ಹಾವೇರಿ:
ತಾಲ್ಲೂಕಿನ ನರಸೀಪುರದಲ್ಲಿ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ, ವಚನಗ್ರಂಥ ಮಹಾರಥೋತ್ಸವ, ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ತಳಿ, ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.
ಮೊದಲು ಗಂಗಾಪೂಜೆಯನ್ನು ಅಂಬಿಗರ ಚೌಡಯ್ಯನವರ ಪೀಠದ ಮುಂಭಾಗದಲ್ಲಿರುವ ತುಂಗಭದ್ರಾ ನದಿಯಲ್ಲಿ ನೆರೆವೇರಿಸಿ, ತದನಂತರ ಪೀಠಾಧ್ಯಕ್ಷರಾದ ಶಾಂತಭೀಷ್ಣ ಚೌಡಯ್ಯ ಸ್ವಾಮೀಜಿ ಅವರು ರಥಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಉಪಸ್ಥಿತರಿದ್ದು ಸ್ವಾಮೀಜಿ ಅವರೊಂದಿಗೆ ಕೈಗೂಡಿಸಿದರು.

ಸಾಮಾನ್ಯವಾಗಿ ಉತ್ಸವಗಳಲ್ಲಿನ ರಥಗಳಲ್ಲಿ ದೇವರ ಮೂರ್ತಿಗಳನ್ನು ಇಡುವುದು ಸಾಮಾನ್ಯ. ಆದರೆ ಅಂಬಿಗರ ಚೌಡಯ್ಯನವರ ರಥದಲ್ಲಿ ಶರಣರ ವಚನ ಗ್ರಂಥವನ್ನು ಇಟ್ಟು ರಥವನ್ನು ಎಳೆಯಲಾಗುತ್ತದೆ. ಜೈ ಅಂಬಿಗ, ಜೈ ಜೈ ಅಂಬಿಗ ಎಂಬ ಘೋಷಣೆ ಹಾಕುತ್ತಾ ಸಹಸ್ರಾರು ಭಕ್ತರು ರಥವನ್ನು ಎಳೆದರು.
ಅಂಬಿಗರ ಚೌಡಯ್ಯನವರ ರಥದ ಕಳಸಕ್ಕೆ ಭಕ್ತರು ಭಕ್ತಿಯಿಂದ ಬಾಳೆಹಣ್ಣು, ಉತ್ತತ್ತಿ ಎಸೆಯುತ್ತಿದ್ದದ್ದು ಕಂಡುಬಂತು. ಶ್ರೀ ಶಾಂತಮುನಿ ಮಹಾಸ್ವಾಮಿಗಳ ಗದ್ದುಗೆಯವರೆಗೆ ರಥವನ್ನು ಎಳೆಯಲಾಯಿತು.
ಅದ್ಧೂರಿಯಾಗಿದ್ದ ಜಾತ್ರೆಯ ಮೆರವಣಿಗೆಯಲ್ಲಿ ಝಾಂಜಮೇಳ, ಡೊಳ್ಳು, ಇನ್ನು ಅನೇಕ ಜನಪದ ವಾದ್ಯಮೇಳ ನೋಡುಗರನ್ನು ಮನಸೆಳೆಯುವಂತೆ ಮಾಡಿದವು. ಜಾತ್ರೆಗೆ ಆಗಮಸಿದ ಭಕ್ತಾದಿಗಳಿಗೆ ಪ್ರಸಾದ ದಾಸೋಹಕ್ಕಾಗಿ ರೊಟ್ಟಿ, ಮುಳಗಾಯಿ ಪಲ್ಯ, ಕಡ್ಲಿಕಾಳು ಪಲ್ಯ, ಗೋದಿಹುಗ್ಗಿ, ಅನ್ನ, ಸಾರು ವ್ಯವಸ್ಥೆ ಮಾಡಲಾಗಿತ್ತು.
ಮಹಾರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹುಮ್ಮಸಿನಿಂದ ಭಾಗವಹಿಸಿದ್ದರು. ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ನಡೆಯಿತು, ಗ್ರಾಮಸ್ಥರು, ಭಕ್ತರು ಇದ್ದರು.

