್ಟಿ ಯಲ್ಲಪ್ಪ, ಬೆಂಗಳೂರಿನಿಂದ ಶಿರೂರ ಹಾಗೂ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
