ಗದಗ:
ಲಿಂಗಾಯತ ಸಮಾಜದ ಹಿರಿಯ ನಾಯಕರೂ, ಮಾಜಿ ಸಚಿವರೂ ಆಗಿದ್ದ ಶರಣಜೀವಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನದಿಂದ ಲಿಂಗಾಯತ ಸಮುದಾಯಕ್ಕೆ ಮತ್ತು ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ರಜಾಕರ ಹಾವಳಿಯಲ್ಲಿ ಜೀವದ ಹಂಗು ತೊರೆದು ಹೋರಾಡಿದ ಅವರು ಅಪ್ರತಿಮ ಹೋರಾಟಗಾರರಾಗಿದ್ದರು.
ಭಾಲ್ಕಿಯ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಪರಮಶಿಷ್ಯರೂ, ಬಸವ ಭಕ್ತರೂ ಆಗಿದ್ದ ಅವರು ನಮ್ಮ ನಾಡಿಗೆ ತನ್ಮೂಲಕ ನಮ್ಮ ರಾಷ್ರಕ್ಕೆ ಸಲ್ಲಿಸಿದ ಸೇವೆ ಅತ್ಯಪೂರ್ವವಾಗಿದೆ.
ಶತಾಯುಷಿಯಾಗಿ ಬಾಳಿ ಬದುಕಿದ ಅವರು ತಮ್ಮ ಅಂಗವನ್ನು ಲಿಂಗದಲ್ಲಿ ಬೆರೆಸಿ ಬೇರಿಲ್ಲದಂತಾಗಿದ್ದಾರೆ. ಅವರ ದಿವ್ಯ ಚೇತನಕ್ಕೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಮರ್ಪಿಸುವೆವು.
ಅಖಿಲ ಭಾರತ ವೀರಶೈವ ಮಹಾಸಭೆ ಶತಮಾನದ ಅಂಚಿನಲ್ಲಿದ್ದರೂ ಅದು ಅಸ್ತಿತ್ವದಲ್ಲಿ ಇಲ್ಲದಂತಾಗಿತ್ತು. ಅದಕ್ಕೊಂದು ಮೂರ್ತಸ್ವರೂಪ ಕೊಟ್ಟು ಸಮಾಜ ಸಂಘಟನೆಗೆ ಅದನ್ನು ಸಜ್ಜುಗೊಳಿಸಿದವರೇ ಭೀಮಣ್ಣ ಖಂಡ್ರೆ.
ಅವರು ಗಟ್ಟಿ ಹೃದಯದ ದಿಟ್ಟ ಹೋರಾಟಗಾರರಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡಮಕ್ಕಳಿಗೂ ಶಿಕ್ಷಣ ಕೈಗೆಟುಕುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ನಾಡಿನುದ್ದಗಲಕ್ಕೂ ಪಾದರಸದಂತೆ ಓಡಾಡಿ ಅವರು ಸಮಾಜ ಮತ್ತು ಧರ್ಮವನ್ನು ಕಟ್ಟಿದ ರೀತಿ ಅನನ್ಯವಾದುದು. ತಮ್ಮ ಸಮಾಜಮುಖಿ ಸೇವಾಕಾರ್ಯಗಳಿಂದಲೇ ಲಿಂಗಾಯತ ಪುಣ್ಯಪುರುಷರಲ್ಲಿ ಅಗ್ರಗಣ್ಯರೆನಿಸಿದ ಅವರನ್ನು ಈ ನಾಡು ಎಂದೂ ಮರೆಯಲಾರದು. ಅವರೊಂದು ಮರೆಯಲಾಗದ ಚೇತನ ಎಂದು ಶ್ರೀಗಳು ತಮ್ಮ ಶೋಕ ಸಂದೇಶದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಖಂಡ್ರೆ ಪರಿವಾರದ ಸಕಲ ಸದಸ್ಯರಿಗೂ ಮತ್ತು ನಾಡವರಿಗೂ ದಯಾಘನರಾದ ಬಸವಾದಿ ಶರಣರು ಕರುಣಿಸಲೆಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