ಈ ಸಂದರ್ಭದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡ ಜಲಸಾರಿಗೆ ಸಚಿವ ಮಂಕಾಳು ವೈದ್ಯ ಮಾತನಾಡುತೋತ,
ಅಂಬಿಗ (ಗಂಗಾಮತ) ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಪಕ್ಷಾತೀತವಾಗಿ ಗಂಗಾಮತ ಸಮಾಜದ ಶಾಸಕರು, ಸಂಸದರು ಜನಪ್ರತಿನಿಧಿಗಳು ಒಗ್ಗಟ್ಟಾಗಿ ಪ್ರಯತ್ನಿಸಬೇಕೆ ಹೊರತು, ಇದರಲ್ಲೂ ರಾಜಕೀಯ ಮಾಡಬಾರದು ಎಂದರು.
ಸಮಾರಂಭದ ನೇತೃತ್ವ ವಹಿಸಿ ಅವರು ಸಮಾಜದ ಏಳಿಗೆಗೆ ಉಳ್ಳವರು ನೆರವು ಕೊಡಬೇಕು. ಸಮಾಜ ಬೆಳೆಯಲು ದಾನ ನೀಡಬೇಕಾದ ಅವಶ್ಯಕತೆ ಇದೆ. ಸಮಾಜವನ್ನೂ ಒಗ್ಗೂಡಿಸಬೇಕಿದೆ. ಗಂಗಾಮತ ಸಮಾಜ ಶಿಕ್ಷಣ, ಆರ್ಥಿಕತೆ ರಾಜಕೀಯವಾಗಿ ಮೇಲೆ ಬರಬೇಕಿದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ಕಾಯಕ, ದಾಸೋಹ ತತ್ವ ಹೇಳುವ ವಚನ ಸಾಹಿತ್ಯ ಉತ್ತಮ ಜೀವನಕ್ಕೆ ದಾರಿದೀಪವಾಗಿವೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಗುರುಪೀಠದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೆ ಪ್ರಯತ್ನಿಸುವೆ. ಈಗಾಗಲೇ ಈ ಪೀಠದ ನದಿ ಪಾತ್ರದ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕೋಟಿ ರೂ. ಮಂಜೂರು ಮಾಡಲಾಗಿದೆ.
150 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ಶೇಖರಿಸುವ ನಿಟ್ಟಿನಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಸಹ ದೊರೆತು ಕೆಲಸ ಆರಂಭವಾಗಬೇಕಿದೆ. ಇದರಿಂದ ಜನರಿಗೆ ಕುಡಿಯಲು ನೀರು ದೊರೆಯುವುದಲ್ಲದೆ, ರೈತರ ಬೆಳೆಗಳಿಗೆ ಸದಾಕಾಲ ನೀರು ದೊರೆಯುತ್ತದೆ ಎಂದರು.

ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿ ಕೆಲಸಕ್ಕೆ ಸಮಸ್ಯೆ ಇದ್ದು, ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿ ಅದನ್ನು ಸಹ ಆದಷ್ಟು ಬೇಗ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಸಾನಿಧ್ಯ ವಹಿಸಿದ್ದ ಗುರುಪೀಠದ ಚೌಡಯ್ಯನವರ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗೆ ವಿವಿಧ ಗ್ರಾಮಗಳ ಜನರು, ಜನಪ್ರತಿನಿಧಿಗಳು ಸನ್ಮಾನಿಸಿದರು. ಪೀಠಾರೋಹಣ ಅಂಗವಾಗಿ ರುದ್ರಾಕ್ಷಿ ಕಿರೀಟ ಧಾರಣೆ ಮಾಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಪ್ರಕಾಶ ಕೋಳಿವಾಡ, ಬಸವರಾಜ ಶಿವಣ್ಣನವರ, ಕೃಷ್ಣಾ ನಾಯ್ಕ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಹರ್ಷಿ ಭಗೀರಥ ಗುರುಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿದರು.
ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್. ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಬಿ. ಕುರವತ್ತಿಗೌಡರ, ಬಿಜೆಪಿ ಮುಖಂಡರಾದ ದ್ಯಾಮಣ್ಣನವರ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮುತ್ತಣ್ಣ ಯಲಿಗಾರ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ದರ್ಶನಕುಮಾರ ಲಮಾಣಿ, ಹೊಸರಿತ್ತಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ಅಂಬಿಗೇರ, ಬಸವರಾಜ ಕಳಸೂರ, ಪ್ರಕಾಶ ಅಂಬಿಗೇರ, ದತ್ತಾತ್ರೇಯ ಭಂಗಿ ಮತ್ತಿತರರು ಇದ್ದರು.
ಮಾಜಿ ಸಚಿವ ಪ್ರಮೋದ ಮಧ್ವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಆಲೂರ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಗರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚೌಡಯ್ಯನವರ ವಚನ ಕಂಠಪಾಠ ಸ್ಪರ್ಧೆ ಕೂಡ ನಡೆಸಲಾಯಿತು.
